ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು (ಕೆಇಎ) ಕೆಲವು ತಿಂಗಳ ಹಿಂದೆ ಸಹನಿರ್ದೇಶಕ, ಉಪನಿರ್ದೇಶಕ ಹುದ್ದೆ ಸೇರಿದಂತೆ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅಭ್ಯರ್ಥಿಗಳಿಗೆ ವಯೋಮಾನ ನಿಗದಿಯಾಗಿರಲಿಲ್ಲ,
ಕನಿಷ್ಠ ಅನುಭವವನ್ನು ನಿಗದಿಪಡಿಸಲಾಗಿತ್ತು. ಆದರೆ ಸಂದರ್ಶನಕ್ಕೆ ಹಾಜರಾದಾಗ (ಅ. 23) ಅಭ್ಯರ್ಥಿಗಳಿಗೆ
ಅಚ್ಚರಿ ಕಾದಿತ್ತು. ಸಂದರ್ಶನಕ್ಕೆ ಹಾಜರಾದವರಲ್ಲಿ ರಾಜ್ಯ ಸರ್ಕಾರದ ವಾರ್ತಾ ಇಲಾಖೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದು ನಿವೃತ್ತಿ ಹೊಂದಿದ ಅಧಿಕಾರಿಯೂ ಸೇರಿದಂತೆ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು, ನಿವೃತ್ತ ಉಪನ್ಯಾಸಕರು... ಹೀಗೆ ನಿವೃತ್ತರೇ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಹೆಚ್ಚಿನವರು ಈಗಾಗಲೇ ವಿವಿಧ ಯೋಜನೆಗಳ ಮೌಲ್ಯಮಾಪನ ಕಾರ್ಯದಲ್ಲಿ ಕಾರ್ಯನಿರ್ವಹಿಸಿದವರು, ಅನುಭವ ಹೊಂದಿದವರು. ಹೀಗಿರುವಾಗ ಅಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅವರ ಸಾಮರ್ಥ್ಯವೇ ಹೆಚ್ಚಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಸ್ಥಾನ ನಿರ್ವಹಿಸಿ, ನಿವೃತ್ತಿ ವೇತನವನ್ನೂ ಪಡೆಯುತ್ತಿರುವ ಇವರೇ ಮತ್ತೆ ಮತ್ತೆ ಉದ್ಯೋಗಕ್ಕೆ ಬಂದರೆ ಹೊಸಬರಿಗೆ ಆದ್ಯತೆ ಎಲ್ಲಿರುತ್ತದೆ? ಉದ್ಯೋಗಾವಕಾಶ ಯುವಜನರಿಗೆ ಹೇಗೆ ದೊರೆಯುತ್ತದೆ? ಇದು ಹುದ್ದೆಗಳಿಗೆ ವಯೋಮಾನ ನಿಗದಿಪಡಿಸದ ಕೆಇಎಯ ತಪ್ಪೋ ಅಥವಾ ಇಡೀ ಸಂದರ್ಶನ ಪ್ರಕರಣವೇ ಕಣ್ಣಿಗೆ ಮಣ್ಣೆರಚುವ ತಂತ್ರವೋ? ಒಟ್ಟಿನಲ್ಲಿ ಅಭ್ಯರ್ಥಿಗಳಿಗೆ ದುಡ್ಡು, ಸಮಯ ಎರಡೂ ವ್ಯರ್ಥ.
ಡಾ. ಶ್ರೀನಿಧಿ ಅಡಿಗ,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.