ADVERTISEMENT

ಶಾಲೆಗೆ ಕಾಯಕಲ್ಪವಾಗಲಿ

ಶಾಲೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 19:36 IST
Last Updated 17 ಜುಲೈ 2018, 19:36 IST
   

‘ಸರ್ಕಾರಿ ಶಾಲೆ ಉಳಿಸಬಲ್ಲದೇ ಎಲ್‌ಕೆಜಿ’ (ಸಂಗತ, ಜುಲೈ 13) ಎಂಬ ಲೇಖನಕ್ಕೆ ಪೂರಕವಾಗಿ ಇನ್ನಷ್ಟು ಮಾಹಿತಿ.

ಅನೇಕ ಸರ್ಕಾರಿ ಶಾಲೆಗಳಲ್ಲಿ ತರಗತಿಗೆ ಒಬ್ಬರಂತೆ ಶಿಕ್ಷಕರಾಗಲಿ, ಕೊಠಡಿಯಾಗಲಿ ಇಲ್ಲ. ಆದರೂ ‘ನಲಿ– ಕಲಿ’ ಅನ್ನುತ್ತಿದ್ದಾರೆ. ಇಂತಹ ಶಾಲೆಗಳಲ್ಲಿ ಯಾವ ವಿದ್ಯಾರ್ಥಿ ನಲಿಯಲು, ಕಲಿಯಲು ಸಾಧ್ಯ? ಯಾವ ಪೋಷಕರು ಮಕ್ಕಳನ್ನು ಕಳಿಸುತ್ತಾರೆ?

ಕಡೂರು ಒಂದು ಸಣ್ಣ ಪಟ್ಟಣ. ನಾನು 1960ರಲ್ಲಿ ಶಾಲೆಗೆ ಸೇರುವಾಗ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಒಂದು ಕಿರಿಯ ಪ್ರಾಥಮಿಕ ಶಾಲೆ (1–4) ಮತ್ತು ಒಂದು ಹಿರಿಯ ಪ್ರಾಥಮಿಕ ಶಾಲೆ (5–7) ಇತ್ತು. ಆಗ ನಮಗೆ ಉಪ್ಪಿಟ್ಟು ಮತ್ತು ಹಾಲು ಬಿಟ್ಟರೆ ಬೇರೆ ಯಾವುದೇ ಸವಲತ್ತೂ ಶಾಲೆಯಲ್ಲಿ ಇರಲಿಲ್ಲ. ನಮ್ಮ ಮನೆಗಳಿಗೆ ಹೋಲಿಸಿದರೆ ಅರಮನೆಯಂಥ ಶಾಲಾ ಕಟ್ಟಡ ಮತ್ತು ಆಟದ ಮೈದಾನ ಇದ್ದವು. ಶಿಕ್ಷಣವೂ ಚೆನ್ನಾಗಿತ್ತು.

ADVERTISEMENT

ಕಡೂರಿನಲ್ಲಿ ಹತ್ತು– ಹದಿನೈದು ವರ್ಷಗಳ ಹಿಂದೆ ದನದ ಶೆಡ್‌ನಂಥ ಕೊಠಡಿಗಳಲ್ಲಿ ಪ್ರಾರಂಭವಾದ ಸುಮಾರು 15 ಖಾಸಗಿ ಶಾಲೆಗಳು ಇಂದು ಪ್ರಿ ನರ್ಸರಿಯಿಂದ ಎಸ್‌ಎಸ್‌ಎಲ್‌ಸಿವರೆಗೆ, ವಿಶ್ವವಿದ್ಯಾಲಯಗಳನ್ನು ನಾಚಿಸುವಂಥ ಕಟ್ಟಡಗಳನ್ನು ಹೊಂದಿ ಶಿಕ್ಷಣ ನೀಡುತ್ತಿವೆ. ಸ್ವಂತ ವಾಹನಗಳನ್ನು ಹೊಂದಿ 15–20 ಕಿ.ಮೀ. ದೂರದ ಹಳ್ಳಿಗಳಿಂದ ಮಕ್ಕಳನ್ನು ಕರೆತಂದು ವಾಪಸ್‌ ಮನೆಗೆ ಬಿಡುತ್ತಿವೆ.

ಇದೇ ರೀತಿ ಸರ್ಕಾರಿ ಶಾಲೆಗಳಿಗೂ ‘ಕಾಯಕಲ್ಪ’ ಆಗಬೇಕು. ಸೌಲಭ್ಯಗಳಿಲ್ಲದ ಶಾಲೆಗಳನ್ನು ಮುಚ್ಚಿ, ಹೋಬಳಿ ಮಟ್ಟದಲ್ಲಿ ಎಲ್‌ಕೆಜಿಯಿಂದ ಎಸ್ಎಸ್ಎಲ್‌ಸಿವರೆಗೆ ಶಿಕ್ಷಣಕೊಡುವ ಶಾಲೆಗಳನ್ನು ಆರಂಭಿಸಬೇಕು. 30–40 ಮಕ್ಕಳಿಗೆ ಒಂದು ಕೊಠಡಿ, ಒಬ್ಬ ಶಿಕ್ಷಕ ಮತ್ತು ಮಕ್ಕಳನ್ನು ಕರೆತಂದು, ವಾಪಸ್‌ ಮನೆಗೆ ಬಿಡಲು ಶಾಲಾ ವಾಹನಗಳ ವ್ಯವಸ್ಥೆಯನ್ನೂ ಮಾಡಬೇಕು.

ಇಂಥ ವ್ಯವಸ್ಥೆ ಆಗದಿದ್ದರೆ ಸರ್ಕಾರ ಏನೇಮಾಡಿದರೂ ಪ್ರಯೋಜನ ಆಗುವುದಿಲ್ಲ. ಶಿಕ್ಷಣಕ್ಕೆ ಪೂರಕವಲ್ಲದ ಕೆಲವು ಉಚಿತ ಸೌಲಭ್ಯಗಳನ್ನು ನಿಲ್ಲಿಸಿ, ಇಂಗ್ಲಿಷ್ ಭಾಷೆಗೂ ಒತ್ತು ನೀಡಿ ಉಚಿತ ಶಿಕ್ಷಣಕ್ಕೆ ಆದ್ಯತೆ ನೀಡುವುದರಿಂದ ಬಡವರ ಮಕ್ಕಳು ಸಾಕ್ಷರರಾಗಲು ಸಾಧ್ಯ.

ಎಚ್.ಟಿ. ಲೋಕೇಶ್, ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.