ADVERTISEMENT

ವಾಚಕರ ವಾಣಿ: 28 ಆಗಸ್ಟ್‌ 2023

ಪ್ರಜಾವಾಣಿ ವಿಶೇಷ
Published 28 ಆಗಸ್ಟ್ 2023, 0:50 IST
Last Updated 28 ಆಗಸ್ಟ್ 2023, 0:50 IST
ವಾಚಕರ ವಾಣಿ
ವಾಚಕರ ವಾಣಿ   

ವಲಯ ಕ್ರೀಡಾಕೂಟ: ಬೇಕು ಬಂದೋಬಸ್ತ್‌!

ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗಾಗಿ ಪ್ರತಿವರ್ಷ ಕ್ರೀಡಾಕೂಟಗಳನ್ನು ನಡೆಸುತ್ತದೆ. ಅವುಗಳನ್ನು ನೋಡಲು ಬರುವ ಶಾಲೆಗಳ ಊರಿನ ಕೆಲವರು ತಮ್ಮ ಶಾಲೆಯ ಮಕ್ಕಳೇ ಗೆಲ್ಲಬೇಕೆಂದು, ನಿರ್ಣಾಯಕರು ನೀಡುವ ತೀರ್ಮಾನ ವಿರೋಧಿಸಿ ಹಲವು ಸಂದರ್ಭಗಳಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುತ್ತಾರೆ. ಇದರಿಂದ ಮಕ್ಕಳು ಭಯದಲ್ಲೇ ಆಡಬೇಕಾಗುತ್ತದೆ. ದೈಹಿಕ ಶಿಕ್ಷಣ ಶಿಕ್ಷಕರಲ್ಲಿ ಹಲ್ಲೆಗೊಳಗಾಗುವಭಯ ಕಂಡುಬರುತ್ತದೆ. ವಲಯ ಮಟ್ಟದ ಶಾಲಾ ಕ್ರೀಡಾಕೂಟಗಳನ್ನು ಸೂಕ್ತ ಬಂದೋಬಸ್ತ್‌ನಲ್ಲಿ ನಡೆಸುವುದು ಸೂಕ್ತ.

- ರಾಧಾ ಅಶೋಕ, ಚನ್ನಳ್ಳಿ, ಹಿರೇಕೆರೂರು

‌ಜಂಟಿ ಖಾತೆಗೇಕೆ ನಾಮನಿರ್ದೇಶನದ ಗೊಡವೆ?

ಮ್ಯೂಚುವಲ್‌ ಫಂಡ್‌ ಹೂಡಿಕೆ, ಡಿಮ್ಯಾಟ್‌ ಖಾತೆ, ಷೇರು ವಹಿವಾಟಿನ ಟ್ರೇಡಿಂಗ್ ಖಾತೆಯಂತಹ ಕಡೆ ಖಾತೆದಾರ ಮರಣ ಹೊಂದಿದರೆ ಮುಂದೆ ವಾರಸುದಾರನಿಗೆ ಯಾವ ತೊಂದರೆಯೂ ಇಲ್ಲದೆ ಅದೇ ಖಾತೆಯಲ್ಲಿರುವ ಮೊತ್ತ ದೊರಕಲು ಅನುಕೂಲವಾಗುವಂತೆ, ನಾಮ ನಿರ್ದೇಶನ (ನಾಮಿನೇಶನ್)‌ ಮಾಡುವುದನ್ನು ಅಕ್ಟೋಬರ್‌ 1ರಿಂದ ಕಡ್ಡಾಯ ಮಾಡಲಾಗಿದೆ. ಉದ್ದೇಶವೇನೋ ಸರಿಯಾಗಿಯೇ ಇದೆ. ಆದರೆ ಜಂಟಿ ಖಾತೆಗಳಲ್ಲಿ, ಒಬ್ಬ ಖಾತೆದಾರ ಮರಣ ಹೊಂದಿದರೆ, ಬದುಕುಳಿದ ಇನ್ನೊಬ್ಬ ಖಾತೆದಾರ ಯಾವುದೇ ತೊಂದರೆ ಇಲ್ಲದೆ ಖಾತೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಹೀಗಿದ್ದರೂ ಜಂಟಿ ಖಾತೆಗಳಿಗೂ ನಾಮ ನಿರ್ದೇಶನದ ಬಲವಂತ ಯಾಕೆ? ಹಣಕಾಸು ಇಲಾಖೆ ಹಾಗೂ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಇತ್ತ ಗಮನಹರಿಸಿ, ಜಂಟಿ ಖಾತೆದಾರರಿಗೆ ನಾಮನಿರ್ದೇಶನವನ್ನು ಕಡ್ಡಾಯಗೊಳಿಸದಿರುವಂತೆ ಸುತ್ತೋಲೆ ಹೊರಡಿಸಬೇಕಾಗಿದೆ.

ADVERTISEMENT

-ಬಿ.ಎನ್.ಭರತ್, ಬೆಂಗಳೂರು

ರೈಲ್ವೆ ಪ್ಲಾಟ್‌ಫಾರಂ ಗೊಂದಲ ಬಗೆಹರಿಯಲಿ

ರಾಯಚೂರು ರೈಲು ನಿಲ್ದಾಣದಲ್ಲಿ ಒಂದು ನಿಯಮವಿದೆ. ವಾಡಿ ಕಡೆಯಿಂದ ಬರುವ ರೈಲುಗಳು ಒಂದನೆಯ ಪ್ಲಾಟ್‌ಫಾರಂಗೆ ಹಾಗೂ ಗುಂತಕಲ್ ಕಡೆಯಿಂದ ಬರುವ ರೈಲುಗಳು ಮೂರನೆಯ ಪ್ಲಾಟ್‌ಫಾರಂಗೆ ಬರುತ್ತವೆ. ಪ್ರಯಾಣಿಕರು ಗೊಂದಲಕ್ಕೆ ಆಸ್ಪದವಿಲ್ಲದಂತೆ, ಉದ್ಘೋಷಣೆಗಾಗಿ ಕಾಯದೆ ಆಯಾ ಪ್ಲಾಟ್‌ಫಾರಂನಲ್ಲಿ ಇರುತ್ತಾರೆ. ಆದರೆ, ಕಲಬುರಗಿ ರೈಲು ನಿಲ್ದಾಣದಲ್ಲಿ ಯಾವ ರೈಲು ಯಾವ ಪ್ಲಾಟ್‌ಫಾರಂಗೆ ಬರುತ್ತದೆ ಎಂದು ಗೊತ್ತಾಗುವುದು ಕೊನೇ ಗಳಿಗೆಯ ಉದ್ಘೋಷಣೆಯಿಂದ. ಹೀಗಾಗಿ, ಪ್ರಯಾಣಿಕರ ವಿಪರೀತ ದಟ್ಟಣೆಯ ಕಾರಣದಿಂದ ಮಹಿಳೆಯರು, ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಪ್ಲಾಟ್‌ಫಾರಂ ತಲುಪಲು ಸಾಹಸ ಪಡಬೇಕಾದುದು ಅನಿವಾರ್ಯ. ಸೋಲಾಪುರದ ವಿಭಾಗೀಯ ವ್ಯವಸ್ಥಾಪಕರು ರಾಯಚೂರಿನಲ್ಲಿರುವ ಪ್ಲಾಟ್‌ಫಾರಂ ಪದ್ಧತಿಯನ್ನು ಇಲ್ಲೂ ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಡಲಿ.

- ವೆಂಕಟೇಶ ಮುದಗಲ್, ಕಲಬುರಗಿ

ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ತಾರದಿರಿ

ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಹೋಂವರ್ಕ್ ಮಾಡದ ಮುಸ್ಲಿಂ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಇತರ ಮಕ್ಕಳಿಂದ ಕಪಾಳಮೋಕ್ಷ ಮಾಡಿಸಿದ ಪ್ರಕರಣದ ವಿಡಿಯೊ ಎಲ್ಲೆಡೆ ಹರಿದಾಡಿದೆ. ಮಕ್ಕಳಿಗೆ ಬುದ್ಧಿ ಕಲಿಸಲು ಆ ರೀತಿ ಮಾಡಿದರೂ ಅದು ತಪ್ಪು. ಈ ರೀತಿ ಮಾಡಿದಾಗ ಅದರಿಂದ ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಅದರಿಂದ ಸೂಕ್ಷ್ಮ ಮನಸ್ಸಿನ ಮಕ್ಕಳ ಮೇಲೆ ಅದು ನಕಾರಾತ್ಮಕ ಪರಿಣಾಮ ಬೀರುವ ಸಂಭವ ಇರುತ್ತದೆ.

ಇಲ್ಲೊಂದು ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಶಾಲೆಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗಿ ಆ ವಿಡಿಯೊವನ್ನು ಮಾಡಿದ್ದಾದರೂ ಹೇಗೆ? ಎರಡನೇ ತರಗತಿಯ ಮಕ್ಕಳಿಗೆ ಕೊಠಡಿಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅಲ್ಲಿ ಅವಕಾಶವಿದೆಯೇ? ಅಥವಾ ಆ ಶಿಕ್ಷಕಿಗೆ ಆಗದ ಇತರ ಶಿಕ್ಷಕರು ಈ ರೀತಿಯ ದುರುದ್ದೇಶದಿಂದ ಅವರನ್ನು ಸಿಕ್ಕಿಸುವ ಪ್ರಯತ್ನ ಮಾಡಿದ್ದಾರೆಯೇ? ವೃತ್ತಿವೈಷಮ್ಯ ಎಂಬುದು ಈ ರೀತಿಯ ಕಾರ್ಯಗಳನ್ನು ಮಾಡಿಸುವುದು ಸಹಜ. ಈ ಬಗ್ಗೆ ಸೂಕ್ತ ತನಿಖೆ ನಡೆದರೆ ಸತ್ಯಸಂಗತಿ ಹೊರಬರಲು ಸಾಧ್ಯ.

- ಮಲ್ಲತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು

ಪಕ್ಷಿಗಳ ಉಳಿವು ನಮ್ಮ ಉಳಿವು

ದೇಶದಲ್ಲಿ ಹಿಂದಿನ 30 ವರ್ಷಗಳಲ್ಲಿ ಶೇ 60ರಷ್ಟು ಪಕ್ಷಿ ಪ್ರಭೇದಗಳ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ಪಕ್ಷಿವೀಕ್ಷಕರು ನೀಡಿದ ದತ್ತಾಂಶ ವರದಿ ಹೇಳಿದೆ (ಪ್ರ.ವಾ., ಆ. 26). ಇದು ಖಂಡಿತವಾಗಿಯೂ ಮನುಷ್ಯ ಕುಲಕ್ಕೆ ಆತಂಕದ ಸಂಗತಿಯಾಗಿದೆ. ಈ ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೊಸಲ್ಫಾನ್ ಕ್ರಿಮಿನಾಶಕದ ವಿಪರೀತ ಸಿಂಪಡಣೆಯಿಂದಾಗಿ ‌ಗ್ರಾಮವೊಂದರಲ್ಲಿ ಅಂಗವಿಕಲ ಮಕ್ಕಳ ಜನನವಾದ ದುರಂತ ಉದಾಹರಣೆ ನಮ್ಮ ಕಣ್ಮುಂದೆ ಇರುವುದನ್ನು ನಾವು ಮರೆಯಬಾರದು. ಈಗ ಪಕ್ಷಿಸಂಕುಲ ನಾಶಕ್ಕೆ ಅಂಥದ್ದೇ ನಾನಾ ಬಗೆಯ ಕ್ರಿಮಿನಾಶಕಗಳ ಬಳಕೆ ಕಾರಣವಾಗಿರಬಹುದು.

ಅದರಲ್ಲೂ ಭತ್ತದ ಗದ್ದೆಗಳಲ್ಲಿ ವಿಪರೀತ ಕ್ರಿಮಿನಾಶಕಗಳ ಬಳಕೆ ಆಗುತ್ತಿದೆ. ಆ ಗದ್ದೆಗಳ ನೀರು ಕುಡಿಯುವ ಪಕ್ಷಿಗಳು ಸಾವನ್ನಪ್ಪುತ್ತಿವೆ. ಹಾಗೆಯೇ ದಾಳಿಂಬೆ ತೋಟಗಳಿಗೆ ಹೊದಿಸುವ ಬಲೆಗಳಲ್ಲಿ ಸಿಲುಕುವ ಅಸಂಖ್ಯಾತ ಪಕ್ಷಿಗಳು ನಿತ್ಯವೂ ಸಾವನ್ನಪ್ಪುತ್ತಿವೆ. ಹೀಗಾಗಿ ಪಕ್ಷಿಗಳ ಮಾರಣಹೋಮ ನಿತ್ಯ ನಡೆದಿದೆ.

ಪಕ್ಷಿಗಳು ನಿಜಕ್ಕೂ ರೈತರಿಗೆ ಉಪಕಾರಿಯಾಗಿವೆ. ಅವು ಎಲ್ಲಾ ಬೆಳೆಗಳ ಪರಾಗಸ್ಪರ್ಶಕ್ಕೆ ನೆರವಾಗುತ್ತವೆ. ಅಷ್ಟೇ ಏಕೆ, ಅವು ನಮ್ಮ ಆರೋಗ್ಯಕರ ವಾತಾವರಣದ ಜೀವಂತ ಸಾಕ್ಷಿಯಾಗಿವೆ. ಅವಿಲ್ಲದೆ ನಾವಿಲ್ಲ. ಸರ್ಕಾರದ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಮನಸ್ಸು ಮಾಡಿದರೆ ಈ ದುರಂತ ತಪ್ಪಿಸಬಹುದು. ಈ ದಿಕ್ಕಿನಲ್ಲಿ ಸರ್ಕಾರ ಕಣ್ತೆರೆಯಬೇಕು.

- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.