‘ಟ್ರಾಯ್’ ಹೊಸ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯ?
ಕೇಬಲ್ ಟಿ.ವಿ. ಮತ್ತು ಡೈರೆಕ್ಟ್ ಟು ಹೋಂ (ಡಿಟಿಎಚ್) ದರವನ್ನು ತಿಂಗಳಿಗೆ ಗರಿಷ್ಠ ₹160ಕ್ಕೆ (200 ಚಾನೆಲ್ ಕಡ್ಡಾಯ) ನಿಗದಿಪಡಿಸಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಹೊಸ ನಿಯಮದಿಂದ ಯಾವುದೇ ಲಾಭವಿಲ್ಲ. ಈಗಾಗಲೇ ನಾವು ₹150 ಪಡೆದು (₹130 + ತೆರಿಗೆ) 140ರಿಂದ 200 ಚಾನೆಲ್ ಕೊಡುತ್ತಿದ್ದೇವೆ. ಮನೆಯಲ್ಲಿ ಕುಳಿತು ಟಿ.ವಿ. ನೋಡುವವರಿಗೆ ಶೇ 80ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಲೇ ಕೇಬಲ್ ದರ ಹೆಚ್ಚಾಗಿದೆ. ತೆರಿಗೆಯನ್ನು ಮೊದಲು ಶೇ 5ಕ್ಕೆ ಇಳಿಸಬೇಕು. ಅದನ್ನು ಬಿಟ್ಟು ಚಾನೆಲ್ ಜಾಸ್ತಿ ಮಾಡಿ ಜನರ ದಿಕ್ಕು ತಪ್ಪಿಸಬಾರದು. ಖಾಸಗಿ ಕಂಪನಿಗಳನ್ನು ಬೆಳೆಸಲು ಸರ್ಕಾರ ಈ ರೀತಿ ನಿಯಮ ಮಾಡುತ್ತಿದೆ. ಆಪರೇಟರ್‌ಗಳಿಗೆ ಆರ್ಥಿಕ ಸಂಕಷ್ಟ ತಂದಿಟ್ಟು, ಅವರೆಲ್ಲ ಉದ್ಯಮ ತೊರೆಯುವಂತೆ ಮಾಡುವ ಹುನ್ನಾರ ಇದರ ಹಿಂದಿದೆ.
ಶುಲ್ಕ ಕಡಿಮೆ ಮಾಡಲು ಆಗುವುದಿಲ್ಲವೇ?
₹ 130ರಲ್ಲಿ ಶೇ 40ರಷ್ಟು ಪಾಲನ್ನು ಚಾನೆಲ್ ಲಿಂಕ್ ಕೊಡುವವರಿಗೆ ನೀಡಬೇಕು. ನಮಗೆ ಉಳಿಯುವುದು ಶೇ 60ರಷ್ಟು ಮಾತ್ರ. ಅದರಲ್ಲೇ ಕೆಲಸಗಾರರಿಗೆ, ಕಚೇರಿ ಖರ್ಚಿಗೆ ಹಾಗೂ ನಿರ್ವಹಣೆಗೆ ನೀಡಬೇಕಾಗುತ್ತದೆ. ಹೊಸ ನಿಯಮದಿಂದ ಕೇಬಲ್ ಆಪರೇಟರ್‌ಗಳು ಬೀದಿಗೆ ಬೀಳುವ ಸ್ಥಿತಿ ಬಂದಿದೆ.
ಕೆಲ ಆಪರೇಟರ್‌ಗಳು ಹೆಚ್ಚಿನ ಹಣ ಪಡೆಯುತ್ತಿರುವ ದೂರುಗಳಿವೆ?
ಸಾಧ್ಯವೇ ಇಲ್ಲ, ನಾವೂ ಪ್ಯಾಕೇಜ್ ಸೇವೆ ನೀಡುತ್ತಿದ್ದೇವೆ. ಮುಂಗಡವಾಗಿ ಹಣ ಪಾವತಿಸುವ ಹಾಗೂ ತಿಂಗಳ ನಂತರ ಹಣ ಪಾವತಿಸುವವರಿಂದ ಒಂದೇ ರೀತಿಯ ಹಣ ಪಡೆಯಲಾಗುತ್ತಿದೆ.
ಆಪರೇಟರ್‌ಗಳು ತಮಗೆ ಲಾಭ ತರುವ ಚಾನೆಲ್‌ಗಳ ಗುಣಮಟ್ಟಕ್ಕೆ ಮಾತ್ರ ಒತ್ತು ನೀಡುತ್ತಾರೆ ಎಂಬ ಆರೋಪವಿದೆ?
ಮೊದಲು ಅನ್‌ಲಾಗ್ ವ್ಯವಸ್ಥೆ ಇದ್ದಾಗ ಗುಣಮಟ್ಟದ ಸಮಸ್ಯೆ ಇತ್ತು. ಈಗ ಎಲ್ಲವೂ ಡಿಜಿಟಲ್ ಆಗಿದೆ. ಗುಣಮಟ್ಟದ ಬಗ್ಗೆ ಯಾವುದೇ ದೂರುಗಳಿಲ್ಲ. ಕೆಲವೆಡೆ ಸೇವೆಯಲ್ಲಿ ತೊಂದರೆ ಆಗುತ್ತಿರುವುದನ್ನು ಒಪ್ಪಿಕೊಳ್ಳುತ್ತೇನೆ.
ನಿಮ್ಮ ಮುಂದಿನ ನಡೆ?
ಹೋರಾಟ ಮಾಡಿ ಸಾಕಾಗಿದ್ದು, ಅಂಥ ಹೋರಾಟದ ಬಗ್ಗೆ ಸದ್ಯಕ್ಕೆ ತೀರ್ಮಾನ ಕೈಗೊಂಡಿಲ್ಲ. ಮೊದಲಿಗೆ, ಪೇ ಚಾನೆಲ್‌ಗಳ ದರ ಹಾಗೂ ತೆರಿಗೆಯನ್ನು ಇಳಿಕೆ ಮಾಡಬೇಕು. ಆಗ ಕಡಿಮೆ ದರದಲ್ಲಿ ಜನರಿಗೆ ಕೇಬಲ್ ಸೇವೆ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.