ADVERTISEMENT

ವಾಚಕರ ವಾಣಿ: 27 ನವೆಂಬರ್ 2024

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 0:07 IST
Last Updated 27 ನವೆಂಬರ್ 2024, 0:07 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಧಾರ್ಮಿಕ ಸಂಸತ್ತು: ಜೈನ ಪರಂಪರೆಯಲ್ಲಿ ಉಲ್ಲೇಖ

ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಮ್ಮ ‘ನುಡಿ ಬೆಳಗು’ ಅಂಕಣದ (ಪ್ರ.ವಾ., ನ. 21) ‘ಕಲ್ಯಾಣ ಕಟ್ಟುವ ಕಾಯಕ!’ ಎಂಬ ಬರಹದಲ್ಲಿ ಅನುಭವ ಮಂಟಪವನ್ನು ಪ್ರಸ್ತಾಪಿಸಿ, ಇದು ಇಡೀ ಜಗತ್ತಿನ ಮೊದಲ ಧಾರ್ಮಿಕ ಸಂಸತ್ ಎಂದು ಹೇಳಿದ್ದಾರೆ. ಇದು 12ನೇ ಶತಮಾನದ್ದು ಎಂದು ಕೂಡ ಅವರೇ ಹೇಳಿದ್ದಾರೆ. ಈ ಅನುಭವ ಮಂಟಪ ಬರುವುದಕ್ಕೆ ಮುನ್ನ ಜೈನ ಪರಂಪರೆಯಲ್ಲಿ ತೀರ್ಥಂಕರರ ಸಮವಸರಣ ಮಂಟಪ ಅಥವಾ ಸಮವಸರಣ ಸಭೆಗಳು (ಧಾರ್ಮಿಕ ಸಂಸತ್‌ಗಳು) ನಡೆಯುತ್ತಿದ್ದವು ಎನ್ನುವುದನ್ನು ಪೂಜ್ಯರ ಗಮನಕ್ಕೆ ತರಬಯಸುತ್ತೇನೆ.

ಜೈನ ಪರಂಪರೆಯಲ್ಲಿ ಅನಾದಿ ಕಾಲದಲ್ಲಿ ಆಗಿಹೋದ ಪ್ರಥಮ ತೀರ್ಥಂಕರ ಆದಿನಾಥರಿಂದ ಮೊದಲ್ಗೊಂಡು ಇತಿಹಾಸ ಪ್ರಮಾಣಿತ ತೀರ್ಥಂಕರ ಮಹಾವೀರರವರೆಗೆ 24 ಜನ ತೀರ್ಥಂಕರರು ಆಗಿಹೋದರು. ಈ ಎಲ್ಲ ತೀರ್ಥಂಕರರ ಬೋಧನೆ ಮತ್ತು ಶಿಷ್ಯ ಸಮೂಹದ ಸಂದೇಹಗಳ ನಿವಾರಣೆಗೆ ಏರ್ಪಡುತ್ತಿದ್ದ ಧಾರ್ಮಿಕ ಸಂಸತ್ತುಗಳು ‘ಸಮವಸರಣ ಸಭೆಗಳು’ ಎಂದು ಜೈನ ಪರಿಭಾಷೆಯಲ್ಲಿ ಕರೆಯಲ್ಪಟ್ಟಿವೆ. 24ನೆಯ ತೀರ್ಥಂಕರ ಮಹಾವೀರರನ್ನೇ ಗಣನೆಗೆ ತೆಗೆದುಕೊಂಡರೂ ಅವರು ನಿರ್ವಾಣ ಹೊಂದಿ 2550 ವರ್ಷಗಳು ಸಂದಿದ್ದು, ಆ ಕಾಲದಲ್ಲೇ ಸಮವಸರಣ ಸಭೆ ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ಪ್ರಾಂತಗಳಲ್ಲಿ ನಡೆಯುತ್ತಿತ್ತು. ಹೀಗೆ ಜಗತ್ತಿನ ಮೊದಲ ಧಾರ್ಮಿಕ ಸಂಸತ್ತು ಎಂದರೆ ಅದು ತೀರ್ಥಂಕರರ ಸಮವಸರಣ ಸಭೆ ಆಗಿದೆ.

ADVERTISEMENT

- ಶಾಂತಿನಾಥ ಕೆ. ಹೋತಪೇಟಿ, ಹುಬ್ಬಳ್ಳಿ

70 ಗಂಟೆ ಕೆಲಸ: ತಿರುಳನ್ನಷ್ಟೇ ಗ್ರಹಿಸೋಣ

ಯುವಜನ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆಯ ಹಿಂದೆ ಅಡಗಿರುವ ಉದ್ದೇಶವನ್ನು ಗ್ರಹಿಸಬೇಕು. ಅವರು ಐ.ಟಿ, ಬಿ.ಟಿ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುವಂತೆ ಈ ಹೇಳಿಕೆ ನೀಡಿಲ್ಲ. ಶ್ರದ್ಧೆ, ಆಸಕ್ತಿಯಿಂದ ಶ್ರಮಪಟ್ಟು ಹೆಚ್ಚು ಕೆಲಸ ಮಾಡಿದರೆ ವೈಯಕ್ತಿಕವಾಗಿ ಆರ್ಥಿಕ ಲಾಭ ಉಂಟಾಗುವುದಲ್ಲದೆ, ತಾವು ಕೆಲಸ ಮಾಡುವ ಸಂಸ್ಥೆಗಳು ಅಭಿವೃದ್ಧಿ ಪಥದಲ್ಲಿ ಸಾಗಿ, ಒಟ್ಟಾರೆ ದೇಶ ಮುನ್ನಡೆಯಲು ಸಹಕಾರಿಯಾಗುತ್ತದೆ ಎನ್ನುವುದು ಅವರ ಹೇಳಿಕೆಯ ಸಾರಾಂಶ. ಯಾವುದೇ ರಂಗದಲ್ಲಾಗಲಿ, ಹೆಚ್ಚು ಕೆಲಸ ಮಾಡಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎನ್ನುವುದು ಅವರ ಅನಿಸಿಕೆ. ಕೋರ್ಟು ಕಚೇರಿಗಳ ಸಿಬ್ಬಂದಿ ಹೆಚ್ಚು ಕೆಲಸ ಮಾಡಿ ಕೇಸುಗಳ ವಿಲೇವಾರಿ ತ್ವರಿತವಾದರೆ ಎಷ್ಟು ಮಾನವ ಗಂಟೆಗಳ ಉಳಿತಾಯವಾಗುತ್ತದೆ. ನ್ಯಾಯಾಂಗ ಇಲಾಖೆ, ಬ್ಯಾಂಕಿಂಗ್ ಕ್ಷೇತ್ರ, ಉತ್ಪಾದನಾ ರಂಗ ಅಥವಾ ಸೇವಾ ಕ್ಷೇತ್ರದಲ್ಲಿ ಹೆಚ್ಚು ಮುತುವರ್ಜಿ, ಸೇವಾ ಮನೋಭಾವದಿಂದ ತಮ್ಮ ತಮ್ಮ ಕರ್ತವ್ಯ ಮಾಡಿದರೆ ದೇಶದ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಿದಂತೆ ಆಗುತ್ತದೆ.

ಒಬ್ಬ ಯಶಸ್ವಿ ಉದ್ಯಮಿಯು ಜೀವನದಲ್ಲಿ ಸಾಧಿಸಿರುವ ಯಶಸ್ಸನ್ನು ಮಾದರಿಯಾಗಿ ಇಟ್ಟುಕೊಂಡು, ಎಲ್ಲರೂ ಜೀವನದಲ್ಲಿ ಮುಂದೆ ಬರಬೇಕೆನ್ನುವುದು ಅವರ ಹೇಳಿಕೆಯಲ್ಲಿನ ಕಳಕಳಿ. ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಕಾನೂನು ಬದಲಾವಣೆ ಮಾಡಬೇಕೆಂದು ಅವರೇನೂ ಆಗ್ರಹಿಸಿಲ್ಲ. ಅವರ ಹೇಳಿಕೆಯನ್ನು ಯಥಾವತ್ತಾಗಿ ತಿಳಿಯದೆ, ಅಪಾರ್ಥ ಮಾಡಿಕೊಳ್ಳದೆ ಅದರ ತಿರುಳನ್ನು ಮಾತ್ರ ಗ್ರಹಿಸಬೇಕು. ವಾದ– ಪ್ರತಿವಾದ ಮಾಡಿ, ಅನೇಕ ಉದಾಹರಣೆಗಳ ಮೂಲಕ ಅವರ ಹೇಳಿಕೆಯನ್ನು ತಿರಸ್ಕರಿಸಿದರೆ, ಅದರಿಂದ ಅವರಿಗೇನೂ ನಷ್ಟವಿಲ್ಲ.

-ಟಿ.ವಿ.ಬಿ. ರಾಜನ್, ಬೆಂಗಳೂರು

ಸಹಕಾರಿ ರಂಗ: ದ್ವಂದ್ವ ನೀತಿ ಏಕೆ?

ನಬಾರ್ಡ್‌ ಕಡಿತಗೊಳಿಸಿರುವ, ಕೃಷಿಗೆ ನೆರವು ನೀಡುವ ಉದ್ದೇಶಕ್ಕಾಗಿ ಸಹಕಾರಿ ಸಂಸ್ಥೆಗಳಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಿಸಬೇಕೆಂಬ ಕರ್ನಾಟಕದ ಮನವಿಯನ್ನು ಕೇಂದ್ರ ತಿರಸ್ಕರಿಸಿರುವುದಾಗಿ ವರದಿಯಾಗಿದೆ. ಸಹಕಾರಿ ರಂಗವನ್ನು ದುರ್ಬಲಗೊಳಿಸಿ ಖಾಸಗಿ ರಂಗಕ್ಕೆ ಉತ್ತೇಜನ ನೀಡುವ ನವ-ಉದಾರವಾದಿ ನೀತಿಗಳ ಭಾಗವಾಗಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಧೋರಣೆಗೆ ವ್ಯತಿರಿಕ್ತವಾಗಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ‘ಸಹಕಾರ ಸಚಿವಾಲಯ’ದ ಒಂದು ಜಾಹೀರಾತು ಪ್ರಕಟವಾಗಿದೆ. ಅದರಲ್ಲಿ, ಆ ಯೋಜನೆಯ ಇತರ ಅಂಶಗಳ ಜತೆಯಲ್ಲಿ ‘ನಗರ ಹಾಗೂ ಗ್ರಾಮೀಣ ಬ್ಯಾಂಕುಗಳನ್ನು ಬಲಪಡಿಸುವುದು’ ಮತ್ತು ‘ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸುವುದು ಮತ್ತು ಪಾರದರ್ಶಕಗೊಳಿಸುವುದು’ ಎಂದಿದೆ‌. ಒಂದೆಡೆ, ನಬಾರ್ಡನ್ನು ದುರ್ಬಲಗೊಳಿಸುವುದು, ಮತ್ತೊಂದೆಡೆ, ಸಹಕಾರಿ ಬ್ಯಾಂಕುಗಳು ಮತ್ತು ಸೊಸೈಟಿಗಳನ್ನು ಸಶಕ್ತಗೊಳಿಸುತ್ತೇವೆ ಎನ್ನುವುದು. ಕೇಂದ್ರ ಸರ್ಕಾರದ ಇಂತಹ ದ್ವಂದ್ವ ನೀತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಸರಿ.

- ಟಿ.ಸುರೇಂದ್ರ ರಾವ್, ಬೆಂಗಳೂರು

ವಿಮಾ ಯೋಜನೆ: ವಿವೇಚನೆ ಬಳಸಬೇಕಿದೆ

‘ವಿಮಾ ಮೋಸ; ಪಾರಾಗುವುದು ಹೇಗೆ?’ ಎಂಬ ರಾಜೇಶ್ ಕುಮಾರ್ ಟಿ.ಆರ್. ಅವರ ಲೇಖನ (ಪ್ರ.ವಾ., ನ. 25), ಜೀವವಿಮೆ ಮತ್ತು ಜನರ ಹಣಕಾಸಿನ ಉಳಿತಾಯ ಜ್ಞಾನದ ಬಗೆಗೆ ಅಸ್ಪಷ್ಟ ನಿಲುವನ್ನು ಹೊಂದಿದೆ. ಗ್ರಾಹಕರಿಗೆ ಟರ್ಮ್‌ ಇನ್ಶೂರೆನ್ಸ್ ಹೆಚ್ಚು ಅನುಕೂಲ ಎಂಬ ಅಭಿಪ್ರಾಯವು ಪೂರ್ಣವಾಗಿ ಸರಿಯಲ್ಲ. ಯಾರಿಗೆ ಹಣವನ್ನು ಮ್ಯೂಚುವಲ್ ಫಂಡ್‌, ಷೇರು ಮಾರುಕಟ್ಟೆ, ಚಿನ್ನ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಅರಿವು ಮತ್ತು ಸಮಯ ಇರುತ್ತದೋ ಅಂತಹವರಿಗೆ ಈ ಟರ್ಮ್ ಪಾಲಿಸಿಗಳು ಅನುಕೂಲಕರ ಅಷ್ಟೆ. ಏಕೆಂದರೆ ಅವುಗಳಲ್ಲಿ ಪಕ್ವತೆಯ ಲಾಭ (ಮೆಚ್ಯೂರಿಟಿ ಬೆನಿಫಿಟ್) ಎಂಬುದು ಇರುವುದಿಲ್ಲ.

ವಿಮಾ ಅವಧಿ ಪೂರೈಸುವುದಕ್ಕೆ ಮುನ್ನ ವ್ಯಕ್ತಿ ಸತ್ತರೆ ಮಾತ್ರ ವಿಮಾ ಮೊಬಲಗು ನಾಮಿನಿಗೆ ಲಭ್ಯವಾಗುತ್ತದೆ. ಎಂಡೊಮೆಂಟ್ ಮತ್ತು ಮನಿಬ್ಯಾಕ್‌ನಂತಹ ಪಾಲಿಸಿಗಳಲ್ಲಿ, ಅವಧಿ ಮುಗಿದ ತಕ್ಷಣ ವಿಮಾ ಮೊಬಲಗಿನ ಜೊತೆಗೆ ಒಟ್ಟುಗೂಡಿದ ಬೋನಸ್ ಮತ್ತು ಪ್ರತ್ಯೇಕ ಅಂತಿಮ ಬೋನಸ್ ಎಲ್ಲ ಸೇರಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಅಲ್ಲದೆ ಯಾವುದೇ ಸಂದರ್ಭದಲ್ಲಿ (ಪಾಲಿಸಿ ಚಾಲ್ತಿಯಲ್ಲಿದ್ದರೆ) ಮರಣವಾದರೆ ನಾಮಿನಿಗೆ ಪೂರ್ಣ ವಿಮಾ ಮೊಬಲಗು ಮತ್ತು ಎಷ್ಟು ವರ್ಷಗಳು ಕಳೆದಿರುತ್ತವೋ ಅಷ್ಟು ವರ್ಷಗಳಲ್ಲಿ ಸೇರಿರಬಹುದಾದ ಬೋನಸ್ ಸಹ ಬರುತ್ತದೆ. ಆದ್ದರಿಂದ ಬಹುಪಾಲು ಮಂದಿ ಆರಿಸಿಕೊಳ್ಳುವುದು ಈ ಪಾಲಿಸಿಗಳನ್ನೇ. ಆದರೂ ವಿಮೆಯು ಸಾಮಾನ್ಯವಾಗಿ ದೀರ್ಘಾವಧಿಯ ಯೋಜನೆಯಾದ್ದರಿಂದ, ಸಾರ್ವಜನಿಕರು ಚೆನ್ನಾಗಿ ಯೋಚನೆ ಮಾಡಿ, ಏಜೆಂಟರೊಂದಿಗೆ ಪೂರ್ಣ ಪ್ರಮಾಣದ ಸಮಾಲೋಚನೆ ಮಾಡಿ, ವಿವೇಚನೆಯಿಂದ ಪಾಲಿಸಿ ಪಡೆದುಕೊಳ್ಳುವುದು ಉತ್ತಮ.

- ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.