ಗಣಿಗಾರಿಕೆ: ಸಮನ್ವಯ ಇಲ್ಲದ ನಡೆ
ದೇವದಾರಿ ಅರಣ್ಯ ಭೂಮಿಯನ್ನು ಗಣಿಗಾರಿಕೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಹಸ್ತಾಂತರಿಸದಂತೆ ರಾಜ್ಯ ಅರಣ್ಯ ಸಚಿವರು ಅರಣ್ಯ ಇಲಾಖೆಗೆ ಸೂಚಿಸಿರುವ ವರದಿ (ಪ್ರ.ವಾ., ಜೂನ್ 23) ಹಾಗೂ ಹಿನ್ನೆಲೆ (ಪ್ರ.ವಾ., ಜೂನ್ 12, 16, 19) ಗಮನಿಸಿದರೆ, ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಮಾನಾಭಿಪ್ರಾಯ, ಸಮನ್ವಯ ಇಲ್ಲ ಅನಿಸುತ್ತದೆ. ಇದು ಮೊದಲು ಅರಣ್ಯ, ಪರಿಸರಕ್ಕೆ ಸಂಬಂಧಿಸಿದ್ದು. ಖನಿಜ, ಗಣಿಗಾರಿಕೆ ಆಮೇಲೆ ಬರುತ್ತವೆ. ಈಗ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕುದುರೆಮುಖ ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಹಾಗೆಯೇ ಕರ್ನಾಟಕದ ಸಂಬಂಧಿತ ಸಚಿವರು ಹಾಗೂ
ಉನ್ನತಾಧಿಕಾರಿಗಳೊಂದಿಗೂ ಮಾತನಾಡಬಹುದಿತ್ತು.
ಬಳ್ಳಾರಿ ಹಾಗೂ ಕುದುರೆಮುಖ ಗಣಿಗಾರಿಕೆಗಳ ಬಗೆಗಿನ ಹೋರಾಟ ಮರೆತುಬಿಡುವಂಥದ್ದಲ್ಲ. ನ್ಯಾಯಾಲಯಗಳೂ ತೀರ್ಪು, ನಿರ್ದೇಶನಗಳನ್ನು ನೀಡಿವೆ. ಖನಿಜ ಇರುವಿಕೆ ಬಗ್ಗೆ ಮ್ಯಾಪಿಂಗ್ ನಡೆಯಬೇಕು. ಅದು ಅರಣ್ಯ ಪ್ರದೇಶದಲ್ಲಿ ಆದಾಗ ಮರಗಳಿಗೆ ಹಾನಿ ಆಗಬಾರದು. ರಿಸರ್ವ್ ಫಾರೆಸ್ಟ್ ಹಾಗೂ ಕರಡಿಧಾಮಕ್ಕೆ
ಹತ್ತಿರ ಎಂದಾದಾಗ ಬೋರ್ ಹೋಲ್ ವಿಧಾನ ಅನುಸರಿಸಬೇಕೆ? ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದಾಗ ಕರ್ನಾಟಕ ಸರ್ಕಾರದ ಉನ್ನತ ಮಟ್ಟದಲ್ಲಿ ನಿರ್ಧಾರ ಕೈಗೊಂಡು, ಕೇಂದ್ರಕ್ಕೆ ರವಾನಿಸಿದವರು ಯಾರು ಎಂಬುದು
ಸ್ಪಷ್ಟವಾಗಬೇಕು. ಒಂದು ರೀತಿಯಲ್ಲಿ ಮುಖ್ಯಮಂತ್ರಿಯವರು ಗಮನ ಹರಿಸಬೇಕಾದ ವಿಷಯವಿದು. ‘ಎಲ್ಲ ಮೊದಲೇ ಆಗಿದೆ, ನನ್ನ ಪಾತ್ರವೇನೂ ಇಲ್ಲ’ ಎಂಬ ಕುಮಾರಸ್ವಾಮಿ ಅವರ ಮಾತು ನುಣುಚಿಕೊಳ್ಳುವ ಧೋರಣೆಯದು. ತಮ್ಮ ಸಹಿಗೆ ತಾವೇ ಹೊಣೆಗಾರ. ಒಟ್ಟಿನಲ್ಲಿ, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಸಿಗಬೇಕು.
⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಜೀವನಾಂಶ ನೀಡಿಕೆ ನೈಜ ಸಂಗತಿ ಆಧರಿಸಲಿ
ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಬಸವರಾಜಪ್ಪ ಎಂಬುವರಿಗೆ ತಿಂಗಳಿಗೆ ತಲಾ ₹ 3 ಸಾವಿರ ಜೀವನಾಂಶ ಕೊಡಬೇಕೆಂಬ ಉಪವಿಭಾಗಾಧಿಕಾರಿ ಆದೇಶವನ್ನು ಪ್ರಶ್ನಿಸಿ ಅವರ ಇಬ್ಬರು ಮಕ್ಕಳು ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದು ಕೂಡ ಈ ಮೊದಲಿನ ಆದೇಶವನ್ನು ಎತ್ತಿ ಹಿಡಿದಿರುವುದು ವರದಿಯಾಗಿದೆ (ಪ್ರ.ವಾ., ಜೂನ್ 21). ಇದನ್ನು ಓದಿದವರಿಗೆ ಈ ಮಕ್ಕಳು ಕೆಟ್ಟವರಂತೆ ಕಾಣಿಸುತ್ತಾರೆ. ಆದರೆ ಎಲ್ಲ ಪ್ರಕರಣ
ಗಳಲ್ಲೂ ಏಕಪಕ್ಷೀಯವಾಗಿ ಮಕ್ಕಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಮಕ್ಕಳನ್ನು ಪ್ರೀತಿಸುವ, ಅವರ ಒಳಿತಿಗಾಗಿ ಸದಾ ಯೋಚಿಸುವ, ಮಕ್ಕಳ ಸುಖವೇ ತನ್ನ ಸುಖ ಎಂದು ತಿಳಿಯುವ ತಂದೆಯನ್ನು ಮಕ್ಕಳು ಖಂಡಿತ ಚೆನ್ನಾಗಿಯೇ
ನೋಡಿಕೊಳ್ಳುತ್ತಾರೆ, ಜೀವನಾಂಶವನ್ನೂ ಕೊಡುತ್ತಾರೆ.
ಇತ್ತೀಚೆಗೆ ಇಬ್ಬರು ಪ್ರತಿಭಾವಂತ ಸಾಹಿತಿಗಳ ಆತ್ಮಕಥನವನ್ನು ಓದಿದೆ. ಆ ಸಾಹಿತಿಗಳ ತಂದೆಯಂದಿರು
ಬೇಜವಾಬ್ದಾರಿಯವರಾಗದೇ ಹೋಗಿದ್ದರೆ, ಅವರು ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿದ್ದರೆ ಈ ಇಬ್ಬರೂ ಸಾಹಿತಿಗಳು ಬಾಲ್ಯದಲ್ಲಿ ತುತ್ತು ಅನ್ನಕ್ಕಾಗಿ ಪರಿತಪಿಸುವ ಸನ್ನಿವೇಶವೇ ಸೃಷ್ಟಿಯಾಗುತ್ತಿರಲಿಲ್ಲ. ವಾರಾನ್ನ ಮಾಡಿ, ಅಲ್ಲಿ ಇಲ್ಲಿ ಕೂಲಿ ಮಾಡಿ ಗಳಿಸಿ ಓದಬೇಕಾಗಿರಲಿಲ್ಲ. ಮಕ್ಕಳ ಶಿಕ್ಷಣದ ಬಗ್ಗೆ, ಬೇಕು ಬೇಡಗಳ ಬಗ್ಗೆ, ಉದ್ಯೋಗದ ಬಗ್ಗೆ ಯಾವ ತಂದೆ ಕಾಳಜಿ ವಹಿಸುವುದಿಲ್ಲವೋ ಅಂಥ ತಂದೆಗೆ ಮಕ್ಕಳು ಜೀವನಾಂಶ ಕೊಡದಿದ್ದರೆ ನೈತಿಕವಾಗಿ ಅದು ಅಪರಾಧವಲ್ಲ, ಅಂಥ ಮಕ್ಕಳು ಕೆಟ್ಟವರೂ ಅಲ್ಲ. ಮಕ್ಕಳು ತಂದೆಗೆ ಜೀವನಾಂಶವನ್ನು ಕೊಡುವ ವಿಷಯ ಬರೀ ಭಾವನಾತ್ಮಕವಾಗಿರದೆ, ನೈಜ ಸಂಗತಿಗಳನ್ನು ಆಧರಿಸಿರಬೇಕು.
⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
ನಿರೀಕ್ಷೆಯಂತೆಯೇ ಶುರು ದರ ಏರಿಕೆ ಪರ್ವ!
ಚುನಾವಣೆ ಪರ್ವ ಮುಗಿದ ನಂತರ ದರ ಏರಿಕೆ ಪರ್ವ ಆರಂಭವಾಗುತ್ತದೆ ಎನ್ನುತ್ತಿದ್ದ ಜನಸಾಮಾನ್ಯರ ನಿರೀಕ್ಷೆ ಸುಳ್ಳಾಗಲಿಲ್ಲ. ಲೋಕಸಭಾ ಚುನಾವಣೆ ಮುಗಿದ ಮೂರೇ ದಿವಸಕ್ಕೆ ಕೆಲವೆಡೆ ಹೆದ್ದಾರಿ ಶುಲ್ಕ (ಉದಾ: ಮೈಸೂರು- ಬೆಂಗಳೂರು) ಏರಿಕೆಯಾಯಿತು. ಇದರ ವಿರುದ್ಧ ಪ್ರತಿಭಟನೆ ನಡೆಯುತ್ತಿರುವಂತೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಯಿತು. ಇದರ ವಿರುದ್ಧ ಅಕ್ರೋಶ ವ್ಯಕ್ತವಾಗುತ್ತಿರುವಂತೆಯೇ ನೀರು ಮತ್ತು ಬಸ್ ಪ್ರಯಾಣ ದರ ಏರಿಕೆಯ ಮಾತು ಕೇಳಿಬರುತ್ತಿದೆ. ಹಾಗೆಯೇ ಎಟಿಎಂ ಸೇವಾ ಶುಲ್ಕ ಕೂಡ ಏರಬಹುದು ಎನ್ನುವ ಮಾತು ಬ್ಯಾಂಕಿಂಗ್ ವಲಯದಲ್ಲಿ ಕೇಳಿಬರುತ್ತಿದೆ.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯಿಂದ ಬಿಡುಗಡೆ ಇಲ್ಲ. ರಾಜಕಾರಣಿಗಳು ಎಂದಿನಂತೆ ತಾವು ವಿರೋಧ ಪಕ್ಷದವರೋ ಆಡಳಿತ ಪಕ್ಷದವರೋ ಎನ್ನುವುದನ್ನು ನೋಡಿಕೊಂಡು ಈ ಬೆಲೆ ಏರಿಕೆಗೆ ಪ್ರತಿಕ್ರಿಯಿಸುತ್ತಿದ್ದಾರೆ!
⇒ರಮಾನಂದ ಶರ್ಮಾ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.