ADVERTISEMENT

ವಾಚಕರ ವಾಣಿ: 11 ಜೂನ್ 2024

ವಾಚಕರ ವಾಣಿ
Published 11 ಜೂನ್ 2024, 0:17 IST
Last Updated 11 ಜೂನ್ 2024, 0:17 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಯುವ ಜೋಡಿಯ ಮಾದರಿ ನಡೆ

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಂಪತಿ ವಿಚ್ಛೇದನ ನೀಡಿದ ಸುದ್ದಿ ತಿಳಿದು ಮನಸ್ಸಿಗೆ ಬೇಜಾರಾದರೂ ಅವರು ವಿಚ್ಛೇದನ ನೀಡಿದ ಕ್ರಮ ಮಾದರಿಯಾಗಿದೆ ಎನಿಸಿತು. ದೇಶದಲ್ಲಿ ದಿನಂಪ್ರತಿ ಬಹಳಷ್ಟು ವಿಚ್ಛೇದನಗಳು ನಡೆಯುತ್ತಿರುತ್ತವೆ. ಇವುಗಳಲ್ಲಿ ಎಷ್ಟೋ ಪ್ರಕರಣಗಳು ಕಲಹ, ಕೊಲೆ, ಹಲ್ಲೆ, ವೈಮನಸ್ಸು, ಕೋರ್ಟು ಕಚೇರಿ, ಪರಸ್ಪರ ದೋಷಾರೋಪಗಳಿಂದ ತಾರ್ಕಿಕ ಅಂತ್ಯ ಕಾಣುತ್ತವೆ. ಆದರೆ ಚಂದನ್ ಮತ್ತು ನಿವೇದಿತಾ ಜೋಡಿಯು ವಿಚ್ಛೇದನ ನೀಡುವ ದಿನವೂ ಒಂದೇ ಮನೆಯಲ್ಲಿ ವಾಸವಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಿ, ವಿಚ್ಛೇದನದ ಪ್ರಕ್ರಿಯೆಗಳನ್ನು ಮುಗಿಸಿ, ನಂತರ ನಗುನಗುತ್ತ, ಪರಸ್ಪರ ಕೈಹಿಡಿದು ತೆರಳಿತು. ವಿಚ್ಛೇದನ ನೀಡಿದ ನಂತರವೂ ತಾವು ಪರಸ್ಪರರನ್ನು ಗೌರವಿಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ಜೋಡಿಯ ನಡೆ ನಿಜಕ್ಕೂ ಮಾದರಿ ಆಗಿದೆ.

– ಸುರೇಶ ಅರಳಿಮರ, ಬಾದಾಮಿ

ADVERTISEMENT

ಅಚ್ಚರಿ ತಾರದ ಮುಖಭಂಗ

1992ರಲ್ಲಿ ಬ್ರಿಟನ್ನಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ಬಿಬಿಸಿ ಪ್ರಕಟಿಸಿದ್ದ ಮತಗಟ್ಟೆ ಸಮೀಕ್ಷೆ, ‘ಯಾವುದೇ ಪಕ್ಷಕ್ಕೂ ಬಹುಮತ ಸಾಧ್ಯವಿಲ್ಲ, ಆದರೆ ಆಡಳಿತಾರೂಢ ಕನ್ಸರ್ವೇಟಿವ್ (ಟೋರಿ) ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ’ ಎಂದು ತಿಳಿಸಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಕನ್ಸರ್ವೇಟಿವ್ ಪಕ್ಷ ಅನಿರೀಕ್ಷಿತ ಬಹುಮತ ಪಡೆದಿತ್ತು. ಚುನಾವಣಾಪೂರ್ವ ಸಮೀಕ್ಷೆಗಳೆಲ್ಲವೂ ಲೇಬರ್ ಪಕ್ಷ ಬಹುಮತ ಪಡೆಯುತ್ತದೆ ಎಂದು ಘೋಷಿಸಿದ್ದನ್ನು ಪರಿಗಣಿಸಿದರೆ ಬಿಬಿಸಿಯ ಮತಗಟ್ಟೆ ಸಮೀಕ್ಷೆಯ ತಪ್ಪು ಸಣ್ಣದಾಗಿ ಕಾಣಿಸಬಹುದು. ಆದರೆ ಈ ಸಮೀಕ್ಷೆಯನ್ನು ನಡೆಸಿದ್ದ ಪರಿಣತರು ಮಾತ್ರ ಇದನ್ನು ಹಗುರವಾಗಿ ಪರಿಗಣಿಸಲಿಲ್ಲ. ಮತದಾರರ ಮನದಾಳವನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದೇ ಹೋದದ್ದು ಅವರನ್ನು ಕಾಡಿತ್ತು. ಆದ ತಪ್ಪನ್ನು ಹೇಗೆ ಸರಿಪಡಿಸಬಹುದೆಂಬ ಕಡೆ ಅವರು ಗಮನಹರಿಸಿದ ಪರಿಣಾಮವೇ ಬಿಬಿಸಿ ಇನ್ನೆರಡು ವಾಹಿನಿಗಳ (ಐಟೀವಿ ಮತ್ತು ಸ್ಕೈ ಟೀವಿ) ಜೊತೆಗೂಡಿ ಪ್ರಕಟಿಸುವ ಚುನಾವಣೋತ್ತರ ಸಮೀಕ್ಷೆ. ಇದು ಇಂದು ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆಗಳಲ್ಲಿ ಒಂದು ಎಂದುಪರಿಗಣಿಸಲ್ಪಟ್ಟಿದೆ. ಮತದಾನದ ದಿನದ ರಾತ್ರಿ 10 ಗಂಟೆಗೆ ಪ್ರಕಟಿಸಲಾಗುವ ಈ ಸಮೀಕ್ಷೆಯನ್ನು ಬ್ರಿಟಿಷ್ ಪ್ರಜೆಗಳು ಫಲಿತಾಂಶದಷ್ಟೇ ಕಾತರದಿಂದ ವೀಕ್ಷಿಸುತ್ತಾರೆ.

ಭಾರತೀಯ ಚುನಾವಣಾ ಸಮೀಕ್ಷಕರು ಬಿಬಿಸಿ ಆಗ ಎದುರಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿನ ಮುಜುಗರ ಎದುರಿಸಬೇಕಾದ ಪರಿಸ್ಥಿತಿ ಬಂದದ್ದು 2004ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ. ಅಂದು ಅಧಿಕಾರದಲ್ಲಿದ್ದ ಎನ್‌ಡಿಎ ಅಧಿಕಾರ ಕಳೆದುಕೊಳ್ಳಬಹುದೆಂದು ಊಹಿಸುವಲ್ಲಿ ಎಲ್ಲ ಸಮೀಕ್ಷಕರೂ ವಿಫಲರಾಗಿದ್ದರು. ಆದರೆ ಈ ವೈಫಲ್ಯದಿಂದ ಪಾಠ ಕಲಿಯಬೇಕೆನ್ನುವ ಬಯಕೆ ಅವರಲ್ಲಿ ಇದ್ದಂತಿರಲಿಲ್ಲ. ಅವರನ್ನು ಪೋಷಿಸುವ ಮಾಧ್ಯಮಗಳಿಗೂ ಅದು ಬೇಕಿರಲಿಲ್ಲ. ಅದಾಗಲೇ ಪ್ರಚಾರ ಸಾಧನಗಳಾಗಿ ಬದಲಾಗುತ್ತಿದ್ದ ಕೆಲವು ದೃಶ್ಯ ಮಾಧ್ಯಮಗಳು ಈ ಸಮೀಕ್ಷಕರನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾರಂಭಿಸಿದ್ದವು. ಹಲವು ಬಾರಿ ತಪ್ಪು ಸಮೀಕ್ಷೆ ಮಾಡಿದವರು ಈ ಮಾಧ್ಯಮಗಳಲ್ಲಿ ಸ್ಟಾರ್ ಸಮೀಕ್ಷಕರು ಎನಿಸಿಕೊಂಡರು. ಎಂದೋ ಈ ವೃತ್ತಿಯಿಂದ ನಿವೃತ್ತಿ ಪಡೆಯಬೇಕಿದ್ದವರು ಅನುಭವಿಗಳಂತೆ ಅಭಿಪ್ರಾಯ ನೀಡುತ್ತಿದ್ದರು. ಹೀಗಿರುವಾಗ, ಈ ಎಲ್ಲ ಸಮೀಕ್ಷಕರು ಮತ್ತು ಮಾಧ್ಯಮಗಳು ಮೊನ್ನೆ ಇನ್ನೊಮ್ಮೆ ಹೀನಾಯವಾಗಿ ಮುಖಭಂಗ ಅನುಭವಿಸಿದ್ದು ಆಶ್ಚರ್ಯ ಉಂಟು ಮಾಡುವುದಿಲ್ಲ. ಆದರೆ 20 ವರ್ಷಗಳ ಹಿಂದೆ ಪ್ರಹಸನದಂತೆ ತೋರಿದ್ದು ಈ ಬಾರಿ ದುರಂತದಂತೆ ಕಾಣಿಸುತ್ತಿದೆ. ಇನ್ನಾದರೂ ಇವರು ಪಾಠ ಕಲಿಯುವರೆಂದು ಯಾರಾದರೂ ಭಾವಿಸಿದರೆ ಅವರಂತಹ ಮುಗ್ಧರು ಯಾರೂ ಇರಲಾರರು.

– ಸುನೀಲ ನಾಯಕ, ಬೆಂಗಳೂರು

ಶಿಕ್ಷಕರ ಕ್ಷೇತ್ರ: ಶಿಕ್ಷಕರೇ ಅಭ್ಯರ್ಥಿಗಳಾಗಲಿ

ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು. ಇದು ಹೆಸರಿಗೆ ಮಾತ್ರ ಶಿಕ್ಷಕರ ಕ್ಷೇತ್ರ. ಅದಕ್ಕೆ ಅಭ್ಯರ್ಥಿಯಾಗಿ ನಿಲ್ಲಲು ವೃತ್ತಿ ಸಂಬಂಧಿತ ಮಾನದಂಡವೇ ಇಲ್ಲದಿರುವುದು ವಿಪರ್ಯಾಸ. ಈ ಕ್ಷೇತ್ರಕ್ಕೆ ಯಾರು ಬೇಕಾದರೂ ಸ್ಪರ್ಧೆ ಮಾಡುವುದಾದರೆ ಶಿಕ್ಷಕರ ಕ್ಷೇತ್ರ ಎಂದು ಏಕೆ ಕರೆಯಬೇಕು? ಈ ಕ್ಷೇತ್ರದ ಚುನಾವಣಾ ಸ್ಪರ್ಧೆಗೆ ಇಂತಹ ಮಾನದಂಡಗಳು ಏಕಿಲ್ಲ? ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯವಿದೆ.

ಶಿಕ್ಷಕರ ಕ್ಷೇತ್ರ ಎಂದ ಮೇಲೆ ಮೊದಲನೆಯದಾಗಿ ಶಿಕ್ಷಕರು ಮಾತ್ರ ಸ್ಪರ್ಧೆ ಮಾಡುವಂತೆ ನಿಯಮ ಜಾರಿಗೆ ಬರಬೇಕು. ಎರಡನೆಯದು, ಕನಿಷ್ಠ 15 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರಬೇಕು ಇಲ್ಲವೆ ನಿವೃತ್ತ ಶಿಕ್ಷಕರಾಗಿರಬೇಕು. ಮೂರನೆಯದಾಗಿ, ಈ ಕ್ಷೇತ್ರದಲ್ಲಿ ರಾಜಕಾರಣಕ್ಕೆ ಆಸ್ಪದ ನೀಡದೆ ಪಕ್ಷಾತೀತ ಶಿಕ್ಷಕರು ಮಾತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಆಗ ಮಾತ್ರ ಶಿಕ್ಷಕರ ಕ್ಷೇತ್ರಕ್ಕೆ ಒಂದು ಬೆಲೆ, ಗೌರವ ಇರುತ್ತದೆ. ಸ್ಪರ್ಧೆಗೆ ವೃತ್ತಿಸಂಬಂಧದ ಮಾನದಂಡ ಇಲ್ಲದೇ ಇರುವುದರಿಂದ ಈ ಕ್ಷೇತ್ರವೂ ಕಲುಷಿತಗೊಂಡಿದೆ. ಈ ಬಗ್ಗೆ ಸರ್ಕಾರ ಚಿಂತನೆ ಮಾಡಲಿ, ಜೊತೆಗೆ ಶಿಕ್ಷಕರು ಸಹ ತಮ್ಮ ಹಕ್ಕನ್ನು ಇತರರಿಗೆ ನೀಡದೆ ತಮ್ಮದಾಗಿಸಿಕೊಳ್ಳಲಿ.

–ಸಿ.ಸಿದ್ದರಾಜು ಆಲಕೆರೆ, ಮಂಡ್ಯ

‘...ಬಡಾ ಸ್ವಪ್ನ’ ಕರಗಿಹೋಗುತ್ತಿದೆ!

‘ನೀಟ್’ ತರಬೇತಿ ಕೇಂದ್ರವೊಂದಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೆ. ಕೇಂದ್ರದ ಹೊರಭಾಗದ ಗೋಡೆಯಲ್ಲಿ ‘ಎಂಬಿಬಿಎಸ್‌– ‘ಮಾ ಬಾ ಕಾ ಬಡಾ ಸ್ವಪ್ನ’ ಎಂದು ಬರೆಸಿದ್ದರು. ಆದರೆ ಈ ಬಾರಿಯ ನೀಟ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಪ್ಪಾಗಿದ್ದರ ಪರಿಣಾಮದಿಂದ ಕೃಪಾಂಕ ನೀಡುವುದು, ಪರೀಕ್ಷೆಯಲ್ಲಿ ನಕಲು, ಅಕ್ರಮದ ಆರೋಪಗಳೆಲ್ಲ ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದನ್ನು ನೋಡಿದಾಗ, ಬಡ ಮತ್ತು ಪ್ರತಿಭಾವಂತ ಮಕ್ಕಳ ಪೋಷಕರ ಈ ದೊಡ್ಡ ಕನಸು ಧುತ್ತೆಂದು ಬೀಳುತ್ತದೆಯೇ ಎಂದು ಅನುಮಾನವಾಯಿತು. ಲಕ್ಷಾಂತರ ರೂಪಾಯಿ ನೀಡಿ ತರಬೇತಿ ಪಡೆದುಕೊಂಡರೂ ಪರೀಕ್ಷಾ ದೋಷದ ಫಲದಿಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಂಡು ಕುಗ್ಗುವಂತೆ ಆಗಿದೆ.

ಶಿಕ್ಷಕರು ಮತ್ತು ಪಾಲಕರು ಮಕ್ಕಳನ್ನು ಡಾಕ್ಟರ್, ಎಂಜಿನಿಯರ್‌ ಮಾಡುವುದನ್ನೇ ಗುರಿಯಾಗಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಮಕ್ಕಳು ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಇನ್ನೂ ಹಲವಾರು ಶೈಕ್ಷಣಿಕ ವೃತ್ತಿಪರ ಕ್ಷೇತ್ರಗಳಿವೆ. ಅವುಗಳನ್ನು ಪರಿಚಯಿಸಿ, ಆ ಮಾರ್ಗದಲ್ಲಿಯೂ ದೊಡ್ಡದಾದದ್ದನ್ನು ಸಾಧಿಸಬಹುದು ಎಂಬ ಮನೋಧೈರ್ಯವನ್ನು ಅವರಲ್ಲಿ ತುಂಬಬೇಕು.

–ಸೋಮನಾಥ ಡಿ., ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.