ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಯ ಅಸೂಕ್ಷ್ಮ ಪ್ರಜ್ಞೆಯಿಂದ ಜನಸಾಮಾನ್ಯರಿಗೆ ಹೇಗೆ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಎಚ್.ಕೆ.ಶರತ್ ಮನಮುಟ್ಟುವಂತೆ ವಿವರಿಸಿದ್ದಾರೆ (ಸಂಗತ, ಸೆ. 24). ಮಂಡ್ಯ ನಗರದ ಬಹುತೇಕ ಬೀದಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಲುವಾಗಿ ಡಾಂಬರು ರಸ್ತೆಗಳಲ್ಲಿ ಗುಂಡಿಗಳನ್ನು ತೆಗೆದು ಪೈಪುಗಳನ್ನು ಹೂಳಲಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದರೂ ಅಗೆದ ಗುಂಡಿಗಳನ್ನು ಸರಿಪಡಿಸಿ ಡಾಂಬರು ಹಾಕುವ ಗೋಜಿಗೇ ಹೋಗಿಲ್ಲ.
ಆಸ್ತಮಾ, ಅಲರ್ಜಿಯಂತಹ ತೊಂದರೆಗಳಿಂದ ನರಳುತ್ತಿರುವವರಿಗೆ ದೂಳಿನಿಂದಾಗಿ ತೊಂದರೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಕಾಲದಲ್ಲಿ ಕಾಮಗಾರಿ ಮುಗಿಸಿ ರಸ್ತೆಗಳನ್ನು ಗುಂಡಿ ಹಾಗೂ ದೂಳು ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸದಿರುವುದು ಜನರ ದೌರ್ಭಾಗ್ಯವೇ ಸರಿ. ಜನರ ಬವಣೆ ಅರಿಯುವ ಸೂಕ್ಷ್ಮ ಪ್ರಜ್ಞೆಯನ್ನು ಅಧಿಕಾರಶಾಹಿ ಇನ್ನಾದರೂ ರೂಢಿಸಿಕೊಂಡು ಬದ್ಧತೆ ಪ್ರದರ್ಶಿಸಲಿ.
ಮಧುಕುಮಾರ ಸಿ.ಎಚ್., ಚಾಮನಹಳ್ಳಿ, ಮದ್ದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.