ಈಗಾಗಲೇ ತಳಕಂಡಿದ್ದಾಗಿದೆ!
ಜಾಮೀನಿನ ಮೇಲೆ ಹೊರಬಂದಿರುವ ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ವಿಜಯಪುರದಲ್ಲಿ ಕೆಲವು ಹಿಂದೂ ಸಂಘಟನೆಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿರುವುದಕ್ಕೆ ಜಿ.ಎಂ.ರಾವ್ ಎಂಬುವರು ‘ಅವಿವೇಕದ ನಡೆ. ನಾವು ಪ್ರತಿದಿನವೂ ಇನ್ನಷ್ಟು ಕುಸಿಯುತ್ತಿದ್ದೇವೆ, ಅಲ್ಲವೇ?!’ ಎಂದು ಪ್ರತಿಕ್ರಿಯಿಸಿದ್ದಾರೆ (ಕಿಡಿನುಡಿ, ಅ. 14). ಗಾಂಧಿಯಂಥ ಗಾಂಧಿಯನ್ನೇ ದುರುಳನೊಬ್ಬ ಕೊಂದುಹಾಕಿದ ಮತ್ತು ಈ ಗಾಂಧಿ ಹಂತಕನನ್ನೇ ದೇಶಭಕ್ತನೆಂದು ವಿಜೃಂಭಿಸುವವರ ಮಧ್ಯೆಯೇ ನಾವಿಂದು ಉಸಿರಾಡಬೇಕಾದ ಅಸಹಾಯಕ ಸ್ಥಿತಿಯಲ್ಲಿ ದಿನ ದೂಡುತ್ತಿದ್ದೇವೆ. ಈಗಾಗಲೇ ಬೌದ್ಧಿಕವಾಗಿ ತಳಮುಟ್ಟಿರುವಾಗ, ಆ ದಿಸೆಯಲ್ಲಿ ಇನ್ನಷ್ಟು ಕುಸಿಯುವ ಸಂಭವವೇ ಇಲ್ಲವೆಂದು ಹೇಳಬಹುದು.
⇒ಆನಂದ ರಾಮತೀರ್ಥ, ಜಮಖಂಡಿ
ಕಲೆ, ಸಂಸ್ಕೃತಿ ಅನಾವರಣ
ದಸರಾ ಜಂಬೂ ಸವಾರಿಯನ್ನು ನೇರ ಪ್ರಸಾರದಲ್ಲಿ ತೋರಿಸಿದ ಬೆಂಗಳೂರು ದೂರದರ್ಶನದ ಚಂದನ ವಾಹಿನಿಯು ಕೋಟ್ಯಂತರ ಜನರ ಮನಗೆದ್ದಿದೆ. ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ವೀಕ್ಷಕ ವಿವರಣೆಯನ್ನು ನೀಡಲಾಯಿತು. ಮೆರವಣಿಗೆಯಲ್ಲಿ ಸಾಗಿದ 2,000 ಮಂದಿ ಕಲಾವಿದರು, 140 ಕಲಾ ತಂಡಗಳು ಹಾಗೂ 52 ಸ್ತಬ್ಧಚಿತ್ರಗಳ ವಿವರಣೆ ಸಹಿತ ಕನ್ನಡ ನಾಡಿನ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿದ ವೀಕ್ಷಕ ವಿವರಣೆಗಾರರು ನಾಡಿನ ಜನಮನವನ್ನು ಗೆದ್ದಿದ್ದಾರೆ. ಇದಕ್ಕಾಗಿ ಚಂದನ ವಾಹಿನಿ ಅಭಿನಂದನಾರ್ಹ.
⇒ಗಂಗಾಧರ ವಿ., ಚಾಮರಾಜನಗರ
ರಾಜಕಾರಣಿಗಳ ಹಸ್ತಕ್ಷೇಪ ಸಲ್ಲ
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯಲು ತೀರ್ಮಾನಿಸಿರುವ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಸಮರ್ಥನೆ ಮತ್ತು ವಿರೋಧವು ‘ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಎಳೆಯಿತು’ ಎಂಬ ಗಾದೆ ಮಾತಿಗೆ ತಾಳೆಯಾದಂತೆ ಕಾಣುತ್ತಿದೆ. ಏಕೆಂದರೆ ಈ ಎರಡೂ ಪಕ್ಷಗಳು ಮತ ಗಳಿಸಲು ಜಾತಿ, ಸಮುದಾಯಗಳ ಓಲೈಕೆ ಮಾಡುವ ವಿಷಯ ಅಷ್ಟೇನೂ ಗುಟ್ಟಾಗಿ ಉಳಿದಿಲ್ಲ. ಆದರೂ ರಾಜಕೀಯ ಪಕ್ಷಗಳು ಇಂತಹ ವಿಷಯವನ್ನು ವೈಭವೀಕರಿಸಿ ಜನರ ಸೌಹಾರ್ದ ಹಾಳು ಮಾಡುವುದಂತೂ ನಿಜ.
ರಾಜ್ಯದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಗಮನಹರಿಸದ ಸರ್ಕಾರ ಹಾಗೂ ವಿರೋಧ ಪಕ್ಷಗಳು ಅಧಿಕಾರದ ದುರಾಸೆಗೆ ಪ್ರಜಾಪ್ರಭುತ್ವದ ವಿರೋಧಿಗಳಂತೆ ನಡೆದುಕೊಳ್ಳುತ್ತಿವೆ. ಇಂತಹ ಪ್ರಕರಣಗಳ ವಿಚಾರದಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡದೆ, ಪೊಲೀಸ್ ಹಾಗೂ ಕಾನೂನು ವ್ಯವಸ್ಥೆ ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು. ಆಗ ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಸರಿಯಾಗಿ ಇದ್ದು, ಜನ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತದೆ.
⇒ಹುಸೇನಬಾಷಾ, ತಳೇವಾಡ, ಹುಬ್ಬಳ್ಳಿ
ಕನ್ನಡದ ಹಿತಕ್ಕೆ ನೆರವಾಗಲಿ
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ವಿಷಯವು ರಾಜಕೀಯ ಗುಂಗಿನಿಂದ ಕೂಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಅ. 13). ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲೇ ವ್ಯಾಪ್ತಿ, ಮಿತಿಗಳ ಸೂಚನೆ ಇದೆ. ಇದು ‘ಕರ್ನಾಟಕ’ ಅಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂದಾಗಲೂ ಅದು ಬಹುಮಟ್ಟಿಗೆ ರಾಜ್ಯ ಮಟ್ಟದ ಸಮಾವೇಶ. ಹೊರಗಿನಿಂದ ಬರುವವರು ಕಡಿಮೆ. ಪರಿಷತ್ತು ಕನ್ನಡದ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ- ರಾಜ್ಯ ಸರ್ಕಾರ ಹಾಗೆ ಮಾನ್ಯ ಮಾಡಿದೆ. ರಾಜ್ಯದ ಬಜೆಟ್‌ನಿಂದ ಪರಿಷತ್ತಿಗೆ, ಸಮ್ಮೇಳನಕ್ಕೆ ಹಣ ನೀಡಲಾಗುತ್ತಿರುವುದರಿಂದ ಜವಾಬ್ದಾರಿ, ಉತ್ತರದಾಯಿತ್ವ ಇರಬೇಕಾಗುತ್ತದೆ. ಪರಿಷತ್ತು ಯಾವ ರೀತಿ ರೂಪುಗೊಳ್ಳಬೇಕು ಎಂದು ನ್ಯಾಯಮೂರ್ತಿ ಪಿ.ಕೆ.ಶ್ಯಾಮಸುಂದರ್ ಆಯೋಗವು 1987ರಲ್ಲೇ ಸಲಹೆಗಳನ್ನು ನೀಡಿತ್ತು. ಈಗ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರಬಹುದೇನೊ.
ಸಮ್ಮೇಳನದ ಆಯೋಜನೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪಾತ್ರವೂ ಇರುತ್ತದೆ. ಅದು ವ್ಯಕ್ತಿಕೇಂದ್ರಿತ ಆಗಿರಬಾರದು. ಇನ್ನು ಸಾಹಿತ್ಯೇತರ ವಿಷಯಗಳಿಗೆ ಯಾವ ಸ್ಥಾನ, ಆದ್ಯತೆ ಇರಬೇಕು? ಆಡಳಿತದಲ್ಲಿ ಕನ್ನಡ, ಪುಸ್ತಕೋದ್ಯಮ- ಇಂತಹ ವಿಷಯಗಳು ಆನುಷಂಗಿಕ. ಗಡಿ, ನೀರು, ಕೈಗಾರಿಕೆ, ಕೃಷಿ, ನಿರುದ್ಯೋಗ- ಹೀಗೆ ಎಲ್ಲ ಬಗೆಯ ಸಮಸ್ಯೆಗಳನ್ನೂ ಪ್ರಸ್ತಾಪಿಸಿ, ಠರಾವುಗಳನ್ನೂ ಕೈಗೊಂಡು ಏನನ್ನೂ ಸಾಧಿಸದ ಸ್ಥಿತಿ ಇದೆ. ಒಟ್ಟಿನಲ್ಲಿ ಸಮ್ಮೇಳನದ ಅಧ್ಯಕ್ಷರು ಸಾಹಿತಿಯಾಗಿರಬೇಕೋ ಸಾಹಿತ್ಯೇತರ ಸಾಧಕರಾಗಿರಬೇಕೋ ಎನ್ನುವುದು ಅಷ್ಟು ಮುಖ್ಯ ಅಲ್ಲ. ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕು, ಅದರಿಂದ ಕನ್ನಡದ ಹಿತಕ್ಕೆ ಸ್ವಲ್ಪವಾದರೂ ಸಹಾಯವಾಗಬೇಕು.
⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಪದವಿ ಪರೀಕ್ಷೆಗೂ ಇರಲಿ ವೆಬ್‌ಕಾಸ್ಟ್
ಹಿಂದಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವೆಬ್‌ಕಾಸ್ಟ್ ವ್ಯವಸ್ಥೆ ಅಳವಡಿಸುವ ಮೂಲಕ ನಕಲು ತಡೆಗೆ ದಿಟ್ಟ ಹೆಜ್ಜೆ ಇಡಲಾಗಿತ್ತು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಘಟಕ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನೂ ವೆಬ್‌ಕಾಸ್ಟ್ ಕಣ್ಗಾವಲಿನಲ್ಲಿ ನಡೆಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿಯೇ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪದವಿ ಪರೀಕ್ಷೆಗಳೂ ವೆಬ್‌ಕಾಸ್ಟ್‌ನ ಅಡಿಯಲ್ಲಿಯೇ ನಡೆಯುವಂತೆ ಆಗಬೇಕು.
ಪ್ರಸ್ತುತ ಪದವಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಎಂಬುದು ದಾಖಲೆಯಲ್ಲಿ ಮಾತ್ರ ಇದೆ. ಪದವಿ ಮುಗಿಸಿ ಉದ್ಯೋಗ ಪಡೆಯುವ ವಿದ್ಯಾರ್ಥಿಗಳಿಗೆ ಆ ಕಾರ್ಯಕ್ಕೆ ಅಗತ್ಯವಾದ ಕೌಶಲ, ನಿಯತ್ತು, ಪರಿಶ್ರಮದ ಬೆಲೆ ಅರ್ಥವಾಗಬೇಕಾದರೆ, ಪರೀಕ್ಷೆಯಲ್ಲಿ ಇಂತಹ ಕಣ್ಗಾವಲಿನ ವ್ಯವಸ್ಥೆ ಇರಬೇಕಾಗುತ್ತದೆ.
⇒ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.