ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 11 ಜನವರಿ 2024, 19:14 IST
Last Updated 11 ಜನವರಿ 2024, 19:14 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಯುವನಿಧಿ ಸದ್ಬಳಕೆ ಆಗಲಿ

ಎಂಬತ್ತರ ದಶಕದಲ್ಲಿ ರಾಜ್ಯ ಸರ್ಕಾರವು ನಿರುದ್ಯೋಗ ಪದವೀಧರರಿಗೆ ಸ್ಟೈಫಂಡ್‌ ಹೆಸರಿನಲ್ಲಿ ಮಾಸಿಕ
₹ 150 ಕೊಡುತ್ತಿತ್ತು. ಈ ಫಲಾನುಭವಿಗಳನ್ನು ಯಾವುದಾದರೂ ಸರ್ಕಾರಿ ಕಚೇರಿಗೆ ನೇಮಿಸಿಕೊಂಡು, ಅವರಿಂದ ಅಲ್ಪಸ್ವಲ್ಪ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಕೊನೆಗೆ ಇವರು ಸಂಘಟಿತರಾಗಿ ಹೋರಾಡಿ, ಸರ್ಕಾರದ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿ ಪಡೆದುಕೊಂಡರು. ಈ ಮೂಲಕ ಕೆಲವರು ಕಾಯಂ ಉದ್ಯೋಗಿಗಳಾಗಿ ಭವಿಷ್ಯ ರೂಪಿಸಿಕೊಂಡರು. ಅಂದಿನ ಸ್ಟೈಫಂಡ್‌ ಅನ್ನು ಈಗ ಯುವನಿಧಿ ಎಂಬ ಹೊಸ ಹೆಸರಿನಲ್ಲಿ ಈಗಿನ ಸರ್ಕಾರ ಜಾರಿ ಮಾಡಿದೆ. ಪದವಿ ಪಡೆದ ಬಡ ಯುವಜನರಿಗೆ ಈ ಯೋಜನೆ ವರದಾನ. ಆದರೆ ಯೋಜನೆಯ ಫಲಾನುಭವಿಗಳ ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವುದು ಸೂಕ್ತ. ಅಂತಹವರನ್ನು ಆಯಾ ಹಳ್ಳಿಗಳು ಅಥವಾ ಸಮೀಪದ ಪಟ್ಟಣಗಳ ಕಚೇರಿಗಳಲ್ಲಿ ನೇಮಿಸಿಕೊಂಡರೆ, ಅವರಿಗೂ ವೃತ್ತಿಯಲ್ಲಿ ಅನುಭವ ಸಿಕ್ಕಂತೆ ಆಗುತ್ತದೆ.

ADVERTISEMENT

ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ಹೊಳೆಯಲ್ಲಿ ಹುಣಿಸೆಹಣ್ಣು ತೊಳೆಯುವುದೆಂದರೆ...

ನಾನು ಕೆಲಸ ಮಾಡುವ ಕಾಲೇಜಿನಲ್ಲಿ ಸಂಜೆ ಪೇಡಾ ಮಾರಲು ವ್ಯಕ್ತಿಯೊಬ್ಬ ಬರುತ್ತಾನೆ. ನನ್ನ ಸಹೋದ್ಯೋಗಿಗಳು ಆ ಪ್ಯಾಕೆಟ್‌ಗಳನ್ನು ಖರೀದಿಸಿ, ವ್ಯಾಪಾರಿ ನೀಡುವ ಪ್ಲಾಸ್ಟಿಕ್‌ ಕವರ್‌ನಲ್ಲಿಟ್ಟು ಒಯ್ಯುತ್ತಾರೆ. ಅವರಲ್ಲಿ ಅನೇಕರು ಪಿಎಚ್‌.ಡಿ. ಪದವೀಧರರು, ಕೆಲವರು ಪರಿಸರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಬೋಧಿಸುವವರು ಮತ್ತು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವವರು. ಇವರ ನಡುವೆ ನನ್ನದೇ ಹಳೆಯ ಚೀಲ ಹಿಡಿದುಕೊಂಡು ಹೋಗಲು ನಾಚಿಕೆಯೆನಿಸುತ್ತದೆ. ಭಾರತಕ್ಕೆ ಪ್ಲಾಸ್ಟಿಕ್‌ ವ್ಯಾಪಕವಾಗಿ ಕಾಲಿಡದ ಕಾಲದಿಂದಲೂ ಪರಿಸರದ ಮಹತ್ವ ಮತ್ತು ಪರಿಸರ ಮಾಲಿನ್ಯದ ಕುರಿತು ವಿದ್ಯಾರ್ಥಿಗಳ ಜೊತೆಗೂಡಿ ಅಭಿಯಾನ, ತಿಳಿವಳಿಕೆ ನೀಡುತ್ತಾ ಬಂದಿದ್ದೇನೆ. ಅವರಲ್ಲಿಯೇ ಕೆಲವರು ಈಗ ನನ್ನ ಸಹೋದ್ಯೋಗಿಗಳಾಗಿದ್ದಾರೆ. ‘ಹೊಳೆಯಲ್ಲಿ ಹುಣಿಸೆಹಣ್ಣು ತೊಳೆಯುವುದು’ ಎಂದರೆ ಇದೇ ಇರಬೇಕು!

⇒ಪ್ರೊ. ಶಶಿಧರ್‌ ಪಾಟೀಲ್‌, ಬಾಗಲಕೋಟೆ

ಹೋರಾಟದ ಮನೋಭಾವ ಉತ್ತೇಜಿಸಿದ ತೀರ್ಪು

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಅವರನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಅಪರಾಧಿಗಳು ಮತ್ತೆ ಜೈಲು ಸೇರಬೇಕೆಂದು ಸೂಚಿಸಿರುವುದು ಸ್ವಾಗತಾರ್ಹ. ಮಹಿಳೆಯರ ಗೌರವ– ಘನತೆ ಬಗೆಗಿನ ನ್ಯಾಯಪೀಠದ ಉಲ್ಲೇಖಗಳು, ಮಹಿಳೆಯರ ಗೌರವಯುತ ಬದುಕುವ ಹಕ್ಕನ್ನು ಪುನರ್‌ವ್ಯಾಖ್ಯಾನಿಸಿವೆ. ದೇಶದ ಮಹಿಳೆಯರು ತಮ್ಮ ಸ್ವತಂತ್ರ ಅಸ್ತಿತ್ವ ರೂಪಿಸಿಕೊಳ್ಳಲು ಹಾಗೂ ದೌರ್ಜನ್ಯದ ವಿರುದ್ಧ ಹೋರಾಡಲು ಈ ತೀರ್ಪು ಮತ್ತಷ್ಟು ಬಲ ನೀಡಿದೆ. ಇಷ್ಟು ವರ್ಷಗಳಾದರೂ ಕಾನೂನಿನ ಅಡಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಬಿಲ್ಕಿಸ್‌ ಹಾಗೂ ಅವರ ಕುಟುಂಬದವರ ತಾಳ್ಮೆಯನ್ನು ಮೆಚ್ಚಲೇಬೇಕು. ಅವರ ಈ ನಡೆ, ಮಹಿಳೆಯರು ನ್ಯಾಯಕ್ಕಾಗಿ ಹೋರಾಡುವ ಮನೋಭಾವವನ್ನು ಉತ್ತೇಜಿಸುತ್ತದೆ.

⇒ಸುವರ್ಣ ಸಿ.ಡಿ., ತರೀಕೆರೆ

ಬರೀ ಹೊಡೆದಾಟ ಸಹಿಸುವುದು ಹೇಗೆ?

‘ಚಿತ್ರರಂಗ ಮತ್ತು ಪಟ್ಟಭದ್ರರ ಏಕಸ್ವಾಮ್ಯ’ ಎಂಬ ಕೇಸರಿ ಹರವೂ ಅವರ ಲೇಖನವನ್ನು (ಪ್ರ.ವಾ., ಜ. 10) ಓದಿದಾಗ, ನನ್ನ ಬಾಲ್ಯದಲ್ಲಿನ ಕೆಲವು ಸನ್ನಿವೇಶಗಳು ನೆನಪಿಗೆ ಬಂದವು. ಆಗ ಸಿನಿಮಾಗಳು ಮನೆ ಮನೆಯ ಕಥೆಗಳಾಗಿದ್ದವು. ಸಮಾಜಕ್ಕೆ ಅವು ಏನಾದರೂ ಸಂದೇಶವನ್ನು ನೀಡುತ್ತಿದ್ದವು. ಈಗಿನ ಮಬ್ಬುಗತ್ತಲೆಯ ಸಿನಿಮಾಗಳು ಅಂತಹ ಸುವಿಚಾರಗಳನ್ನು ಹೊಂದಿರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ಆ ದಿನಗಳಲ್ಲಿ ಚಿತ್ರಮಂದಿರದ ಟಿಕೆಟ್‌ ದರವು ಎಲ್ಲರಿಗೂ ಕೈಗೆಟಕುವಂತೆ ಇರಲಿಲ್ಲ. ಹೀಗಾಗಿ, ಮನೆಯಲ್ಲಿ ಯಾರಾದರೊಬ್ಬ ಅಥವಾ ಊರಿಗೊಬ್ಬ ಸಿನಿಮಾ ನೋಡಿ ಬಂದರೂ ಎಲ್ಲರೂ ತಾವೇ ಅದನ್ನು ನೋಡಿದ ಹಾಗೆ ಸಂಭ್ರಮಿಸುತ್ತಿದ್ದರು. ಏಕೆಂದರೆ, ಆ ಸಿನಿಮಾದ ಕಥೆ, ಸಂವಾದ, ಹಾಡು, ಕುಣಿತವನ್ನೆಲ್ಲ ಆತ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ.

ಈಗ ಅದು ಸಾಧ್ಯವಿಲ್ಲ. ಏಕೆಂದರೆ, ಎಷ್ಟೋ ಸಿನಿಮಾಗಳಲ್ಲಿ ಕಥೆಯೇ ಇರುವುದಿಲ್ಲ! ಹೆಚ್ಚಾಗಿ ಇರುವುದು ಹೊಡೆದಾಟ ಮಾತ್ರ. ಹೊಡೆದಾಟವನ್ನು ವರ್ಣಿಸುವುದು ಹೇಗೆ? ಅದನ್ನು ವಿವರಿಸಲು ಹೋದರೆ, ಅಲ್ಲೂ  ಹೊಡೆದಾಟ ಆರಂಭವಾಗಬಹುದು! ಸಿನಿಮಾದಲ್ಲಿ ಫೈಟಿಂಗ್ ಈಗಲೂ ನನಗೆ ರುಚಿಸುತ್ತದೆ. ನೃತ್ಯದಂತೆ ಅದೂ ಮುಖ್ಯ. ಆದರೆ ಆರಂಭದಿಂದ ಅಂತ್ಯದವರೆಗೂ ಏನೂ ಕಥೆ ಇಲ್ಲದೆಯೆ ಬರೀ ಹೊಡೆದಾಟವಾದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ?

⇒ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ಪಶು ಆಸ್ಪತ್ರೆ: ಸ್ಥಳಾಂತರ ಸಲ್ಲದು

ನಗರಗಳಲ್ಲಿ ಮುಚ್ಚದೇ ಉಳಿದುಕೊಂಡಿರುವ ಕೆಲವೇ ಕೆಲವು ಸರ್ಕಾರಿ ಪಶು ಆಸ್ಪತ್ರೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಇರುವುದು ಹಸು ಮತ್ತು ಎಮ್ಮೆಗಳು ಮಾತ್ರವಲ್ಲ, ಅಸಂಖ್ಯಾತ ಮನೆಗಳಲ್ಲಿ ಸಾಕುಪ್ರಾಣಿಗಳಿವೆ. ಯಾರಿಗೂ ಸೇರದ, ಲೆಕ್ಕವೇ ಇಲ್ಲದಷ್ಟು ಬೆಕ್ಕು, ಬೀದಿನಾಯಿಗಳಿವೆ. ಇವಲ್ಲದೆ, ಹದ್ದು, ಕಾಗೆ, ಪಾರಿವಾಳದಂತಹ ಪಕ್ಷಿಗಳು ಹಲವು ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತವೆ. ಒಂದೆಡೆ, ಸರ್ಕಾರಿ ಪಶು ಆಸ್ಪತ್ರೆಗಳು ಇಲ್ಲವಾಗುತ್ತಿದ್ದರೆ, ಇನ್ನೊಂದೆಡೆ, ಪಶು ಆಹಾರ ಮಳಿಗೆ, ಸಾಕುಪ್ರಾಣಿಗಳ ಖಾಸಗಿ ಆಸ್ಪತ್ರೆಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತವೆ. ಮನುಷ್ಯರ ಆಹಾರಕ್ಕಿಂತ ಪಶು ಆಹಾರದ ಬೆಲೆಯೇ ಹೆಚ್ಚಾಗಿರುತ್ತದೆ.

ಉಸಿರುಗಟ್ಟಿಸುವಂತಹ ನಗರಗಳಲ್ಲಿ ಸಾಕುಪ್ರಾಣಿಗಳು ಹಲವರಿಗೆ ಬದುಕುವ ಭರವಸೆ ನೀಡುತ್ತಿವೆ. ಬೀದಿನಾಯಿಗಳಿಗೆ ಊಟ, ಔಷಧಿ ನೀಡಿ ಮಾನವೀಯತೆ ಮೆರೆಯುವ ಅಷ್ಟೇ ಪ್ರಮಾಣದ ಜನಸಾಮಾನ್ಯರೂ ಇದ್ದಾರೆ. ಸರ್ಕಾರಕ್ಕೆ ಇವು ಉಸಿರಾಡುವ, ಬದುಕಿಸುವ ಜೀವಿಗಳಾಗಿ ಕಾಣಿಸುತ್ತಿಲ್ಲವೇ? ಮನೋವಿಜ್ಞಾನದಲ್ಲಿ ಸಾಕುಪ್ರಾಣಿಗಳ ಜೊತೆಜೊತೆಗೆ ರೋಗನಿವಾರಣೆ ಚಿಕಿತ್ಸಾ ಪದ್ಧತಿ ಚಾಲ್ತಿಯಲ್ಲಿದೆ. ಪಶುವೈದ್ಯಕೀಯ ಕಾಲೇಜುಗಳಿಂದ ಪ್ರತಿವರ್ಷ ಹೊರಬರುತ್ತಿರುವ ಸಾವಿರಾರು ಪದವೀಧರರಿಗೆ ಸರ್ಕಾರ ಕೆಲಸ ನೀಡುತ್ತಿದೆಯೇ? ಸಕಲ ಜೀವಿಗಳೆಡೆಗೂ ಮಾತೃಹೃದಯ ಹೊಂದಬೇಕಾದ ಸರ್ಕಾರದ ನಡೆ ಜಾಣ ನಿರ್ಲಕ್ಷ್ಯವೇ ಅಥವಾ ಖಾಸಗಿ ಕ್ಷೇತ್ರಕ್ಕೆ ನೀಡುತ್ತಿರುವ ಉತ್ತೇಜನವೇ? ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಿ, ಅವಶ್ಯಕ ಸಾಮಗ್ರಿಗಳನ್ನು ನೀಡುವ ಬದಲು, ಅವುಗಳನ್ನು ಮುಚ್ಚುವ ಅಥವಾ ಸ್ಥಳಾಂತರಿಸುವ ನಡೆ ಸರಿಯಲ್ಲ.

⇒ಶಾಂತರಾಜು ಎಸ್., ಮಳವಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.