ಇವರಿಗೆ ಇವರೇ ಮಾದರಿಯೋ ಅಥವಾ...?
ಡ್ರೈವರ್ ಕಂ ಕಂಡಕ್ಟರ್ ಹುದ್ದೆ ನೇಮಕಾತಿಗಾಗಿ ನಡೆದ ದೇಹದಾರ್ಢ್ಯ ಪರೀಕ್ಷೆಯಲ್ಲಿ ಪಾಸಾಗಲು ತನ್ನ ತೊಡೆಗಳಿಗೆ ಚಪಾತಿ ಹಿಟ್ಟನ್ನು ಕಟ್ಟಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ದೇಹದ ತೂಕ ಹೆಚ್ಚಿಸಿಕೊಳ್ಳಲು ಮುಂದಾದರೆ, ಇನ್ನೊಬ್ಬ ಒಳ ಉಡುಪಿನಲ್ಲಿ 5 ಕೆ.ಜಿ. ತೂಕದ ಬಟ್ಟು ಇಟ್ಟುಕೊಂಡು ಬಂದು ಸಿಕ್ಕಿಹಾಕಿಕೊಂಡಿರುವುದು ನಾಚಿಕೆಗೇಡು. ಹೀಗೆ ತಾವು ಚಾಪೆಯ ಕೆಳಗೆ ತೂರಲು ನೋಡಿದರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿ ತಮ್ಮನ್ನು ಹಿಡಿಯಬಲ್ಲರು ಎಂಬುದನ್ನು ಅಭ್ಯರ್ಥಿಗಳು ಮರೆತುಬಿಟ್ಟಿದ್ದಾರೆ. ಇನ್ನು ಯಾವ ಯಾವ ತಂತ್ರಗಳನ್ನು ಬಲ್ಲವರಿದ್ದಾರೆಯೋ ಕಾದು ನೋಡಬೇಕು. ಇವರಿಗೆ ಇವರೇ ಮಾದರಿಯೋ ಅಥವಾ ಈ ರೀತಿಯಲ್ಲಿ ಏಮಾರಿಸಿ ಯಾರಾದರೂ ಉದ್ಯೋಗ ಗಿಟ್ಟಿಸಿಕೊಂಡಿದ್ದರೆ ಅವರು ಮಾದರಿಯೋ?
ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು
ಅರಿಯಿರಿ ಬಳಕೆ ಕೈಪಿಡಿಯ ವಿವರ
ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದ ಅಂಗನವಾಡಿಯಲ್ಲಿ ಇತ್ತೀಚೆಗೆ ಕುಕ್ಕರ್ ಸ್ಫೋಟವಾಗಿ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲಾದರು. ಸಾಮಾನ್ಯವಾಗಿ ಮನೆಗಳಲ್ಲಿ ಆಗಾಗ ಕುಕ್ಕರ್ ಸ್ಫೋಟಗೊಂಡು ಗೃಹಿಣಿಯರಿಗೆ ಸಣ್ಣ ಪುಟ್ಟ ಗಾಯಗಳಾಗುತ್ತಿರುತ್ತವೆ. ಆದರೆ ಇದನ್ನು ಎಂದೂ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರತೀ ಬಾರಿ ಬಳಸಿದಾಗಲೂ ಕುಕ್ಕರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಅಂದರೆ ಸೋಪು ಹಾಕಿ ತಿಕ್ಕುವುದಷ್ಟೇ ಅಲ್ಲ, ಗ್ಯಾಸ್ಕೆಟ್ ಅನ್ನೂ ಸ್ವಚ್ಛಗೊಳಿಸಬೇಕು. ವೆಂಟ್ ಪೈಪ್ ಹಾಗೂ ಅದರ ಕೆಳಗಿನ ರಂಧ್ರಗಳಲ್ಲಿ ಆಹಾರದ ತುಣುಕುಗಳು ಸಿಕ್ಕಿಹಾಕಿಕೊಂಡಿರುತ್ತವೆ. ಅವನ್ನು ಸಣ್ಣ ತಂತಿಯಿಂದ ತೆಗೆಯಬೇಕು. ವಿಷಲ್‌ನ ಒಳಗೆ ಕೂಡ ಇದೇ ಸಮಸ್ಯೆ ಇದ್ದು, ಅದನ್ನೂ ಸ್ವಚ್ಛಗೊಳಿಸಬೇಕು. ಪ್ರತೀ ಬಾರಿ ಈ ರೀತಿ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ.
ಇನ್ನು ಇಂತಹ ಸಮಸ್ಯೆಯಾದರೆ ಸ್ವಯಂ ಪರಿಹಾರವಾಗಿ ಕುಕ್ಕರ್‌ನ ಮುಚ್ಚಳದಲ್ಲಿ ಸೇಫ್ಟಿ ವಾಲ್ವ್ ಅಳವಡಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಅದರ ವ್ಯಾಕ್ಸ್ ಕರಗಿ, ಗಾಳಿಯೆಲ್ಲಾ ಹೊರಗೆ ಹೋಗುವಂತೆ ಮಾಡಿರುತ್ತಾರೆ. ಆಗ ಸ್ಫೋಟ ಸಂಭವಿಸುವುದಿಲ್ಲ. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಸೇಫ್ಟಿ ವಾಲ್ವ್ ತೆರೆದುಕೊಳ್ಳದೆ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಕುಕ್ಕರ್‌ಗಳ ಕಾರ್ಯಕ್ಷಮತೆಯ ಬಗ್ಗೆ ಸಂಬಂಧಿಸಿದ ತಜ್ಞರು ಪರಿಶೀಲಿಸ ಬೇಕಿದೆ. ಸರ್ಕಾರವೂ ಈ ಬಗ್ಗೆ ಗಮನಹರಿಸಬೇಕು. ಕುಕ್ಕರ್ ಬಳಸುವವರು ಬಳಕೆ ಹಾಗೂ ನಿರ್ವಹಣೆಯ ಬಗ್ಗೆ ನೀಡಿರುವ ಸೂಚನೆಗಳನ್ನು ಮೊದಲು ತಿಳಿದುಕೊಳ್ಳಬೇಕು. ಯಾವುದೇ ವಸ್ತುಗಳ ಬಳಕೆ ಕೈಪಿಡಿಗಳಲ್ಲಿನ ವಿವರಗಳನ್ನು ಆಯಾ ರಾಜ್ಯಗಳ ಆಡಳಿತ ಭಾಷೆಗಳಲ್ಲಿ ತಿಳಿಸುವುದನ್ನು ಸರ್ಕಾರ ಕಡ್ಡಾಯ ಮಾಡಬೇಕು.
ಮುಳ್ಳೂರು ಪ್ರಕಾಶ್, ಮೈಸೂರು
ಕಳ್ಳರಿಗೆ ಹಬ್ಬದ ಅಡುಗೆ ಮಾಡಿ ಹಾಕದಿರಿ!
ಬೆಳ್ಳಿ, ಬಂಗಾರ, ನಗದು ಕಳವು ಆಗುವುದರ ಬಗ್ಗೆ ಆಗಾಗ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗುವುದು
ಸಾಮಾನ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಳವು ಪ್ರಕರಣಗಳು ನಡೆದರೆ ಅರಿವಿನ ಕೊರತೆ ಅಂತ ಹೇಳಬಹು ದೇನೊ! ಆದರೆ ನಗರ– ಪಟ್ಟಣ ಪ್ರದೇಶಗಳಲ್ಲಿ ಅದರಲ್ಲೂ ಸುಶಿಕ್ಷಿತರ ಮನೆಗಳಲ್ಲಿ ಕಳವು ಆಗಿರುವ ಸುದ್ದಿ ಓದಿದಾಗ ಆಶ್ಚರ್ಯ ಆಗದಿರದು. ಇಲ್ಲಿನ ನಿವಾಸಿಗಳಿಗೆ ಬ್ಯಾಂಕುಗಳಲ್ಲಿರುವ ಲಾಕರ್ ಸೌಲಭ್ಯದ ಬಗೆಗೆ ಮಾಹಿತಿಯ ಕೊರತೆಯೇ, ಬ್ಯಾಂಕುಗಳಲ್ಲಿ ಲಾಕರ್ ಸೌಲಭ್ಯದ ಅಭಾವವೇ ಅಥವಾ ಬ್ಯಾಂಕಿಗೆ ಹೋಗಿಬರಲು ಸೋಮಾರಿತನವೇ... ತಿಳಿಯದು.
ಹಲವು ಬ್ಯಾಂಕುಗಳಲ್ಲಿ ‘ಲಾಕರ್ ಸೌಲಭ್ಯ ಇದೆ’ ಎಂಬ ಫಲಕ ಹಾಕಿರುವುದನ್ನು ಕಾಣುತ್ತೇವೆ. ಹಾಗೆಯೇ, ವಾರ್ಷಿಕ ಬಾಡಿಗೆ ಸಹ ಮಧ್ಯಮ ವರ್ಗದವರ ಜೇಬಿಗೆ ಭಾರವಾಗದು. ಆಭರಣಗಳ ಬೆಲೆಯಲ್ಲಿ ಪ್ರತಿದಿನವೂ ಏರಿಕೆ ಆಗುತ್ತಲಿದ್ದು, ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ ಬ್ಯಾಂಕ್ ಲಾಕರ್ ಸೌಲಭ್ಯಗಳನ್ನು ಪಡೆಯುವುದು ಯುಕ್ತ. ನಮ್ಮ ನಿರ್ಲಕ್ಷ್ಯವು ಕಳ್ಳರಿಗೆ ಹಬ್ಬದ ಅಡುಗೆ ಮಾಡಿ ಹಾಕಿದಂತೆಯೇ ಸರಿ.
ರಘುನಾಥರಾವ್ ತಾಪ್ಸೆ, ದಾವಣಗೆರೆ
ಟ್ರ್ಯಾಕ್ಟರ್ ಸಂಚಾರ: ಸಂಪೂರ್ಣ ನಿರ್ಬಂಧವಿರಲಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಸಂಚಾರ ನಿರ್ಬಂಧಿಸಿರುವುದು ಸಮಯೋಚಿತವಾಗಿದೆ. ನಗರಗಳಲ್ಲಿ ಮೂಲತಃ ಟ್ರ್ಯಾಕ್ಟರ್ ಸಂಚಾರಕ್ಕೆ ಸಾರಿಗೆ ನೀತಿಯಲ್ಲಿ ಅವಕಾಶವಿಲ್ಲ ಎಂಬ ಮೂಲ ಕಾನೂನು ಅರಿವು ಬಹುಶಃ ಈ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ ಟ್ರ್ಯಾಕ್ಟರ್ ಮಾಲೀಕರು ಹಾಗೂ ಕಾರ್ಮಿಕರಿಗೆ ಮನವರಿಕೆ ಆಗಿಲ್ಲವೆಂದು ತೋರುತ್ತದೆ. ಟ್ರ್ಯಾಕ್ಟರ್ ಕೃಷಿ ಉದ್ದೇಶಕ್ಕೆ ಮೀಸಲಾಗಿದೆಯೇ ವಿನಾ ನಗರಗಳಲ್ಲಿ ಸಂಚರಿಸಲು ಅಲ್ಲ.
ನಗರ ವ್ಯಾಪ್ತಿಯಲ್ಲಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ನಿಯಮ ಮಾರ್ಪಡಿಸಲು ಬಿಬಿಎಂಪಿ ಅಧಿಕಾರಿಗಳು ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಪರಿಣಾಮವಾಗಿ ನಗರದಲ್ಲಿ ಟ್ರ್ಯಾಕ್ಟರ್ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುಮತಿ ನೀಡಲಾಯಿತು. ಆದರೆ ಟ್ರ್ಯಾಕ್ಟರ್‌ಗಳ ಅತಿ ವೇಗದ ಚಾಲನೆ, ಅವರು ಮಾಡುತ್ತಿರುವ ಅಪಘಾತಗಳು, ಕರ್ಕಶ ಹಾರ್ನ್ ಶಬ್ದವನ್ನು ಅಗತ್ಯವಾಗಿ ನಿಯಂತ್ರಿಸಬೇಕಾಗಿದೆ. ಈಗ ಬೆಳಿಗ್ಗೆ 8ರಿಂದ 11 ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆಯವರೆಗೆ ನಿರ್ಬಂಧಿಸಿರುವುದರ ಬದಲು ನಗರ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಿದರೆ ಸಾರ್ವಜನಿಕರು ನೆಮ್ಮದಿಯಿಂದ ಸಂಚರಿಸಲು ಅನುವಾಗುತ್ತದೆ.
ಚಿ.ಉಮಾ ಶಂಕರ್, ಬೆಂಗಳೂರು
ಸಾಂಕೇತಿಕ ಆಚರಣೆಯಷ್ಟೇ ಸಾಲದು
ಸಾಂಕೇತಿಕ ಆಚರಣೆಗಳ ಮೂಲಕ ಗೋವಿನ ಮೇಲೆ ಪ್ರೀತಿ ತೋರಿಸುವ ಪ್ರವೃತ್ತಿ ನಮ್ಮಲ್ಲಿ ಹೆಚ್ಚುತ್ತಿದೆ. ಇದರಲ್ಲಿ ರಾಜಕೀಯವೂ ಅಡಕವಾಗಿದೆ. ಅದಿರಲಿ. ಸಾಂಕೇತಿಕ ಉಪಕ್ರಮಗಳಿಗಿಂತ ಜಾನುವಾರುಗಳ ಚಿಕಿತ್ಸೆಗೆ ಪೂರಕವಾಗಿ ಪಶು ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು ಇಂದಿನ ತುರ್ತು ಅಗತ್ಯ. ನಮ್ಮ ಸರ್ಕಾರ ಅದರತ್ತ ಗಮನಹರಿಸಬೇಕಿದೆ. ಜನಪ್ರತಿನಿಧಿಗಳು ಈ ಸಂಬಂಧದ ಕುಂದುಕೊರತೆಗಳ ನಿವಾರಣೆಗೆ ಆಸ್ಥೆ ವಹಿಸಬೇಕಿದೆ.
ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ನಿವಾರಿಸಿ, ಅಗತ್ಯ ಔಷಧಿ, ಲಸಿಕೆಗಳನ್ನು ಪೂರೈಸುವ ಮೂಲಕ ಗೋವುಗಳ ಮೇಲಿನ ಪ್ರೀತಿಯನ್ನು ಪ್ರಕಟಗೊಳಿಸುವುದು ಗೋಮಾತೆಯನ್ನು ಪೂಜಿಸುವುದಕ್ಕಿಂತ ಮತ್ತು
ಅಪ್ಪಿಕೊಳ್ಳುವುದಕ್ಕಿಂತ ಹೆಚ್ಚು ಉಪಯುಕ್ತವಲ್ಲವೇ?
ಡಾ. ಟಿ.ಜಯರಾಂ, ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.