‘ಕನಕ ಅನುವಾದ ಸಾಹಿತ್ಯ ಪ್ರಕಟಣೆಗೆ ತಡವೇಕೆ’ ಎಂಬ ಟಿ.ಎ.ಎನ್. ಖಂಡಿಗೆ ಅವರ ಪತ್ರಕ್ಕೆ (ವಾ.ವಾ., ಡಿ. 15) ಈ ಸ್ಪಷ್ಟೀಕರಣ. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಕನಕದಾಸರ ಸಮಗ್ರ ಸಾಹಿತ್ಯವನ್ನು ದೇಶದ 15 ಭಾಷೆಗಳಿಗೆ ಅನುವಾದಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಅಸ್ಸಾಂ ಮತ್ತು ಪಂಜಾಬಿ ಭಾಷೆಗಳನ್ನು ಹೊರತುಪಡಿಸಿ ಉಳಿದ 13 ಭಾಷೆಗಳ ಅನುವಾದ ಕೆಲಸವನ್ನು 2017ರ ಏ. 22ಕ್ಕೆ ಪೂರ್ಣಗೊಳಿಸಿ, ಮುದ್ರಣಕ್ಕೆ ಅಣಿಗೊಳಿಸಿದೆ.
ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಮತ್ತು ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆಗಳ ಬೃಹತ್ ಸಂಪುಟಗಳ ಸಿದ್ಧತೆ ಮತ್ತು ವೆಚ್ಚದ ಬಾಬುಗಳನ್ನು ಕನಕ ಅಧ್ಯಯನ ಕೇಂದ್ರವೂ, ಮುದ್ರಣ ಮತ್ತು ಮಾರಾಟದ ವ್ಯವಸ್ಥೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರವೂ ಮಾಡುವುದೆಂದು ಈ ಯೋಜನೆಗಳ ಆರಂಭದಲ್ಲೇ ತೀರ್ಮಾನವಾಗಿತ್ತು. ಆಗ ಬಂಜಗೆರೆ ಜಯಪ್ರಕಾಶ್ ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಬದಲಾದ ಸನ್ನಿವೇಶದಲ್ಲಿ ಮುದ್ರಣ ಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿತು. ನಂತರ ಸರ್ಕಾರದೊಂದಿಗೆ ವಿನಂತಿ, ಪತ್ರ ವ್ಯವಹಾರ ನಡೆದಿದೆ. ಮುದ್ರಣದ ಜವಾಬ್ದಾರಿಯನ್ನು ಯಾವ ಸಂಸ್ಥೆ ಹೊರಬೇಕು ಎಂಬುದರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವರ್ಷದಿಂದಲೂ ಸ್ಪಷ್ಟ ಆದೇಶ ಬಾರದ ಕಾರಣ ಮುದ್ರಣ ಕಾರ್ಯ ಬಾಕಿ ಉಳಿದಿದೆ.
ಕಾ.ತ. ಚಿಕ್ಕಣ್ಣ, ಸಮನ್ವಯಾಧಿಕಾರಿ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.