ADVERTISEMENT

ಪ್ರಜಾವಾಣಿ@75 | ದಲಿತ ಹೋರಾಟಕ್ಕೆ ಸ್ಫೂರ್ತಿಯಾದ ‘ಪ್ರಜಾವಾಣಿ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 10:18 IST
Last Updated 19 ನವೆಂಬರ್ 2022, 10:18 IST
   

ದಲಿತ ಹೋರಾಟಕ್ಕೆ ಸ್ಫೂರ್ತಿಯಾದ ‘ಪ್ರಜಾವಾಣಿ’
ಕಾಲೇಜು ದಿನಗಳಿಂದಲೂನಾನು ‘ಪ್ರಜಾವಾಣಿ’ ಓದುತ್ತಿದ್ದೇನೆ. ಬೂಸಾ ಚಳವಳಿ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಡಾ.ಯು.ಆರ್.ಅನಂತಮೂರ್ತಿ ಅವರ ಹೇಳಿಕೆಗಳು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದವು. ಇದು, ಆ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಹಿಂಸಾಚಾರ ತಗ್ಗಲು ಕಾರಣವಾಯಿತು. ‘ಬೂಸಾ ಚಳವಳಿ –ಕಾಲು ಶತಮಾನ’ ಹೆಸರಿನಲ್ಲಿ ನಾನು ತಂದ ಪುಸ್ತಕದಲ್ಲಿಯೂ ಪ್ರಜಾವಾಣಿಯಲ್ಲಿ ಬಂದಿದ್ದ ಅನೇಕ ಸುದ್ದಿ ತುಣುಕುಗಳನ್ನು ಬಳಸಿದ್ದೇನೆ. ಇತ್ತೀಚಿನ ಉಳ್ಳೇರಹಳ್ಳಿ ಘಟನೆ ಸೇರಿದಂತೆ ಅನೇಕ ಬಾರಿ ದಲಿತರ ಸಾಮಾಜಿಕ ಭದ್ರತೆ ರಕ್ಷಿಸುವಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ದಲಿತರು, ದಲಿತರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಾಮಾಣಿಕವಾಗಿ ವರದಿ ಮಾಡಿದೆ. ಪ್ರಜಾವಾಣಿ ನೂರಾರು ವರ್ಷ ಯಶಸ್ವಿಯಾಗಿ ಸಾಗಲಿ ಎಂದು ಆಶಿಸುತ್ತೇನೆ.

–ಲಕ್ಷ್ಮಿನಾರಾಯಣ ನಾಗವಾರ, ಸಂಚಾಲಕರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಬೆಂಗಳೂರು.

**
ವೈಚಾರಿಕತೆ ರೂಪಿಸಿದ ಪತ್ರಿಕೆ
ಶಾಲಾ ದಿನಗಳಿಂದಲೂ ‘ಪ್ರಜಾವಾಣಿ’ ಓದಿಕೊಂಡು ಬೆಳೆದವಳು ನಾನು. ನನ್ನ ಅಭಿರುಚಿಯನ್ನು, ವೈಚಾರಿಕತೆಯನ್ನು ರೂಪಿಸಿದ ಪತ್ರಿಕೆ ಇದು. ನನಗೆ ನೆನಪಿದ್ದಾಗಿಂದ ನಮ್ಮನೆಗೆ ‘ಪ್ರಜಾವಾಣಿ’ ಪತ್ರಿಕೆ ಬರುತ್ತಿತ್ತು. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗಿಂದ ಭಾನುವಾರದ ಮಕ್ಕಳ ಪುಟ ಓದುತ್ತಿದ್ದುದು. ಆಮೇಲೆ ‘ಸುಧಾ’, ‘ಮಯೂರ’ ಸೇರಿಕೊಂಡವು.

ADVERTISEMENT

ಒಳ್ಳೊಳ್ಳೆ ಲೇಖಕರ ಕತೆ ಕವಿತೆ ಓದಿದ್ದು ‘ಪ್ರಜಾವಾಣಿ’ಯ ದೀಪಾವಳಿ ವಿಶೇಷಾಂಕಗಳಲ್ಲಿ; ಅರವತ್ತು ಎಪ್ಪತ್ತರ ದಶಕಗಳಲ್ಲಿ. ದೇವನೂರ ಮಹಾದೇವ ಅವರ ‘ಮೂಡಲ ಸೀಮೆಲೀ ಕೊಲೆ ಗಿಲೇ ಮುಂತಾಗಿ’ ಕತೆ, ಶ್ರೀಕೃಷ್ಣ ಆಲನಹಳ್ಳಿ ಯವರ ‘ತೊರೆ ಬತ್ತಿರಲಿಲ್ಲ’. ಬೇಸಗರಹಳ್ಳಿ ಕತೆಗಳು ಇನ್ನೂ ಎಷ್ಟೋ ಕತೆ, ಲೇಖನಗಳನ್ನು ಹೀಗೆ ಓದಿ ಥ್ರಿಲ್ ಆಗಿದ್ದು.

ಶಾಲಾ ದಿನಗಳಿಂದಲೂ ಒಂದು ದಿನ ಪತ್ರಿಕೆ ಓದದಿದ್ದರೆ ಸಮಾಧಾನವಿಲ್ಲ. ಮುಂದೆ ‘ಪ್ರಜಾವಾಣಿ’ಯಲ್ಲಿ ನನ್ನ ಕೆಲವು ಲೇಖನ ಪ್ರಬಂಧ, ಕಥೆಗಳು ಪ್ರಕಟವಾದವು. 1994ರಲ್ಲಿ ‘ಸಾಪ್ತಾಹಿಕ ಪುರವಣಿ’ಯ ಮುಖಪುಟದಲ್ಲಿ ಸೀತಾಳೆ ಕುರಿತ ಲೇಖನ ಅರ್ಧ ಪುಟ ಬಂದಾಗ ಬಹಳ ಖುಷಿ ಆಗಿತ್ತು. ನಂತರ ಕತೆಗಳು, ಹಲವು ಲೇಖನಗಳು ಪ್ರಕಟವಾದವು. ಶುಭಾಶಯಗಳು ಪ್ರಜಾವಾಣಿಗೆ. ನೂರು ವರ್ಷ ತಲುಪಿ ಮುಂದುವರಿಯಲಿ.

–ಎಲ್.ಸಿ. ಸುಮಿತ್ರಾ, ಸಾಹಿತಿ, ತೀರ್ಥಹಳ್ಳಿ

**
ಮಾರ್ಗದರ್ಶಕ...
ಪ್ರಜಾವಾಣಿ ಕನ್ನಡ ದಿನಪತ್ರಿಕೆ ವಿಶ್ವಾಸಾರ್ಹವಾಗಿದ್ದು, ಪ್ರಜಾವಾಣಿ ಓದದೇ ದಿನ ಆರಂಭ ಆಗುವುದಿಲ್ಲ ಅಥವಾ ದಿನ ಮುಗಿಯುವುದಿಲ್ಲ. ನಿಖರವಾದ ಸುದ್ದಿಗೆ ಪ್ರಜಾವಾಣಿಯೇ ಮತ್ತೊಂದು ಹೆಸರು. ದಿನಂಪ್ರತಿ ಅಗ್ರಸುದ್ದಿ, ಸಂಪಾದಕೀಯ, ಸಂಗತ, ವಾಚಕರ ವಾಣಿ ಪುರವಣಿ ಲೇಖನಗಳು ಮುದನೀಡುತ್ತವೆ.

ಜನರ ನಾಡಿ ಮಿಡಿತ ಬಲ್ಲ ಪ್ರಜಾವಾಣಿಯು ಓದುಗರ ಅಭಿರುಚಿಯನ್ನು ಎತ್ತರಿಸಿದೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಅದೇ ಗುಣಮಟ್ಟವನ್ನು, ನಂಬಿಕೆಯನ್ನು, ಸ್ಪಷ್ಟತೆಯನ್ನು ಕಾಪಾಡಿಕೊಂಡು ಬರುತ್ತಿದೆ. ನಿಷ್ಠುರವಾಗಿ ಪತ್ರಿಕೋದ್ಯಮಕ್ಕೆ ಮಾದರಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗೆ ಮಾರ್ಗದರ್ಶಕ. ಇದಕ್ಕಿಂತ ಹೆಚ್ಚು ಏನು ಹೇಳಲಿ?!...

–ಈರಣ್ಣ ಬೆಂಗಾಲಿ, ವ್ಯಂಗ್ಯಚಿತ್ರಕಾರ, ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.