ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 5 ಮಾರ್ಚ್ 2024, 22:05 IST
Last Updated 5 ಮಾರ್ಚ್ 2024, 22:05 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಚುನಾವಣೆಗೆ ಮುನ್ನ ವಿವರ ಪ್ರಕಟವಾಗಲಿ

ಚುನಾವಣಾ ಬಾಂಡ್‌ಗಳನ್ನು ಫೆಬ್ರುವರಿ 15ರಂದು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, ನಿರ್ದಿಷ್ಟ ಅವಧಿಯಲ್ಲಿ ಮಾರಾಟ ಮಾಡಿದ ಬಾಂಡ್‌ಗಳ ವಿವರಗಳನ್ನು ಮಾರ್ಚ್‌ 6ರೊಳಗೆ ಸಲ್ಲಿಸಲು ಮತ್ತು ಜಾಲತಾಣದಲ್ಲಿ ಪ್ರಕಟಿಸಲು ಭಾರತೀಯ ಸ್ಟೇಟ್‌ ಬ್ಯಾಂಕ್‌ಗೆ ಸೂಚನೆ ನೀಡಿತ್ತು. ಇದೀಗ ಸ್ಟೇಟ್‌ ಬ್ಯಾಂಕ್‌ ಈ ಕಾರ್ಯಕ್ಕೆ ಜೂನ್‌ 30ರವರೆಗೂ ಕಾಲಾವಕಾಶ ಕೋರಿರುವುದಾಗಿ ವರದಿಯಾಗಿದೆ.

ADVERTISEMENT

ಈ ಬಾಂಡ್‌ಗಳ ವಿವರವನ್ನು ಮುಂದೆ ಒಂದು ದಿನ ನಿರ್ದಿಷ್ಟ ಮಾದರಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸುವ ಪ್ರಮೇಯ ಬರಲಾರದು ಎಂದು ಬ್ಯಾಂಕ್‌ ಭಾವಿಸಿದ್ದಿರಬಹುದು. ಇದಕ್ಕಾಗಿ ಕಾಲಾವಕಾಶದ ಅಗತ್ಯ ಇರಲೂಬಹುದು. ಆದರೆ ಬ್ಯಾಂಕ್‌ ಕೋರಿರುವ ಅವಧಿಯು ಲೋಕಸಭಾ ಚುನಾವಣಾ ದಿನಾಂಕವನ್ನು ಮೀರುವುದರಿಂದ, ಅದರ ನಿರ್ಧಾರ ಆಡಳಿತ ಪಕ್ಷದ ಪರವಾಗಿದೆ ಎಂಬ ಸಂದೇಹಕ್ಕೆ ಕಾರಣವಾಗಿದೆ. ಆದ್ದರಿಂದ ಅಗತ್ಯ ವಿವರಗಳನ್ನು ಕನಿಷ್ಠ ಚುನಾವಣೆ ಪ್ರಾರಂಭದ ಮೊದಲು ಪ್ರಕಟಿಸುವುದು ಒಳ್ಳೆಯದು. ಇದರಿಂದ ಸಂದೇಹ ನಿವಾರಣೆಯಾಗುತ್ತದೆ ಮತ್ತು ಮತದಾರರಿಗೆ ರಾಜಕೀಯ ಪಕ್ಷಗಳ ‘ಉದಾರ ದೇಣಿಗೆದಾರರ’ ಬಗ್ಗೆ ಅಗತ್ಯ ಮಾಹಿತಿಯೂ ದೊರೆತಂತೆ ಆಗುತ್ತದೆ.

ಹರೀಶ್‌ ಕುಮಾರ್‌ ಕುಡ್ತಡ್ಕ, ಮಂಗಳೂರು

ತನಿಖೆ ತಾರ್ಕಿಕ ಅಂತ್ಯ ಕಾಣಬೇಕು

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವುದು (ಪ್ರ.ವಾ., ಮಾರ್ಚ್‌ 5) ಪೊಲೀಸರ ದಿಟ್ಟ ಕ್ರಮವಾಗಿದೆ. ಸರ್ಕಾರವು ಪೊಲೀಸರ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಅವರು ನಿರ್ಭಯವಾಗಿ ತಮ್ಮ ಕರ್ತವ್ಯ ಮಾಡಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಆದರೆ ಸರ್ಕಾರದ ಹೊಣೆಗಾರಿಕೆ ಇಲ್ಲಿಗೇ ಮುಗಿಯುವುದಿಲ್ಲ. ಮುಂದಿನ ತನಿಖೆ ನಿಷ್ಪಕ್ಷಪಾತವಾಗಿ ನಡೆದು, ಈ ಪ್ರಕರಣಕ್ಕೂ ಕಾಂಗ್ರೆಸ್ಸಿನ ಯಾವುದಾದರೂ ನಾಯಕರಿಗೆ ಏನಾದರೂ ಸಂಬಂಧ ಇದೆಯೇ ಎಂಬುದರ ಸತ್ಯಾಸತ್ಯತೆಯನ್ನೂ ಹೊರತರಬೇಕಾಗಿದೆ. 

ತಾ.ಸಿ.ತಿಮ್ಮಯ್ಯ, ಬೆಂಗಳೂರು

ಚಾಣಾಕ್ಷರಿಗೆ ಅನುಕೂಲ ಆಗದಿರಲಿ

ಸದನದಲ್ಲಿ ಮತ ಚಲಾಯಿಸಲು ಅಥವಾ ಮಾತನಾಡಲು ಲಂಚ ಪಡೆಯುವ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ 1998ರಲ್ಲಿ ವಿನಾಯಿತಿ ನೀಡಿದ್ದ ತನ್ನದೇ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿರುವುದು ಬಲು ಸಂತೋಷದ ವಿಷಯ. ಆದರೆ, 1998 ಮತ್ತು 2024ರ ನಡುವಿನ 26 ವರ್ಷಗಳ ಅಂತರವನ್ನು ಗಮನಿಸಿದರೆ, ದೇಶದ ಸಂವಿಧಾನದಲ್ಲಿನ ವಿಧಿಗಳು ಎಷ್ಟು ಸಂಕೀರ್ಣವಾಗಿವೆ ಮತ್ತು ಅದರಿಂದ
ಪ್ರಜ್ಞಾಪೂರ್ವಕವಾಗಿ ವಿವೇಚನೆಯಿಂದ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳಿಗೂ ಎಷ್ಟು ಕಷ್ಟವಾಗುತ್ತಿದೆ ಎಂಬುದು ಅರ್ಥವಾಗುತ್ತದೆ. ಇವರಿಗೇ ಹೀಗಾದರೆ ಇನ್ನು ಸಾಮಾನ್ಯ ಜನರಿಗೆ ಸಂವಿಧಾನದ ಸಂಕೀರ್ಣ ಭಾಷೆ ಮತ್ತು ಪದಗಳು ಎಷ್ಟು ತೊಡಕನ್ನುಂಟು ಮಾಡಬಹುದು?!

ಏನೇ ಆದರೂ ಸುಪ್ರೀಂ ಕೋರ್ಟ್‌ನ ಈಗಿನ ತೀರ್ಪು ಶ್ಲಾಘನೀಯ. ಆದರೂ ಚಾಣಾಕ್ಷರಾದ ರಾಜಕಾರಣಿಗಳು ಚಾಪೆಯಡಿ ಅವಿತು ನಡೆಸುವ ವ್ಯವಹಾರಗಳಿಗೆ ಅನುಕೂಲ ಕಲ್ಪಿಸುವಂತಹ ವಿಧಿಗಳು ಸಂವಿಧಾನದಲ್ಲಿ ಇನ್ನೂ ಎಷ್ಟಿವೆಯೋ?

ರಮೇಶ್, ಬೆಂಗಳೂರು

ಆ್ಯಸಿಡ್‌ ಕೊಳ್ಳುವವರ ಪೂರ್ವಾಪರ ಅರಿಯಿರಿ

ದಕ್ಷಿಣ ಕನ್ನಡದ ಉಪ್ಪಿನಂಗಡಿ ಸಮೀಪದ ಕಡಬ ಪದವಿಪೂರ್ವ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ದಾಳಿ ನಡೆದಿರುವುದು (ಪ್ರ.ವಾ., ಮಾರ್ಚ್ 5) ಆಘಾತಕಾರಿಯಾದ ಸಂಗತಿ. ಇಂತಹ ಕೃತ್ಯ ಎಸಗುವ ಆರೋಪಿಗಳ ವಿರುದ್ಧ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ದಾಳಿಗಳು ನಿಲ್ಲದಿರುವುದಕ್ಕೆ ಮೂಲ ಕಾರಣ ಆ್ಯಸಿಡ್‌ ಪೂರೈಸುವವರು. ಆ್ಯಸಿಡ್‌ ಕೊಳ್ಳಲು ಬರುವವರ ಪೂರ್ವಾಪರ ತಿಳಿಯುವಂತೆ ಆ್ಯಸಿಡ್ ಪೂರೈಕೆದಾರರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಯಾಕಾಗಿ ಅದನ್ನು ಉಪಯೋಗಿಸಲಿದ್ದಾರೆ ಎಂಬ ವಿವರ ಪಡೆಯುವಂತೆ, ಅವರಿಂದ ಆಧಾರ್‌ ಕಾರ್ಡ್‌ನಂತಹ ದಾಖಲೆಗಳನ್ನು ಪಡೆಯುವಂತೆ ತಿಳಿಸಬೇಕು. ಕೊಡುವ ಮಾಹಿತಿ ಸೂಕ್ತವಾಗಿ ಇಲ್ಲದಿದ್ದರೆ ಅಂತಹವರಿಗೆ ಯಾವುದೇ ಕಾರಣಕ್ಕೂ ಆ್ಯಸಿಡ್‌ ವಿತರಿಸಬಾರದು. 

ಬಾಲಕೃಷ್ಣ ಎಂ.ಆರ್‌., ಬೆಂಗಳೂರು

ಮನವರಿಕೆಯಾಗಲಿ ಗುಣಮಟ್ಟದ ಶಾಲೆಗಳ ಮಹತ್ವ

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 6ರಿಂದ 10ನೇ ತರಗತಿವರೆಗಿನ ಉಚಿತ ಶಿಕ್ಷಣಕ್ಕೆ ಪ್ರವೇಶ ಪಡೆಯಲು 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದ ಬಗ್ಗೆ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 4).ಇವರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಇದು, ಕನ್ನಡ ಮಾಧ್ಯಮ ಮತ್ತು ಗುಣಮಟ್ಟದ ಶಿಕ್ಷಣದ ಕುರಿತು ಪಾಲಕರ ಒಲವನ್ನು ತೋರಿಸುತ್ತದೆ. ಉತ್ತರ ಕರ್ನಾಟಕದಲ್ಲಿ ನೂರಾರು ಶಾಲೆ ಕಾಲೇಜುಗಳನ್ನು ನಡೆಸುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಮಠಗಳು ಇವೆ. ಕಳಪೆ ಗುಣಮಟ್ಟದ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಇಂತಹ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕು. ಅಂತಹ ಶಾಲೆಗಳನ್ನು ಪಾಲಕರು ಅಪೇಕ್ಷಿಸುತ್ತಾರೆ ಎಂಬುದು ಆಳ್ವಾಸ್ ಶಾಲೆಯ ಪ್ರವೇಶದ ಒತ್ತಡದಿಂದ ಗೊತ್ತಾಗುತ್ತದೆ.

ಅಲ್ಲಲ್ಲಿ ಇರುವ ಕೆಲವು ಗುಣಮಟ್ಟದ ಸರ್ಕಾರಿ ಶಾಲೆಗಳಲ್ಲೂ ಈ ರೀತಿ ಪ್ರವೇಶಾತಿಯ ಒತ್ತಡ ಇರುವುದನ್ನು ಗಮನಿಸಬಹುದು. ಗುಣಮಟ್ಟದ ಕನ್ನಡ ಶಾಲೆಗಳ ಅಭಾವದಿಂದಾಗಿ ಪಾಲಕರು ಇಂಗ್ಲಿಷ್‌ ಮಾಧ್ಯಮದ ಕಡೆಗೆ ಸರಿಯುತ್ತಿದ್ದಾರೆ. ಒಟ್ಟಾರೆ, ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿನ ಬದ್ಧತೆಯ ಅಭಾವದಿಂದಾಗಿ ಈ ರೀತಿಯ ಖಾಸಗಿ ಶಾಲೆಗಳ ಪ್ರವೇಶಾತಿಗೆ ಪಾಲಕರು ದೌಡಾಯಿಸುತ್ತಿದ್ದಾರೆ. ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆಕ್ರಮಣದಿಂದ ಕನ್ನಡವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. 

ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.