ADVERTISEMENT

ಶಿಕ್ಷಣ ವ್ಯಾಪಾರಕ್ಕೆ ‘ಧರ್ಮ’ದ ದುರ್ಬಳಕೆ

ಡಾ.ರಾಜಶೇಖರ ಹತಗುಂದಿ
Published 21 ಏಪ್ರಿಲ್ 2019, 20:19 IST
Last Updated 21 ಏಪ್ರಿಲ್ 2019, 20:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಲ್ಲದು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಎಸ್. ಜಾಮದಾರ ಪುನರುಚ್ಚರಿಸಿದ್ದಾರೆ. ಲಿಂಗಾಯತ– ಬಸವ ಧರ್ಮ ಕಳೆದ 800 ವರ್ಷಗಳಿಂದ ದೇಶದಲ್ಲಿ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಈ ಧರ್ಮವನ್ನು ಆಚರಣೆಯಲ್ಲಿ ತಂದ ಶ್ರೇಯಸ್ಸು ಗದುಗಿನ ವೀರೇಶ್ವರ ಪುಣ್ಯಾಶ್ರಮ ಹಾಗೂ ತುಮಕೂರಿನ ಸಿದ್ಧಗಂಗಾ ಮಠಗಳಿಗೆ ಸಲ್ಲುತ್ತದೆ. ಎಲ್ಲ ಜಾತಿ-ಧರ್ಮದ ಅಸಹಾಯಕ ಮಕ್ಕಳಿಗೆ ಅನ್ನ ಮತ್ತು ಅಕ್ಷರ ದಾಸೋಹ ನೀಡುವ ಮೂಲಕ ಈ ಮಠಗಳು ಬಸವ ಧರ್ಮದ ತತ್ವಾದರ್ಶಗಳನ್ನು ಎತ್ತಿ ಹಿಡಿದವು. ಬಸವಣ್ಣನ ಕನಸಿನ ‘ಜಾತ್ಯತೀತ’ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವು. ಬಸವ ಧರ್ಮಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಆ ಎರಡೂ ಮಠಗಳಿಗೆ ‘ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಬೇಕು’ ಎಂದು ಅನ್ನಿಸಲೇ ಇಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಮತ್ತು ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ- ಈ ಎರಡರ ನಡುವಿನ ವ್ಯತ್ಯಾಸ ಗಮನಿಸಬೇಕು. ಕೆಲವರಿಗೆ ಬೇಕಾಗಿರುವುದು ‘ಲಿಂಗಾಯತ’ಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ. ಕಾರಣ ಸ್ಪಷ್ಟವಿದೆ: ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ದೊರೆತರೆ, ಆ ಸಮುದಾಯದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಒಂದಷ್ಟು ಅನುಕೂಲ ಮತ್ತು ವಿನಾಯಿತಿಗಳು ಸಿಗುತ್ತವೆ.

ಹಾಗಾದರೆ, ಲಿಂಗಾಯತ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನದ ಬೇಡಿಕೆಯನ್ನು ಕೇಂದ್ರ ಸರ್ಕಾರ ಯಾಕೆ ತಿರಸ್ಕರಿಸಿತು? ಲಿಂಗಾಯತ ಒಳಪಂಗಡಗಳಲ್ಲಿನ ಕೆಲವರಿಗೆ, ಅದರಲ್ಲೂ ದಲಿತ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಉಪಜಾತಿಗಳಿಗೆ ಈಗ ದೊರೆಯುತ್ತಿರುವ ಮೀಸಲಾತಿ ಸೌಲಭ್ಯ ಕೈತಪ್ಪುತ್ತದೆ ಎಂಬ ಕಾರಣ ನೀಡಿತು ಎಂದು ವರದಿಯಾಗಿತ್ತು. ಮೇಲೆ ಪ್ರಸ್ತಾಪಿಸಿದ ಎರಡು ಮಠಗಳು ಹೊರತುಪಡಿಸಿದರೆ ಈ ಸಮುದಾಯಕ್ಕೆ ಸೇರಿದ ಉಳಿದ ಬಹುತೇಕ ಮಠಗಳು, ಲಿಂಗಾಯತ ಶಿಕ್ಷಣ ಸಂಸ್ಥೆಗಳು ಹಾಗೂ ಉಪಜಾತಿಗಳ ಹಿತ ಕಾಪಾಡಲು ಮಾತ್ರ ಬದ್ಧವಾಗಿವೆ. ತೋರುಂಬ ಲಾಭಕ್ಕಾಗಿ ಬಸವಣ್ಣನವರ ಹೆಸರನ್ನು ಬಳಸಿಕೊಳ್ಳುತ್ತಿವೆ. ಅದರಲ್ಲೂ ಎಂಜಿನಿಯರಿಂಗ್‌, ಮೆಡಿಕಲ್ ಸೀಟುಗಳ ಮಾರಾಟ ದಂಧೆಯಲ್ಲಿ ನಿಸ್ಸೀಮರಾಗಿರುವವರಿಗೆ ಭರ್ಜರಿ ‘ಶಿಕ್ಷಣ ವ್ಯಾಪಾರ’ ನಡೆಸಲು ಲಿಂಗಾಯತಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನಬೇಕು. ಕ್ಯಾಪಿಟೇಷನ್ ಮಾಫಿಯಾದ ಹುನ್ನಾರಕ್ಕೆ ಬಸವಣ್ಣನವರ ಹೆಸರಿನ ಯಥೇಚ್ಛ ದುರ್ಬಳಕೆಯಾಗುತ್ತಿದೆ.ಬಸವಣ್ಣನವರ ತತ್ವಾದರ್ಶಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬ ಬಗ್ಗೆ ಇಂತಹವರು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.