ADVERTISEMENT

ವಾಚಕರ ವಾಣಿ: 14 ಜೂನ್ 2024

ವಾಚಕರ ವಾಣಿ
Published 13 ಜೂನ್ 2024, 23:44 IST
Last Updated 13 ಜೂನ್ 2024, 23:44 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಅಪರೂಪದ ಅರಣ್ಯದಲ್ಲಿ ಗಣಿಗಾರಿಕೆ ಸಲ್ಲ

ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಕಾಡಿನಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸಲು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಹಿ ಹಾಕಿದ ವರದಿ (ಪ್ರ.ವಾ., ಜೂನ್ 13) ಓದಿ ತುಂಬಾ ಬೇಸರವಾಯಿತು. ಏಕೆಂದರೆ ಸಂಡೂರಿನ ಅರಣ್ಯ ನಮ್ಮ ರಾಜ್ಯದಲ್ಲಿ ತುಂಬಾ ಅಪರೂಪವಾದ ಅರಣ್ಯಗಳಲ್ಲಿ ಒಂದು. ಇಲ್ಲಿಯ ವನ್ಯಜೀವಿಗಳ ವೈವಿಧ್ಯ ಮತ್ತು ಕಣ್ಮನ ಸೆಳೆಯುವ ಗುಡ್ಡ ಬೆಟ್ಟಗಳು ಬಯಲುಸೀಮೆಯಲ್ಲಿ ಬೇರೆ ಎಲ್ಲೂ ಕಂಡುಬರುವುದಿಲ್ಲ. ಈ ಕಾರಣದಿಂದಾಗಿಯೇ ಮಹಾತ್ಮ ಗಾಂಧಿ ಸಹ ಸಂಡೂರಿನ ಕಾಡು ಪ್ರದೇಶವನ್ನು ಹೆಮ್ಮೆಯಿಂದ ಕೊಂಡಾಡಿದ್ದರು.

ಈಗಾಗಲೇ ಇಲ್ಲಿ ವಿಪರೀತ ಗಣಿಗಾರಿಕೆಯಿಂದ ಆದ ಅಪಾರ ಪರಿಸರ ಹಾನಿಯನ್ನು ಗಮನಿಸಿ ಕೇಂದ್ರ ಸರ್ಕಾರವೇ ಇಲ್ಲಿ ಅರಣ್ಯದ ಪುನರ್ ನಿರ್ಮಾಣ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಅದು ಕೂಡ ಸರಿಯಾಗಿ ಆಗುತ್ತಿಲ್ಲ. ಮತ್ತೆ ಇಲ್ಲಿ ಗಣಿಗಾರಿಕೆ ನಡೆಸಿದರೆ ಉಂಟಾಗುವ ಪರಿಸರ ನಾಶ ಮತ್ತು ಅದರಿಂದ ಉಂಟಾಗುವ ಜನಾರೋಗ್ಯ ಹಾನಿ ಕುರಿತ ಅಂಶಗಳನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಳ್ಳಬೇಕು.  

ADVERTISEMENT

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಅಭಿಮಾನಿಗಳ ಹುಚ್ಚಾಟಕ್ಕೆ ಬೀಳಲಿ ಕಡಿವಾಣ 

ಕನ್ನಡದ ನಾಯಕನಟರೊಬ್ಬರ ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟ ವಿಚಾರಕ್ಕೆ ಜಾಲತಾಣದಲ್ಲಿ ಹಾಕಿದ ಕಾಮೆಂಟೊಂದು, ಒಬ್ಬ ವ್ಯಕ್ತಿಯ ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಇದರಲ್ಲಿ ಸ್ವತಃ ನಟನೇ ಭಾಗಿಯಾಗಿರುವ ಆರೋಪ ಕೇಳಿಬಂದಿರುವುದು ಬಹಳ ಆತಂಕಕಾರಿ. ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ನಟರ ಅಭಿಮಾನಿಗಳ ಹುಚ್ಚಾಟ, ಗಲಾಟೆ ಆಗಾಗ ವರದಿಯಾಗುತ್ತಲೇ ಇರುತ್ತವೆ. ಸಿನಿಮಾ ಬಿಡುಗಡೆ ಸಂದರ್ಭ ರಸ್ತೆಯಲ್ಲಿ ಕಟೌಟ್ ಹೊತ್ತು ಸಾಗುವಾಗ ಟ್ರಾಫಿಕ್ ಜಾಮ್ ಆಗುವುದು ಮಾಮೂಲು. ತಮ್ಮ ನಟನಿಗೆ ಜೈಕಾರ ಹಾಕುತ್ತಾ, ಇನ್ನೊಬ್ಬ ನಟನಿಗೆ ಧಿಕ್ಕಾರ ಕೂಗುತ್ತಾ ರಸ್ತೆಯಲ್ಲಿ ಕೇಕೆ ಹಾಕುತ್ತಾ ಸಾಗುವುದರಿಂದ ಜನರಿಗೆ ತೊಂದರೆ ಆಗುತ್ತಲೇ ಇರುತ್ತದೆ.

ಹಿಂದೊಮ್ಮೆ ನಮ್ಮ ರಾಜ್ಯದಲ್ಲಿ ತೆಲುಗು ನಟರಿಬ್ಬರ ಅಭಿಮಾನಿಗಳ ಹುಚ್ಚಾಟಕ್ಕೆ ಒಬ್ಬ ವ್ಯಕ್ತಿಯ ಕೊಲೆ ಆಗಿತ್ತು. ಇನ್ನು ನಟನ ಕಟೌಟ್ ಹೊತ್ತು ಸಾಗುವಾಗ ವಿದ್ಯುತ್ ತಂತಿಗಳಿಗೆ ಕಟೌಟ್ ಸ್ಪರ್ಶಿಸಿ ಕೆಲವರು ಸಾವನ್ನಪ್ಪಿದ ದಾರುಣ ಘಟನೆಯೂ ನಡೆದಿದೆ. ತಮ್ಮ ‘ನೇಮ್, ಫೇಮ್, ಮನಿ’ಗಾಗಿ ಅಭಿಮಾನಿ ಸಂಘ ಸ್ಥಾಪನೆಗೆ ಅನುಮತಿ, ಅವಕಾಶ ನೀಡುವ ನಾಯಕನಟರು ಇದರ ನೈತಿಕ ಜವಾಬ್ದಾರಿಯನ್ನು ಹೊರಬೇಕು. ಕನ್ನಡದ ಹಿರಿಯ ನಟ ಅನಂತನಾಗ್ ಅವರು ನಾಯಕನಟನಾಗಿ ಜನಪ್ರಿಯರಾಗಿದ್ದಾಗ ಕೆಲವರು ಅಭಿಮಾನಿ ಸಂಘ ಸ್ಥಾಪಿಸಲು, ಥಿಯೇಟರ್ ಮುಂದೆ ಕಟೌಟ್ ಅಳವಡಿಸಲು ಮುಂದಾದಾಗ ಅನಂತನಾಗ್ ಅದಕ್ಕೆ ಅವಕಾಶ ನೀಡಲಿಲ್ಲ. ಈ ಪ್ರಬುದ್ಧತೆ ಈಗಿನ ನಾಯಕನಟರಿಗೆ ಮಾದರಿಯಾಗಲಿ. ನಟರ ಅಭಿಮಾನಿ ಸಂಘಗಳ ಅತಿರೇಕಗಳಿಗೆ ಸರ್ಕಾರ ಲಗಾಮು ಹಾಕಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಲು ಇದು ಅಗತ್ಯ. 

ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ಎಂಜಿನಿಯರಿಂಗ್ ಶುಲ್ಕ ಹೆಚ್ಚಳ ಬೇಡ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಶುಲ್ಕವನ್ನು ಶೇ 15ರಷ್ಟು ಹೆಚ್ಚಿಸುವಂತೆ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಯು ಸರ್ಕಾರವನ್ನು ಒತ್ತಾಯಿಸಿರುವುದು ಸರಿಯಲ್ಲ. ಈ ಕುರಿತಂತೆ ಅದು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದರೆ ಆಶ್ಚರ್ಯ ಪಡುವಂತಹುದೇನೂ ಇಲ್ಲ. ಏಕೆಂದರೆ ರಾಜ್ಯದ ಬಹುತೇಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಪ್ರಮುಖ ರಾಜಕಾರಣಿಗಳ ಸ್ವತ್ತುಗಳಾಗಿವೆ. ಹೀಗಾಗಿ, ಎಂಜಿನಿಯರಿಂಗ್ ಶಿಕ್ಷಣ ಮತ್ತಷ್ಟು ತುಟ್ಟಿ ಆಗುವುದು ಖಚಿತ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಸಿಗದ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯಬೇಕಾಗುತ್ತದೆ. ಸರ್ಕಾರಿ ಸೀಟುಗಳನ್ನು ಪಡೆದಾಗ ಆಗುವ ವೆಚ್ಚಕ್ಕೆ ಹೋಲಿಸಿದರೆ ಖಾಸಗಿ ಕಾಲೇಜುಗಳಲ್ಲಿ ವೆಚ್ಚ ಶೇ 50ರಷ್ಟು ಹೆಚ್ಚಾಗುತ್ತದೆ. ಆದರೆ, ಪುನಃ ಶೇ 15ರಷ್ಟು ಶುಲ್ಕ ಹೆಚ್ಚಳಕ್ಕೆ ಶಿಕ್ಷಣ ಸಂಸ್ಥೆಗಳು ಮುಂದಾಗಿರುವುದು ಎಂಜಿನಿಯರಿಂಗ್ ಕನಸು ಕಾಣುವ ಮಧ್ಯಮ ಮತ್ತು ಬಡ ವರ್ಗದವರಿಗೆ ಗಾಯದ ಮೇಲೆ ಬರೆ ಎಳೆದಂತೆ.  

ವಿಜಯಕುಮಾರ್ ಎಚ್.ಕೆ., ರಾಯಚೂರು

ಆಟದಿಂದ ಮನಸ್ಸು ಅರಳಲಿ

‘ಪಾಕಿಸ್ತಾನ ಕ್ರಿಕೆಟ್ ತಂಡದ ಜೊತೆ ಭಾರತ ತಂಡವು ಆಡಲೇಬಾರದು’, ‘ಎಲ್ಲಿಯವರೆಗೆ ಭಾರತ ಹೇಳಿದಂತೆ ಪಾಕಿಸ್ತಾನ ಕೇಳುವುದಿಲ್ಲವೋ ಅಲ್ಲಿಯವರೆಗೆ ಅವರ ಜೊತೆ ಆಟ ಆಡಬಾರದು’. ‘ಟಿ20 ವಿಶ್ವಕಪ್‍ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಬೇಕು’- ಈ ಹೇಳಿಕೆಗಳನ್ನು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು ನೀಡಿರುವುದು ವರದಿಯಾಗಿದೆ (ಪ್ರ.ವಾ., ಜೂನ್‌ 9). ಕ್ರಿಕೆಟ್ ಆಟವನ್ನು ಶುದ್ಧ ಕ್ರೀಡೆಯ ಪರಿಭಾಷೆಯಲ್ಲಿ ಯೋಚಿಸಿದಾಗ ಮೂರೂ ಹೇಳಿಕೆಗಳು ಅಪ್ರಸ್ತುತವಾಗಿ ಬಿಡುತ್ತವೆ.

ವ್ಯಕ್ತಿ-ವ್ಯಕ್ತಿಗಳು, ದೇಶ-ದೇಶಗಳ ನಡುವೆ ಉದ್ಭವಿಸಬಹುದಾದ ದ್ವೇಷವನ್ನು ತಗ್ಗಿಸುವ ಸಾಧನವೇನಾದರೂ ಇದ್ದರೆ ಅದು ಕ್ರೀಡೆ ಮಾತ್ರ. ಅದರಿಂದ ಭಾರತ, ಪಾಕಿಸ್ತಾನವನ್ನೂ ಒಳಗೊಂಡಂತೆ ಪ್ರಪಂಚದ ಎಲ್ಲ ದೇಶಗಳ ತಂಡಗಳ ಜೊತೆ ಎಲ್ಲ ಆಟಗಳನ್ನೂ ಆಡಬೇಕು. ಕ್ರೀಡಾಭಿಮಾನಿಗಳಾದ ನಾವು ಭಾರತ, ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯವನ್ನು ಸಮರದ ಪರಿಭಾಷೆಯಲ್ಲಿ ಯೋಚಿಸುವುದನ್ನು ಮತ್ತು ಆ ಪಂದ್ಯಗಳಿಗೆ ಅನಗತ್ಯ ಪ್ರಾಧಾನ್ಯ ನೀಡುವುದನ್ನು ಮೊದಲು ಬಿಡಬೇಕು. ಯಾವುದೇ ದೇಶ ಇನ್ನೊಂದು ದೇಶ ಹೇಳಿದಂತೆ ಕೇಳುವುದಿಲ್ಲ. ಅದನ್ನು ನಿರೀಕ್ಷಿಸುವುದೇ ಸರಿಯಲ್ಲ. ಸಮಬಲದ ಜಿದ್ದಾಜಿದ್ದಿನ ಸೆಣಸಾಟವೇ ಕ್ರೀಡೆಗೆ ಕಳೆ ತರುವುದು. ಕ್ರೀಡಾಭಿಮಾನಿಗಳಿಗೆ ಆಟ ಮುಖ್ಯವಾಗಬೇಕೇ ವಿನಾ ಆಟಗಾರರು ಪ್ರತಿನಿಧಿಸುವ ದೇಶ, ಧರ್ಮ, ವರ್ಣ, ಜಾತಿ, ಭಾಷೆ, ರಾಜ್ಯ ಮುಖ್ಯವಾಗ ಬಾರದು. ಈ ಯಾವ ಉಪಾದಿಗಳೂ ಇಲ್ಲದೆ ಆಟವನ್ನು ನೋಡಿದಾಗ ಮನಸ್ಸು ಅರಳುತ್ತದೆ, ಉಲ್ಲಸಿತಗೊಳ್ಳುತ್ತದೆ.

– ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.