ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 20:33 IST
Last Updated 13 ಅಕ್ಟೋಬರ್ 2024, 20:33 IST
   

ಸಮ್ಮೇಳನ: ಪರಂಪರೆಗೆ ಧಕ್ಕೆಯಾಗದಿರಲಿ

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಸಾಹಿತಿ ಅಲ್ಲದವ ರಿಂದಲೂ ಲಾಬಿ ಹೆಚ್ಚಿದೆ ಎಂದು ವರದಿಯಾಗಿದೆ (ಪ್ರ.ವಾ., ಅ. 13). ಆದರೆ ಇದು ಸರ್ವಥಾ ಸರಿಯಲ್ಲ. ಹೆಸರೇ ಹೇಳುವಂತೆ ಅದು ಸಾಹಿತ್ಯ ಸಮ್ಮೇಳನ. ಸಾಹಿತ್ಯಕ್ಕೆ ಸಂಬಂಧಪಟ್ಟ ಸಮ್ಮೇಳನದಲ್ಲಿ ಸಾಹಿತಿಗಳಾದವರಿಗೆ ಮಾತ್ರ ಸಮ್ಮೇಳನಾಧ್ಯಕ್ಷರಾಗುವ ಅವಕಾಶ ಇರಬೇಕೆ ವಿನಾ ಬೇರೆಯವರಿಗಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಎಂದು ಇದೆಯೇ ವಿನಾ ಕನ್ನಡ ಪರಿಷತ್ತು ಎಂದಲ್ಲ. ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಅದರದೇ ಆದ ಒಂದು ಪರಂಪರೆ ಇದೆ. ಸರ್ಕಾರವು ಸಮ್ಮೇಳನ ನಡೆಸಲು ಆರ್ಥಿಕ ಸಹಾಯ ನೀಡುತ್ತದೆ ಎನ್ನುವ ಕಾರಣಕ್ಕೆ ರಾಜಕಾರಣಿ ಗಳನ್ನಾಗಲಿ ಅಥವಾ ಸಾಹಿತಿಗಳಲ್ಲದವರನ್ನಾಗಲಿ ಅಧ್ಯಕ್ಷರನ್ನಾಗಿ ಮಾಡಿದರೆ ‘ಸಾಹಿತ್ಯ ಸಮ್ಮೇಳನ’ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ (ಸಾಹಿತಿಗಳಾದಂತಹ ರಾಜಕಾರಣಿಗಳನ್ನು ಹೊರತುಪಡಿಸಿ).

ಸಮ್ಮೇಳನಕ್ಕೆ ಸರ್ಕಾರ ನೀಡುವುದು ಸಾರ್ವಜನಿಕರ ತೆರಿಗೆಯ ಹಣ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಮತ್ತು ಸಾಹಿತಿ ಮುಖ್ಯವಾಗದಿದ್ದರೆ ಮುಂದೆ ಅಧಿಕಾರಸ್ಥರು, ಹಣ ಇರುವವರು ಸಮ್ಮೇಳನಾಧ್ಯಕ್ಷರಾಗುವ ಕೆಟ್ಟ ಚಾಳಿಪ್ರಾರಂಭವಾಗಬಹುದು. ಕ್ರಮೇಣ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಲಾಬಿ ನಡೆಸಿ ಹಣಬಲ ಇದ್ದವರು, ಅಧಿಕಾರಬಲ ಇದ್ದವರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇರುತ್ತದೆ. ಪ್ರತಿ ಜಿಲ್ಲೆ, ತಾಲ್ಲೂಕಿ ನಲ್ಲಿಯೂ ಬಹಳಷ್ಟು ಸಾಹಿತಿಗಳು ಎಲೆ ಮರೆಯ ಕಾಯಿಯಂತೆ ಬೆಳಕಿಗೆ ಬಾರದೇ ಇದ್ದಾರೆ. ಆಯಾ ಮಟ್ಟದಲ್ಲಿ ಅವರಿಗೆ ಅವಕಾಶ ಸಿಗುವಂತೆ ಆಗಬೇಕು.

ADVERTISEMENT

-ವೆಂಕಟೇಶ ಬೈಲೂರು, ಕುಮಟಾ

ಪ್ರಕರಣ ವಾಪಸ್‌: ಪ್ರಶ್ನೆ ಹುಟ್ಟುಹಾಕಿದ ನಿರ್ಧಾರ

ಹುಬ್ಬಳ್ಳಿಯಲ್ಲಿ 2022ರ ಏಪ್ರಿಲ್‌ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪೊಂದರ ವಿರುದ್ಧ
ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು, ಗೃಹ ಸಚಿವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯ ಶಿಫಾರಸಿನಂತೆ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದಾಗಿ ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಯೊಬ್ಬ ಮಾಡಿದ್ದನೆಂಬ ಅವಹೇಳನಕಾರಿ ಪೋಸ್ಟ್‌ನಿಂದ ಅಸಮಾಧಾನಗೊಂಡಿದ್ದ ಅಲ್ಪಸಂಖ್ಯಾತ ಸಮುದಾಯದ ಸುಮಾರು 150 ಜನ ಕಲ್ಲು ಮತ್ತು ದೊಣ್ಣೆಗಳೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಚಿವ ಸಂಪುಟ ಸಭೆಯ ಈ ತೀರ್ಮಾನ ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ:

1. ಸಮರ್ಪಕ ಸಾಕ್ಷ್ಯಾಧಾರಗಳಿಲ್ಲದೆ, ಉದ್ದೇಶವೂರ್ವಕವಾಗಿ ಕೆಲವರನ್ನು ಸಿಲುಕಿಸಲು ಪೊಲೀಸರು ಈ ಪ್ರಕರಣ ದಾಖಲಿಸಿದ್ದರೇ? 2. ಹಾಗಾಗಿರದಿದ್ದಲ್ಲಿ, ಇಂತಹ ಮೊಕದ್ದಮೆಗಳನ್ನು ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಹಿಂತೆಗೆದುಕೊಳ್ಳುವುದು ರಾಜಕೀಯಪ್ರೇರಿತ ಆಗುವುದಿಲ್ಲವೇ ಮತ್ತು ಇಂತಹ ನಿರ್ಣಯಗಳಿಂದ, ಗಲಭೆ ಹತ್ತಿಕ್ಕಿ ಕಾನೂನಿನ ಅನ್ವಯ ಪ್ರಕರಣ ದಾಖಲಿಸಿದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ? 3. ಪ್ರಕರಣವೊಂದು ದಾಖಲಾದ ನಂತರ, ಆರೋಪಿತರು ಅಪರಾಧಿಗಳೇ ಅಥವಾ ನಿರಪರಾಧಿಗಳೇ ಎಂಬುದು ಸಕ್ಷಮ ನ್ಯಾಯಾಲಯದಿಂದ ತೀರ್ಮಾನವಾಗಬೇಕೇ ಅಥವಾ ಆಡಳಿತ ನಡೆಸುವ ಸರ್ಕಾರಗಳ ವಿವೇಚನೆಗೆ ಒಳಪಡಬೇಕೇ? 4. ಇಂತಹ ರಾಜಕೀಯ ಪ್ರೇರಿತ ನಿರ್ಣಯಗಳು ಅಪರಾಧ ಪ್ರವೃತ್ತಿಯ ಹಿನ್ನೆಲೆಯುಳ್ಳವರಿಗೆ ಭಯವನ್ನೇ ಇಲ್ಲದಂತಾಗಿಸಿ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಕಷ್ಟಕರವಾಗುವಂತೆ ಮಾಡುವುದಿಲ್ಲವೇ?

-ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಶುಭ-ಅಶುಭ: ಸಂದರ್ಭಾನುಸಾರ ನಂಬಿಕೆ!

‘ಮೈಸೂರಿನ ಬಿಜೆಪಿ ಸಂಸದ ಯದುವೀರ್‌ ದಂಪತಿಗೆ ಇದೇ ಶುಕ್ರವಾರ (ಅ. 11) ಗಂಡುಮಗು ಜನಿಸಿದ್ದು, ಆ ಸೂತಕದ ಕಾರಣ ಶನಿವಾರ ಅವರು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿಲ್ಲ’ ಎಂದು ವರದಿಯಾಗಿದೆ. ಆದರೆ ಯದುವೀರ್ ಶುಕ್ರವಾರ ಮೈಸೂರು ಒಡೆಯರ ಪವಿತ್ರ ಸಿಂಹಾಸನಾರೋಹಣ ಮಾಡಿದರಷ್ಟೆ! ಅದಕ್ಕೆ ಇಲ್ಲದ ಸೂತಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅಡ್ಡಿಯಾಯಿತೆ? ಅಥವಾ ಕಾಂಗ್ರೆಸ್ ಪಕ್ಷದವರ ಜೊತೆ ಕಾಣಿಸಿಕೊಳ್ಳಲು ಮುಜುಗರವಾಗಿ ಈ ನೆಪ ಒಡ್ಡಿದರೆ? ‌ಒಟ್ಟಾರೆ, ಜನನ– ಮರಣದ ಬಗ್ಗೆ ನಮಗಿರುವ ಶುಭ– ಅಶುಭ ನಂಬಿಕೆಗಳು ಸಂದರ್ಭಾನುಸಾರ ಆಗಿರುತ್ತವೆ ಎನ್ನಬಹುದಾಗಿದೆ!

-ಪ್ರೊ. ಶಿವರಾಮಯ್ಯ, ಬೆಂಗಳೂರು

ತೆರಿಗೆ ಪಾಲು: ಬೇಕು ರಾಜಕೀಯರಹಿತ ಪ್ರಯತ್ನ

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿರುವ ತೆರಿಗೆ ಪಾಲಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಗಮನಿಸಿದಾಗ, ಕರ್ನಾಟಕ ಸಹಿತ ಕೆಲವು ರಾಜ್ಯಗಳಿಗೆ ಕಡಿಮೆ ಪಾಲು ದೊರೆತಿರುವುದು, ಉತ್ತರದ ರಾಜ್ಯಗಳಿಗೆ ಅಧಿಕ ಪಾಲು ದೊರೆತಿರುವುದು ಮೇಲ್ನೋಟಕ್ಕೆ ಕಂಡುಬರುವ ಅಂಶವಾಗಿದೆ. ಯಾವ ಯಾವ ಮಾನದಂಡಗಳನ್ನು ಅನುಸರಿಸಿ ತೆರಿಗೆ ಪಾಲನ್ನು ನಿರ್ಧರಿಸಲಾಗುತ್ತಿದೆಯೋ ಆ ಮಾನದಂಡಗಳು ತಾರತಮ್ಯದಿಂದ ಕೂಡಿವೆ ಎಂಬುದು ಕರ್ನಾಟಕ ಮತ್ತು ಇತರ ಕೆಲವು ದಕ್ಷಿಣದ ರಾಜ್ಯಗಳ ಆಕ್ಷೇಪ. ಹೆಚ್ಚು ತೆರಿಗೆ ಸಂಗ್ರಹಿಸಿ ನೀಡುವ ರಾಜ್ಯಗಳಿಗೆ ಸ್ವಲ್ಪ ಹೆಚ್ಚು ಪ್ರಮಾಣದ ಅನುದಾನ ನೀಡುವುದು ಕೂಡ ಒಂದು ಮಾನದಂಡವಾಗಬೇಕು.

ಕರ್ನಾಟಕಕ್ಕೆ ಕಡಿಮೆ ಅನುದಾನ ಬಂದರೂ ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರ್ಕಾರ ಮಾಡಿದ್ದೇ ಸರಿ ಎನ್ನುವ ರಾಜ್ಯದ ಜನಪ್ರತಿನಿಧಿಗಳ ಧೋರಣೆ ರಾಜ್ಯಕ್ಕೆ ಮಾರಕವಾದುದು. ಇಂತಹ ವಿಷಯದಲ್ಲಿ ರಾಜಕೀಯ ವೈಮನಸ್ಸು, ಪಕ್ಷಭೇದ ಮರೆತು ರಾಜ್ಯದ ಸಂಸದರು, ಕೇಂದ್ರ ಸಚಿವರು ನಿಲ್ಲಬೇಕು. ರಾಜ್ಯಕ್ಕೆ ಬಿಡುಗಡೆ ಆಗುವ ಹಣ ಮುಖ್ಯಮಂತ್ರಿಗಾಗಲಿ ಅಥವಾ ಇಲ್ಲಿನ ಆಳುವ ಪಕ್ಷದ ವೈಯಕ್ತಿಕ ಖಾತೆಗಾಗಲಿ ಹೋಗುವುದಿಲ್ಲ. ಅದು ನಾಡು, ನಾಡಿನ ಜನರ ಅಭಿವೃದ್ಧಿಗೆ ಒದಗಿಬರುವ ನ್ಯಾಯಯುತ ಹಣ. ಆದ್ದರಿಂದ ನಮ್ಮ ಜನಪ್ರತಿನಿಧಿಗಳು ರಾಜಕೀಯ ಮೀರಿ, ರಾಜ್ಯದಿಂದ ಸಂಗ್ರಹವಾಗುವ ತೆರಿಗೆಯ ಪ್ರಮಾಣ ಹಾಗೂ ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದಿಂದ ಹೆಚ್ಚಿನ ಪಾಲು ದೊರೆಯುವಂತೆ ಯತ್ನಿಸಬೇಕು. ಮುಂಬರುವ ಹಣಕಾಸು ಆಯೋಗದ ಪ್ರಸ್ತಾವಗಳಲ್ಲಿ ಮತ್ತೆ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಪಕ್ಷ ರಾಜಕಾರಣಕ್ಕೆ ನಾಡ ಹಿತವನ್ನು ಬಲಿ ಕೊಡುವುದು ನಾಡದ್ರೋಹದ ಕೆಲಸವಾಗುತ್ತದೆ.

-ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.