ADVERTISEMENT

ಪ್ರಜಾವಾಣಿ@75: ನಂಬಿಕೆ ಉಳಿಸಿಕೊಂಡಿದೆ -ಆರಗ ಜ್ಞಾನೇಂದ್ರ

ಪ್ರಜಾವಾಣಿ ವಿಶೇಷ
Published 19 ನವೆಂಬರ್ 2022, 10:21 IST
Last Updated 19 ನವೆಂಬರ್ 2022, 10:21 IST
   

‘ನಂಬಿಕೆ ಉಳಿಸಿಕೊಂಡಿದೆ..’

ಅಮೃತ ಮಹೋತ್ಸವ ವರ್ಷದಲ್ಲಿರುವ ‘ಪ್ರಜಾವಾಣಿ’ ಪತ್ರಿಕೆಯು ಮಾಧ್ಯಮ ಕ್ಷೇತ್ರದಲ್ಲಿಮೇರುಮಟ್ಟವನ್ನು ಕಾಯ್ದುಕೊಂಡಿದೆ. ಒಳ್ಳೆಯ ಸುದ್ದಿಗಳನ್ನು ಕೊಡುತ್ತಿದೆ. ‘ಪ್ರಜಾವಾಣಿ‘ಯಲ್ಲಿ ಬಂದಿದೆ ಎಂದರೆ ಆ ಸುದ್ದಿ ಸತ್ಯ ಎಂಬ ನಂಬಿಕೆಯನ್ನು ಉಳಿಸಿಕೊಂಡಿದೆ. ಅನೇಕ ಬದಲಾವಣೆಗಳನ್ನು ತಂದಿದೆ. ಸರ್ಕಾರ ಮತ್ತು ಜನತೆಯ ನಡುವಿನ ಸೇತುವೆಯಾಗಿ ತನ್ನ ಕಾರ್ಯವನ್ನು ಬಹಳ ಪ್ರಭಾವಿಯಾಗಿ ನಿರ್ವಹಿಸಿದೆ. 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಎಲ್ಲ ಓದುಗರಿಗೆ, ಸಿಬ್ಬಂದಿಗೆ ಹಾಗೂ ಮಾಲೀಕರಿಗೆ ಶುಭಾಶಯಗಳು.

-ಆರಗ ಜ್ಞಾನೇಂದ್ರ,ಗೃಹ ಸಚಿವರು, ಕರ್ನಾಟಕ ಸರ್ಕಾರ.

ADVERTISEMENT

***

‘ನನ್ನನ್ನು ಬೆಳೆಸಿದ, ರೂಪಿಸಿದ ಪತ್ರಿಕೆ’

ನಾನು ‘ಪ್ರಜಾವಾಣಿ’ ಓದುಗನಾಗಲು ಕಾರಣ ನನ್ನ ತಾಯಿ ಲೂಸಿಬಾಯಿ. ಬಡತನದಲ್ಲಿದ್ದರೂ ಪತ್ರಿಕೆಯನ್ನು ಕೊಂಡು ಮನೆಗೆ ತರುತ್ತಿದ್ದ ನನ್ನ ತಾಯಿ, ‘ಅದನ್ನು ಓದಿ ಚೆನ್ನಾಗಿ ಕಲಿ ಮಗನೆ’ ಎಂದು ಹೇಳುತ್ತಿದ್ದರು. ನರಸಿಂಹರಾಜಪುರದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿದ್ದಾಗ ಶಿಕ್ಷಕರಾಗಿದ್ದ ಶ್ರೀಕಂಠಯ್ಯ ಅವರು ಪತ್ರಿಕೆಯ ಸುದ್ದಿ, ಶೀರ್ಷಿಕೆಗಳನ್ನು ಬೆಳಗಿನ ಪ್ರಾರ್ಥನೆ ವೇಳೆ ಓದಲು ಹೇಳುತ್ತಿದ್ದರು. ಅದು ಹಾಗೆಯೇ ಪತ್ರಿಕೆ ಓದುವ ಅಭ್ಯಾಸವಾಗಿ ಬೆಳೆಯಿತು. ಪತ್ರಿಕೆ ಜತೆಗಿನ ನನ್ನ ನಂಟು ಕಳೆದ 62 ವರ್ಷಗಳಿಂದ ಮುಂದುವರಿಯುತ್ತಿದೆ .ಛೂ ಬಾಣ, ಮೊದ್ದುಮಣಿ, ವಾಚಕರವಾಣಿ, ಸಂಪಾದಕೀಯಗಳು ನನಗೆ ಇಷ್ಟವಾಗುತ್ತಿದ್ದ ಅಂಕಣಗಳು. ಶಿಕ್ಷಣ ಇಲಾಖೆ ನಿರ್ದೇಶಕನಾಗಿ ನಿವೃತ್ತನಾಗಿರುವ ನನಗೀಗ 76 ವರ್ಷ. ಮೆಚ್ಚಿನ ಪತ್ರಿಕೆ 75ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸ ತಂದಿದೆ. ನನ್ನನ್ನು ಬೆಳೆಸಿದ ಪತ್ರಿಕೆಗೆ ಅಭಿನಂದನೆಗಳು.

-ಕೆ.ಜೋಸೆಫ್,ನಿವೃತ್ತ ಡಿಪಿಐ, ಬೆಂಗಳೂರು.

***
‘ಸಮತೋಲನದ ಪತ್ರಿಕೆ’

ನನ್ನ ಬೆಳವಣಿಗೆಯಲ್ಲಿ ಪ್ರಜಾವಾಣಿಯ ಪಾತ್ರ ಹಿರಿದು. ನನಗೆ ತಿಳಿವು ಮೂಡಿದಾಗಿನಿಂದ, ಅಂದರೆ ಐದನೆಯ ತರಗತಿಯಿಂದ ನಮ್ಮ ಮನೆಗೆ ಪ್ರಜಾವಾಣಿ ಬರುತ್ತಿತ್ತು. ತಂದೆ ಪ್ರತಿದಿನ ಪತ್ರಿಕೆ ಓದಿಸುತ್ತಿದ್ದರು. ಗಟ್ಟಿಯಾಗಿ ಓದಿ ಹೇಳಬೇಕಿತ್ತು. ಅಂದಿನಿಂದ ಆರಂಭವಾದ ಪ್ರಜಾವಾಣಿ ಜೊತಗಿನ ನನ್ನ ಪಯಣ ಇಲ್ಲಿನವರೆಗೂ ಸಾಗಿ ಬಂದಿದೆ. ಪ್ರತಿದಿನ ಓದಿದರೆ ಮನಸ್ಸಿಗೆ ಸಮಾಧಾನ. ಕೊರೊನಾ ಸಮಯದಲ್ಲಿ ಪತ್ರಿಕೆಗಳ ಮೂಲಕ ಸೋಂಕು ಹರಡುವುದು ಎಂದು ಸಾಹಿತಿಗಳು ಸೇರಿದಂತೆ ಅನೇಕರು ಪತ್ರಿಕೆ ತರಿಸುವುದನ್ನು ನಿಲ್ಲಿಸಿದ್ದರು. ಆ ಸಂದರ್ಭದಲ್ಲಿಯೂ ನಾವು ಪತ್ರಿಕೆ ತರಿಸುವುದು, ಓದುವುದನ್ನು ನಿಲ್ಲಿಸಲಿಲ್ಲ. ಪ್ರಜಾವಾಣಿಯಲ್ಲಿ ಪ್ರಕಟವಾಗುವ ರಾಜಕೀಯ, ಸಾಂಸ್ಕೃತಿಕ ವಿಷಯಗಳು, ವಿಶೇಷ ಲೇಖನಗಳು, ಸಂಗತ ಮತ್ತು ಸಂಪಾದಕೀಯ ಪುಟದ ಲೇಖನಗಳು ಮಹತ್ವವಾದವು. ಭೂಮಿಕಾ, ಕ್ರೀಡಾ, ಸಾಪ್ತಾಹಿಕ ಸೇರಿ ವಿಶೇಷ ಪುರವಣಿಗಳು ಚೆನ್ನಾಗಿ ಬರುತ್ತಿವೆ. ವಾಚಕರ ವಾಣಿ ಪತ್ರಗಳು ಓದುಗರ ಗಮನ ಸೆಳೆಯುತ್ತವೆ.

-ಡಾ.ವಸುಂಧರಾ ಭೂಪತಿ,ಲೇಖಕಿ
***

‘ನಿಷ್ಪಕ್ಷ ನಿಲುವು, ಉತ್ತರದಾಯಿತ್ವ’

ನಮ್ಮ ಮನೆಯಲ್ಲಿ ಬೆಳಗಾಗುವುದೇ ‘ಪ್ರಜಾವಾಣಿ’ಯೊಂದಿಗೆ. ಅನೇಕ ಪತ್ರಿಕೆಗಳಿದ್ದರೂ ಪ್ರಜಾವಾಣಿಯೇ ಮೊದಲ ಆಯ್ಕೆ. ಅದಕ್ಕಾಗಿ ಗಂಡ ಹೆಂಡತಿ ನಡುವೆ ಕಿತ್ತಾಟವಾಗುವುದು ಸರ್ವೇಸಾಮಾನ್ಯ.

ಸಾರ್ವಜನಿಕ ಮಹತ್ವದ ವಿಷಯಗಳನ್ನು ಸಮಯೋಚಿತವಾಗಿ ತಿಳಿಸುವುದು, ಪ್ರಭುತ್ವ ಹಾಗೂ ಜನರ ದೈನಂದಿನ ಅಗತ್ಯಗಳಿಗೆ ಸ್ಪಂದಿಸಬೇಕಾದ ಇಲಾಖೆಗಳ ಮೇಲೆ ಪರಿಣಾಮಕಾರಿಯಾಗಿ ವಾಚ್ ಡಾಗ್ ಪಾತ್ರ, ಕೇಂದ್ರ ಸರ್ಕಾರದ ಜಾಹಿರಾತುಗಳಿಂದ ವಂಚಿತರಾಗಿದ್ದರೂ ಪ್ರಜಾವಾಣಿಯ ನಿರ್ದೇಶಕರೆಲ್ಲರ ಮನಃಪೂರ್ವಕ ಬೆಂಬಲದಿಂದ ಪತ್ರಿಕೆ ಸ್ವಂತಿಕೆ ರಕ್ಷಿಸಿಕೊಂಡಿರುವುದು ಮೆಚ್ಚುವಂತದ್ದು. ಸ್ಥಾಪಕ ಕೆ.ಎನ್.ಗುರುಸ್ವಾಮಿಯವರಿಂದ ಈವರೆಗೂ ನಿರ್ದೇಶಕರೆಲ್ಲರಿಗೂ ಪತ್ರಿಕಾ ಧರ್ಮದ ಪ್ರಮುಖ ಮೌಲ್ಯಗಳಾದ ವರದಿಗಳ ಸತ್ಯತೆ, ಪ್ರಾಮಾಣಿಕತೆ, ವೃತ್ತಿಪರ ಸ್ವಾತಂತ್ರ್ಯ, ನಿಷ್ಪಕ್ಷ ನಿಲುವು ಮತ್ತು ಓದುಗರಿಗೆ ಹಾಗೂ ಸಮಾಜಕ್ಕೆ ಉತ್ತರದಾಯಿತ್ವ, ಈ ಎಲ್ಲದರ ಬಗ್ಗೆ ಇರುವ ಬದ್ಧತೆ ತೀರಾ ವಿರಳ. ಜೊತೆಗೆ ಅಲ್ಪಸಂಖ್ಯಾತರು, ಮಹಿಳೆಯರ ಸಮಸ್ಯೆಗಳ ಮುಕ್ತ ಅಭಿವ್ಯಕ್ತಿ, ಪ್ರಸ್ತುತ ವಿಷಯಗಳ ಪರ, ವಿರೋಧಿ ಅಭಿಪ್ರಾಯಗಳಿಗ ಸಮಾನ ಅವಕಾಶ ಕಲ್ಪಿಸುವುದು ಪ್ರಜಾವಾಣಿಯ ಜನಪ್ರಿಯತೆಯ ಮುಖ್ಯ ಕಾರಣ.

-ಪ್ರೊ.ಬಿ.ಕೆ.ಚಂದ್ರಶೇಖರ್,ಕಾಂಗ್ರೆಸ್‌ ಮುಖಂಡರು

***

ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ

ಪೂರ್ಣ ಪ್ರತಿಕ್ರಿಯೆಗಳನ್ನು prajavani.net ನಲ್ಲಿ ನೋಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.