ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 21:59 IST
Last Updated 15 ಅಕ್ಟೋಬರ್ 2024, 21:59 IST
   

ಇವಿಎಂ ವಿರುದ್ಧ ಸಲ್ಲದ ಟೀಕೆ

ಸೋಲು– ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ವ್ಯಕ್ತಿಯು ಜನರ ಮನಸ್ಸನ್ನು ಗೆಲ್ಲುತ್ತಾನೆ ಎನ್ನುವ ಮಾತಿದೆ. ಆದರೆ ಇಂತಹ ಸಮಚಿತ್ತವನ್ನು ನಮ್ಮ ರಾಜಕಾರಣಿಗಳು ಹೊಂದಿಲ್ಲ ಎಂಬುದಕ್ಕೆ ಇತ್ತೀಚಿನ ಹರಿಯಾಣ ಮತ್ತು ಜಮ್ಮು– ಕಾಶ್ಮೀರ ವಿಧಾನಸಭಾ ಚುನಾವಣೆಗಳ ಫಲಿತಾಂಶಕ್ಕೆ ಅವರು ಪ್ರತಿಕ್ರಿಯಿಸುತ್ತಿರುವ ರೀತಿಯೇ ಜ್ವಲಂತ ನಿರ್ದಶನ. ಇನ್ನೇನು ಜಯ ತಮ್ಮದೇ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷವು ಹರಿಯಾಣದಲ್ಲಿ ಸೋಲು ಕಂಡಿದೆ. ಅದೇ ರೀತಿ, ರಾಜ್ಯದಲ್ಲಿ ತಾವು ತಂದ ಕ್ರಾಂತಿಕಾರಿ ಬದಲಾವಣೆಗಳಿಂದ ಜಮ್ಮು– ಕಾಶ್ಮೀರದಲ್ಲಿ ಗೆಲುವು ತಮ್ಮದೇ ಎಂದು ನಂಬಿದ್ದ ಬಿಜೆಪಿಯು ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಇದು ಜನರ ತೀರ್ಮಾನ. ಪ್ರಜಾಪ್ರಭುತ್ವದ ವಿಶೇಷವೇ ಇದು. ಆದರೆ ಕಾಂಗ್ರೆಸ್ ಮಾತ್ರ ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಇಲ್ಲಿ ಇವಿಎಂನಲ್ಲಿ ಮೋಸವಾಗಿದೆ ಎಂದು ದೂರಿ ಹತಾಶ ಭಾವನೆಯನ್ನು ಹೊರಹಾಕಿದೆ.

ಇವಿಎಂ ಅನ್ನು ದುರ್ಬಳಕೆ ಮಾಡಿಕೊಂಡು ಗೆಲ್ಲಬಹುದು ಎಂದಿದ್ದರೆ ಜಮ್ಮು– ಕಾಶ್ಮೀರದಲ್ಲಿ ಬಿಜೆಪಿ ಸೋಲುವ ಸಂಭವವೇ ಇರುತ್ತಿರಲಿಲ್ಲ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿಯೂ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿರುತ್ತಿತ್ತು. ಸೋಲಿನ ಹತಾಶೆಯ ಬೇಗೆಯಿಂದ ಇವಿಎಂಗಳಲ್ಲಿ ಸಲ್ಲದ ದೋಷ ಹುಡುಕುವುದು ತರವಲ್ಲ. ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್‌ ಸೋಲನ್ನು ಒಪ್ಪಿಕೊಂಡು ಆತ್ಮವಿಮರ್ಶೆ ಮಾಡಿಕೊಂಡರೆ, ಈ ಸೋಲೇ ಮುಂದಿನ ಗೆಲುವಿಗೆ ಸೋಪಾನವಾಗಬಲ್ಲದು. ಇಲ್ಲದಿದ್ದರೆ, ಮುಂದೆ ಇರುವುದು ಏಳಲಾರದ ಪ್ರಪಾತ ಮತ್ತು ಏಕಪಕ್ಷದ ಸರ್ವಾಧಿಕಾರದ ಆಡಳಿತ.

ADVERTISEMENT

-ಸತ್ಯಬೋಧ, ಬೆಂಗಳೂರು

ಲಂಚ: ಮಾಹಿತಿ ಮುಚ್ಚಿಡುವುದೂ ಅಪರಾಧ

‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹಣ ಪಡೆದು ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ನಾನು ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಕರ್ಪೂರ ಹಚ್ಚುತ್ತೇನೆ. ಕುಮಾರಸ್ವಾಮಿ ಅವರ ಪರವಾಗಿ ಯಾರಾದರೂ ಬಂದು, ಅವರು ಹಣ ಪಡೆದಿಲ್ಲ ಎಂದು ದೇವಸ್ಥಾನದಲ್ಲಿ ಆಣೆ ಮಾಡುತ್ತಾರಾ’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿರುವುದರ ಜೊತೆಗೆ, ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಲೂ ತಯಾರಿರುವುದಾಗಿ ಹೇಳಿದ್ದಾರೆ. ಲಂಚ ಪಡೆದದ್ದಕ್ಕೆ ಶಾಸಕರ ಬಳಿ ದಾಖಲೆಗಳಿದ್ದರೆ ಇಷ್ಟು ವರ್ಷ ಏಕೆ ಸುಮ್ಮನಿದ್ದರು? ಒಬ್ಬ ಜನಪ್ರತಿನಿಧಿಯಾಗಿ ಲಂಚದ ವಿಷಯ ಗಮನಕ್ಕೆ ಬಂದಿದ್ದರೆ ಕೂಡಲೇ ಪೊಲೀಸರಿಗೋ ಲೋಕಾಯುಕ್ತಕ್ಕೋ ಅಥವಾ ನ್ಯಾಯಾಲಯಕ್ಕೋ ದೂರು ನೀಡಬೇಕಿತ್ತು. ಇಂತಹ ವಿಷಯವನ್ನು ಮುಚ್ಚಿಡುವುದೂ ಅಪರಾಧ ಅಲ್ಲವೇ?

ಈಗಲೂ ದಾಖಲೆಗಳು ಇದ್ದರೆ ದೂರು ನೀಡಿ, ಕುಮಾರಸ್ವಾಮಿ ಅವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಲಿ ಅಥವಾ ದಾಖಲೆಗಳಿಲ್ಲದೆ ವೃಥಾ ಅಪವಾದ ಹೊರಿಸುತ್ತಿದ್ದರೆ, ಕುಮಾರಸ್ವಾಮಿಯವರೇ ಬಾಲಕೃಷ್ಣ ಅವರ ವಿರುದ್ಧ ದೂರು ನೀಡಲಿ. ದೇವರ ಮೇಲೆ ಮಾಡುವ ಆಣೆ, ಪ್ರಮಾಣಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದ ಸ್ಥಿತಿ ಇರುವ ಕಾಲ ಇದು. ಯಾರೂ ದೂರು ನೀಡದೆ ಬರೀ ಹೇಳಿಕೆಗಳಲ್ಲೇ ಕಾಲ ಕಳೆದರೆ ‘ನಾನು ಹೊಡೆದಂತೆ ಮಾಡ್ತೀನಿ, ನೀನು ಅತ್ತಂತೆ ಮಾಡು’ ಎಂದು ಇಬ್ಬರೂ ನಾಟಕ ಆಡಿದಂತೆ ಅನ್ನಿಸುತ್ತದೆ ಅಷ್ಟೆ. ಜೊತೆಗೆ ಇಬ್ಬರ ಮೇಲೂ ಜನ ಅನುಮಾನ ಪಡುವಂತೆ ಆಗುತ್ತದೆ. ಯಾರೊಬ್ಬರೂ ದೂರು ನೀಡದೇ ಇದ್ದಾಗ ಸಂಬಂಧಪಟ್ಟವರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಬೇಕು. ಆಗ ಇಂತಹ ನಾಲಿಗೆಚಪಲ ವೀರರಿಗೆ ಕಡಿವಾಣ ಬೀಳುತ್ತದೆ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಇಲ್ಲೂ ತಪ್ಪಲಿ ಮಾಲಿನ್ಯದ ಉಪಟಳ

ದೆಹಲಿಯಲ್ಲಿ ಬರುವ ಜನವರಿವರೆಗೆ ಪಟಾಕಿ ಬಳಕೆ ಮೇಲೆ ಅಲ್ಲಿನ ಸರ್ಕಾರ ನಿಷೇಧ ಹೇರಿರುವುದು (ಪ್ರ.ವಾ.,ಅ. 15) ಸರಿಯಾಗಿದೆ. ಇಂತಹ ಜನೋಪಯೋಗಿ ಕ್ರಮಗಳಿಗೆ ಸರ್ಕಾರಗಳು ಆದ್ಯತೆ ನೀಡಬೇಕು. ಕರ್ನಾಟಕದಲ್ಲೂ ಇಂತಹ ಕ್ರಮ ಜರುಗಿಸಿದರೆ ಜನಸಮೂಹಕ್ಕೆ ಹಾಗೂ ಪಕ್ಷಿ– ಪ್ರಾಣಿಗಳಿಗೆ ಶಬ್ದಮಾಲಿನ್ಯ, ವಾಯುಮಾಲಿನ್ಯದಿಂದ ಉಂಟಾಗುವ ಉಪದ್ರವದಿಂದ ಮುಕ್ತಿ ಸಿಗುತ್ತದೆ. ಕೆಲವೇ ಮಂದಿಯ ಒಳಿತಿಗಾಗಿ ಇಡೀ ರಾಜ್ಯದ ಜನರು ಮಾಲಿನ್ಯದ ಪರಿಣಾಮ ಎದುರಿಸುವಂತೆ ಮಾಡುವುದು ಧರ್ಮವಲ್ಲ. ಪಟಾಕಿ ತಯಾರಿಸುವವರ ಕಾಯಕವನ್ನು ದೃಷ್ಟಿಯಲ್ಲಿಟ್ಟು ಈ ಕಾರ್ಯ ನಿರ್ವಹಿಸದೇ ಇರುವುದು ಸಹ ಸರಿಯಲ್ಲ. ಅವರು ಪರ್ಯಾಯ ಕೆಲಸಕ್ಕೆ ಮುಂದಾಗಲು ನೆರವು ನೀಡುವುದು ಒಳ್ಳೆಯದು.⇒

ಬಾಲಕೃಷ್ಣ ಎಂ.ಆರ್., ಬೆಂಗಳೂರು

ದಸರಾ ರಜೆ ಮೊಟಕುಗೊಳಿಸಿದ್ದು ಎಷ್ಟು ಸರಿ?

ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದೇ 3ರಿಂದ 20ರವರೆಗೆ ದಸರಾ ರಜೆಯನ್ನು ನೀಡಿ ಆದೇಶಿಸಿದೆ. ಆದರೆ ಕೆಲವು ಖಾಸಗಿ ಶಾಲೆಗಳು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ, 18 ದಿನಗಳ ರಜೆಯನ್ನು ಕಡಿತಗೊಳಿಸಿ, ಏಳೆಂಟು ದಿನಗಳಷ್ಟೇ ರಜೆ ನೀಡಿ ಈಗಾಗಲೇ ಶಾಲೆಗಳನ್ನು ಪುನಃ ಆರಂಭಿಸಿವೆ. ಕ್ರೈಸ್ತ ಸಮುದಾಯಕ್ಕೆ ಸೇರಿದ ಶಾಲೆಗಳು ದಸರಾ ರಜೆಯನ್ನು ಕಡಿತಗೊಡಿಸಿ, ಬಾಕಿ ಉಳಿದ ರಜೆಯನ್ನು ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಸರಿದೂಗಿಸಲು ಅವಕಾಶ ಇದೆ. ಉಳಿದ ಶಾಲೆಗಳು ದಸರಾ ರಜೆ ನಿಯಮ ಪಾಲಿಸಲು ಸೂಚಿಸಲಾಗಿದೆ. ಆದರೆ ಇಂತಹ ಶಾಲೆಗಳು ಕೂಡ ಮನಸೋ ಇಚ್ಛೆ ದಸರಾ ರಜೆ ನೀಡಿವೆ.

ಶಾಲೆ ಇದ್ದಾಗ ಪಠ್ಯ ವಿಷಯಕ್ಕೆ ಸಂಬಂಧಪಟ್ಟಂತೆ ಮಕ್ಕಳ ನಿರಂತರ ಕಲಿಕೆ ಇದ್ದೇ ಇರುತ್ತದೆ. ಆದರೆ ದಸರಾ ರಜೆಯ ಮಜವನ್ನು ಮಕ್ಕಳು ಅರ್ಥಪೂರ್ಣವಾಗಿ ಆಚರಿಸದೇ ಇದ್ದರೆ ಹೇಗೆ? ಒತ್ತಡರಹಿತವಾಗಿ ರಜೆಯ ಮಜವನ್ನು ಅನುಭವಿಸಿದರೆ ಮಕ್ಕಳ ಚಿಂತನಾಲಹರಿ ಬದಲಾಗಿ ಅವರ ಜ್ಞಾನ ವಿಸ್ತಾರವಾಗುತ್ತದೆ. ಸ್ನೇಹ, ಬಾಂಧವ್ಯ ಹೆಚ್ಚಾಗಿ ಏಕಾಂಗಿತನ ದೂರವಾಗುತ್ತದೆ. ಇಷ್ಟೇ ಅಲ್ಲದೆ ಕೂಡು ಕುಟುಂಬದ ಜೊತೆ ಸಂಬಂಧಿಕರ ಊರುಗಳಿಗೆ ಮಕ್ಕಳು ಭೇಟಿ ನೀಡುವುದರ ಪರಿಣಾಮವಾಗಿ ವಿವಿಧ ಸ್ಥಳಗಳ ಪರಿಚಯ, ವಿವಿಧ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಮತ್ತು ಬದುಕಿನ ವೃತ್ತಿಗಳ ಅರಿವು ಸಿಕ್ಕಂತಾಗುತ್ತದೆ. ಮಕ್ಕಳ ಮನಸ್ಸನ್ನು ಪ್ರಫುಲ್ಲಗೊಳಿಸಲು ನೆರವಾಗುತ್ತದೆ.
ಆದರೆ ಇವೆಲ್ಲವುಗಳಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿರುವ ಶಾಲೆಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.