ರಾಜಾರಾವ್ ಅವರ ‘ಕಾಂತಾಪುರ’ ಕಾದಂಬರಿ 1938ರಲ್ಲಿ ಮೊದಲು ಪ್ರಕಟಗೊಂಡು ಹಲವು ಮರುಮುದ್ರಣ, ಅನುವಾದ ಕಂಡಿದೆ. ಗಾಂಧೀಜಿಯು ಸತ್ಯಾಗ್ರಹ, ಅಹಿಂಸೆ, ಸ್ವದೇಶಿ ತತ್ವಗಳನ್ನು ಆಯುಧಗಳನ್ನಾಗಿ ಪ್ರಯೋಗಿಸಿ ಪ್ರಾರಂಭಿಸಿದ ಚಳವಳಿಯು ದೇಶದಾದ್ಯಂತ ಬಿರುಸಾಗಿದ್ದ ದಿನಗಳಲ್ಲಿ, ಮೈಸೂರು ಪ್ರಾಂತ್ಯದ ಮಲೆನಾಡಿನ ‘ಕಾಂತಾಪುರ’ ಎಂಬ ಗ್ರಾಮವನ್ನು ಆಧಾರವಾಗಿಟ್ಟು ಈ ಕಾದಂಬರಿ ರಚಿತವಾಗಿದೆ. ಮೂರ್ತಿ ಎಂಬ ಗಾಂಧಿ ತತ್ವಗಳ ಸಾಕಾರಮೂರ್ತಿಯ ಮುಖಾಂತರ, ಅಲ್ಲಿನ ವಿವಿಧ ಜಾತಿ, ಕಸುಬು, ಸ್ತರಗಳ ಸಮುದಾಯವನ್ನು ಹೊಕ್ಕು ಆವರಿಸಿ, ಇಡೀ ಸಮುದಾಯವು ಉತ್ಸಾಹ ಆವೇಶಗಳಿಂದ ಚಳವಳಿಯಲ್ಲಿ ಧುಮುಕಿ ಸರ್ಕಾರದ ಕ್ರೌರ್ಯ, ಅತ್ಯಾಚಾರಗಳಿಗೆ ಅಳುಕದೆ, ಹಿಂಸೆ ನೋವು ಅನುಭವಿಸಿ ದಿಟ್ಟತನದಿಂದ ತೊಡಗಿಕೊಳ್ಳುವ ಪರಿ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.
ಇಂಗ್ಲಿಷ್ ಭಾಷೆಯಲ್ಲಿರುವ ಕಾದಂಬರಿಯಲ್ಲಿ ರಾಜಾರಾವ್ ಅವರ ಭಾಷೆ, ನಿರೂಪಣೆಯ ಶೈಲಿ, ಧಾಟಿ ಪ್ರಾದೇಶಿಕ ಸೊಗಡಿನಿಂದ ಕೂಡಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಗ್ರಾಮೀಣ ಜೀವನದ ಚಿತ್ರಣವಂತೂ ಅತಿ ಆಪ್ತವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಕಾದಂಬರಿಯನ್ನು ಎಲ್ಲರೂ ಓದುವುದು ಔಚಿತ್ಯಪೂರ್ಣ ಎನಿಸುತ್ತದೆ. ಪದವಿ ತರಗತಿಗಳಲ್ಲಿ ಇಂಗ್ಲಿಷ್ ಅಧ್ಯಯನದ ಭಾಗವಾಗಿ ಒಂದು ಇಂಗ್ಲಿಷ್ ಕಾದಂಬರಿಯನ್ನು ಪಠ್ಯವಾಗಿ ಓದಬೇಕಾದ ಕ್ರಮ ಇತ್ತು. ಈಗಲೂ ಇದ್ದಲ್ಲಿ ‘ಕಾಂತಾಪುರ’ ಬಹಳ ಪ್ರಸ್ತುತ ಅನ್ನಿಸುತ್ತದೆ. ಈಗಿನ ಯುವಜನಾಂಗ ಈ ಕಾದಂಬರಿಯ ಓದಿನ ಮೂಲಕ ಸ್ವಾತಂತ್ರ್ಯ ಚಳವಳಿಯ ಒಂದು ಇಣುಕು ನೋಟವನ್ನು ಪಡೆಯಬಹುದು.
-ಎಚ್.ಎಸ್.ಶಿವರಾಮ್, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.