ಸೈಕಲ್ ಬಳಕೆಗೆ ಉತ್ತೇಜನ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರೋಟರಿ ಸಂಸ್ಥೆಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸೈಕಲ್ ರ‍್ಯಾಲಿಯ ಆಶಯ (ಪ್ರ.ವಾ., ನ. 11) ಮೆಚ್ಚುವಂಥದ್ದು. ಆದರೆ, ಸೈಕಲ್‌ನಲ್ಲಿ ಸಂಚರಿಸಿ ಮನೆ ತಲುಪಲು ನಮ್ಮ ನಗರದ ರಸ್ತೆಗಳು ಅಷ್ಟು ಸುರಕ್ಷಿತವೇ? ಮಿಗಿಲಾಗಿ, ದೊಡ್ಡ ದೊಡ್ಡ ನಗರಗಳಲ್ಲಿ ಪ್ರತ್ಯೇಕ ಪಥವಿರದ ಸೈಕಲ್ ಸಂಚಾರ ಅಪಾಯಕಾರಿ ಎಂಬ ಜಾಗೃತಿ ಕೂಡ ಮುಖ್ಯವಲ್ಲವೇ?
ಇಡೀ ನಗರವು ವಾಹನಗಳು ಉಗುಳುವ ಹೊಗೆಯಿಂದ ತುಂಬಿಕೊಂಡು ಅನೇಕ ರೋಗಗಳ ಹುಟ್ಟಿಗೆ ಕಾರಣವಾಗಿದ್ದು, ನಗರಗಳ ವಾತಾವರಣ ವಾಸಕ್ಕೆ ಯೋಗ್ಯವಲ್ಲದಷ್ಟು ಕಲುಷಿತವಾಗಿದೆ. ಆದ್ದರಿಂದ, ಹೊಗೆ ಉಗುಳುವ ವಾಹನಗಳಿಗೆ ಪರ್ಯಾಯವಾಗಿ ಹೆಚ್ಚು ಹೆಚ್ಚು ಜನರು ಸೈಕಲ್ ಬಳಕೆ ಮಾಡುವುದಕ್ಕೆ ಉತ್ತೇಜನ ನೀಡಬೇಕಾದರೆ ಮೊದಲು ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕು. ಇದಕ್ಕೆ ಜನಜಾಗೃತಿಗಿಂತ ಆಡಳಿತ ವರ್ಗದ ಜವಾಬ್ದಾರಿ ಹೆಚ್ಚಾಗಬೇಕಷ್ಟೆ. ಕನಿಷ್ಠ ಐದಾರು ಕಿಲೊ ಮೀಟರ್ ಸಮೀಪವಿರುವ ಕೆಲಸದ ಸ್ಥಳ ತಲುಪಲು ಸೈಕಲ್ ಬಳಕೆ ಮಾಡುವ ಚಿಂತನೆ ಜನರಲ್ಲಿದೆ. ಆದರೆ, ನಗರದ ರಸ್ತೆಗಳ ಈಗಿನ ದುಃಸ್ಥಿತಿಯ ಅರಿವು ಆಡಳಿತವರ್ಗದ ಹೃದಯ ತಟ್ಟದಿದ್ದರೆ ಹೇಗೆ? ಪ್ರತ್ಯೇಕ ಸೈಕಲ್ ಪಥ ನಿರ್ಮಾಣ ಮಾಡುವ ಬಗ್ಗೆ ಕೆಲವು ಜನಪ್ರತಿನಿಧಿಗಳ ಹೇಳಿಕೆಗಳು ಪ್ರಚಾರಕ್ಕಾಗಿಯೇ ವಿನಾ ಇದುವರೆವಿಗೂ ಕಾರ್ಯಗತವಾಗಿಲ್ಲ. ವಿಐಪಿಗಳಿಗೆ ಸೇರಿದ ವಾಹನ ಸಂಚಾರಕ್ಕೆ ಮೂಲ ಸೌಕರ್ಯ ಒದಗಿಸಲು ಇರುವಷ್ಟೇ ಕಾಳಜಿಯು ಬಡವರು, ಪರಿಸರಾಸಕ್ತರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಸೈಕಲ್ ಬಳಸುವುವಾಗ ಸುರಕ್ಷತೆ ಕಲ್ಪಿಸುವುದಕ್ಕೂ ಇರಬೇಕು. ಸರ್ಕಾರದ ಆದ್ಯತೆ ಪಟ್ಟಿಯಲ್ಲಿ ಈ ಅಂಶ ಸೇರಬೇಕು.
- ಡಾ. ಜಿ.ಬೈರೇಗೌಡ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.