ADVERTISEMENT

ಪ್ರಜಾವಾಣಿ@75 | ಮಾಹಿತಿಪೂರ್ಣ ಬರಹಗಳು ನಮಗೆ ಅಚ್ಚುಮೆಚ್ಚು: ರಂಜನಾ ಗೋಧಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 10:16 IST
Last Updated 19 ನವೆಂಬರ್ 2022, 10:16 IST
   

ನಮ್ಮ ತಂದೆ ನಾಡೋಜ ಚೆನ್ನವೀರ ಕಣವಿ ತೀವ್ರ ಅಸ್ವಸ್ಥತೆಯಿಂದ ಐಸಿಯುನಲ್ಲಿ ಅಡ್ಮಿಟ್‌ ಆದಾಗ ಯಾರಿಗೂ ಪ್ರವೇಶವಿರಲಿಲ್ಲ. ನಾವೆಲ್ಲಾ ಹೊರಗೆ ಅವರ ಸಂದೇಶಕ್ಕಾಗಿ ಕಾಯುತ್ತಿದ್ದೆವು. ಮರುದಿನ ಬೆಳಿಗ್ಗೆ ಅವರಿಂದ ಬಂದ ಮೊದಲ ಸಂದೇಶ ‘ಪ್ರಜಾವಾಣಿ ಕಳಿಸಿಕೊಡಿ’. ಇದು ಅವರ ಪ್ರಜಾವಾಣಿಯ ಜೊತೆಗಿನ ನಂಟಿನ ಕಥೆ. ನಾವು ತುಂಬ ಚಿಕ್ಕವರಿದ್ದಾಗ ಪ್ರಜಾವಾಣಿ ಧಾರವಾಡಕ್ಕೆ ಬರುವುದು ಮಧ್ಯಾಹ್ನ 12 ಆಗುತ್ತಿತ್ತು. ಹೀಗಾಗಿ ಬೆಳಗಿನ ಓದಿಗೆ ಮನೆಗೆ ಬೇರೆ ಪತ್ರಿಕೆ ಬರುತ್ತಿತ್ತು. ಆದರೂ ಪ್ರಜಾವಾಣಿಯ ಆಕರ್ಷಣೆ ಹೆಚ್ಚಾಗಿತ್ತು. ತಂದೆಯವರಿಗೆ ಭಾನುವಾರದ ಪುರವಣಿಯ ಸಾಹಿತ್ಯ ಸಂಬಂಧಿತ ಲೇಖನಗಳು ಪುಸ್ತಕ ವಿಮರ್ಶೆ ಅತ್ಯಂತ ಪ್ರಿಯ. ಟಿಯೆಸ್ಸಾರ ಅವರ ಛೂಬಾಣ, ನಂತರ ಬರುತ್ತಿದ್ದ ಲಂಕೇಶರ ಬಂ ಗುಂ ಪ್ರಹಸನಗಳನ್ನು ಬಹಳ ಎಂಜಾಯ್‌ ಮಾಡುತ್ತಿದ್ದರು. ಪತ್ರಿಕೆ ಧಾರವಾಡದಿಂದ ಬರಲಾರಂಭಿಸಿದ ನಂತರ ಬೆಳಗಿನ ಚಹಾದೊಂದಿಗೆ ಪತ್ರಿಕೆ ಜೊತೆಗೂಡಿತು.

ಪ್ರಜಾವಾಣಿಯ ಅಕ್ಷರಗಳ ಬಗ್ಗೆ ನನಗೆ ಬಹಳ ಒಲವು. ಕಳೆದ ನಲವತ್ತೆರಡು ವರ್ಷಗಳಿಂದ ಪ್ರಜಾವಾಣಿ ನನ್ನ ಪ್ರಿಯ ಸಂಗಾತಿ. ಯಾವ ಪ್ರಭುತ್ವಕ್ಕೂ ಬೀಸಣಿಕೆಯಾಗದ ದಿಟ್ಟ ಸಂಪಾದಕೀಯಗಳು, ಅಭಿಮತದ ವಿಶ್ಲೇಷಣಾತ್ಮಕ ಲೇಖನಗಳು, ಆಳ ಅಗಲದ ಮಾಹಿತಿಪೂರ್ಣ ಬರಹಗಳು ನನಗೆ ಅಚ್ಚುಮೆಚ್ಚು. ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾದ ನನಗೆ ನನ್ನ ಓದು ಪಾಠಗಳಿಗೆ ಪತ್ರಿಕೆ ಸದಾ ಸಹಕಾರಿ. 75 ಹರೆಯದ ಪ್ರಜಾವಾಣಿಗೆ ನಮ್ಮ ನಮನಗಳು.

-ರಂಜನಾ ಗೋಧಿ, ಬೆಳಗಾವಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.