ಫೋನ್ ಕದ್ದಾಲಿಕೆ ವಿಷಯವು ಪ್ರವಾಹ ಸಂತ್ರಸ್ತರ ಗೋಳನ್ನೂ ಮರೆಮಾಚಿಸುತ್ತಿದೆ. ರಾಜರ ಕಾಲದಿಂದಲೂ ಗೂಢಚಾರಿಕೆ ನಡೆದುಬಂದಿದೆ. ಕಳ್ಳಕಾಕರು, ರೌಡಿಗಳು, ಉಗ್ರಗಾಮಿಗಳು, ದರೋಡೆಕೋರರು, ಸಮಾಜಘಾತುಕರು, ಭ್ರಷ್ಟಾಚಾರಿಗಳು, ತೆರಿಗೆಕಳ್ಳರು, ದೇಶದ್ರೋಹಿಗಳು, ಸರ್ಕಾರದ ವಿರುದ್ಧ ಪಿತೂರಿ ನಡೆಸುವವರ ಫೋನ್‌ಗಳನ್ನು ರಾಜ್ಯ ಮತ್ತು ರಾಷ್ಟ್ರದ ತನಿಖಾ ಸಂಸ್ಥೆಗಳು, ಪೊಲೀಸರು ಕದ್ದಾಲಿಸುವುದು ಮಾಮೂಲಿ ಎಂಬಂತಾಗಿದೆ. ಅಗತ್ಯವಿದ್ದಾಗ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಒಪ್ಪಿಗೆ ಪಡೆಯುತ್ತಾರಾದರೂ ಅನೇಕ ಸಲ ಅನಧಿಕೃತವಾಗಿಯೂ ಕದ್ದಾಲಿಕೆ ನಡೆಯುತ್ತಿರುತ್ತದೆ. ಆದರೆ ಅವರು ಪ್ರಜೆಗಳ ಖಾಸಗಿತನಕ್ಕೆ ಧಕ್ಕೆ ತಾರದಂತೆ ಎಚ್ಚರ ವಹಿಸಬೇಕಾಗುತ್ತದೆ. ಇದೀಗ ಇರುವ ಹೊಸ ತಾಂತ್ರಿಕ ಉಪಕರಣಗಳಿಂದ ಟೆಲಿಫೋನ್ ಕದ್ದಾಲಿಕೆಯನ್ನು ಜನಸಾಮಾನ್ಯರೂ ಮಾಡಬಹುದು ಎಂದು ಹೇಳಲಾಗುತ್ತದೆ.
ಆ್ಯಂಡ್ರಾಯ್ಡ್ ಫೋನ್‌ಗಳು, ಕಂಪ್ಯೂಟರ್‌ಗಳು, ವಾಟ್ಸ್‌ಆ್ಯಪ್, ಫೇಸ್‌ಬುಕ್, ಅಮೆಜಾನ್‌ನ ಉಪಕರಣಗಳು ನಮ್ಮ ಬಹುಪಾಲು ಖಾಸಗಿತನವನ್ನು ಈಗಾಗಲೇ ಕಸಿದುಕೊಂಡಿವೆ.
ಫೋನ್ ಕದ್ದಾಲಿಸಿದವರು ಅಧಿಕೃತವಾಗಿ ಒಪ್ಪಿಗೆ ಪಡೆದಿದ್ದರೋ ಇಲ್ಲವೋ ಎಂಬುದನ್ನು ಮಾತ್ರ ತನಿಖೆಯಿಂದ ತಿಳಿಯಬಹುದು. ಅದು ಬಿಟ್ಟರೆ, ಹೆಚ್ಚಿನದೇನಾದರೂ ಆಗುವ ಸಾಧ್ಯತೆ ಕಡಿಮೆ. ಹೀಗಾಗಿ, ಫೋನ್ ಕದ್ದಾಲಿಕೆ ಬಗ್ಗೆ ಸಿಬಿಐ ತನಿಖೆ ವ್ಯರ್ಥ ಪ್ರಯತ್ನವಾಗಬಹುದು.
ಅತ್ತಿಹಳ್ಳಿ ದೇವರಾಜ್, ಹಾಸನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.