ADVERTISEMENT

ನೈತಿಕತೆಗೆ ಕಳಂಕ!

ವಸುಧೇಂದ್ರ, ಬೆಂಗಳೂರು
Published 22 ಜುಲೈ 2018, 19:45 IST
Last Updated 22 ಜುಲೈ 2018, 19:45 IST

ಕನ್ನಡದಲ್ಲಿ ಇತ್ತೀಚೆಗೆ ಅನುವಾದಿತ ಪುಸ್ತಕಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ ಮತ್ತು ಓದುಗರನ್ನೂ ಗಳಿಸುತ್ತಿವೆ. ಅನ್ಯ ಭಾಷೆಯ ಸಾಹಿತ್ಯವು ನಮ್ಮ ಓದುಗರನ್ನು ತಲುಪುವುದಕ್ಕೆ ಇದು ಒಳ್ಳೆಯ ವಿಧಾನವಾಗಿದೆ. ಇದರಿಂದಾಗಿ ನಮ್ಮ ಸಾಹಿತ್ಯವೂ ವಿಪುಲವಾಗಿ ಬೆಳೆಯುತ್ತದೆ.

ಆದರೆ ಬಹಳಷ್ಟು ಅನುವಾದದ ಪುಸ್ತಕಗಳು ಮೂಲ ಲೇಖಕರ ಅಥವಾ ಪ್ರಕಾಶಕರ ಪರವಾನಗಿಯಿಲ್ಲದೆ ಪ್ರಕಟವಾಗುತ್ತಿವೆ. ಇದು ಕನ್ನಡ ಪ್ರಕಾಶನದ ನೈತಿಕತೆಗೆ ದೊಡ್ಡ ಕಳಂಕವಾಗಿದೆ. ಇಂತಹ ಅಕ್ರಮದಿಂದ ಮೂಲ ಲೇಖಕರಿಗೆ, ಪ್ರಕಾಶಕರಿಗೆ ಮತ್ತು ಒಟ್ಟಾರೆ ಪುಸ್ತಕೋದ್ಯಮಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗೆ ಅನುಮತಿಯಿಲ್ಲದೆ ಪ್ರಕಟವಾದ ಪುಸ್ತಕಗಳನ್ನು ಓದುಗರು, ಮಾರಾಟಗಾರರು, ಅಕಾಡೆಮಿಗಳು ಮತ್ತು ಗ್ರಂಥಾಲಯಗಳು ತಿರಸ್ಕರಿಸುವ ಅವಶ್ಯಕತೆ ಇರುತ್ತದೆ.

ಈ ಕ್ರಮ ಕನ್ನಡ ಪ್ರಕಾಶಕರ ನೈತಿಕತೆಯ ಮಟ್ಟವನ್ನು ಉದಾತ್ತವಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಪರಿಹಾರಕ್ಕೆ ಸುಲಭವಾದ ಮಾರ್ಗವೊಂದನ್ನು ಅನುಸರಿಸಬಹುದು. ಯಾವುದೇ ಅನುವಾದ ಕೃತಿಗೆ ಬಹುಮಾನ ಅಥವಾ ಪ್ರಶಸ್ತಿ ಕೊಡುವಾಗ ಅಥವಾ ಗ್ರಂಥಾಲಯಕ್ಕೆ ಆಯ್ಕೆ ಮಾಡುವಾಗ ಮೂಲ ಪ್ರಕಾಶಕರ– ಲೇಖಕರ ಅನುಮತಿ ಪಡೆದ ಕರಾರುಪತ್ರ ಲಗತ್ತಿಸುವುದನ್ನು ಕಡ್ಡಾಯಗೊಳಿಸಬೇಕು. ಇಂತಹ ಕರಾರುಪತ್ರಗಳು ಅನುಮಾನಾಸ್ಪದ ಎಂದು ಕಂಡುಬಂದಾಗ, ಸಂಪರ್ಕಿಸಬೇಕಾದ ವ್ಯಕ್ತಿ, ಸಂಸ್ಥೆಗಳ ವಿವರಗಳನ್ನೂ ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು.

ADVERTISEMENT

ಮೂಲ ಪುಸ್ತಕದ ಅನುಮತಿಯನ್ನು ಪಡೆಯುವುದು ಸುಲಭವೇನೂ ಅಲ್ಲ. ಕೆಲವೊಮ್ಮೆ ಅವರನ್ನು ಸಂಪರ್ಕಿಸುವುದೇ ಕಷ್ಟವಾಗುತ್ತದೆ. ಜೊತೆಗೆ ಅವರಿಗೆ ಸುಮಾರು ಶೇ 7.5ರಷ್ಟು ರಾಯಧನ ಕೊಡಬೇಕು. ಈ ರಾಯಧನವನ್ನು ಮತ್ತೊಂದು ದೇಶಕ್ಕೆ ರವಾನಿಸುವುದು ಭಾರತದ ಹಣಕಾಸಿನ ವಿನಿಮಯ ಕುರಿತ ಕಟ್ಟುನಿಟ್ಟಾದ ನೀತಿಯಿಂದಾಗಿ ಕಷ್ಟವಾಗುತ್ತದೆ.

ಜೊತೆಗೆ ಪುಸ್ತಕದ ಬೆಲೆಯೂ ತುಸು ಹೆಚ್ಚಾಗುತ್ತದೆ. ಆದರೆ ಅನ್ಯಾಯದ ಹಾದಿಯಲ್ಲಿ ನಡೆಯುವುದಕ್ಕಿಂತಲೂ ಸ್ವಲ್ಪ ಹೆಚ್ಚು ಹಣವನ್ನು ಕೊಟ್ಟು, ಒಂದಿಷ್ಟು ಶ್ರಮ ವಹಿಸಿ, ನ್ಯಾಯದ ಹಾದಿಯಲ್ಲಿ ತಲೆಯೆತ್ತಿ ನಡೆಯುವುದನ್ನು ರೂಢಿಸಿಕೊಳ್ಳುವುದು ಪ್ರಗತಿಪರ ಕನ್ನಡಿಗರಿಗೆ ಬಹಳ ಮುಖ್ಯವಾಗಿದೆ. ನಾವು ಈ ಮಾರ್ಗದಲ್ಲಿ ಯಶಸ್ವಿಯಾದರೆ, ಜಗತ್ತಿನ ಮುಖ್ಯ ಪ್ರಕಾಶಕರೆಲ್ಲಾ ಕನ್ನಡ ಪುಸ್ತಕೋದ್ಯಮ ಮತ್ತು ಭಾಷೆಯನ್ನು ಕುರಿತು ತಲೆಯೆತ್ತಿ ನೋಡುವ ಸಂದರ್ಭ ಸೃಷ್ಟಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.