ರಾಜ್ಯದಲ್ಲೇ ಹೆಚ್ಚು ಅರಣ್ಯ ಪ್ರದೇಶವಿರುವ ಉತ್ತರ ಕನ್ನಡದ ಜೋಯ್ಡಾ ತಾಲ್ಲೂಕು ಮಂಗನ ಕಾಯಿಲೆಯ ಸಾಂಪ್ರದಾಯಿಕ ತಾಣಗಳಲ್ಲೊಂದು. 90ರ ದಶಕದಲ್ಲೊಮ್ಮೆ ಇದೇ ತೆರನಲ್ಲಿ ರೋಗ ಉಲ್ಬಣಿಸಿತ್ತು. ರೋಗ ನಿಯಂತ್ರಿಸುವ ಪ್ರಯತ್ನಗಳಲ್ಲಿ ಆಗ ತೊಡಗಿಕೊಂಡಿದ್ದ ನಾಗರಿಕ ಕಾರ್ಯಕರ್ತರೊಂದಿಗೆ ನಾನೂ ಪಾಲ್ಗೊಂಡಿದ್ದೆ. ರೋಗಕ್ಕೆ ತುತ್ತಾದ ರೈತರು, ವನವಾಸಿಗಳು ಹಾಗೂ ಕುಣಬಿ ಮರಾಠಿಗಳಂಥ ಬುಡಕಟ್ಟು ಜನರ ಸ್ಥಿತಿಗಳನ್ನು ಆಗ ದಾಖಲಿಸಲಾಗಿತ್ತು. ಕಾಳಿ ನದಿಯ ಅಣೆಕಟ್ಟು, ತೇಗದ ನೆಡುತೋಪು, ಕೃಷಿ ವಿಸ್ತರಣೆ, ಅರಣ್ಯ ಅತಿಕ್ರಮಣ ಇತ್ಯಾದಿಗಳಿಗಾಗಿ ಮರ ಕಡಿಯುವುದು ಹಾಗೂ ಕಾಡನ್ನು ಸುಡುವುದು ಸಾಮಾನ್ಯವೆಂಬಂತೆ ಅಲ್ಲಿ ಕಂಡುಬಂದಿತ್ತು. ಅಂಥ ತೆರೆದ ಸ್ಥಳಗಳಲ್ಲೆಲ್ಲ ಕ್ರೋಮೋಲಿನಾ ಪ್ರಭೇದದ ಕಳೆ ವ್ಯಾಪಕವಾಗಿ ಹಬ್ಬಿತ್ತು. ಈ ಕಳೆಯು ಉಣ್ಣೆಗಳಿಗೆ ಒಳ್ಳೆಯ ವಾಸಸ್ಥಾನವಾದದ್ದನ್ನು ಗುರುತಿಸಿದ್ದ ಸ್ಥಳೀಯರು, ಆ ಸಂಕಷ್ಟದಲ್ಲೂ ರೋಗವನ್ನೆದುರಿಸುವ ಉಪಾಯಗಳನ್ನು ಕಂಡುಕೊಂಡಿದ್ದರು.
ಜಾನುವಾರುಗಳು ಕಾಡಿನಿಂದ ಉಣ್ಣೆ ತರುವುದನ್ನು ತಡೆಗಟ್ಟಲು, ಹಟ್ಟಿಯಲ್ಲೇ ಉಳಿಸಿಕೊಂಡು ಮೇವುಣಿಸುತ್ತಿದ್ದರು. ಅವಕ್ಕೆ ಬೂದಿಹಚ್ಚಿ ಮೈತೀಡಿ ಸ್ವಚ್ಛವಾಗಿಡುತ್ತಿದ್ದರು. ಹೊರಹೋಗುವಾಗ ಕೈ-ಕಾಲಿಗೆ ಸೀಮೆಎಣ್ಣೆ ಸಿಂಪಡಿಸಿಕೊಂಡು ಉಣ್ಣೆಗಳನ್ನು ದೂರವಿಡಲು ಯತ್ನಿಸುತ್ತಿದ್ದರು. ಪ್ರತಿದಿನ ಜೀರಿಗೆ ಕಷಾಯ ಕುಡಿಯುವುದನ್ನೂ ರೂಢಿಸಿಕೊಂಡಿದ್ದರು. ಆ ವರ್ಷದ ಮುಂಗಾರು ಮಳೆ ಬಿದ್ದ ನಂತರವೇ ಆ ರೋಗ ಮಾಯವಾದದ್ದು. ಕ್ಷೇತ್ರಾಧ್ಯಯನದಲ್ಲಿ ದೊರಕಿದ ಈ ಎಲ್ಲ ಒಳನೋಟಗಳ ಸಂಗ್ರಾಹ್ಯ ಕಿರುವರದಿಯನ್ನು ಆರೋಗ್ಯ ಇಲಾಖೆ ಹಾಗೂ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ಸಲ್ಲಿಸಿದ್ದೆವು. ಇವೆಲ್ಲ ಘಟಿಸಿ ಎರಡೂವರೆ ದಶಕಗಳೇ ಕಳೆದಿವೆ. ಮಂಗನ ಕಾಯಿಲೆ ಕುರಿತಾಗಿ ಹೆಚ್ಚಿನ ಅರಿವು ಇಂದಿಗೂ ಹೊರಹೊಮ್ಮಿರುವಂತೆ ತೋರುತ್ತಿಲ್ಲ. ಸರ್ಕಾರ ಈಗಲಾದರೂ ಜಾಗೃತವಾಗಿ, ಈ ಮುಂದಿನ ಎರಡು ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಮೊದಲಿನದು, ತಕ್ಷಣದ ರೋಗನಿಯಂತ್ರಣ ಕುರಿತು. ಮಲೆನಾಡಿನ ಕೆಲವೇ ಸ್ಥಳಗಳಿಗೆ ಸೀಮಿತವಾಗಿದ್ದ ರೋಗವು ನಿಧಾನವಾಗಿ ಸಾಂಕ್ರಾಮಿಕವಾಗುತ್ತಿರುವ ಲಕ್ಷಣಗಳಿವೆ. ಆದ್ದರಿಂದ, ವ್ಯಾಪಕವಾಗಿ ಲಸಿಕೆ ಹಾಕಬೇಕಾಗಿದೆ. ಉಣ್ಣೆಗಳನ್ನು ದೂರವಿರಿಸಲು ದೇಹಕ್ಕೆ ಸವರಿಕೊಳ್ಳುವ ಸುವಾಸನಾಯುಕ್ತ ತೈಲವನ್ನು (ಡಿಎಂಪಿ ತೈಲ) ರೋಗಬಾಧಿತ ಪ್ರದೇಶದೆಲ್ಲೆಡೆ ಆದ್ಯತೆಯಲ್ಲಿ ಒದಗಿಸಬೇಕಿದೆ.
ಎರಡನೆಯದು, ದೀರ್ಘಕಾಲೀನ ಪರಿಹಾರ. ಈ ರೋಗ ಹಾಗೂ ಔಷಧದ ಅಭಿವೃದ್ಧಿ ಕುರಿತಂತೆ ಆಳವಾದ ಸಂಶೋಧನೆಗಳಾಗಬೇಕಿದೆ. ಈ ರೋಗದ ಮದ್ದಿಗೆ ವ್ಯಾಪಕ ಮಾರುಕಟ್ಟೆಯೇನೂ ಇರದ ಕಾರಣ, ಖಾಸಗಿ ಕ್ಷೇತ್ರವು ಇದರಲ್ಲಿ ಆಸಕ್ತಿ ತಾಳಲಿಕ್ಕಿಲ್ಲ. ಭಾರತೀಯ ವೈದ್ಯಕೀಯ ವಿಜ್ಞಾನ ಕೌನ್ಸಿಲ್ ನೇತೃತ್ವದಲ್ಲಿ ಸರ್ಕಾರವೇ ಈ ಪ್ರಯತ್ನಕ್ಕೆ ಚಾಲನೆ ನೀಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.