ಪಶ್ಚಿಮ ಘಟ್ಟಗಳ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ಮಾಧವ ಗಾಡ್ಗೀಳರ ಮಾತನ್ನು (ಪ್ರ.ವಾ., ಅ. 10) ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಕೇವಲ ಕರಾವಳಿ- ಮಲೆನಾಡುಗಳಿಗೆ ಸಂಬಂಧಿಸಿದ ವಿಚಾರ ಅಲ್ಲ. ಶಿವರಾಮ ಕಾರಂತರನ್ನು ಬೇಡ್ತಿ ಬಗೆಗೆ ವಿಚಾರಿಸಿದಾಗ ‘ದೇಶದಲ್ಲಿ ಇಂತಹ ಇಪ್ಪತ್ತು ಸಮಸ್ಯಾತ್ಮಕ ಯೋಜನೆಗಳಿವೆ’ ಎಂದಿದ್ದರು. ನರ್ಮದಾ, ಟೆಹ್ರಿ ವಿಷಯಗಳ ಬಗೆಗೂ ಅವರು ಚಿಂತಿಸಿದ್ದರು.
ನಮ್ಮ ಈಗಿನ ಜನಪ್ರತಿನಿಧಿಗಳ ಗುಣಮಟ್ಟ, ಸಂವೇದನಾಶೀಲತೆ, ಪ್ರಾಶಸ್ತ್ಯಗಳನ್ನು ನೋಡಿದರೆ ಅವರ ಮೇಲೆ ‘ಒತ್ತಡ ಹೇರಲು’ ಸಾಧ್ಯವೇ ಎಂಬ ಸಂಶಯ ಹುಟ್ಟುತ್ತದೆ. ಕೇರಳ ಹಾಗೂ ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಕೆ ಇದೆ. ಹಾಗೆಯೇ ನಮ್ಮ ಮಲೆನಾಡು ಹಾಗೂ ಕೇರಳದ ಒಳಭಾಗದ ಗುಡ್ಡಪ್ರದೇಶಗಳಲ್ಲಿ ಕೆಲವು ಸಮಾನ ಅಂಶಗಳಿವೆ. ಈ ವರ್ಷ ಮುಂಗಾರು ಹಿಂದೆ ಸರಿಯುವುದು ತಡವಾಗಿದೆ, ಹಿಂಗಾರು ಸಮೀಪಿಸುತ್ತಿದೆ. ಎರಡು- ಮೂರು ಲೋ ಪ್ರೆಶರ್ ಸಿಸ್ಟಮ್‌ಗಳ ಮಧ್ಯೆ ಒಮ್ಮೆಗೇ ಸಿಲುಕಿದಾಗ ಎಲ್ಲ ಅಸ್ತವ್ಯಸ್ತ ಆಗುತ್ತದೆ. ಹವಾಮಾನ ಬದಲಾವಣೆ ಬರೀ ಮಳೆಯ ಮೇಲೆ ಪ್ರಭಾವ ಬೀರುವುದಿಲ್ಲ, ತಾಪಮಾನ ಮತ್ತು ಅದರಿಂದಾಗಿ ಕೃಷಿ, ಮೀನುಗಾರಿಕೆಯಂತಹ ಜನರ ಜೀವನೋಪಾಯ ಚಟುವಟಿಕೆಗಳ ಮೇಲೂ ದುಷ್ಪರಿಣಾಮ ಬೀರಬಹುದು.
ಗಾಡ್ಗೀಳರ ವರದಿ ವಾಸ್ತವಕ್ಕೆ ಹತ್ತಿರವಿದ್ದು ‘ಬಿಗಿ’ಯಾಗಿತ್ತು, ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಸರ್ವೆ ಆಧರಿಸಿ ಹಲವು ರಿಯಾಯಿತಿಗಳನ್ನು ಒಳಗೊಂಡಿದೆ. ಅದರ ಬಗೆಗೂ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶದ ನಂತರವೂ ಒಮ್ಮತ ಮೂಡದೆ ಏನೂ ಕೆಲಸ ನಡೆದಿಲ್ಲ. ಪರಿಸರವಾದಿಗಳಲ್ಲಿ ಕೆಲವರಿಗೆ ವಯಸ್ಸಾಗಿದೆ, ಕೆಲವರು ಬೆಂಗಳೂರು ಸೇರಿಕೊಂಡಿದ್ದಾರೆ. ಕೆಲವು ಎನ್‌ಜಿಒಗಳಿಗೆ ವಿದೇಶಿ ನೆರವಿನ ಮೂಲ ಬಂದ್ ಆಗಿದೆ. ಸರ್ಕಾರಿ ಟಾಸ್ಕ್ ಫೋರ್ಸ್ ಸೇರಿಕೊಂಡವರೂ ಇದ್ದಾರೆ. ನೇತಾರರಲ್ಲಿ ಕೆಲವರು ದಿಲ್ಲಿ ಮುಖಿಯಾಗಿ, ಹಿಂದಿರುಗಿ ರಾಜ್ಯ ರಾಜಧಾನಿಯಲ್ಲಿ ನೆಲೆಸಿದ್ದಾರೆ. ರಿಯಲ್ ಎಸ್ಟೇಟ್, ಹೋಟೆಲ್, ರೆಸಾರ್ಟ್ ಉದ್ಯಮಗಳಲ್ಲಿ ಯಶಸ್ವಿಯಾದವರು ‘ಅಭಿವೃದ್ಧಿ’ಗೆ ಬೆಂಬಲ ನೀಡುವುದರ ಬದಲು ಪರಿಸರ ಸಂರಕ್ಷಣೆಯ ಪರ ನಿಲ್ಲುವರೇ?
- ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.