‘ನೀಟ್’ ಬರೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ ಈ ಪರೀಕ್ಷೆಯನ್ನು ನೀಟಾಗಿ ನಿರ್ವಹಿಸುವಲ್ಲಿ ನಾವು ಸೋಲುತ್ತಿರುವುದು ವಿಪರ್ಯಾಸ. ಕೆಲವು ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದು ಮೂರ್ನಾಲ್ಕು ಬಾರಿ ನೀಟ್ ಬರೆಯುತ್ತಾರೆ. ಇದರಿಂದಾಗಿ, ಶೈಕ್ಷಣಿಕ ಬದುಕಿನ ಒಂದೆರಡು ವರ್ಷವನ್ನು ಅವರು ಕಳೆದುಕೊಳ್ಳುತ್ತಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಇಂತಹ ಪರೀಕ್ಷೆಯಲ್ಲಿ ಅಕ್ರಮಗಳಿಗೆ ಆಸ್ಪದ ಇರಬಾರದು. ಈ ಬಾರಿಯಂತೂ ನಾನಾ ಬಗೆಯ ಆರೋಪಗಳು ಕೇಳಿಬಂದಿವೆ.
ನೀಟ್ ವಿರುದ್ಧ ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಧ್ವನಿ ಎತ್ತಿವೆ. ಈಗ ಕೇಳಿಬಂದಿರುವ ಆರೋಪಗಳನ್ನು ಗಮನಿಸಿದರೆ, ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗಳೇ ಉತ್ತಮವಾಗಿತ್ತೇನೊ ಅಂತ ಅನ್ನಿಸದಿರದು. ವೈದ್ಯಕೀಯ ಪ್ರವೇಶ ಪರೀಕ್ಷೆಯ ಗೋಜಲು ಬಿಡಿಸಲು ಸರ್ಕಾರ ಈಗಲಾದರೂ ಮುಕ್ತ ಮನಸ್ಸಿನಿಂದ ಯೋಚಿಸಬೇಕು. ವಿಕೇಂದ್ರೀಕೃತ ಮಾದರಿಗಳ ಬಗ್ಗೆ ಚಿಂತಿಸಬೇಕು.
– ಕೆ.ಬಿ.ಸುಮಲತಾ, ದೊಡ್ಡಬಳ್ಳಾಪುರ
ಮಂಗಳವಾರ ರಾತ್ರಿ ತೀರಿಕೊಂಡ ದೊಡ್ಡ ಚೇತನ ಪಂಡಿತ್ ರಾಜೀವ ತಾರಾನಾಥ ಅವರನ್ನು ಕುರಿತು ಸುಮಂಗಲಾ ಅವರು ಬರೆದಿರುವ ಬರಹ ಘನವಾಗಿದೆ. ತಾರಾನಾಥರನ್ನು ಕುರಿತು ಎಲ್ಲರೂ ಮರೆತಂತಿರುವ ಒಂದು ವಿಷಯ ನೆನಪಿಸಲು ಈ ಪತ್ರ. ಹಿಂದೂಸ್ತಾನಿ ನಾಟಕಕಾರ ಸರ್ವೇಶ್ವರ ದಯಾಲ್ ಸಕ್ಸೇನಾ ಅವರು ರಾಜಕಾರಣಿಗಳ ಪಕ್ಷಾಂತರದ ಚಾಳಿ ಮತ್ತು ಹುಚ್ಚಾಟ-ಹಾರಾಟಗಳನ್ನು ವಿಡಂಬಿಸಿ ಬರೆದ ನಾಟಕ ‘ಬಕರಿ’. 1979ರಲ್ಲಿ ಸಿ.ಪಿ. ರವಿಕುಮಾರ್ ಅವರು ಅದನ್ನು ಬೆಂಗಳೂರಿನ ಸಮುದಾಯ ರಂಗತಂಡಕ್ಕಾಗಿ ‘ಕುರಿ’ ಎಂದು ಹೆಸರಿಸಿ ಅನುವಾದಿಸಿ
ಕೊಟ್ಟರು. ಸಮುದಾಯ ತಂಡ ಅದನ್ನು ಎಂ.ಎಸ್.ಸತ್ಯು ಅವರ ನಿರ್ದೇಶನದಲ್ಲಿ ಪ್ರಯೋಗಿಸಿ, ಚಿತ್ರಕಲಾ ಪರಿಷತ್ತಿನ ಬಯಲು ರಂಗಮಂದಿರದಲ್ಲಿ ಆಡಿತು. ವಾರಗಟ್ಟಲೆಯ ಕಾಲ ಡಜನ್‌ಗಟ್ಟಲೆ ಸರಣಿ ಆಟಗಳನ್ನು ಕಂಡು, ದೊಡ್ಡ ಯಶಸ್ಸು ಗಳಿಸಿದ ಪ್ರಯೋಗ ಅದು. ಅನೇಕ ಹಾಡುಗಳಿದ್ದ ಆ ಪ್ರಯೋಗದ ಸಂಗೀತ ನಿರ್ದೇಶಕರು ತಾರಾನಾಥರು. ಅದ್ಭುತ-ನಾಟಕೀಯವಾದ ಅವರ ರಾಗಸಂಯೋಜನೆಯ ಹಾಡುಗಳು ಎಂದಿಗೂ ಗುನುಗಿಕೊಳ್ಳುವಂತಿವೆ. ಎರಡೇ ಎರಡು ಉದಾಹರಣೆ ನೀಡುವುದಾದರೆ, ಶೀರ್ಷಿಕೆಯ ಹಾಡು ‘ಕುರಿ, ಕುರಿ, ಕುರಿ, ಗಾಂಧೀಜಿ ಕುರಿ’, ಮತ್ತು‘ಡಬ್ಬಡಬ್ಬದೊಳಗೆ ಡಬ್ಬ, ಡಬ್ಬದೊಳು ಮುರಬ್ಬ, ಮುರಬ್ಬದೊಳು ನೂರು ಇರುವೆ ಕಚ್ಚಿತೋ ಅಬಬ್ಬಬಬ್ಬಬಬ್ಬಬಬ್ಬಬಬ್ಬ’ ಎಂದು ಶುರುವಾಗುವ ಹಾಡುಗಳನ್ನು ಹೆಸರಿಸಬಹುದು.
ಆ ಪ್ರಯೋಗದಲ್ಲಿ, ಕವಿ ಸಿದ್ಧಲಿಂಗಯ್ಯನವರ ‘ಗುಡಿಸಿಲುಗಳು ಗುಡುಗುತಿವೆ, ಬಂಗಲೆಗಳು ನಡುಗುತಿವೆ’ ಎಂದು ಶುರುವಾಗುವ ಕವನವನ್ನೂ ಸೇರಿಸಿ, ಅದಕ್ಕೆ ಮೈನವಿರೇಳುವಂಥ ರಾಗ ಕೂಡಿಸಿ ಹಾಡಿಸಿದ್ದರು ತಾರಾನಾಥರು. ಆ ಪ್ರಯೋಗ, ಆ ಸಂಗೀತ ಎರಡೂ ಆಧುನಿಕ ಕನ್ನಡ ರಂಗಭೂಮಿಯ ಮೈಲಿಗಲ್ಲುಗಳಾಗಿವೆ.
– ರಘುನಂದನ, ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯುಕರ ಪರೀಕ್ಷೆ ನಡೆಸಿ ಒಂದು ವರ್ಷವಾಗುತ್ತಾ ಬಂದರೂ ಪರೀಕ್ಷಾ ಫಲಿತಾಂಶವನ್ನು ಇನ್ನೂ ಪ್ರಕಟಿಸಿಲ್ಲ. ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇಷ್ಟು ವಿಳಂಬ ತರವಲ್ಲ. ಆದಷ್ಟು ಬೇಗ ಫಲಿತಾಂಶ ಪ್ರಕಟಿಸಬೇಕು.
– ಎಸ್.ಎನ್. ಕೃಷ್ಣಮೂರ್ತಿ, ಕಡೂರು
ರಸ್ತೆ ಗುಂಡಿಗಳ ಬಗೆಗಿನ ಡಾ. ಕೆ.ಎಸ್. ಚೈತ್ರಾ ಅವರ ಲೇಖನ (ಸಂಗತ, ಜೂನ್ 11) ಚೆನ್ನಾಗಿದೆ. ಆದರೆ, ರಸ್ತೆಗಳಿಗಿಂತ ಪಾದಚಾರಿ ಮಾರ್ಗಗಳ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳು ಬಳಕೆಗೆ ಯೋಗ್ಯವಲ್ಲದ ಸ್ಥಿತಿ ತಲುಪಿವೆ. ಅನೇಕ ಕಡೆ ಸಮತಟ್ಟು ಕಳೆದುಕೊಂಡಿವೆ, ಒತ್ತುವರಿಗೆ ಒಳಗಾಗಿವೆ. ಆದಕಾರಣ, ಸಾರ್ವಜನಿಕರು ವಿಧಿಯಿಲ್ಲದೆ ರಸ್ತೆಯನ್ನೇ ಉಪಯೋಗಿಸಬೇಕಾಗಿದೆ. ಕೆಲವೆಡೆ ವಾಹನ ನಿಲುಗಡೆಗೆ ಬಳಕೆ ಆಗುತ್ತಿವೆ. ಪಾದಚಾರಿ ಮಾರ್ಗಗಳನ್ನು ಸುಸ್ಥಿತಿಗೆ ತರುವುದರ ಬಗ್ಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಗಮನ ಹರಿಸಬೇಕು. ಬಿಬಿಎಂಪಿಗೆ ಪಾದಚಾರಿಗಳ ಹಿತರಕ್ಷಣೆಯೂ ಆದ್ಯತೆಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.