ADVERTISEMENT

ಪ್ರಜಾವಾಣಿ@75: ಆಗೆಲ್ಲ ಪೇಪರು ಎಂದರೆ ಪ್ರಜಾವಾಣಿ -ಸುಮಂಗಲಾ

ಪ್ರಜಾವಾಣಿ ವಿಶೇಷ
Published 19 ನವೆಂಬರ್ 2022, 10:21 IST
Last Updated 19 ನವೆಂಬರ್ 2022, 10:21 IST
   

‘ಆಗೆಲ್ಲ ಪೇಪರು ಎಂದರೆ ಪ್ರಜಾವಾಣಿ!’

ನಾನು ಚಿಕ್ಕವಳಿದ್ದಾಗ ಬೆಳಗು ಎಂದರೆ ಪೇಪರು, ಪೇಪರು ಎಂದರೆ ಪ್ರಜಾವಾಣಿ ಮತ್ತು ಪ್ರಜಾವಾಣಿ ಮಾತ್ರ! ಪ್ರಜಾವಾಣಿಯಲ್ಲದೇ ಬೇರೆ ಪೇಪರುಗಳೂ ಇವೆ ಎಂಬುದು ನಂಗೆ ತಿಳಿದಿದ್ದು (ಮತ್ತು ನೋಡಿದ್ದು!) ಬಹುಶಃ ಹೈಸ್ಕೂಲಿನ ಕೊನೆಯ ವರ್ಷಗಳಲ್ಲಿ ಇರಬಹುದು. ನನ್ನಪ್ಪ ‘ಪ್ರಜಾವಾಣಿ’ಯ 70-80ರ ದಶಕದ ಎಷ್ಟೋ ಸಂಚಿಕೆಗಳನ್ನು ಸಂಗ್ರಹಿಸಿಟ್ಟಿದ್ದರು. ಒಂದರ್ಥದಲ್ಲಿ ಆ ಕಾಲಘಟ್ಟದ ಜನಸಾಮಾನ್ಯರ ಬದುಕಿನ ತುಣಕುಗಳು ಆ ಪುಟಗಳಲ್ಲಿ ಜೀವಂತವಿದ್ದವು. ಅಪ್ಪನ ‘ಪ್ರಜಾವಾಣಿ’ ಪ್ರೀತಿ ನನ್ನೊಳಗೆ ಈಗ ಹೆಮ್ಮರವಾಗಿದೆ. ನನ್ನನ್ನು ಹವ್ಯಾಸಿ ಪತ್ರಕರ್ತೆಯಾಗಿಸಿ, ಬೆಳೆಸಿದ್ದೇ ಪ್ರಜಾವಾಣಿ ಎಂದು ನಾನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ‘ಪ್ರಜಾವಾಣಿ’ ಮುಂದೆಯೂ ಹೀಗೆಯೇ ವಿಶ್ವಾಸಾರ್ಹ ಪತ್ರಿಕೆಯಾಗಿಯೇ ಉಳಿಯಲಿ ಎಂದು ಹಾರೈಸುವೆ.

-ಸುಮಂಗಲಾ,ಕತೆಗಾರ್ತಿ

ADVERTISEMENT

****

‘ನಮಗೆಲ್ಲ ಒಂದು ಮಾದರಿ ಪತ್ರಿಕೆ’

ಎಪ್ಪತ್ತರ ದಶಕ ಹೊಸ,ಹೊಸ ವಿಚಾರಧಾರೆಗಳಿಗೆ ಬಾಯಿ ಕೊಡುತ್ತಿದ್ದ ಕಾಲ. ನವನಿರ್ಮಾಣ, ಬೂಸಾ ಪ್ರಕರಣ, ದಲಿತ, ಬಂಡಾಯ ಚಳವಳಿ, ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಯುವಕರು ನಾವು. ಪ್ರಜಾವಾಣಿ ನಮ್ಮ ಅಂತರಂಗದಿಚ್ಛೆಗಳಿಗೆ, ತಾತ್ವಿಕ ತಾಕಲಾಟಗಳಿಗೆ ‘ಥರ್ಡ್‌ಅಂಪೈರ್‌’ ಆಗಿ ಕೆಲಸ ಮಾಡಿದ್ದು, ಈಗಲೂ ವೈಚಾರಿಕವಾಗಿ ಬೆಳೆದು ನಿಂತ ನಮಗೆಲ್ಲ ಒಂದು ಮಾದರಿ ಪತ್ರಿಕೆ. ಸಮಕಾಲೀನ ಚಿಂತನೆ, ಚರ್ಚೆ, ವಾಗ್ವಾದಗಳಿಗೆ ಸದಾ ಮುಖವಾಣಿಯಾಗಿ ನಿಜವಾದ ಅರ್ಥದಲ್ಲಿ ಬೆಳೆದು ಬಂದ ಪತ್ರಿಕೆ ಪ್ರಜಾವಾಣಿ. ಇಂದಿನ ಕೆಟ್ಟ ಕಾಲಘಟ್ಟದಲ್ಲಿ ನಮ್ಮೆಲ್ಲ ನಂಬುಗೆ, ಆಶಯಗಳಿಗೆ ಉಳಿದಿರುವ (ಕೆಲವು ಸಾಹಿತ್ಯಿಕ ಪತ್ರಿಕೆಗಳನ್ನು ಬಿಟ್ಟು) ಏಕೈಕ ಪತ್ರಿಕೆ. ಪತ್ರಿಕೆ ನಮ್ಮ ನಿಜವಾದ ಒಡನಾಡಿ!

-ಸತೀಶ ಕುಲಕರ್ಣಿಸದಸ್ಯರು, ಕನ್ನಡ ಭಾಷಾ ಸಲಹಾ ಸಮಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ (ನವದೆಹಲಿ).

****

‘ಫ್ಯಾಕ್ಟ್‌ ಚೆಕ್‌’ ಪಾತ್ರ ಮಹತ್ತರ’

‘ಪ್ರಜಾವಾಣಿ’ಯನ್ನು ಇಷ್ಟ ಪಟ್ಟು ಓದುವವರಲ್ಲಿ ನಾನೂ ಒಬ್ಬಳು. ಮಾಧ್ಯಮ ಉದ್ಯಮವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಜಾತ್ಯತೀತ, ಧರ್ಮಾತೀತವಾಗಿ ಸಂವಿಧಾನದ ಮೌಲ್ಯವನ್ನು ಉಳಿಸಿಕೊಂಡಿದೆ. ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿರುವ ಸಂದರ್ಭದಲ್ಲಿ ಫ್ಯಾಕ್ಟ್ ಚೆಕ್ ಬಹಳ ಮುಖ್ಯಪಾತ್ರ ನಿರ್ವಹಿಸುತ್ತಿದೆ. ವಿಶೇಷ ಲೇಖನಗಳು, ಸಂಪಾದಕೀಯ ಸರ್ಕಾರಕ್ಕೆ ಚಾಟಿ ಬೀಸುವಂತಿದೆ. ‘ಪ್ರಜಾವಾಣಿ’ ಪತ್ರಿಕೆಯ 75ರ ಸಂಭ್ರಮವೂ ಓದುಗರ ಸಂಭ್ರಮವೂ ಆಗಿದೆ.

-ಜಬೀನಾ ಖಾನಂ,ಅಧ್ಯಕ್ಷೆ, ನೆರಳು ಬೀಡಿ ಕಾರ್ಮಿಕರ ಯೂನಿಯನ್, ದಾವಣಗೆರೆ

****

ಜನವಾಣಿಗೆ ಮನ್ನಣೆ ನೀಡುವ ‘ಪ್ರಜಾವಾಣಿ’

ನಾನು ಮೂವತ್ತೈದು ವರ್ಷಗಳಿಂದ ‘ಪ್ರಜಾವಾಣಿ’ ದಿನಪತ್ರಿಕೆಯ ಓದುಗ. ಯಾವುದೇ ಅತಿಶಯೋಕ್ತಿ, ಅತ್ಯುಕ್ತಿಗಳಿಲ್ಲದೇ ನೈಜ ವರದಿಗಳನ್ನು ಪ್ರಕಟಿಸುವ ಪತ್ರಿಕೆಯ ನಿಲುವು ನಿಷ್ಪಕ್ಷಪಾತವಾದುದು.ಯಾವುದೇ ಪಕ್ಷದ ತುತ್ತೂರಿಯಾಗದೇ ಜನವಾಣಿಗೆ ಮನ್ನಣೆ ನೀಡಿದ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದ ಪತ್ರಿಕೆ ‘ಪ್ರಜಾವಾಣಿ’. ಅಂಕಣ ಬರಹಗಳು ವೈಚಾರಿಕತೆ ಹಾಗೂ ವೈಜ್ಞಾನಿಕತೆಗೆ ಒತ್ತು ನೀಡುತ್ತವೆ. ನಾಡಿನ ನೆಲ, ಜಲ, ಪರಿಸರ ರಕ್ಷಣೆಗೆ ಒತ್ತುನೀಡುವ ಸಾಹಿತ್ಯ, ಸಂಗೀತ ಮತ್ತು ಕಲೆಗಳನ್ನು ಸದಾ ಪೋಷಿಸಿದ ಪತ್ರಿಕೆಗೆ ಇದೀಗ ಅಮೃತ ಸಂಭ್ರಮ. ‘ಪ್ರಜಾವಾಣಿ’ ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುವಂತಾಗಲಿ ಎಂದು ಹಾರೈಸುವೆ.

ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ,ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ

****
ನಿಮ್ಮ ಅನಿಸಿಕೆಗಳನ್ನು pvat75@prajavani.co.in ಗೆ ಕಳುಹಿಸಿ.

ಪೂರ್ಣ ಪ್ರತಿಕ್ರಿಯೆಗಳನ್ನು prajavani.net ನಲ್ಲಿ ನೋಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.