‘ನಾಡು, ನುಡಿಯ ನರನಾಡಿ’
ಜೀವಪರ ವಿಷಯಗಳು, ಬರ, ಕೃಷಿ ಸಂಸ್ಕೃತಿ, ಕ್ರೀಡೆ, ಕಾಡು, ಪರಿಸರ ವಿಷಯಗಳೊಂದಿಗೆ ವಾಸ್ತವಿಕವಾಗಿ ಪ್ರಚಲಿತ ವಿದ್ಯಮಾನಗಳು ದಾಖಲಿಸುವುದು ‘ಪ್ರಜಾವಾಣಿ’ಯಲ್ಲಿ ಮಾತ್ರ. ಪೈಪೋಟಿಯ ಕಾಲದಲ್ಲಿ ಪತ್ರಿಕೋದ್ಯಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದರೂ ವ್ಯವಸ್ಥೆ ಜೊತೆ ರಾಜಿ ಆಗದೆ ‘ಪ್ರಜಾವಾಣಿ’ ತನ್ನ ನಿಲುವುಗಳಿಗೆ ಗಟ್ಟಿಯಾಗಿ ನಿಂತಿದೆ. ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಕನ್ನಡ ನಾಡು, ನುಡಿಯ ನರನಾಡಿ ಆಗಿರುವ ‘ಪ್ರಜಾವಾಣಿ’ ತನ್ನ ಜೀವಪರ, ಜನಪರ ಸಮಾಜಮುಖಿ ನಿಲುವುಗಳನ್ನು ಮುಂದುವರಿಸಿಕೊಂಡು ಹೋಗಲಿ. ಅದರ ಶತಮಾನೋತ್ಸವ ಸಂಭ್ರಮದಲ್ಲಿ ನಾವೆಲ್ಲ ಭಾಗಿಯಾಗುವಂತೆ ಆಗಲಿ ಎಂದು ಆಶಿಸುತ್ತೇನೆ.
-ಡಾ.ಮಹಾಂತೇಶ ಬಿರಾದಾರ, ಚಿಂತಕ, ಹವ್ಯಾಸಿ ಸೈಕ್ಲಿಸ್ಟ್, ವಿಜಯಪುರ
****
‘ಆರು ದಶಕಗಳಿಂದ ಆಪ್ತಸಂಗಾತಿ’
ಏಳೂವರೆ ದಶಕದ ಹಿಂದೆ ಉರ್ದು ಭಾಷೆಯ ಪ್ರಭಾವ ಹೆಚ್ಚಿದ್ದ ಕೊಪ್ಪಳದಲ್ಲಿ ‘ಪ್ರಜಾವಾಣಿ’ ಕನ್ನಡದ ಆಪ್ತ ಸಂಗಾತಿಯಂತೆ ಬಂತು. ನನಗೀಗ 81 ವರ್ಷ. ಆರು ದಶಕಗಳಿಂದ ಪ್ರಜಾವಾಣಿ ಓದುಗ. ಇದು, ಈಗಲೂ ನನ್ನ ಅಚ್ಚುಮೆಚ್ಚಿನ ಪತ್ರಿಕೆ.‘ಪ್ರಜಾವಾಣಿ’ ವಿಶಿಷ್ಟ ಮತ್ತು ಜನಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿತ್ಯ ರೂಪುಗೊಳ್ಳುತ್ತಿದೆ. ತನ್ನ ಛಾತಿಯನ್ನು ಈಗಲೂ ಉಳಿಸಿಕೊಂಡಿರುವುದು ವಿಶೇಷ. ಅನೇಕ ಸಾಹಿತಿಗಳು, ಕಲಾವಿದರು, ಬರಹಗಾರರು ಮತ್ತು ಕಥೆಗಾರರನ್ನು ರೂಪಿಸಿದ್ದು ಇದೇ ಪತ್ರಿಕೆ. ನಮಗೆಲ್ಲ ಸಾಹಿತ್ಯದ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆ ಪ್ರಜಾವಾಣಿಗೆ ಸಲ್ಲಬೇಕು. ಭವಿಷ್ಯದಲ್ಲೂ ಇದೇ ದಿಟ್ಟ ಹೆಜ್ಜೆಗಳು ಮುಂದುವರಿಯಲಿ.
-ಎಚ್.ಎಸ್.ಪಾಟೀಲ,ಸಾಹಿತಿ, ಕೊಪ್ಪಳ
****
‘ಶೈಕ್ಷಣಿಕ ಅಭಿವೃದ್ಧಿ, ಜ್ಞಾನವಿಕಾಸಕ್ಕೆ ನೆರವು’
ನನಗೀಗ 83 ವರ್ಷ. 1967ರಲ್ಲಿ ಪ್ರೌಢಶಾಲೆ ಶಿಕ್ಷಕನಾಗಿ ಸೇವೆಗೆ ಸೇರಿದ್ದು 35 ವರ್ಷಗಳ ಸೇವೆಯಲ್ಲಿ ಪ್ರಜಾವಾಣಿ ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವ ಬೀರಿದೆ. ನನ್ನ ಶೈಕ್ಷಣಿಕ ಅಭಿವೃದ್ಧಿ, ಸಾಮಾನ್ಯ ಜ್ಞಾನದ ಬೆಳವಣಿಗೆಗೆ ಸಹಕಾರಿಯಾದೆ. ಶಾಲೆಯಲ್ಲಿ ಪ್ರಾರ್ಥನೆಗೂ ಮೊದಲು ಆಯಾ ದಿನದ ಪತ್ರಿಕೆಯ ಮುಖ್ಯಾಂಶಗಳನ್ನು ಓದಿಸುವ ಪರಿಪಾಠ ಬೆಳೆಸಿದ್ದೆ. ಪ್ರಜಾವಾಣಿಯು ಈಗ 75ನೇ ವರ್ಷಕ್ಕೆ ಕಾಲಿಟ್ಟಿದೆ. ಮುಂದೆಯೂ ಪತ್ರಿಕೆಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ ಆಗಿರಲಿ ಎಂದು ಆಶಿಸುತ್ತೇನೆ.
-ಎಸ್.ಎನ್.ಮೂರ್ತಿ,ನಿವೃತ್ತ ಶಿಕ್ಷಣಾಧಿಕಾರಿ, ವಸಂತಪುರ, ಬೆಂಗಳೂರು.
****
‘ಪ್ರಜಾವಾಣಿ ಎಂದರೆ ನನಗಿಷ್ಟ’
ಪ್ರಜಾವಾಣಿ ಓದು ನನಗೆ ಪ್ರೌಢಶಾಲಾ ಹಂತದಲ್ಲಿ ಶುರುವಾಗಿದ್ದು, ಇವತ್ತಿನವರೆಗೂ ‘ಪ್ರಜಾವಾಣಿ’ ನನ್ನ ಮೊದಲ ಆಯ್ಕೆಯಾಗಿದೆ. ನನ್ನ ಅರಿವನ್ನು ವಿಸ್ತರಿಸುವ ಅಕ್ಷರಮಿತ್ರನಂತಾಗಿದೆ.ಪ್ರಜಾವಾಣಿ ಓದುವುದು, ಇದರಲ್ಲಿ ಲೇಖನಗಳು ಪ್ರಕಟವಾಗುವದು ಎಂದರೆ ಎಂದಿಗೂ ಹೆಮ್ಮೆಯ ವಿಷಯ. ಆಡಳಿತ ಪಕ್ಷದ ಮುಲಾಜಿಗೆ ಒಳಗಾಗದೇ, ಸರ್ಕಾರವನ್ನು ಎಚ್ಚರಿಸುತ್ತ, ಜನಪರವಾಗಿ ವಾದಿಸುತ್ತ, ವಸ್ತುನಿಷ್ಟ ವರದಿಗಳಿಂದ ಪತ್ರಿಕಾಧರ್ಮವನ್ನು ಅನುಸರಿಸುತ್ತಿರುವ ‘ಪ್ರಜಾವಾಣಿ’ ಬಗ್ಗೆ ಮೆಚ್ಚುಗೆ, ಪ್ರೀತಿ, ಅಭಿಮಾನ.ನಾನು ವಕೀಲ ವೃತ್ತಿಯಿಂದ ಔಷಧರಹಿತ ಚಿಕಿತ್ಸಕನಾಗಿ ಬದಲಾದಾಗ ಬಹಳಷ್ಟು ಲೇಖನ ಪ್ರಕಟಿಸಿ, ಪ್ರೋತ್ಸಾಹಿಸಿದೆ. ಅವುಗಳು ‘ನಾನೂಂದ್ರೆ ನಂಗಿಷ್ಟ’ ಹೆಸರಿನಲ್ಲಿ ಪುಸ್ತಕರೂಪದಲ್ಲಿಯೂ ಬಂದಿವೆ. ಹಾಗಾಗಿ ಎಂದೆಂದಿಗೂ ಪ್ರಜಾವಾಣಿ ಎಂದರೆ ನಂಗಿಷ್ಟ.
-ಡಾ.ಡಿ.ಎಂ.ಹೆಗಡೆ,ಔಷಧರಹಿತ ಚಿಕಿತ್ಸಕರು, ಆಕ್ಯುಪಂಚರ್ ವೈದ್ಯರು, ಬೆಂಗಳೂರು.
****
‘ಪ್ರಜಾವಾಣಿ’ಯ ಅಭಿಮಾನಿಯಾದೆ
ನಾನು 1970ನೇ ಇಸವಿಯಲ್ಲಿ, ಉಡುಪಿಯಲ್ಲಿ ಶಿವರಾಮ ಕಾರಂತ ಅವರ ನಿರ್ದೇಶನದ ಯಕ್ಷಗಾನ ಕೇಂದ್ರದಲ್ಲಿ ತರಬೇತಿಗೆ ಸೇರಿದೆ. 2013ರಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ‘ದೊಡ್ಡಮನೆ ಯಕ್ಷಗಾನ ಪ್ರಶಸ್ತಿ’ ಪ್ರದಾನವಾಯಿತು. ನನ್ನ ಬಗ್ಗೆ ವಿವರವಾದ ವರದಿ ಪ್ರಜಾವಾಣಿಯಲ್ಲಿ ಬಂದಿತು. ಅಂದಿನಿಂದ ನಾನು ಈ ಪತ್ರಿಕೆಯ ಅಭಿಮಾನಿಯಾದೆ. ಒಮ್ಮೆ ಯುವ ಕಲಾವಿದರೊಬ್ಬರು ಯಕ್ಷಗಾನದ ಶಾಸ್ತ್ರೀಯತೆಯನ್ನು ಮೀರಿದಾಗ ವೇದಿಕೆಗೆ ತೆರಳಿ ಬುದ್ಧಿ ಹೇಳಿದ್ದೆ. ಅದನ್ನು ‘ಪ್ರಜಾವಾಣಿ’ ವರದಿ ಮಾಡಿದಾಗ ಪ್ರಜಾವಾಣಿ ಪತ್ರಿಕೆಯ ಶಕ್ತಿಯ ಅರಿವಾಗಿ ಹೆಮ್ಮೆಯಾಯಿತು. ನಮ್ಮ ನಡುವಿನ ಕಲೆಯ ಬೆನ್ನ ಹಿಂದೆ ನಿಂತು ರಕ್ಷಿಸುವ ಕಾಯಕ ಮಾಡುತ್ತಿರುವ ‘ಪ್ರಜಾವಾಣಿ’ಗೆ ಅದರ 75ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಭಿನಂದನೆಗಳು.
-ಶ್ರೀಧರ ಷಡಕ್ಷರಿ,ಯಕ್ಷಗಾನ ಕಲಾವಿದರು, ಆನೆಗುಂದಿ, ಕುಮಟಾ.
****
‘ಸಮಕಾಲೀನ ಸಮಾಜದ ಮುಖವಾಣಿ’
‘ಪ್ರಜಾವಾಣಿ’ ಮತ್ತು ನನ್ನ ನಂಟು ನಾಲ್ಕೈದು ದಶಕಗಳ ಹಿಂದಿನದು. ‘ಪ್ರಜಾವಾಣಿ’ ನನ್ನ ದಿನಚರಿಯ ಪ್ರಮುಖ ಭಾಗ. ಎಂಭತ್ತರ ದಶಕದಲ್ಲಿ ನನ್ನಂಥ ಗ್ರಾಮೀಣ ಲೇಖಕರನ್ನು ಸಾಹಿತಿಗಳನ್ನಾಗಿಸಿದ ದೈನಿಕ ಇದು. ಅದರಲ್ಲಿದ್ದ ವೈಎನ್ಕೆ, ಜಿ.ಎನ್.ರಂಗನಾಥರಾವ್, ‘ಮಯೂರ’ ಮಾಸಿಕವನ್ನು ಮನೆ ಮಾತಾಗಿಸಿದ ಎಂ.ಬಿ.ಸಿಂಗ್, ಜಿ.ಎಸ್. ಸದಾಶಿವ ಇವರೆಲ್ಲ ನನ್ನ ಪಾಲಿನ ಪ್ರಾತಃಸ್ಮರಣೀಯರು. ಬೆಂಗಳೂರಲ್ಲಿ ವಿಧಾನಸೌಧ ಹೇಗೋ ಹಾಗೆ ನನ್ನಂಥ ಬರಹಗಾರರಿಗೆ ‘ಪ್ರಜಾವಾಣಿ’. ಈ ದೈನಿಕಕ್ಕಿರುವ ಸಾಮಾಜಿಕ ಬದ್ಧತೆ ಉಳಿದ ದಿನಪತ್ರಿಕೆಗಳಿಗಿಲ್ಲ.
ಮೊನ್ನೆ ಈ ಪತ್ರಿಕೆ ತನ್ನ ‘ಗ್ರೇಟ್ ನೆಸ್’ ಅನ್ನು ಸಾಬೀತು ಪಡಿಸಿತು. ಉಳಿದ ಬಹುಪಾಲು ದೈನಿಕಗಳ ಪ್ರಥಮ ಪುಟದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಯುವ ನೇತಾರ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಸುದ್ದಿಯನ್ನು ಜಾಹೀರಾತು ರೂಪದಲ್ಲಿ ಪ್ರಕಟಿಸಿದವು. ಆದರೆ, ‘ಪ್ರಜಾವಾಣಿ’ಯು ಹಣದಾಸೆಗೆ ಅವನ್ನೆಲ್ಲ ಪ್ರಕಟಿಸದೆ ತನ್ನತನ ಉಳಿಸಿಕೊಂಡಿತು. ‘ಪ್ರಜಾವಾಣಿ’ ಸಮಕಾಲೀನ ಸಮಾಜದ ಮುಖವಾಣಿ. ಈ ಪತ್ರಿಕೆಗೂ ಈ ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
-ಕುಂ.ವೀರಭದ್ರಪ್ಪ, ಸಾಹಿತಿ,ಕೊಟ್ಟೂರು, ವಿಜಯನಗರ ಜಿಲ್ಲೆ
****
ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ.
ಪೂರ್ಣ ಪ್ರತಿಕ್ರಿಯೆಗಳನ್ನು prajavani.net ನಲ್ಲಿ ನೋಡಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.