‘ಮೊದ್ದು ಮಣಿಯಿಂದ ಇಂದಿನವರೆಗೂ ಆಪ್ತ’
ಮೈಸೂರಿನಲ್ಲಿದ್ದಾಗ, ನಾನು ಚಿಕ್ಕವಯಸ್ಸಿನಲ್ಲಿದ್ದಾಗಲೂ ಮನೆಯಲ್ಲಿ ‘ಪ್ರಜಾವಾಣಿ’ಯನ್ನೇ ತರಿಸುತ್ತಿದ್ದೆವು. ದೊಡ್ಡವರೆಲ್ಲಾ ಸುದ್ದಿಗಾಗಿ ಪತ್ರಿಕೆ ನೋಡುತ್ತಿದ್ದರೆ ನಾನು ಮಾತ್ರ ‘ಮೊದ್ದು ಮಣಿ’ಗಾಗಿ ಹಾತೊರೆಯುತ್ತಿದ್ದೆ. ಅನೇಕ ಹಿರಿಯರ ಅಂಕಣಗಳು, ವ್ಯಂಗ್ಯಚಿತ್ರಗಳನ್ನು ತುಂಬಾ ಇಷ್ಟಪಡುತ್ತಿದ್ದೆ. ನನಗಿಂತ ಮೂರು ವರ್ಷ ಹಿರಿಯ ವಯಸ್ಸಿನ ಪತ್ರಿಕೆಯಿದು. ಸುದ್ದಿಗಳು ಸ್ಪಷ್ಟ, ಸ್ವಚ್ಛ, ಯಥಾವತ್ತಾಗಿ ಬರುತ್ತಿವೆ. ನಾನಂತೂ ಅಂಟಿಕೊಂಡಿದ್ದೇನೆ. ಟಿವಿಯಲ್ಲಿ ಅದೆಷ್ಟೇ ಸುದ್ದಿ ಬರಲಿ. ಬೆಳಿಗ್ಗೆ ಪತ್ರಿಕೆ ಓದದೇ ಸಮಾಧಾನವಂತೂ ಇಲ್ಲ. ಪತ್ರಿಕೆಯನ್ನು ತರುವ ಧಾವಂತದಲ್ಲಿ ಒಮ್ಮೆ ಬಿದ್ದು ಗಾಯಗೊಂಡಿದ್ದೂ ಇದೆ. ಅದೇನೇ ಇದ್ದರೂ ‘ಪ್ರಜಾವಾಣಿ’ ನನಗೆ ತುಂಬಾ ಇಷ್ಟವಾದ ಪತ್ರಿಕೆ. ಪತ್ರಿಕೆಯ ಕಾಯಕ ನಿರಂತರವಾಗಿರಲಿ. ಇನ್ನೂ ಹೆಚ್ಚು ಜನರಿಗೆ ತಲುಪಲಿ. ಶುಭಾಶಯಗಳು.
- ಗಿರಿಜಾ ಲೋಕೇಶ್, ಚಲನಚಿತ್ರ, ರಂಗಭೂಮಿ ನಟಿ
‘ಹೆಸರಿಗೆ ತಕ್ಕಂತೆ ಜನಪರ, ವಿಶ್ವಾಸಾರ್ಹ’
ನಮ್ಮ ಹೆಮ್ಮೆಯ ‘ಪ್ರಜಾವಾಣಿ’ ದಿನಪತ್ರಿಕೆಯು 74 ವಸಂತಗಳನ್ನು ಪೂರೈಸಿ ಅಮೃತ ಮಹೋತ್ಸವ ವರ್ಷಕ್ಕೆ ಕಾಲಿಟ್ಟಿರುವುದು ಸಂತಸ ತರಿಸಿದೆ. ಈ ಸುದೀರ್ಘ ಅವಧಿಯಲ್ಲಿ ಹೆಸರಿಗೆ ತಕ್ಕಂತೆ ಜನಪರವಾದ ನಿಲುವುಗಳನ್ನು ಪ್ರತಿಪಾದಿಸುತ್ತ ಪ್ರಜೆಗಳಿಗೆ ಧ್ವನಿಯಾಗಿ ‘ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ’ ಎಂಬ ಕೀರ್ತಿಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲೂ ಈ ಪತ್ರಿಕೆಯು ಯಶಸ್ಸು ಕಾಣಲಿ ಎಂದು ಹಾರೈಸುವೆ.
- ಎಂ.ಬಿ.ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ
‘ಪರಿಣಾಮ ಬೀರಿದ ಪತ್ರಿಕೆ’
ನನ್ನ ಅಚ್ಚುಮೆಚ್ಚಿನ ದಿನಪತ್ರಿಕೆ ‘ಪ್ರಜಾವಾಣಿ’ಯ ಪದಬಂಧ, ವಾಚಕರವಾಣಿ, ಸುಭಾಷಿತ ಚಿಕ್ಕಂದಿನಿಂದಲೂ ಆಕರ್ಷಿಸುತ್ತ ಬಂದಿದೆ. ಉಪನ್ಯಾಸಕಿಯಾಗಿ, ಇಂದು ಕಾಲೇಜಿನ ಪ್ರಾಂಶುಪಾಲೆಯಾಗಲು ‘ಪ್ರಜಾವಾಣಿ’ ಬೀರಿದ ಪ್ರಭಾವ ಅನನ್ಯ. ಇದು ಹೀಗೇ ಜನಪರ ಕಾರ್ಯಗಳನ್ನು ಮಾಡುತ್ತಾ ಯಶಸ್ವಿಯಾಗಲಿ ಎಂದು ಆಶಿಸುವೆ.
- ಎಂ.ಎಸ್.ಮಂಜುಳಾ, ಪ್ರಾಚಾರ್ಯರು, ಅರಳಕುಪ್ಪೆ, ಪಾಂಡವಪುರ ತಾ.
‘ವಸ್ತುನಿಷ್ಠ, ನಿಖರತೆಯ ಪ್ರತಿರೂಪ’
‘ಪ್ರಜಾವಾಣಿ’ ಸಮಸ್ತ ಕನ್ನಡಿಗರ ಮನೆ ಮನೆಯ ದಿನಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ಅತ್ಯಂತ ಸಂತಸದ ಸಂಗತಿ. ಪ್ರಕಟಿತ ವರದಿಗಳು, ಸುದ್ದಿಗಳು ಅತ್ಯಂತ ನಿಖರ ಹಾಗೂ ವಸ್ತುನಿಷ್ಠವಾಗಿರುವುದೇ ಇದಕ್ಕೆ ಕಾರಣ. ವಿದ್ಯಾರ್ಥಿದೆಸೆಯಿಂದಲೂ ಓದುತ್ತಿರುವ ಪತ್ರಿಕೆಯಿದು. ನನಗೀಗಲೂ ನೆನಪಿದೆ 'ಶಿಕ್ಷಕರ ನೇಮಕಾತಿ ಕುರಿತು ಪತ್ರಿಕಾ ಪ್ರಕಟಣೆಗಳು ಬೇರೆ ಪತ್ರಿಕೆಗಳಲ್ಲಿ ಬಂದಾಗ್ಯೂ ಪ್ರಜಾವಾಣಿಯಲ್ಲಿ ವರದಿ ಬಂದಾಗಲೇ ಖಾತ್ರಿ' ಕಾಯೋಣ ಎಂದದ್ದು ಹಸಿ ನೆನಪು. ಸಾಹಿತ್ಯದ ಒಂದಷ್ಟು ಬರಹಗಳನ್ನು ಪ್ರಕಟಿಸುತ್ತಾ ಬರಹಕ್ಕೆ ಪ್ರೇರಣೆಯಾಗಿರುವ, 75 ವಸಂತಕ್ಕೆ ಕಾಲಿಟ್ಟಿರುವ ‘ಪ್ರಜಾವಾಣಿ’ ಇನ್ನಷ್ಟು ಬೆಳೆಯಲಿ ಎಂದು ಮನದುಂಬಿ ಹಾರೈಸುತ್ತೇನೆ.
- ಸುರೇಶ್ ಕಲಾಪ್ರಿಯಾ, ಶಿಕ್ಷಕ, ಬರಹಗಾರ, ಗಂಗಾವತಿ
‘ವಿಶ್ವವಿದ್ಯಾಲಯದ ಕವಿಯನ್ನಾಗಿಸಿದ ಪತ್ರಿಕೆ’
ವಿದ್ಯಾರ್ಥಿಯಾಗಿನಿಂದ ಇಲ್ಲಿಯವರೆಗೂ ಪ್ರಜಾವಾಣಿ ಓದುಗ. ಪಕ್ಷ, ಜಾತಿ, ಧರ್ಮ, ಸಿದ್ದಾಂತಗಳ ಗಡಿ ಮೀರಿ ಸತ್ಯದ ಪರ, ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತುತ್ತಲೇ ಇದೆ. ಮಾನವಿಯತೆಗೆ ಒತ್ತು ನೀಡುತ್ತಲೇ ಇದೆ. ನನ್ನ 'ಅಪ್ಪ' ಕವಿತೆ ಮೊದಲ ಸಲ ಪ್ರಕಟಗೊಂಡಾಗ ಸಂತೋಷದಲ್ಲಿ ತೇಲಿದ್ದೆ. ಪುಸ್ತಕದಲ್ಲಿ ಪ್ರಕಟವಾಗದ ಈ ಕವಿತೆ ಪಠ್ಯವಾಯಿತು. ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಜಾವಾಣಿ ಹಿಂದೆ ಬೀಳುವುದಿಲ್ಲ ಎಂಬುದಕ್ಕೆ ನಾನೇ ನು ಉದಾಹರಣೆಯಾದೆ. 'ಸಾಪ್ತಾಹಿಕ ಪುರವಣಿಯಲ್ಲಿ' 'ದೀಪಾವಳಿ ಸಂಚಿಕೆಗಳಲ್ಲಿ' ಪ್ರಕಟವಾದ ಬಹುತೇಕ ಕವಿತೆಗಳು ರಾಜ್ಯದ ನಾನಾ ವಿಶ್ವವಿದ್ಯಾಲಯಗಳ ವಿವಿಧ ತರಗತಿಗಳಿಗೆ ಪಠ್ಯವಾಗಿವೆ. 'ವಿಶ್ವವಿದ್ಯಾಲಯದ ಕವಿ' 'ಬಡವನ ಕವಿತೆಗೆ ಶ್ರೀಮಂತರ ಬೇಡಿಕೆ' ಎಂಬ ಪ್ರೀತಿಗೂ ಪಾತ್ರನಾದೆ. ನನ್ನ ಬೆಳವಣಿಗೆಯಲ್ಲಿ 'ಪ್ರಜಾವಾಣಿ'ಯ ಪಾತ್ರವೂ ಇದೆ. 75ರ ಸಂಭ್ರಮದಲ್ಲಿರುವ ಪ್ರೀತಿಯ 'ಪ್ರಜಾವಾಣಿ'ಗೆ ಶುಭಾಶಯಗಳು ಹಾಗೂ ಅಭಿನಂದನೆಗಳು
- ಸತ್ಯಾನಂದ ಪಾತ್ರೋಟ, ಬಾಗಲಕೋಟೆ
ವಿದ್ಯಾರ್ಥಿಗಳಿಗೆ ‘ಮಾರ್ಗದರ್ಶಿ’
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಎಲ್ಲ ಆಯಾಮಗಳಲ್ಲಿ ಮಾಹಿತಿ ನೀಡಬಲ್ಲ ಏಕೈಕ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’. ಇದನ್ನೇ ಶೈಕ್ಷಣಿಕ ಸಾಮಗ್ರಿಯಾಗಿ ಅಭ್ಯಸಿಸಿ, ಸಾಧನೆ ಮೆರೆದವರ ದೊಡ್ಡ ಪಟ್ಟಿಯೇ ಇದೆ. ಇನ್ನು ಪ್ರಗತಿಪರ ಆಲೋಚನೆಗೆ ಪೂರಕವಾದ ವರದಿ ಪ್ರಕಟಿಸುವುದರಲ್ಲೂ ಪತ್ರಿಕೆ ಸದಾ ಮುಂಚೂಣಿಯಲ್ಲಿದೆ. ಕಳೆದ 25 ವರ್ಷಗಳಿಂದ ನಾನು ‘ಪ್ರಜಾವಾಣಿ’ ಕಾಯಂ ಓದುಗಳು. ಒಂದಿಡೀ ಕುಟುಂಬ ಸದಸ್ಯರಿಗೆ ಮಾರ್ಗದರ್ಶನ ನೀಡಬಲ್ಲ ಮಾಹಿತಿ ಇದರಲ್ಲಿರುತ್ತದೆ. ನಿತ್ಯವೂ ಓದುತ್ತ, ನಮ್ಮ ಕುಟುಂಬದ ಪತ್ರಿಕೆಯೇ ಆಗಿರುವ ‘ಪ್ರಜಾವಾಣಿ’ 75ರ ಸಂಭ್ರಮದಲ್ಲಿರುವುದು ಖುಷಿ ತಂದಿದೆ.
- ಡಾ.ನಿರ್ಮಲಾ ಬಟ್ಟಲ್, ಪ್ರಾಚಾರ್ಯರು, ಎಂ.ಎನ್.ಆರ್.ಎಸ್ ಬಿಇಡಿ ಕಾಲೇಜು, ಬೆಳಗಾವ
‘ಕನ್ನಡ, ಸಾಹಿತ್ಯ ಬೆಳೆಸಿದ ಪತ್ರಿಕೆ’
ಪ್ರಜೆಗಳ ಧ್ವನಿಯೇ ಆಗಿರುವ ‘ಪ್ರಜಾವಾಣಿ’ 75ರ ಸಂಭ್ರಮದಲ್ಲೂ ಶಕ್ತಿಯುತವಾಗಿರಲು ಅದು ತನ್ನೊಂದಿಗೆ ಭಾಷೆ ಮತ್ತು ಕನ್ನಡ ಸಾಹಿತ್ಯ ಬೆಳೆಸಿರುವುದೇ ಕಾರಣ. ‘ಪ್ರಜಾವಾಣಿ’ಯೊಂದಿಗಿನ ಹಲವು ದಶಕಗಳ ಸಂಬಂಧದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ಆಯೋಜಿಸಿದ ದಿನಗಳು ಮರೆಯಲಾಗದ್ದು. ಸಂಪಾದಕರಾದ ಕೆ.ಎನ್. ಶಾಂತಕುಮಾರ ಅವರು ಈ ಕಾರ್ಯಕ್ರಮವನ್ನು ಪ್ರಾಯೋಜಿಸುವ ನಿರ್ಧಾರದ ಮೂಲಕ ಸಾಹಿತ್ಯವನ್ನು ಬೆಳೆಸಿದರು. ನಾಡಿನಾದ್ಯಂತ ಮುಂಚೂಣಿ ಪತ್ರಿಕೆಯಾಗಿರುವ ‘ಪ್ರಜಾವಾಣಿ’ ಹೊರತರುವ ದೀಪಾವಳಿ ವಿಶೇಷಾಂಕಕ್ಕೆ ಇಂದಿಗೂ ಸರಿಸಾಟಿಯಾದ ಮತ್ತೊಂದಿಲ್ಲ. ‘ಪ್ರಜಾವಾಣಿ’ ಇನ್ನಷ್ಟು ಎತ್ತರಕ್ಕೆ ಬೆಳೆದು ಶತಮಾನ ಕಾಣುವಂತಾಗಬೇಕು. ಅದರೊಂದಿಗೆ ಕನ್ನಡವನ್ನು ಇನ್ನಷ್ಟು ಬೆಳೆಸಿ ಉದ್ಧರಿಸಲಿ ಎಂದು ಹಾರೈಸುತ್ತೇನೆ.
- ಡಾ.ರಮಾಕಾಂತ ಜೋಶಿ, ಪ್ರಕಾಶಕ, ಮನೋಹರ ಗ್ರಂಥಮಾಲೆ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.