ADVERTISEMENT

ವಿಮಾನ ಸೇವೆ ಆರಂಭವಾಗಲಿ

ವೆಂಕಟೇಶ ಮುದಗಲ್
Published 4 ನವೆಂಬರ್ 2018, 20:39 IST
Last Updated 4 ನವೆಂಬರ್ 2018, 20:39 IST

ದಸರಾ, ದೀಪಾವಳಿಯ ದಿನಗಳಲ್ಲಿ ಬೆಂಗಳೂರಿನಿಂದ ಕಲಬುರ್ಗಿಗೆ ಬರುವ ಪ್ರಯಾಣಿಕರ ಸಂಖ್ಯೆ ಸಾಮಾನ್ಯ ದಿನಗಳಿಗಿಂತ ಹಲವು ಪಟ್ಟು ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಈ ಎರಡೂ ನಗರಗಳ ಮಧ್ಯೆ ವಿಶೇಷ ರೈಲು ಓಡಿಸದ ಕಾರಣ ಜನರು ಎದುರಿಸಬೇಕಾಗುವ ಕಷ್ಟ ಅಷ್ಟಿಷ್ಟಲ್ಲ. ಒಂದು ಅಂದಾಜಿನ ಪ್ರಕಾರ ಈ ದಿನಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರ ಸಂಖ್ಯೆ ಸಾವಿರ ದಾಟುತ್ತದೆ.

ಸ್ಲೀಪರ್‌ನ ದರ ತೆತ್ತು, ಟಿ.ಸಿ. ಸಾಹೇಬರ ಕೆಂಗಣ್ಣಿಗೆ ಗುರಿಯಾಗಿ, ಅವರ ಕೈ ಬಿಸಿ ಮಾಡಿ ಬೋಗಿಯ ತಳದಲ್ಲಿ ಕುಳಿತು ಬರುವ ‘ಸೌಭಾಗ್ಯ’ ಕಲಬುರ್ಗಿಯ ಪ್ರಯಾಣಿಕರದ್ದಾಗಿರುತ್ತದೆ. ಅದಿಲ್ಲದಿದ್ದರೆ ದುಬಾರಿ ದರ ತೆತ್ತು ರಸ್ತೆ ಮೂಲಕ ಬರಬೇಕು. ಕೇಂದ್ರ ರೈಲ್ವೆ ವಲಯಕ್ಕೆ ಸಾಕಷ್ಟು ಆದಾಯವನ್ನು ತಂದುಕೊಡುವ ಈ ವಿಭಾಗದ ಬಗ್ಗೆ ರೈಲ್ವೆ ಇಲಾಖೆಯು ಅಸಡ್ಡೆ ತೋರುತ್ತಾ ಬಂದಿದೆ. ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ನಮ್ಮ ಬವಣೆ ಮುಗಿಯುತ್ತಿಲ್ಲ.

ಈಗ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡು ಚಾರ್ಟರ್ಡ್‌ ವಿಮಾನಗಳು ಇಳಿಯುವ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರವು ‘ಉಡಾನ್‌’ ಯೋಜನೆಯಡಿ ಬೆಂಗಳೂರು– ಕಲಬುರ್ಗಿ ಮಧ್ಯೆ ವಿಮಾನ ಓಡಾಟ ಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಉಳ್ಳವರು ವಿಮಾನ ಪ್ರಯಾಣ ಆಯ್ದುಕೊಂಡರೆ, ಬಡ ಮತ್ತು ಮಧ್ಯಮ ವರ್ಗದವರಿಗೆ ರೈಲಿನಲ್ಲಿ ಸ್ಥಳಾವಕಾಶ ಲಭಿಸುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.