‘ಅರ್ಭಟವಿಲ್ಲದ, ಪ್ರಬುದ್ಧತೆಯ ನಿರ್ವಹಣೆ’
‘ಪ್ರಜಾವಾಣಿ’ಗೆ ಅಮೃತಮಹೋತ್ಸವ ಸಂದರ್ಭದಲ್ಲಿ ಅಭಿನಂದನೆಗಳು. ಅಧ್ಯಯನ ಮಾಡುವವರಿಗೆ ಮತ್ತು ಸಾಹಿತ್ಯ, ಸಂಸ್ಕೃತಿ ಚಿಂತಕರಿಗೆ ಪತ್ರಿಕೆಯು ಅತ್ಯುತ್ತಮ ಆಕರವಾಗಿದೆ ಎಂದರೆ ತಪ್ಪಾಗಲಾರದು. ಮೌಲ್ಯಾಧರಿತ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಾಗ ಪತ್ರಿಕೆಯು ವಹಿಸುವ ಎಚ್ಚರ, ವಿಧಾನ, ಮತ್ತು ಅದನ್ನು ಅನಾವರಣ ಗೊಳಿಸುವ ಅದ್ಭುತ ಹಾಗೂ ಕಲಾತ್ಮಕವಾದ ಶೈಲಿ ಗಮನಾರ್ಹ. ಪ್ರಮುಖ ಬೆಳವಣಿಗೆಗಳ ಸಂದರ್ಭದಲ್ಲಿಜನಸಮುದಾಯದ ಮೇಲೆ ಅಭಿಪ್ರಾಯಗಳನ್ನು ಹೇರಲು, ತುದಿಗಾಲಿನಲ್ಲಿ ನಿಂತಿರುವ ಸಮೂಹ ಮಾಧ್ಯಮಗಳ ನಡುವೆ, ಪ್ರಜಾವಾಣಿ ಪತ್ರಿಕೆಯು ಆತುರವನ್ನು ತೋರದೆ, ಅರ್ಭಟವಿಲ್ಲದೆ, ಪ್ರಬುದ್ಧತೆಯಿಂದ ‘ಅಕ್ಷರ ಲೋಕ’ವನ್ನು ನಿರ್ವಹಿಸುವ ರೀತಿ ಈ ದಿನಗಳ ಅಚ್ಚರಿ.‘ಪ್ರಜಾವಾಣಿ’ ಕನ್ನಡ ಪತ್ರಿಕಾಲೋಕದ ‘ಧ್ರುವತಾರೆ’ ಎಂದರೆ ಅತಿಶಯೋಕ್ತಿಯೇನಲ್ಲ.
-ಡಾ.ಎಂ.ರವೀಂದ್ರ, ನಿವೃತ್ತ ಹಿರಿಯ ವಿಜ್ಞಾನಿ, ಯು.ಆರ್.ರಾವ್ ಉಪಗ್ರಹ ಕೇಂದ್ರ, ಬೆಂಗಳೂರು.
****
‘ಸಮಾಜದ ಸ್ವಾಸ್ಥ್ಯ ರಕ್ಷಣೆಯ ಬದ್ಧತೆ’
‘ಪ್ರಜಾವಾಣಿ’ ಇಂದು ಆರೋಗ್ಯಪೂರ್ಣವಾಗಿ ಬೆಳೆದು, ಪ್ರಬುದ್ಧತೆ ಮೆರೆಯುತ್ತ ರಾಜ್ಯ, ರಾಷ್ಟ್ರಗಳ ಗಡಿ ಮೀರಿ ಕನ್ನಡಿಗರೆಲ್ಲರ ಕಣ್ಮಣಿಯಾಗಿದೆ. ವೈವಿಧ್ಯ ಬರಹ, ಸಂಚಿಕೆ ವಿನ್ಯಾಸದಲ್ಲಿನ ಅಚ್ಚುಕಟ್ಟುತನದಿಂದ ಎಲ್ಲರ ಜ್ಞಾನ ಶಿಸ್ತುಗಳಿಗೆ ದನಿಯಾಗುತ್ತ, ಎಲ್ಲ ಸ್ತರದ ಓದುಗರ ಆಸಕ್ತಿ, ಪ್ರೀತಿ, ನಂಬಿಕೆಗಳಿಗೆ ಪಾತ್ರವಾಗಿದೆ. ಸಮಾಜದ ಸುಸ್ಥಿರ ಅಭಿವೃದ್ಧಿ, ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಬದ್ಧತೆ, ಉತ್ತರದಾಯಿತ್ವ ಪ್ರದರ್ಶಿಸುತ್ತಿದೆ. ಪತ್ರಿಕಾಧರ್ಮದ ಪರಿಪಾಲನೆ ಮೂಲಕ ಪತ್ರಿಕೆಯು ತನ್ನ ತೂಕ, ಘನತೆ ಹೆಚ್ಚಿಸಿಕೊಂಡಿದೆ. ‘ಪ್ರಜಾವಾಣಿ’ಯ ಮಾಲೀಕರು ಸೇರಿ ಪತ್ರಿಕೆಯ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ನಮ್ಮೆಲ್ಲರ ‘ಪ್ರಜಾವಾಣಿ’ ಚಿರಾಯುವಾಗಲಿ.
-ಕವಿತಾರಾವ್ ಕೃಷ್ಣಾಪುರದೊಡ್ಡಿ,ಕಾರ್ಯದರ್ಶಿ, ದಾರಿದೀಪ ವೃದ್ಧಾಶ್ರಮ, ರಾಮನಗರ
****
‘ಗುಣಮೌಲ್ಯಕ್ಕೆ ಅಧಿಕ ಒತ್ತು’
ನನಗೂ ‘ಪ್ರಜಾವಾಣಿ’ಗೂ ಹಳೆಯ ನಂಟು. 60ರ ದಶಕದಲ್ಲಿ ಮುಂಬೈನಲ್ಲಿ ನೌಕರಿ ಮಾಡುತ್ತಿದ್ದಾಗಲೇ ನನ್ನ ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದವು.‘ಪ್ರಜಾವಾಣಿ’ಯ ವಿಶೇಷವೆಂದರೆ ಯಾರು ಬರೆದಿದ್ದಾರೆ ಎಂಬುದಕ್ಕಿಂತ ಲೇಖನಗಳ ಗುಣಮೌಲ್ಯಕ್ಕೆ ಅಧಿಕ ಒತ್ತು. ಈಗಲೂ ಪಾಲನೆಯಾಗುತ್ತಿದೆ. ಆ ನಂತರ ಹಲವು ದಿನಪತ್ರಿಕೆಗಳು ಹುಟ್ಟಿಕೊಂಡರೂ, ‘ಪ್ರಜಾವಾಣಿ’ಗೆ ತನ್ನದೇ ಆದ ಸ್ಥಾನವಿದೆ. ಓದುಗರಿದ್ದಾರೆ. ದೀಪಾವಳಿ ಸಂಚಿಕೆಗಳಂತೂ ಇಂದಿಗೂ ನಂಬರ್ 1; ಸಂಗ್ರಹಯೋಗ್ಯವಾದವು. ‘ಪ್ರಜಾವಾಣಿ’ ನೂರರ ಗಡಿದಾಟಿ ಮುನ್ನುಗ್ಗಲಿ ಎಂದು ಹಾರೈಸುವೆ
-ಕೃಷ್ಣ ಕೊಲ್ಹಾರ ಕುಲಕರ್ಣಿ,ಸಾಹಿತಿ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.