‘ಸಿನಿಮಾ: ಜೀವಂತಿಕೆಯ ಕೊಂಡಿ’ (ಸಂಗತ, ಜುಲೈ 29) ಎಂಬ ಯೋಗಾನಂದ ಅವರ ಲೇಖನ ಸಮಯೋಚಿತವಾಗಿದೆ. 70-80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರಗಳ ಸುರಿಮಳೆಯೇ ಆಯಿತು. ಬಿ.ವಿ.ಕಾರಂತ, ಗಿರೀಶ ಕಾರ್ನಾಡ, ಜಿ.ವಿ.ಅಯ್ಯರ್ ಅವರಂತಹ ರಂಗಭೂಮಿ ಹಿನ್ನೆಲೆಯ ದಿಗ್ಗಜರಿಂದ ಮೂಡಿಬಂದಂತಹ ಚಿತ್ರಗಳು ನಮ್ಮ ಚಿತ್ರರಂಗದ ಹಿರಿಮೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದವು. ಕಾದಂಬರಿ ಆಧಾರಿತ ಸದಭಿರುಚಿಯ ಚಿತ್ರಗಳೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದವು. ಕಿವುಡು, ಮೂಗ ಸಮಸ್ಯೆಯ ಎಳೆಯ ಕಥೆಯನ್ನಿಟ್ಟುಕೊಂಡ ‘ನಾಂದಿ’ ಚಲನಚಿತ್ರ ಆಗಿನ ಕಾಲಕ್ಕೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಚಿತ್ರರಂಗದ ದೊಡ್ಡ ಹೆಗ್ಗಳಿಕೆಯೇ ಆಗಿತ್ತು. ನಿಜಕ್ಕೂ ಆ ವರ್ಷಗಳು ಕನ್ನಡ ಚಿತ್ರರಂಗದಲ್ಲಿ ‘ಸುವರ್ಣಯುಗ’ವನ್ನೇ ನಿರ್ಮಿಸಿದ್ದವು.
ಹಿಂದಿನ ಚಿತ್ರ ನಿರ್ಮಾಪಕರೂ ಚಿತ್ರ ನಿರ್ಮಾಣಕ್ಕೆ ಬಂಡವಾಳ ಒದಗಿಸುವುದಷ್ಟೇ ತಮ್ಮ ಕೆಲಸ ಎಂದು ಭಾವಿಸದೆ, ನಿರ್ಮಾಣದ ಪ್ರತೀ ಹಂತದಲ್ಲೂ ಬದ್ಧತೆಯಿಂದ ತೊಡಗಿಕೊಳ್ಳುತ್ತಿದ್ದರು. ಈಗ, ಚಿತ್ರರಂಗದ ಗಂಧ-ಗಾಳಿ ಗೊತ್ತಿಲ್ಲದೆ ಇರುವ ಯಾರು ಬೇಕಾದರೂ ನಿರ್ಮಾಪಕರಾಗಬಹುದಾಗಿದೆ. ‘ಸಿನಿಮಾಗಳು ಹೆಚ್ಚಿಸಿಕೊಳ್ಳಬೇಕಾದದ್ದು ವೀಕ್ಷಕರನ್ನಲ್ಲ ಪ್ರೇಕ್ಷಕರನ್ನು’ ಎನ್ನುವ ಲೇಖಕರ ಮಾತು ಅಕ್ಷರಶಃ ಸತ್ಯ.
– ಟಿ.ಎಸ್.ಪ್ರತಿಭಾ, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.