ಪ್ರಾಣಿ ಸಂರಕ್ಷಣೆಗೂ ಇರಲಿ ಪ್ರೀತಿ
ನಾಡಹಬ್ಬ ದಸರಾದಲ್ಲಿ ಪ್ರಾಣಿಪ್ರಿಯರಿಂದ ವ್ಯಕ್ತವಾದ ಪ್ರೀತಿಯನ್ನು ನಾವೆಲ್ಲ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇವೆ. ‘ಅರ್ಜುನ’ ಆನೆ ಇಲ್ಲವೆಂಬ ಬೇಸರದ ಸಂಗತಿಯನ್ನು ಬಿಟ್ಟರೆ, ಆನೆಗಳ ಮೇಲೆ ಜನ ತೋರಿಸಿದ ಪ್ರೀತಿಯಂತೂ ಮನಮೋಹಕ. ಈ ಬಾರಿಯ ದಸರಾದಲ್ಲಿ ಎಲ್ಲ ಆನೆಗಳಿಗಿಂತಲೂ ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದು, ಜನ ಪ್ರೀತಿಯಿಂದ ತಿಂಡಿಪೋತ, ತುಂಟ ಎಂದೆಲ್ಲ ಕರೆಯುವ ಭೀಮ. ಅಂಬಾರಿಯನ್ನು ಹೊತ್ತು ಸಾಗಿದ ದಾರಿಯಲ್ಲಿ ಪ್ರೇಕ್ಷಕರು ‘ಭೀಮ’ ಎಂದು ಕರೆದ ತಕ್ಷಣ ತನ್ನ ಸೊಂಡಿಲಿನಿಂದ ಆತ ಪ್ರತಿಕ್ರಿಯಿಸುತ್ತಿದ್ದ ಮನಮೋಹಕ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿದೆ.
ಹೀಗೆ ನಮ್ಮ ಜನರು ಪ್ರಾಣಿಗಳ ಮೇಲೆ ತೋರಿಸುವ ಪ್ರೀತಿಯು ಅವುಗಳ ಸಂರಕ್ಷಣೆಗೆ ಕಾರಣವಾಗಬೇಕು. ಈ ಕಾರ್ಯಕ್ಕೆ ಅರಣ್ಯ ಅವಶ್ಯಕ. ಆದ್ದರಿಂದ ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು.
-ರಾಮ್, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ಚಾರ್‌ಧಾಮ್‌ಗೆ ಸಹಾಯಧನ: ಮಾರ್ಗ ಸರಳವಾಗಲಿ
2024–25ನೇ ಸಾಲಿನಲ್ಲಿ ಕರ್ನಾಟಕದಿಂದ ಮೊದಲ ಬಾರಿಗೆ ಚಾರ್‌ಧಾಮ್ ಯಾತ್ರೆ ಕೈಗೊಂಡವರಿಗೆ ತಲಾ₹ 20,000 ಸಹಾಯಧನ ನೀಡುವ ಸಂಬಂಧ ಸರ್ಕಾರ ಅರ್ಜಿ ಆಹ್ವಾನಿಸಿರುವುದು ಸ್ವಾಗತಾರ್ಹ. ಅರ್ಜಿ ಸಲ್ಲಿಸಲು ಯಾತ್ರೆ ಕೈಗೊಂಡ ಪುರಾವೆಗಾಗಿ ಹಲವಾರು ದಾಖಲೆಗಳೊಂದಿಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಪ್ರತಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಯಾತ್ರಾರ್ಥಿಯ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಧಾರ್ ಕಾರ್ಡ್ ಅನ್ನು ದಾಖಲೆಯನ್ನಾಗಿ ಪರಿಗಣಿಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಚುನಾವಣಾ ಗುರುತಿನ ಚೀಟಿ ಮತ್ತು ಬ್ಯಾಂಕ್ ಪಾಸ್‌ಬುಕ್‌ನಲ್ಲಿನ ವಿಳಾಸವನ್ನು ಪರಿಗಣಿಸಲಾಗುತ್ತದೆ. ಆದರೆ ಯಾರೂ ರೇಷನ್ ಕಾರ್ಡನ್ನು ದಾಖಲೆಯನ್ನಾಗಿ ಪರಿಗಣಿಸುತ್ತಿಲ್ಲ. ಒಂದು ವೇಳೆ ಸಹಾಯಧನವನ್ನು ಬಿಪಿಎಲ್ ಕಾರ್ಡ್ ಹೊಂದಿದವರಿಗಷ್ಟೇ ನೀಡುವುದಾದಲ್ಲಿ ರೇಷನ್ ಕಾರ್ಡ್ ಪ್ರತಿಯನ್ನು ಕೇಳುವುದು ಅರ್ಥಪೂರ್ಣವಾಗುತ್ತದೆ. ಚುನಾವಣಾ ಗುರುತಿನ ಚೀಟಿ ಪಡೆದುಕೊಳ್ಳಲು ಬಹಳ ತಡವಾಗುತ್ತದೆ. ರೇಷನ್ ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸುವುದಂತೂ ಕಷ್ಟಕರ. ಈ ಎಲ್ಲಾ ಕಾರಣಗಳಿಂದ ಚಾರ್‌ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಸಹಾಯಧನ ಪಡೆಯುವುದರಿಂದ ವಂಚಿತರಾಗಬಹುದು. ಆದ್ದರಿಂದ ಸಹಾಯಧನ ಪಡೆದುಕೊಳ್ಳಲು, ಸುಲಭವಾಗಿ ಮಾಡಿಸಬಹುದಾದ ಆಧಾರ್ ಕಾರ್ಡನ್ನು ಮಾತ್ರ ಪರಿಗಣಿಸಿ ಯಾತ್ರಾರ್ಥಿಗಳು ಸಹಾಯಧನದಿಂದ ವಂಚಿತರಾಗುವುದನ್ನು ತಪ್ಪಿಸಬೇಕಾಗಿದೆ.
-ಜಿ.ನಾಗೇಂದ್ರ ಕಾವೂರು, ಸಂಡೂರು
ಬೆಂಗಳೂರಿಗೆ ಬೇಕು ಬಹುಪ್ರವೇಶಾವಕಾಶ
ತುಮಕೂರು ರಸ್ತೆಯ ಜೊತೆಗೆ ಬೆಂಗಳೂರು ಪ್ರವೇಶಕ್ಕೆ ಹೊಸದಾಗಿ ಬಹುಪ್ರವೇಶದ ಅವಕಾಶಗಳನ್ನು ಕಲ್ಪಿಸ ಬೇಕೆಂದು ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ಅವರು ಅಭಿಪ್ರಾಯಪಟ್ಟಿರುವುದು (ದಿನದ ಟ್ವೀಟ್, ಅ. 15) ಸೂಕ್ತ ಹಾಗೂ ಸಮಂಜಸ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಬೆಂಗಳೂರಿನ ಪ್ರವೇಶಕ್ಕೆ ಇರುವುದು ತುಮಕೂರು ಮಾರ್ಗದ ಹೆದ್ದಾರಿ ಒಂದೇ. ಈ ಹೆದ್ದಾರಿಯಲ್ಲಿ ಬೆಂಗಳೂರಿನ ಗೊರಗುಂಟೆಪಾಳ್ಯದವರೆಗೆ ಸರಾಗವಾಗಿ ಬರಬಹುದು. ಅಲ್ಲಿಂದ ಮುಂದಕ್ಕೆ ಬೆಂಗಳೂರಿನತ್ತ ಪ್ರಯಾಣ ‘ಸಾಕಪ್ಪಾ ಸಾಕು’ ಎನಿಸುತ್ತದೆ. ದಿನದ ಯಾವ ಹೊತ್ತಿನಲ್ಲೂ ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಕಾಡುತ್ತಿರುತ್ತದೆ. ಹೆದ್ದಾರಿಯಲ್ಲಿ ಜಿಂಕೆಯಂತೆ ವೇಗವಾಗಿ ಬರುವ ವಾಹನಗಳು ಗೊರಗುಂಟೆಪಾಳ್ಯದಿಂದ ಮುಂದಕ್ಕೆ ಆಮೆವೇಗ ಪಡೆಯುತ್ತವೆಂದರೆ ಇಲ್ಲಿನ ಪರಿಸ್ಥಿತಿಯನ್ನು ಊಹಿಸಬಹುದು. ಪ್ರಯಾಣಿಕರು ಅಥವಾ ಸಂಚಾರಿಗರು ಅನುಭವಿಸುವ ಕಿರಿಕಿರಿ ಅವರ್ಣನೀಯ. ಈ ಕಾರಣದಿಂದ ಭಾಸ್ಕರ ರಾವ್ ಅವರ ಅನಿಸಿಕೆ ಗಮನಾರ್ಹ.
-ಆರ್.ಎಸ್.ಅಯ್ಯರ್, ತುಮಕೂರು
ಹೊಳೆಯಾದ ರಸ್ತೆ, ಕೆರೆಯಾದ ಬಯಲು
ನಗರಗಳು ಬೆಳೆಯುತ್ತಾ ಹೋದಂತೆ ನಾಗರಿಕರು ವಿವಿಧ ರೀತಿಯಲ್ಲಿ ಸಂಕಷ್ಟಗಳನ್ನು ಅನುಭವಿಸುವಂತಾಗಿದೆ. ಹಾಗೆ ನೋಡಿದರೆ, ಮಂಗಳವಾರ ಇಡೀ ದಿನ ಬಿದ್ದ ಮಳೆಗೆ ಬೆಂಗಳೂರಿನ ಹೊರ ವಲಯಗಳಲ್ಲಿ ರಸ್ತೆಗಳು ಹೊಳೆಗಳಂತಾಗಿ, ಬಯಲುಗಳು ಕೆರೆಗಳಂತಾಗಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ ಮೊದಲು ಅಲ್ಲೆಲ್ಲ ಬೆಳೆಗಳನ್ನು ಬೆಳೆಯುವ ಗದ್ದೆಗಳು ಇದ್ದವು ತಾನೇ. ಹೆಚ್ಚಿನ ಮಳೆ ಬೀಳುವ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಈಗಲೂ ಗದ್ದೆಗಳಲ್ಲಿ ಮಳೆ ನೀರು ತುಂಬಿರುವುದು ಮಾಮೂಲೇ.
ಬೇರೆಯವರನ್ನು ದೂರುವ ಬದಲು, ನಾವು ಮನೆ ಕಟ್ಟುವಾಗ ಸೆಟ್‌ಬ್ಯಾಕ್ ಬಿಡದಿರುವುದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚಿನ ಮಹಡಿಗಳನ್ನು ಕಟ್ಟುವುದು, ಕಟ್ಟಡ ತ್ಯಾಜ್ಯವನ್ನು ಅಲ್ಲಲ್ಲಿಯೇ ಬಿಡುವುದು, ವಾಹನಗಳನ್ನು ಮನೆಯ ಆವರಣದೊಳಗೆ ನಿಲ್ಲಿಸದೆ ರಸ್ತೆಯಲ್ಲಿ ನಿಲ್ಲಿಸುವುದು, ಪ್ಲಾಸ್ಟಿಕ್ ಚೀಲಗಳನ್ನು ವಿಪರೀತ ಬಳಸಿ ಅಲ್ಲಿ ಇಲ್ಲಿ ಎಸೆಯುವಂತಹ ನಮ್ಮ ದುರಭ್ಯಾಸಗಳನ್ನು ಸರಿಪಡಿಸಿಕೊಂಡರೆ ಸಾಕು. ನಮ್ಮ ಹಲವಾರು ಸಮಸ್ಯೆಗಳಿಗೆ ತನ್ನಿಂದ ತಾನೇ ಉತ್ತರಗಳು ದೊರಕಿಯಾವು.
-ಬಿ.ಎನ್.ಭರತ್, ಬೆಂಗಳೂರು
ಜೈಲು: ಭೂಗತ ಲೋಕದ ಅಡ್ಡಾ ಅಲ್ಲ
ಕಾರಾಗೃಹವು ಅಪರಾಧಿಗಳ ಪಾಲಿಗೆ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಂಡು, ಪರಿವರ್ತನೆ ಹೊಂದುವ ಒಂದು ಸ್ಥಳ. ಆದರೆ ಇತ್ತೀಚಿನ ಪ್ರಕರಣಗಳಾದ ಚಿತ್ರನಟ ದರ್ಶನ್ ಜೈಲುವಾಸ, ಗುರ್ಮೀತ್ ರಾಮ್ ರಹೀಂ ಸಿಂಗ್‌ಗೆ ಪೆರೋಲ್ ನೀಡಿಕೆಯಂತಹವು ಇಂತಹದ್ದೊಂದು ನಂಬಿಕೆ ಹುಸಿಯಾಗುವಂತೆ ಮಾಡಿವೆ. ಮೊನ್ನೆ ಮುಂಬೈಯಲ್ಲಿ ನಡೆದ ಬಾಬಾ ಸಿದ್ದೀಕಿ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ಲಾರೆನ್ಸ್ ಬಿಷ್ಣೋಯ್ ಕೂಡ ಹಲವು ವರ್ಷಗಳಿಂದಲೂ ಜೈಲುವಾಸ ಅನುಭವಿಸುತ್ತಿದ್ದಾನೆ. ಕೆಲವರು ಜೈಲನ್ನೇ ಸುರಕ್ಷಿತ ತಾಣವನ್ನಾಗಿಸಿಕೊಂಡು ಭೂಗತ ಜಗತ್ತನ್ನು ನಿಯಂತ್ರಿಸುತ್ತಿದ್ದಾರೆ. ಜೈಲು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗದಿದ್ದರೆ, ಗೂಂಡಾಗಿರಿ, ಕ್ರೂರ ಕೆಲಸಗಳನ್ನು ಮಾಡಲು ಯಾರೂ ಹಿಂಜರಿಯದ ವಾತಾವರಣ ನಿರ್ಮಾಣವಾಗುತ್ತದೆ. ಆಗ ಮುಂದೆ ಬಹು ದೊಡ್ಡ ಕಂಟಕವನ್ನು ಎದುರಿಸಬೇಕಾಗುತ್ತದೆ.⇒ಸುರೇಂದ್ರ ಪೈ, ಭಟ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.