ADVERTISEMENT

ವಾಚಕರ ವಾಣಿ: 15 ಜೂನ್ 2024

ವಾಚಕರ ವಾಣಿ
Published 15 ಜೂನ್ 2024, 0:15 IST
Last Updated 15 ಜೂನ್ 2024, 0:15 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ರಾಜಕೀಯದಲ್ಲಿ ಮಹಿಳೆಯರು ಕರಿಬೇವಲ್ಲ!

‘ನಿಜವಾದ ‘ಸೇವಕ’ನಲ್ಲಿ ಅಹಂಕಾರ ಇರುವುದಿಲ್ಲ, ಆತ ಇನ್ನೊಬ್ಬರಿಗೆ ನೋವುಂಟು ಮಾಡದೆಯೇ ಕೆಲಸ ಮಾಡುತ್ತಾನೆ. ವಿರೋಧ ಪಕ್ಷ ಎಂಬುದು ಎದುರಾಳಿ ಅಲ್ಲ’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಹೇಳಿರುವುದು ಸರಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರಲ್ಲಿ ಅಹಂಕಾರ ಎದ್ದುಕಾಣುತ್ತಿತ್ತು ಎಂಬುದನ್ನು ಈ ಮಾತು ಪರೋಕ್ಷವಾಗಿ ಧ್ವನಿಸುತ್ತದೆ. ಇದು ಒಬ್ಬ ನಾಯಕ ಯಾವುದೇ ರಾಜಕೀಯ ಪಕ್ಷದ ಮುಖಂಡರಿಗೆ ನೀಡಬೇಕಾದ ತಿಳಿವಳಿಕೆಯೇ ಆಗಿದೆ. ಇದನ್ನು ರಾಜಕೀಯ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ದೇವರು, ಧರ್ಮವನ್ನು ಚುನಾವಣೆಯ ಅಸ್ತ್ರವನ್ನಾಗಿಸಿಕೊಳ್ಳುವ ವಿದ್ಯಮಾನ ಖಂಡಿತ ಬದಲಾಗಬೇಕು. ಇಂತಹ ಬದಲಾವಣೆಯ ಹಿಂದೆ ಜನಾಂದೋಲನ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ‘ಪ್ರಸಕ್ತ ಲೋಕಸಭಾ ಚುನಾವಣೆಯ ಫಲಿತಾಂಶವು ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಒಂದು ಸಣ್ಣ ಸಮಾಧಾನವನ್ನಾದರೂ ತಂದಿದ್ದರೆ, ಅದರ ಹಿಂದೆ ಜನಾಂದೋಲನದ ಪಾತ್ರ ಇದೆ’ ಎಂಬ ಅಭಿಪ್ರಾಯ ಹೊಂದಿರುವ ನಾರಾಯಣ ಎ. ಅವರ ಲೇಖನ (ಪ್ರ.ವಾ., ಜೂನ್‌ 12) ಇದಕ್ಕೆ ಪೂರಕವಾಗಿದೆ. ನಿಜವಾದ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಬೇಕಾದರೆ ಜನಾಂದೋಲನ ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ನಮ್ಮ ಮತದಾರರು ವಿಚಾರ ಮಾಡಬೇಕು.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸುವ ಮಸೂದೆಯು ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ಪಡೆದಿರುವುದರಿಂದ, ಈ ಬಾರಿಯ ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಸಂಬಂಧ ರೂಪುರೇಷೆ ತಯಾರಾಗಬೇಕಿತ್ತು. ಆದರೆ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಕನಿಷ್ಠಪಕ್ಷ ಶೇ 15ರಿಂದ 20ರಷ್ಟು ಸೀಟುಗಳನ್ನಾದರೂ ಮಹಿಳೆಯರಿಗೆ ನೀಡುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮತದಾನಕ್ಕೆ ಮಾತ್ರ ಮಹಿಳೆಯರು ಬೇಕು, ರಾಜಕೀಯಕ್ಕೆ ಬೇಡ ಎನ್ನುವುದು ಮಹಿಳೆಯರನ್ನು ಒಗ್ಗರಣೆಗೆ ಕರಿಬೇವನ್ನು ಬಳಸಿಕೊಂಡು ನಂತರ ಬಿಸಾಡುವ ರೀತಿಯ ಧೋರಣೆಯೇ ಸರಿ. ಪಕ್ಷಗಳು ಇನ್ನು ಮುಂದಾದರೂ ಇಂತಹ ಮನೋಭಾವದಿಂದ ಹೊರಬಂದು ಮಹಿಳೆಯರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ಈ ಮೂಲಕ ಸಮಾನತೆಯ ತತ್ವವನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತರಲು ಮುಂದಾಗಬೇಕು.

ADVERTISEMENT

– ಮೋಟಮ್ಮ, ಮೂಡಿಗೆರೆ

ಅಭಿಮಾನ ಮಿತಿಮೀರದಿರಲಿ

ಹಿಂದೆಲ್ಲಾ ಚಲನಚಿತ್ರ ನಾಯಕರ ಅಭಿಮಾನಿ ಸಂಘಗಳು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದವು. ತಮ್ಮ ಆದರ್ಶ ನಾಯಕನ ಘನತೆ, ಗೌರವ ಹೆಚ್ಚಿಸುವ ಕೆಲಸ ಮಾಡುತ್ತಿದ್ದ ಉದಾಹರಣೆಗಳಿದ್ದವು. ನಾಯಕರೂ ಅದಕ್ಕೆ ತಕ್ಕಂತೆ ಆದರ್ಶಪ್ರಾಯ ನಡವಳಿಕೆಗಳಿಂದ ಜನಮನ್ನಣೆ ಗಳಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ನಾಯಕನಟರು ಅನುಕರಣೀಯ ಮಾದರಿಯಾಗಿ ಉಳಿದಿಲ್ಲ. ‘ಯಥಾ ರಾಜ ತಥಾ ಪ್ರಜಾ’ ಎನ್ನುವಂತೆ ಈ ನಾಯಕನಟರ ಅಭಿಮಾನಿಗಳೂ ಅಂಧಾಭಿಮಾನದಿಂದ ವಿವೇಚನೆ ಮರೆತು, ತಮ್ಮ ನಾಯಕನ ಕುಕೃತ್ಯಗಳಿಗೆ ಕುಮ್ಮಕ್ಕು ನೀಡುವ ಹಂತ ತಲುಪಿದ್ದಾರೆ. ಅಂಧಾಭಿಮಾನದ ಅಫೀಮು ಉದಾತ್ತ ಉದ್ದೇಶಗಳನ್ನು ಮರೆಸಿ ಗುಂಪುಘರ್ಷಣೆ ಮತ್ತು ದ್ವೇಷಸಾಧನೆಗೆ ಎಡೆಮಾಡಿಕೊಡುತ್ತದೆ. ಕೆಲವೊಮ್ಮೆ ಇಬ್ಬರು ನಾಯಕರ ಅಭಿಮಾನಿಗಳು ಪರಸ್ಪರ ಸಂಘರ್ಷಕ್ಕೆ ಇಳಿಯುವುದೂ ಇದೆ. ಇದರಿಂದ ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವವಿರುತ್ತದೆ. ತಮ್ಮ ತಮ್ಮ ನೆಚ್ಚಿನ ನಾಯಕರ ಬಗ್ಗೆ ವೈಯಕ್ತಿಕವಾಗಿ ಅಭಿಮಾನವಿರಲಿ, ಅವರು ನಟಿಸಿದ ಚಿತ್ರ ಬಿಡುಗಡೆಯಾದಾಗ ಸಂಭ್ರಮವಿರಲಿ, ಸಡಗರವಿರಲಿ. ಆದರೆ ಅಭಿಮಾನಿ ಸಂಘಗಳ ವರ್ತನೆ ಯಾವುದೇ ಕಾರಣಕ್ಕೂ ಮಿತಿಮೀರದಿರಲಿ.

ಎಲ್.ಅನುಗ್ರಹ ನಾರಾಯಣ್, ಬೆಂಗಳೂರು

ಜನಸಾಮಾನ್ಯರ ಮೇಲೆ ತೆರಿಗೆ ಹೊರೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಇದೇ 22ರಂದು ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 53ನೇ ಸಭೆಯಲ್ಲಿ, ಆನ್‌ಲೈನ್ ಗೇಮಿಂಗ್ ವಲಯದ ಮೇಲೆ ವಿಧಿಸಿರುವ ಶೇ 28ರಷ್ಟು ಜಿಎಸ್‌ಟಿ ಕುರಿತಂತೆ ಪರಾಮರ್ಶೆ ನಡೆಯುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ

(ಪ್ರ.ವಾ., ಜೂನ್‌ 14). ಆದರೆ ಇದೇ ಜಿಎಸ್‌ಟಿ ಮಂಡಳಿಯು ಮೊಸರು, ಅಕ್ಕಿ, ಕಾಫಿ, ಟೀ, ಹೋಟೆಲ್ ತಿಂಡಿಯಂಥ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿರುವುದು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಹೋಟೆಲ್‌ಗಳು ಪ್ರತಿ ಬಾರಿಯೂ ತಿಂಡಿ ಪದಾರ್ಥಗಳ ಬೆಲೆ ಏರಿಸುವ ಮೂಲಕ ಎಲ್ಲ ತೆರಿಗೆಯನ್ನೂ ಗ್ರಾಹಕರಿಂದಲೇ ವಸೂಲು ಮಾಡುತ್ತವೆ. ವರ್ಗ 3 ಹಾಗೂ ಅದಕ್ಕಿಂತ ಕೆಳ ಹಂತದ ಹೋಟೆಲ್‌ಗಳಲ್ಲಿ ಊಟ, ತಿಂಡಿಗಳ ಮೇಲಿನ ಜಿಎಸ್‌ಟಿ ತೆಗೆದುಹಾಕುವುದು ಸೂಕ್ತ.

ಐಷಾರಾಮಿ ಕಾರನ್ನು ಸಹ ತೆರಿಗೆ ಪಾವತಿಸಿಯೇ ಕೊಳ್ಳಲಾಗಿರುತ್ತದೆ. ನಾವು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಾ ಜಿಎಸ್‌ಟಿ, ಹೆದ್ದಾರಿ ಟೋಲ್‌ನಂತಹ ತೆರಿಗೆಗಳನ್ನು ಭಾರಿ ಪ್ರಮಾಣದಲ್ಲಿ ವಿಧಿಸಿದರೆ, ಯಾವುದೇ ಕೈಗಾರಿಕೆ, ಉದ್ಯಮಿ ಅಥವಾ ಅಂಗಡಿ ಮಾಲೀಕ ಅದನ್ನು ತಮ್ಮ ಕೈಯಿಂದ ಕೊಡುವುದಿಲ್ಲ. ಬದಲಾಗಿ, ತಾವು ಮಾರುವ, ಉತ್ಪಾದಿಸುವ ವಸ್ತುಗಳ ಮೇಲೆ ಹಾಕುತ್ತಾರೆ. ಸಹಜವಾಗಿಯೇ ಈ ಹೊರೆ ಜನಸಾಮಾನ್ಯರ ಮೇಲೆ ಬೀಳುತ್ತದೆ. ಆದ್ದರಿಂದ ತೆರಿಗೆಗಳನ್ನು ಸರಳಗೊಳಿಸಬೇಕಿದೆ.

– ಮುಳ್ಳೂರು ಪ್ರಕಾಶ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.