ಶ್ರವಣದೋಷಕ್ಕೆ ಚಿಕಿತ್ಸೆ: ಬೇಕಾಗಿದೆ ವಸತಿಗೃಹ
ಶ್ರವಣದೋಷವಿರುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಸಾಧನ ಅಳವಡಿಸುವ ಯೋಜನೆ ರಾಜ್ಯದಲ್ಲಿ ಕುಂಟುತ್ತಾ ಸಾಗುತ್ತಿರುವುದರ ಬಗೆಗಿನ ವರದಿ (ಪ್ರ.ವಾ., ಆ. 18) ಓದಿದಾಗ, ಇಂತಹ ಸಮಸ್ಯೆ ಹೊಂದಿರುವ ಮಕ್ಕಳ ಪೋಷಕರು ಇನ್ನೊಂದು ಸಮಸ್ಯೆಯನ್ನೂ ಎದುರಿಸುತ್ತಿರುವುದು ನೆನಪಾಯಿತು. ಶ್ರವಣದೋಷವಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿದೆ. ಇಲ್ಲಿ ನೀಡುವ ಚಿಕಿತ್ಸೆಯ ಅವಧಿ ಬಹುತೇಕ 3 ತಿಂಗಳಿನಿಂದ 6 ತಿಂಗಳ ಕಾಲದ್ದಾಗಿರುತ್ತದೆ.
ಇನ್ನು ಕೆಲವು ಮಕ್ಕಳಿಗೆ ಇನ್ನೂ ಹೆಚ್ಚಿನ ಅವಧಿ ಬೇಕಾಗುತ್ತದೆ. ಕರ್ನಾಟಕದಿಂದ ಮಾತ್ರವಲ್ಲದೆ ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ಸಮಸ್ಯೆಯಿರುವ ಮಕ್ಕಳನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರಲಾಗುತ್ತದೆ.
ಹೀಗೆ ಬರುವ ಮಕ್ಕಳು ಮತ್ತು ಅವರ ಪೋಷಕರಿಗೆ ಇಲ್ಲಿ ಉಳಿದುಕೊಳ್ಳಲು ಸೂಕ್ತ ವಸತಿ ವ್ಯವಸ್ಥೆ ಇಲ್ಲ. ಸಮಸ್ಯೆ ಹೊಂದಿದ ಮಕ್ಕಳನ್ನು ಕರೆದುಕೊಂಡು ವಸತಿ ವ್ಯವಸ್ಥೆಗಾಗಿ ಅವರು ಪಡುವ ಪರದಾಟ ಕರುಣಾಜನಕವಾಗಿರುತ್ತದೆ. ಬಹುತೇಕ ಪೋಷಕರು ಬಡ ಮತ್ತು ಮಧ್ಯಮವರ್ಗದ ಹಿನ್ನೆಲೆಯವರಾಗಿದ್ದು, ದುಬಾರಿ ಬಾಡಿಗೆ ನೀಡುವಷ್ಟು ಶಕ್ತರಾಗಿರುವುದಿಲ್ಲ. ಕೆಲವೊಮ್ಮೆ ಸಾಲ ಮಾಡಿ ಹಣ ತಂದರೂ ಜಾತಿ, ಧರ್ಮ ಮತ್ತು ಆಹಾರಪದ್ಧತಿಯ ಕಾರಣಕ್ಕೆ ಅವರಿಗೆ ಬಾಡಿಗೆ ಮನೆಗಳು ಸಿಗುವುದಿಲ್ಲ. ಈ ಕಾರಣದಿಂದ ಸರ್ಕಾರವು ಇಂತಹವರಿಗೆ ಸಹಾಯವಾಗುವಂತೆ ಸಂಸ್ಥೆಯ ಸನಿಹದಲ್ಲಿ ವಸತಿಗೃಹವೊಂದನ್ನು ಮತ್ತು ಅದಕ್ಕೆ ಲಗತ್ತಾಗಿ ಇಂದಿರಾ ಕ್ಯಾಂಟೀನ್ ಒಂದನ್ನು ತೆರೆಯುವುದು ಒಳ್ಳೆಯದು. ಚಿಕಿತ್ಸೆಗಾಗಿ ಇಲ್ಲಿಗೆ ನೆರೆರಾಜ್ಯಗಳ ಜನರೂ ಬರುತ್ತಿರುವುದರಿಂದ ವಸತಿಗೃಹ ನಿರ್ಮಾಣಕ್ಕೆ ಆ ರಾಜ್ಯ ಸರ್ಕಾರಗಳ ನೆರವನ್ನೂ ಪಡೆಯಬಹುದು.
-ಡಾ. ಸರ್ಜಾಶಂಕರ್ ಹರಳಿಮಠ, ಮೈಸೂರು
--------
ತಾಳ್ಮೆಗೆಡುವ ಮನಸ್ಸಿಗೆ ಪರಿಹಾರವೇನು?
ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಾಕುನಾಯಿಗಳ ಕಚ್ಚಾಟವು ಅವುಗಳ ಮಾಲೀಕರ ನಡುವೆ ಜಗಳಕ್ಕೆ ಕಾರಣವಾಗಿ, ಮಾಲೀಕರೊಬ್ಬರು ಹಾರಿಸಿದ ಗುಂಡಿನಿಂದ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ
(ಪ್ರ.ವಾ., ಆ. 19). ನಾಯಿಗಳ ಜಗಳದ ಕಾರಣದಿಂದ ಮಾಲೀಕರು ಜಗಳವಾಡಿಕೊಂಡು ಗುಂಡು ಹಾರಿಸಿ ಕೊಲೆ ಮಾಡುವುದು ಮನುಷ್ಯ ವರ್ತನೆಯೇ? ಮನುಷ್ಯನ ಮನಸ್ಸು ಇಷ್ಟೊಂದು ಕ್ರೂರವೇ? ಇಂತಹ ಸಣ್ಣಪುಟ್ಟ ಕೃತ್ಯಗಳಿಗೂ ತಾಳ್ಮೆ ಕಳೆದುಕೊಳ್ಳುವ ಮಟ್ಟಕ್ಕೆ ಮನುಷ್ಯನ ಮನಸ್ಸು ಹೋಗಲು ಕಾರಣಗಳೇನು? ತಿನ್ನುವ ಆಹಾರ, ಅಮಲು, ಜೀವನಶೈಲಿ, ಹೊರನೋಟಕ್ಕೆ ಕಾಣುವ ವರ್ತನೆಗಳಂತಹ ಕಾರಣಗಳಲ್ಲಿ ಯಾವುದಾದರೊಂದು ಮನುಷ್ಯನ ಮೆದುಳಿನ ಮೇಲೆ ಪರಿಣಾಮ ಬೀರಿರಬೇಕಲ್ಲವೇ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ಲೋಪವಿದೆಯೆ? ಒಳ್ಳೆಯ ಸಂಘಟನೆಗಳ ಕೊರತೆಯೇ?
ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಇಂತಹ ತಾಳ್ಮೆಗೆಟ್ಟ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಸರ್ಕಾರ ಮತ್ತು ಸಾಮಾಜಿಕ ಚಿಂತಕರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಪರಿಹಾರ ಹುಡುಕಬೇಕಾಗಿದೆ.
-ತಾ.ಸಿ.ತಿಮ್ಮಯ್ಯ, ಬೆಂಗಳೂರು
-----
ಗುಣಮಟ್ಟದ ಮೊಟ್ಟೆ ಪೂರೈಕೆಯಾಗಲಿ
9 ಮತ್ತು 10ನೇ ತರಗತಿಯ ಮಕ್ಕಳಿಗೂ ವಾರಕ್ಕೆ ಎರಡು ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳು ಬೌದ್ಧಿಕವಾಗಿ ಹಾಗೂ ದೈಹಿಕವಾಗಿ ಸಬಲರಾಗುವ ದಿಸೆಯಲ್ಲಿ ಮೊಟ್ಟೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ. ಇತ್ತೀಚೆಗೆ ಅಂಗನವಾಡಿಗಳಿಗೆ ಪೂರೈಕೆಯಾದ ಮೊಟ್ಟೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದ ಕುರಿತು ವರದಿಗಳು ಬಂದಿವೆ ಹಾಗೂ ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ನಡೆದಿದ್ದ ಮೊಟ್ಟೆ ಹಗರಣದ ಬಗ್ಗೆಯೂ ಓದಿದ್ದೇವೆ. ಮಕ್ಕಳಿಗೆ ಪೂರೈಸುವ ಮೊಟ್ಟೆಗಳು ಉತ್ತಮ ಗುಣಮಟ್ಟದವಾಗಿರಬೇಕು ಹಾಗೂ ನಿಯಮಿತವಾಗಿ ಪೂರೈಕೆಯಾಗಬೇಕು. ಮೊಟ್ಟೆಯನ್ನು ತಿನ್ನದ ಮಕ್ಕಳಿಗೆ ವಿತರಿಸುವ ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ಕೂಡ ಗುಣಮಟ್ಟದಿಂದ ಕೂಡಿರಬೇಕು. ಈ ದಿಸೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು.
-ಪ್ರಸಾದ್ ಜಿ.ಎಂ., ಮೈಸೂರು
---
ಸ್ಥಳೀಯ ಅರ್ಹರಿಗೆ ಲಭ್ಯವಾಗಲಿ ಉದ್ಯೋಗ
ನೆರೆಯ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ₹ 400 ಕೋಟಿ ವೆಚ್ಚದಲ್ಲಿ ಬೃಹತ್ ಪಾನೀಯ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಇದಕ್ಕಾಗಿ ಅವರು 46 ಎಕರೆ ಪ್ರದೇಶವನ್ನು ಈಗಾಗಲೇ ಖರೀದಿಸಿದ್ದು, ರಾಜ್ಯ ಸರ್ಕಾರದ ಸಹಕಾರದೊಂದಿಗೆ ನಿರ್ಮಾಣ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಈ ಕಾರ್ಖಾನೆಯಲ್ಲಿ ಸುಮಾರು 800 ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಕಾರ್ಖಾನೆಯ ಆಡಳಿತ ಮಂಡಳಿಯು ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ ಸಂಖ್ಯೆಯ ಉದ್ಯೋಗಾವಕಾಶ ಕಲ್ಪಿಸಲಿ.
-ಕೆ.ವಿ.ವಾಸು, ಮೈಸೂರು
---
ಇನ್ನಷ್ಟು ಇಂದಿರಾ ಕ್ಯಾಂಟೀನ್: ಸ್ವಾಗತಾರ್ಹ ಕ್ರಮ
ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತ್ತೆ 188 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಸರ್ಕಾರ ಮುಂದಾಗಿರುವ ಸುದ್ದಿ (ಪ್ರ.ವಾ., ಆ. 20) ಓದಿ ಸಂತೋಷವಾಯಿತು. ಜೀವನಾವಶ್ಯಕ ವಸ್ತುಗಳೆಲ್ಲಾ ದುಬಾರಿಯಾಗಿರುವ ಈ ಕಾಲದಲ್ಲಿ ಬರೀ 10 ರೂಪಾಯಿಗೆ ಊಟ ಸಿಗುವುದು ಸ್ವಾಗತಾರ್ಹ. ಇದರಿಂದ ಬಡಜನರು, ಆಟೊ ಚಾಲಕರು, ಕೂಲಿ ಕಾರ್ಮಿಕರು, ಸರ್ಕಾರಿ ಆಸ್ಪತ್ರೆಗೆ ಬಂದವರು ಅಗ್ಗದ ದರದಲ್ಲಿ ಊಟ ಮಾಡುವಂತಾಗಿದೆ.
-ಮಲ್ಲನಗೌಡ ಪಾಟೀಲ, ರಂಕಲಕೊಪ್ಪ, ರಾಮದುರ್ಗ
--
ಕವನ
ಪಾಷಾಣಕೆ ಸಮ
ಲೋಕಾ ಬಲೆಗೆ ಕೋಟಿ ಕುಳಗಳು
ಸುದ್ದಿ ಓದಿ ಬೆಚ್ಚಿಬಿದ್ದಿತು ಜನಮನ
ಬಾಳಿಸದು ಬದುಕಿಸದು ಕದ್ದದ್ದು
ಪಾಷಾಣಕೆ ಸಮ ಪರಧನ
ದುಡಿದುಂಡ ಅಂಬಲಿ ಅಮೃತವದು
ಹಂಚಿ ಉಂಡು ಕೂಡಿಬಾಳುವುದು
ಬಾಳನೀತಿ ಸಮತೆಗೆ ಬುನಾದಿ
ಸಿ.ಪಿ.ಸಿದ್ಧಾಶ್ರಮ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.