ADVERTISEMENT

ಪ್ರಜಾವಾಣಿ@75 | ಎಲ್ಲರ ಮನೆ, ಮನ ತಲುಪಲಿ: ನಿರಂಜನಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 10:19 IST
Last Updated 19 ನವೆಂಬರ್ 2022, 10:19 IST
   

‘ಎಲ್ಲರ ಮನೆ, ಮನ ತಲುಪಲಿ’
‘ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮನಾದುದ್ದು ಬೇರೊಂದಿಲ್ಲ. ಸರ್ವಕ್ಷೇತ್ರದ ಜ್ಞಾನದ ಬುತ್ತಿಯನ್ನು ಸಹೃದಯಿ ಓದುಗರಿಗೆ ಉಣಬಡಿಸುತ್ತಿರುವ ಕರುನಾಡಿನ ಪ್ರಭಾವಶಾಲಿ ಮಾಧ್ಯಮವಾದ ‘ಪ್ರಜಾವಾಣಿ’ ಪತ್ರಿಕೆ ಅಮೃತ ಮಹೋತ್ಸವ ಆಚರಿಸುತ್ತಿದ್ದು, ವಿಶ್ವಾಸಾರ್ಹ ಓದುಗರನ್ನು ಹಿಡಿದಿಡಲು ಗುಣಮಟ್ಟ ಮತ್ತು ಪಾರದರ್ಶಕ ಸುದ್ದಿ-ಸಮಾಚಾರಗಳೇ ಕಾರಣ. ಎಲ್ಲರ ಮನ-ಮನೆಯನ್ನು ತಲುಪುವಂತಾಗಲು ಶ್ರಮವಹಿಸುತ್ತಿರುವ ಸಂಪಾದಕರಿಗೂ ಮತ್ತು ಸಿಬ್ಬಂದಿಗೂ ಶುಭವಾಗಲಿ ಎಂದು ಹಾರೈಸುತ್ತೇವೆ.
–ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ. ಹಾವೇರಿ

**
‘ಅರ್ಥಗರ್ಭಿತ ವಿಚಾರ’
ವಾಚನಾಲಯದಲ್ಲಿದ್ದ ಪತ್ರಿಕೆಗಳಲ್ಲಿ ‘ಪ್ರಜಾವಾಣಿ’ ನನ್ನ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು. ಬಡವ–ಬಲ್ಲಿದ ಭೇದವಿಲ್ಲದೇ ಸರ್ವ ಸಮುದಾಯವನ್ನೂ ಒಳಗೊಂಡು ಸುದ್ದಿಯನ್ನು ಪ್ರಕಟಿಸುತ್ತಿದೆ. ಶಿಕ್ಷಣ, ರಾಜಕೀಯ, ಸಾಹಿತ್ಯ ಕಲೆ, ಕ್ರೀಡೆ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ವಿಷಯಗಳು ಅರ್ಥಗರ್ಭಿತ. ಅಮೃತ ಮಹೋತ್ಸವ ಸಂದರ್ಭದಲ್ಲಿ ‘ಪ್ರಜಾವಾಣಿ’ ಹೆಚ್ಚು ಜನರನ್ನು ತಲುಪಲಿ ಎಂದು ಹಾರೈಸುವೆ.
–ಚಿದಾನಂದ, ನಿವೃತ್ತ ಅಧಿಕಾರಿ, ದಾವಣಗೆರೆ

**
‘ನಿಷ್ಟುರ ಪತ್ರಿಕೋದ್ಯಮ
ಪ್ರಜಾವಾಣಿ ನಿಷ್ಟೂರ ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ. ಸತ್ಯಕ್ಕೆ ಸಮೀಪದ ಸುದ್ದಿಗಳನ್ನು ಪ್ರಸ್ತುತ ಪಡಿಸುವಲ್ಲಿ ಯಾವ ಮುಲಾಜಿಗೂ ಒಳಗಾಗದೆ ರಾಜಕೀಯ, ಕಲೆ, ಸಾಹಿತ್ಯ, ಚರಿತ್ರೆ, ಕ್ರೀಡೆ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ಓದುಗರಿಗೆ ನಿರಂತರವಾಗಿ ತಲುಪಿಸುತ್ತಿರುವುದಕ್ಕೆ ಅಭಿನಂದನೆಗಳು. ಜನಪರವಾದ ಬದ್ಧತೆ ಎಂದೆಂದಿಗೂ ಮುಂದುವರಿಯಲಿ ಎಂದು ಆಶಿಸುತ್ತೇನೆ.
–ದಿನೇಶ್‌ ಬಸವಾ‍ಪಟ್ಟಣ, ಓದುಗ, ಮೈಸೂರು

ADVERTISEMENT

**

‘ಓದುಗರ ಜೀವನಾಡಿ’
‘ಪ್ರಜಾವಾಣಿ’ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ವಸ್ತುನಿಷ್ಠ, ಪ್ರಬುದ್ಧ ವರದಿಗಳಿಂದ ಜನಮನ್ನಣೆ ಗಳಿಸಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಬೆಳವಣಿಗೆಗೆ ‘ಪ್ರಜಾವಾಣಿ’ ಎಂದೂ ಪ್ರಚಾರ ಕೊಟ್ಟಿಲ್ಲ. ಇದನ್ನು ಗಟ್ಟಿ ಧ್ವನಿಯಲ್ಲಿ ಹೇಳಲು ಯಾವುದೇ ಆಳುಕು ಇಲ್ಲ. ಜನಪರ ಕಾಳಜಿಯುಳ್ಳ ಈ ಪತ್ರಿಕೆ ಓದದೇ ಅದೆಷ್ಟೋ ಮಂದಿಗೆ ದಿನಚರಿ ಆರಂಭವಾಗುವುದಿಲ್ಲ. ಸ್ವರ್ಧಾತ್ಮಕ ಪರೀಕ್ಷೆ ಸಿದ್ಧವಾಗುವರಿಗೆ ಇದು ಕೈಪಿಡಿ. ಗ್ರಾಮೀಣ ಬರಹಗಾರರಿಗೆ ಪ್ರೋತ್ಸಾಹಿಸಿ ಬೆಳೆಸಿದ ಪತ್ರಿಕೆ ಇದು. ಅಮೃತ ಮಹೋತ್ಸವದ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಅಭಿನಂದನೆಗಳು.
–ಎಸ್.ರಾಮಪ್ಪ, ಧರ್ಮಾಧಿಕಾರಿ. ಸಿಗಂದೂರು ಚೌಡೇಶ್ವರಿ ದೇವಸ್ಥಾನ, ಸಾಗರ ತಾಲ್ಲೂಕು

**

‘ಸಾಮಾನ್ಯ ಜ್ಞಾನದ ಬುತ್ತಿ’
ಕನ್ನಡ ಮಾಧ್ಯಮ ಲೋಕದಲ್ಲಿ ಅನೇಕ ಪತ್ರಿಕೆಗಳು ಬಂದರೂ, ‘ಪ್ರಜಾವಾಣಿ‘ ಪತ್ರಿಕೆ ತನ್ನದೇ ಆದ ಬದ್ಧತೆ, ಸಾಮಾಜಿಕ ಕಳಕಳಿ ತೋರುತ್ತ ಬಂದಿದೆ. ದಿನಪತ್ರಿಕೆ ಹೀಗಿರಬೇಕೆನ್ನುವುದನ್ನು ತೋರಿಸಿಕೊಟ್ಟ ಪತ್ರಿಕೆ ಪ್ರಜಾವಾಣಿ ಎಂದರೆ ತಪ್ಪಾಗಲಿಕ್ಕಿಲ್ಲ. ಸ್ಪರ್ಧಾರ್ಥಿಗಳಿಗೆ ಸಾಮಾನ್ಯ ಜ್ಞಾನ ನೀಡುವ ಬುತ್ತಿ. ಕನ್ನಡ ಭಾಷಾಭಿಮಾನವನ್ನು ಹೆಚ್ಚಿಸುವಂತಹ ಪತ್ರಿಕೆ ಎಂದರೆ ಅದು ಪ್ರಜಾವಾಣಿ.
–ಯಲ್ಲಪ್ಪ ಎಂ.ಮರ್ಚೇಡ್, ಅರಣ್ಯ ರಕ್ಷಕ, ರಾಯಚೂರು

**

‘ರಾಜಿಯಾಗದ ಬದ್ಧತೆ’‌
ಅಮೃತ ಮಹೋತ್ಸವಕ್ಕೆ ಕಾಲಿಟ್ಟಿರುವ ‘ಪ್ರಜಾವಾಣಿ’ಗೆ ತುಂಬು ಹೃದಯದ ಅಭಿನಂದನೆಗಳು. ಪತ್ರಿಕಾ ಧರ್ಮದಲ್ಲಿ ಎಂದಿಗೂ ರಾಜಿಯಾಗದೆ, ಬದ್ಧತೆ ಪ್ರದರ್ಶಿಸಿಕೊಂಡು ಬಂದಿರುವ ಏಕೈಕ ಪತ್ರಿಕೆ ‘ಪ್ರಜಾವಾಣಿ’. ನಿಷ್ಪಕ್ಷಪಾತ ವರದಿಯನ್ನು ನೀಡುವ ವಿಶ್ವಾಸಾರ್ಹ
ಮಾಧ್ಯಮವಾಗಿ ಇಂದಿಗೂ ಜನಮೆಚ್ಚುಗೆ ಪಡೆದಿದೆ. ಯಾವುದಾದರೂ ವಿಷಯ ಅಥವಾ ಘಟನೆ ಕುರಿತು ‘ಪ್ರಜಾವಾಣಿ’ಯಲ್ಲಿ ಬಂದರಷ್ಟೇ ಸತ್ಯ ಎಂಬ ಮಾತು ಅಕ್ಷರಶಃ ಸತ್ಯ. ಜೊತೆಗೆ ಮೊನಚಾದ ಸಂಪಾದಕೀಯದಲ್ಲಿ ಆಳುವ ವರ್ಗವನ್ನು ಎಚ್ಚರಿಸುತ್ತಾ ಬಂದಿದೆ. ಓದುಗರ ಅರಿವನ್ನು ವಿಸ್ತರಿಸಿದೆ.
–ಡಾ.ಲಿಂಗರಾಜ ಅಂಗಡಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್, ಧಾರವಾಡ ಜಿಲ್ಲಾ ಘಟಕ

**
‘75ರಲ್ಲೂ ಮನೆ ತುಂಬಿದೆ’

ಅಮೃತ ಮಹೋತ್ಸವ ದಿನದಾನಂದಕೆ
ಶುಭವನು ಕೋರುವೆ ‘ಪ್ರಜಾವಾಣಿ’ಗೆ
ದೈನಂದಿನ ಈ ಪತ್ರಿಕೆ ನನಗೆ
ಬೆಳಗಿನ ಕಾಫಿಗೆ ಉಪಾಹಾರ
ನಿಜಕೂ ‘ಪ್ರಜಾವಾಣಿ’ಯೆ ದಿಟವು
ಜನತೆಯ ದನಿಯಿದು ಎಂಬುದು ಸತ್ಯವು
ತಾಜಾ ಸುದ್ದಿಗಳು ಮುಜಾನೆಯೆ ಮನೆ ಮುಟ್ಟುವುದು
ಕುಲ ಮತ ಭೇದದ ಪತ್ರಿಕೆಯಲ್ಲ
ರಾಜಕೀಯದ ವಾಸನೆ ಇಲ್ಲ
ಪರ ವಿರೋಧಗಳ ಭಾವವು ಇಲ್ಲ
ಸಮತೆಯದೊಂದೇ ಇದರ ಗುರಿ
ಬುದ್ಧಿಯ ವಿಕಸನಕಿದು ಸಹಕಾರವು
ಎಲ್ಲರ ಮೆಚ್ಚಿನ ಪತ್ರಿಕೆಯು
‘ಪ್ರಜಾವಾಣಿ’ಯು ಹುಟ್ಟಿದ ದಿನವೇ
ಕೊಂಡರು ಪತ್ರಿಕೆ ತಂದೆಯವರದನು
ಎಪ್ಪತ್ತೈದರ ಸಂವತ್ಸರದಲು
ಇದೆ ಪತ್ರಿಕೆ ಮನೆ ತುಂಬುತಿದೆ.

–ಎಚ್ ಆರ್ ಲೀಲಾವತಿ, ಸುಗಮಸಂಗೀತ ಗಾಯಕಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.