ADVERTISEMENT

ಪ್ರಜಾವಾಣಿ@75 | 'ಬದುಕಿಗೆ ದಾರಿದೀಪವಾದ ಪತ್ರಿಕೆ'

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 10:18 IST
Last Updated 19 ನವೆಂಬರ್ 2022, 10:18 IST
   

ಬದುಕಿಗೆ ದಾರಿದೀಪವಾದ ಪತ್ರಿಕೆ
ನನ್ನ ತಂದೆ ಮುನಿಹುಚ್ಚಯ್ಯ ಅವರು ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿದ್ದರು. ನಮ್ಮದು ಐದು ಮಂದಿ ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿದ್ದ ತುಂಬು ಕುಟುಂಬ. ಆಗ ನಮ್ಮ ತಂದೆ ಪ್ರತಿ ದಿನ ಪ್ರಜಾವಾಣಿ ಪತ್ರಿಕೆ ಬರುವುದನ್ನೇ ಕಾಯುತ್ತಾ ಬೆಳಿಗ್ಗೆ ಪತ್ರಿಕೆ ತಂದು ಚಿಕ್ಕವರಿದ್ದಾಗಲೇ ನಮಗೆಲ್ಲಾ ಪರಿಚಯ ಮಾಡಿಕೊಟ್ಟು ಓದುವಂತೆ ಪ್ರೇರೇಪಿಸಿದ್ದರು. ಅದರಲ್ಲಿ ಬರುವ ದೇಶ ವಿದೇಶದ ಸುದ್ದಿ, ಕೃಷಿ, ಕ್ರೀಡೆ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಇತರೆ ಸಮಾಜಮುಖಿ ವಿಚಾರಗಳ ವಿವರವನ್ನು ಓದಿ, ತಿಳಿಸಿ, ನಮ್ಮನ್ನು ಓದಿ ತಿಳಿದು ಕೊಳ್ಳುವಂತೆ ಹೇಳುತ್ತಿದ್ದರು. ಅದರ ಫಲದಿಂದಲೇ ಪತ್ರಿಕೆಯನ್ನು ಓದುತ್ತಲೇ ನಾವು ನಮ್ಮ ಶಾಲಾ ದಿನಗಳನ್ನು ಮುಗಿಸಿ ಸರ್ಕಾರಿ ನೌಕರಿ ಹಿಡಿಯಲು ಸಹಕಾರಿ ಆಯಿತು.ಕಂದಾಯ ಇಲಾಖೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪತ್ರಿಕೆ ಪ್ರೇರಣೆ ನೀಡಿತು. ಕುಟುಂಬದ 8 ಮಂದಿ ಸರ್ಕಾರಿ ನೌಕರರಾಗಲು ನೆರವಾಯಿತು ಎಂದರೆ ತಪ್ಪಾಗಲಾರದು. ಒಂದು ರೀತಿಯಲ್ಲಿ ಓದಿನ ಜೊತೆಗೆ ಪ್ರಜಾವಾಣಿ ಪತ್ರಿಕೆ ನಮಗೆಲ್ಲ ದಾರಿದೀಪವಾಗಿತ್ತು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.

ನನಗೀಗ 71 ವರ್ಷ. ಪ್ರಜಾವಾಣಿ ಪತ್ರಿಕೆಗೆ ನನ್ನ ಮೊದಲ ಆದ್ಯತೆ. ಇಂದಿಗೂ ಪತ್ರಿಕೆ ಅಭಿಮಾನಿಯಾಗಿ ಮನೆಗೆ ಪ್ರಜಾವಾಣಿಯನ್ನು ಹಾಕಿಸಿಕೊಂಡು ನಾನು ಓದುವುದರ ಜೊತೆಗೆ ನಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಓದುವಂತೆ ಪ್ರೇರೇಪಿಸುತ್ತೇನೆ. ರಾಜ್ಯದಲ್ಲಿ ಹಲವಾರು ಕನ್ನಡ ದೈನಿಕಗಳು ಬರುವುದುಂಟು. ಆದರೆ, ಅವೆಲ್ಲಕ್ಕಿಂತ ಬಹು ವಿಭಿನ್ನವಾಗಿ ಸಾಮಾಜಿಕ ಬದ್ಧತೆ ಮತ್ತು ಸಮಾಜಮುಖಿ ಚಿಂತನೆಯಿಂದ ನಿಷ್ಪಕ್ಷಪಾತವಾಗಿ, ಯಾವುದೇ ಸರ್ಕಾರದ ಪರವಾಗಿ ನಿಲ್ಲದೆ, ಪಕ್ಷಪಾತ ಮಾಡದೇ, ವಸ್ತುನಿಷ್ಠ ವರದಿಯನ್ನು ಪ್ರಕಟಿಸಿ ಸರ್ಕಾರ ಮತ್ತು ಸಮಾಜವನ್ನು ಎಚ್ಚರಿಸುವುದರ ಜೊತೆಗೆ ಜನಪರವಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ.

ದೃಶ್ಯ ಮಾಧ್ಯಮಗಳು ಹಾಗೂ ಹಲವಾರು ಮುದ್ರಣ ಮಾಧ್ಯಮಗಳ ಪೈಪೋಟಿಯ ನಡುವೆ ತನ್ನದೇ ಓದುಗರನ್ನು ಹಿಡಿದಿಟ್ಟುಕೊಂಡು ನಾಡಿನ ಮನೆ ಮಾತಾಗಿರುವ ನಮ್ಮೆಲ್ಲರ ಹೆಮ್ಮೆಯ ಮಾಹಿತಿಯ ಕಣಜ ಪ್ರಜಾವಾಣಿ, ಯಶಸ್ವಿಯಾಗಿ 75 ವರ್ಷಗಳ ಸಂಭ್ರಮಾಚರಣೆಯಲ್ಲಿರುವುದು ಅಭಿನಂದನೀಯ. ಪತ್ರಿಕೆ ಹೀಗೆ ಯಶಸ್ವಿಯಾಗಿ ಸಾಗಲಿ. ನೂರಾರು ವರ್ಷ ಪೂರೈಸಲಿ. ನಾಡಿನಲ್ಲಿ ಶಾಶ್ವತವಾಗಿ ಸಮಾಜಮುಖಿಯಾಗಿ ಜನಪರವಾಗಿ ನಿಲ್ಲಲ್ಲಿ ಎಂದು ಪ್ರಾರ್ಥಿಸುತ್ತೇನೆ.
–ಮುಕುಂ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ,ಜಟ್ಟಿಗರ ಬೀದಿ. ಕೋಟೆ, ಚನ್ನಪಟ್ಟಣ ಟೌನ್‌, ರಾಮನಗರ ಜಿಲ್ಲೆ

ADVERTISEMENT

*

ಪ್ರಜಾವಾಣಿ ಜನರ ಅಂತರಂಗದ ವಾಣಿ
ಶಬ್ದಾಡಂಬರವಿಲ್ಲದ, ಇದ್ದದ್ದನ್ನು ಇದ್ದಂತೆಯೇ ಹೇಳುವ ಪತ್ರಿಕೆ. ಯುವ ಪತ್ರಕರ್ತರನ್ನು, ಬರಹಗಾರರನ್ನು ಸೆಳೆಯುವ ಮಾಧ್ಯಮ. ಪದವಿಯಲ್ಲಿಯೇ ನಾನು ಪತ್ರಿಕೋದ್ಯಮ ಕ್ಷೇತ್ರ ಆಯ್ದುಕೊಂಡೆ. ಅಂದಿನಿಂದ ಇಂದಿನವರೆಗೂ ಪ್ರಜಾವಾಣಿ ನನ್ನ ಪತ್ರಿಕೋದ್ಯಮ ಗುರು. ಸದಾ ಹೊಸತನಕ್ಕಾಗಿ ಹಾತೊರೆಯುವ ಮಾಸ್ಟರ್ ಮೈಂಡ್. ನಿತ್ಯ ಪ್ರಕಟಗೊಗೊಳ್ಳುವ ಸಂದರ್ಶನ, ಲೇಖನಗಳನ್ನು ಓದುತ್ತೇನೆ. ನಾನು ಇದರಂತೆ ಬರವಣಿಗೆ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಪ್ರಜಾವಾಣಿ ಸ್ಪರ್ಧಾರ್ಥಿಗಳ ಕೈಗನ್ನಡಿ.
–ಶಿಲ್ಪಾ ರೆಡ್ಡಿ,ಪತ್ರಿಕೋದ್ಯಮ ವಿದ್ಯಾರ್ಥಿನಿ, ಮನ್ಸಲಾಪುರ, ರಾಯಚೂರು

*

ಪತ್ರಿಕೆಯ ವಸ್ತುನಿಷ್ಟ ವರದಿ ತುಂಬಾ ಇಷ್ಟ
ಮೈಸೂರಿನಲ್ಲಿ ಪಿಯುಸಿ ಓದುತ್ತಿರುವ ನಾನು ಪ್ರತಿದಿನವೂ 'ಪ್ರಜಾವಾಣಿ'ದಿನಪತ್ರಿಕೆಯನ್ನು ತಪ್ಪದೆ ಓದುತ್ತೇನೆ. ಪತ್ರಿಕೆಯ ವಸ್ತುನಿಷ್ಟ ವರದಿ, ಅದರ ಭಾಷೆ, ಪುಟ ವಿನ್ಯಾಸ ಮತ್ತು ಕಾಗದದ ಗುಣಮಟ್ಟ ಎಲ್ಲವೂ ತುಂಬಾ ಇಷ್ಟವಾಗಿದೆ.

ಕನ್ನಡ ಕಾವ್ಯ, ಕಥೆ, ಪ್ರಬಂದ, ವಿಚಾರದ ಬೆಳವಣಿಗೆಗೆ ಅದರ ಕೊಡುಗೆ ತುಂಬಾ ಇದೆ. ವಿದ್ಯಾರ್ಥಿಗಳು ಹಾಗೂ ಕನ್ನಡ ಕಲಿಯುವವರು ಈ ಪತ್ರಿಕೆಯನ್ನು ತಪ್ಪದೆ ಓದಿದರೆ ಅವರ ಕನ್ನಡ ಭಾಷೆ ಸುಧಾರಿಸುತ್ತದೆ. ಪ್ರಜಾವಾಣಿಯು ಅಮೃತವರ್ಷವನ್ನು ಆಚರಿಸುತ್ತಿರುವುದು ಸಂತೋಷ ತಂದಿದೆ. ಹೀಗೆ ಮುಂದುವರಿಯುತ್ತಾ ಶತಮಾನೋತ್ಸವವನ್ನು ದಾಟಿ ಯುಗಯುಗಾಂತರದ ಪತ್ರಿಕೆಯಾಗಲಿ ಎಂದು ಹಾರೈಸುತ್ತೇನೆ. ಪತ್ರಿಕಾ ಬಳಗಕ್ಕೆ ಮತ್ತು ಓದುಗರಿಗೆ ಅಭಿನಂದನೆಗಳು.
–ಮಹಾಂತೇಶ್ ಬಸಪ್ಪ, ವಿದ್ಯಾರ್ಥಿ,ಮೈಸೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.