ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:04 IST
Last Updated 18 ಅಕ್ಟೋಬರ್ 2024, 0:04 IST
   

ಮಳೆನೀರು ಹಿಡಿದಿಟ್ಟರೆ ಆಗದೇ?

ಬೆಂಗಳೂರು ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳು ಮಳೆಯಿಂದ ಜಲಾವೃತವಾದ ದಿನವೇ ಕಾವೇರಿಯ 5ನೇ ಹಂತದ ಯೋಜನೆ ಜಾರಿಗೆ ಬಂದಿದೆ. 100 ಕಿ.ಮೀ. ಆಚಿನ ನದಿಯನ್ನು ತಿರುಗಿಸಿ, 1,000 ಮೀಟರ್‌ ಎತ್ತರಕ್ಕೆ ಅದನ್ನು ಪಂಪ್‌ ಮಾಡಿ ತಂದಿದ್ದೇವೆ. ಹಾಗೆ ತಂದ 775 ಲಕ್ಷ ಲೀಟರ್‌ ನೀರು ಪ್ರತಿದಿನ ಇಲ್ಲಿನ 110 ಹಳ್ಳಿಗಳ 50 ಲಕ್ಷ ಜನರ ಬಳಕೆಗೆ ಬಂದು ಚರಂಡಿಗೆ ಸೇರಿಯೊ, ಸೋರಿಯೊ, ಆವಿಯಾಗಿಯೋ ಹೋಗುತ್ತದೆ. ತಮ್ಮದಲ್ಲದ್ದನ್ನು ದೋಚಿ ತಂದು ಚೆಲ್ಲಾಡಿ ದುರ್ಗಂಧ ಪಸರಿಸುವುದು ಈ ‘ವಿಜ್ಞಾನ- ತಂತ್ರಜ್ಞಾನ ನಗರಿ’ಗೆ ಸಂಭ್ರಮದ, ಹೆಮ್ಮೆಯ ಸಂಗತಿಯೆ?

ಕಾವೇರಿಯ ದಡದಿಂದ 10-20-30 ಕಿ.ಮೀ. ದೂರದಲ್ಲಿರುವ ಹಳ್ಳಿಗಳಿಗೆ ಇಲ್ಲದ ಸೌಲಭ್ಯವನ್ನು ಈ ನಗರದ ಆಸುಪಾಸಿನ ಹಳ್ಳಿಗಳಲ್ಲಿ ಗುಡ್ಡೆ ಹಾಕಿಕೊಳ್ಳುತ್ತಿದ್ದೇವೆ. ಅದು ನ್ಯಾಯವೆ? ಇಲ್ಲೇನು ಬರ ಇದೆಯೆ? ಇಸ್ರೇಲಿಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಬೀಳುವ ಪ್ರದೇಶ ಬೆಂಗಳೂರು! ಜಲಸಂಪನ್ಮೂಲ ತಜ್ಞರ ಲೆಕ್ಕದ ಪ್ರಕಾರ, ಇಲ್ಲಿ ಬೀಳುವ ಮಳೆನೀರನ್ನು ಹಿಡಿದಿಟ್ಟುಕೊಂಡು ಸಂಸ್ಕರಣೆ, ಮರುಬಳಕೆ ಮಾಡಿದರೆ ಕಾವೇರಿಯ ನೀರಿನ ಅಗತ್ಯವೇ ಇಲ್ಲ. ಹಾಗೆ ಯೋಜನೆ ರೂಪಿಸಿ, ಜಾರಿಗೆ ತಂದರೆ ಅದು ಇತರ ಜಿಲ್ಲೆಗಳಿಗೂ ಮುಂದಿನ ತಲೆಮಾರಿಗೂ ಮಾದರಿಯಾಗಬಹುದಿತ್ತು. ಅದರ ಬದಲು, ಆಹಾರ ಬೆಳೆಯಬೇಕಾದ ಪ್ರದೇಶಗಳ ಸಂಪನ್ಮೂಲಗಳನ್ನೆಲ್ಲ ಹೀಗೇ ದೋಚಿ ತರುತ್ತಿದ್ದರೆ ನಾಳಿನ ನಗರವಾಸಿಗಳು ಬರೀ ಪ್ಲಾಸ್ಟಿಕ್‌ ಕಚಡಾ ತಿಂದು ಬದುಕಬೇಕಾದೀತಲ್ಲವೆ? ಅದು ಓಕೆ ಎಂದರೆ ಅದನ್ನಾದರೂ ಈಗಲೇ ಕಲಿಸಲು ಆರಂಭಿಸೋಣವೆ?

ADVERTISEMENT

-ನಾಗೇಶ ಹೆಗಡೆ, ಕೆಂಗೇರಿ

ಆಹಾರ ಪೋಲು ಮಾಡುವ ಹಕ್ಕು ನಮಗಿಲ್ಲ

ವಿಶ್ವ ಆಹಾರ ದಿನವಾದ ಬುಧವಾರ (ಅ. 16) ಸಂಜೆ ಬೆಂಗಳೂರಿನ ಪುರಭವನದ ಮುಂದೆ ನಾವು 15– 20 ಮಂದಿ ಸ್ನೇಹಿತರು, ‘ಆಹಾರ ಪೋಲು– ರಾಷ್ಟ್ರೀಯ ನಷ್ಟ’, ‘ತಿನ್ನುವ ಹಕ್ಕು ನಮಗಿದೆ– ಬಿಸಾಡುವ ಹಕ್ಕು ನಮಗಿಲ್ಲ’ ಎಂಬಂಥ ಭಿತ್ತಿಪತ್ರಗಳನ್ನು ಹಿಡಿದುಕೊಂಡು ನಿಂತಿದ್ದೆವು. ನಮ್ಮ ಸಂಖ್ಯೆ ಕಡಿಮೆ ಇದ್ದರೂ ಉದ್ದೇಶ ದೊಡ್ಡದಿತ್ತು. ನಿಜ, ಆಹಾರ ಪೋಲು ಮಾಡುವ ಹಕ್ಕು ನಮಗೆಲ್ಲಿದೆ? ಆದರೆ, ಮದುವೆಮನೆ, ಬೀಗರೂಟ, ದೇವಸ್ಥಾನ, ಜಾತ್ರೆ, ಹಾಸ್ಟೆಲ್, ಹೋಟೆಲ್, ಮನೆ- ಹೀಗೆ ಎಲ್ಲ ಕಡೆಗಳಲ್ಲೂ ತಿನ್ನಲು ತಯಾರಿಸಿದ ಆಹಾರದಲ್ಲಿ ಸುಮಾರು ಶೇ 30ರಷ್ಟು ಪ್ರತಿದಿನ ತಿಳಿವಳಿಕೆಯ ಕೊರತೆಯಿಂದ ಪೋಲಾಗುತ್ತಿರುವ ಅಂಕಿ ಅಂಶಗಳಿವೆ. ಇನ್ನೊಂದು ಕಡೆ, ಹೊಟ್ಟೆ ಹಸಿದಿರುವ ನಮ್ಮ ದೇಶವಾಸಿಗಳಿದ್ದಾರೆ. ಐದು ವರ್ಷಗಳ ಕೆಳಗಿನ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಎರಡನ್ನೂ ಸರಿದೂಗಿಸಿದರೆ ಹಸಿವಿನ ರಾಷ್ಟ್ರವೆಂಬ ಅಪಕೀರ್ತಿ ದೇಶಕ್ಕೆ ಇರುವುದಿಲ್ಲ.

ಆಹಾರಧಾನ್ಯ ಉತ್ಪಾದನೆಯ ಹಿಂದೆ ರೈತರ ಶ್ರಮ, ಗಾಳಿ, ಬೆಳಕು, ನೀರಿನಂತಹ ಪ್ರಕೃತಿಯ ಕೊಡುಗೆ, ಒಕ್ಕಣೆ, ಸಾಗಣೆಯಲ್ಲಿ ಕೂಲಿ ಕಾರ್ಮಿಕರ ಶ್ರಮವಿರುತ್ತದೆ. ಸಮುದ್ರದಿಂದ ತಯಾರಿಸಿ ಸಾಗಣೆ ಮಾಡಿದ ಉಪ್ಪು, ಜಲದಾಳದಿಂದ ಮೇಲಕ್ಕೆತ್ತಿದ ನೀರು, ಎಲ್ಲಿಂದಲೋ ಸಾಗಿಸಿ ತಂದ ಇಂಧನ, ಇಷ್ಟೆಲ್ಲಾ ಶ್ರಮ ಇರುತ್ತದೆ. ಅದನ್ನು ಬಿಸಾಡುವುದೆಂದರೆ, ಬೆಳೆದ ರೈತರಿಗೆ, ಸಾಗಣೆ ಮಾಡಿದ ಶ್ರಮಿಕರಿಗೆ ಅವಮಾನ ಮಾಡಿದಂತೆ ಎಂಬ ಅರಿವು ತಿನ್ನುವವರು ಮತ್ತು ಬಡಿಸುವವರಿಗೆ ಇರಬೇಕು. ದೇವರ ಮೂರ್ತಿಯ ಮೇಲೆ ಯಾವುದೋ ನಂಬಿಕೆಯಿಂದ ಹಾಲನ್ನು ಸುರಿದು ಮಣ್ಣಿನಲ್ಲಿ ಸೇರಿಸುತ್ತೇವೆ. ಎಡೆ ರೂಪದಲ್ಲಿ ಆಹಾರವನ್ನಿಟ್ಟು, ಅರಿಸಿನ ಬೆರೆಸಿದ ಅಕ್ಕಿಯನ್ನು ‘ಅಕ್ಷತೆ’ ಮಾಡಿ ಪೋಲು ಮಾಡುತ್ತೇವೆ. ಮಡಿ ಮೈಲಿಗೆ ಎನ್ನುವ ಕಾರಣಕ್ಕೂ ಆಹಾರ ಪೋಲಾಗುತ್ತಿದೆ. ಬಳಸುವ ನಿಂಬೆ, ಕುಂಬಳ, ಈಡುಗಾಯಿ ರೂಪದಲ್ಲೂ ಆಹಾರಧಾನ್ಯ ಪೋಲಾಗುತ್ತಿದೆ. ಸೇಬಿನ ಹಾರ ಮಾಡಿ ರಾಜಕಾರಣಿಗಳ ಕೊರಳಿಗೆ ಹಾಕುತ್ತೇವೆ. ಮಾರಾಟ ಮಾಡುವವರೂ ಹಣ್ಣು, ತರಕಾರಿಗಳನ್ನು ಕೊಳೆಸಿ ಪೋಲು ಮಾಡುತ್ತಿದ್ದಾರೆ. ಪೋಲಾಗುತ್ತಿರುವ ಕಡೆಗಳಲ್ಲಿ ಆಹಾರದ ಮಹತ್ವವನ್ನು ವಿವರಿಸಿ ಹೇಳುವ ಮತ್ತು ಪೋಲಾಗುವ ಆಹಾರವನ್ನು ಉಳಿಸಿ ಹಸಿದವರಿಗೆ ಕೊಡುವ ಕೆಲಸಕ್ಕೆ ಸರ್ಕಾರ ಮತ್ತು ಪ್ರಜ್ಞಾವಂತ ಸಂಘ– ಸಂಸ್ಥೆಗಳು ಮುಂದೆ ಬರಬೇಕು.

-ತಾ.ಸಿ.ತಿಮ್ಮಯ್ಯ, ಬೆಂಗಳೂರು

ಮಳೆಯ ನೀರಿನಿಂದ ದಾರಿದ್ರ್ಯ ದೂರ!

ದಾರಿದ್ರ್ಯ ನಿವಾರಣೆಗೆ ಉದ್ಯೋಗಾವಕಾಶ ಹೆಚ್ಚಿಸಬೇಕೆಂದು ಬಿ.ಎಸ್‌.ಭಗವಾನ್‌ ಅಭಿಪ್ರಾಯಪಟ್ಟಿದ್ದಾರೆ (ಸಂಗತ, ಅ. 17). ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಪರಿಸರಸ್ನೇಹಿ ಸೌರಶಕ್ತಿ, ಮಳೆನೀರಿನ ಸಂಗ್ರಹದಿಂದ ಸಾಧ್ಯ. ವಿಶ್ವಸಂಸ್ಥೆ ವರದಿಯಂತೆ, ಪ್ರಪಂಚದಲ್ಲಿ ನೀರಿಗಾಗಿ ಪ್ರತಿವರ್ಷ ಒಂದು ಟ್ರಿಲಿಯನ್ ಡಾಲರ್‌ ವೆಚ್ಚ ಮಾಡಲಾಗುತ್ತಿದೆ. ಭಾರತವು ಲಕ್ಷಾಂತರ ಕೋಟಿ ರೂಪಾಯಿಯನ್ನು ಪೆಟ್ರೋಲ್ ಆಮದಿಗಾಗಿ ವ್ಯಯಿಸುತ್ತಿದೆ. ಉಚಿತವಾಗಿ ದೊರೆಯುವ ಸೌರಶಕ್ತಿಯಂತಹ ಪರ್ಯಾಯ ಶಕ್ತಿ ಮೂಲದ ಬಳಕೆ, ಮಳೆನೀರು ಸಂಗ್ರಹಿಸಿ, ಸಂರಕ್ಷಿಸಿ ಜಾಣ್ಮೆಯಿಂದ ಬಳಸುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾದರೆ ದಾರಿದ್ರ್ಯ ನಿವಾರಣೆ ಸಾಧ್ಯವಾಗುತ್ತದೆ.

-ಎಚ್.ಆರ್‌.ಪ್ರಕಾಶ್, ಕೆ.ಬಿ. ದೊಡ್ಡಿ, ಮಂಡ್ಯ

ಪ್ರಕೃತಿಪ್ರೇಮಿ ಸಂತನಿಗೆ ಸಂದ ಗೌರವ

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ ಹೆಸರನ್ನು ವಿಜಯಪುರ ಜಿಲ್ಲೆಯ ಮಮದಾಪುರ ಅರಣ್ಯಪ್ರದೇಶಕ್ಕೆ ಇಡಲು ಸರ್ಕಾರ ನಿರ್ಧರಿಸಿರುವುದು ಅಭಿನಂದನಾರ್ಹ. ಇದು ಪ್ರಕೃತಿಪ್ರೇಮಿ ಸಂತನಿಗೆ ಸಲ್ಲಿಸಿದ ಗೌರವವಾಗಿದೆ. ಅವರು ಜೀವಂತವಾಗಿದ್ದಾಗ ಎಲ್ಲ ಪದವಿ, ಪುರಸ್ಕಾರಗಳನ್ನು ತಿರಸ್ಕರಿಸಿದ್ದರು. ಒಂದುವೇಳೆ ಆಗೇನಾದರೂ ಸರ್ಕಾರ ಹೀಗೆ ಹೆಸರಿಡಲು ಮುಂದಾಗಿದ್ದರೆ ಖಂಡಿತ ಈ ನಿರ್ಣಯವನ್ನು
ತಿರಸ್ಕರಿಸುತ್ತಿದ್ದರು. ಸ್ವಾಮಿಗಳ ಮೇಲೆ ಗೌರವವುಳ್ಳ ಎಲ್ಲರಿಗೂ ಸರ್ಕಾರದ ತೀರ್ಮಾನದಿಂದ ಸಂತಸವಾಗಿದೆ. ಶ್ರೀಗಳ ಪ್ರವಚನ ಆರಂಭವಾಗುತ್ತಿದ್ದುದೇ ನಿಸರ್ಗಕ್ಕೆ ಸಂಬಂಧಿಸಿದ ವಿಷಯಗಳಿಂದ ಎಂಬುದು ಅವರ ಪ್ರವಚನವನ್ನು ಕೇಳಿರುವ ಎಲ್ಲರಿಗೂ ತಿಳಿದಿರುವ ವಿಷಯ.

-ಶಿವಕುಮಾರ ಬಂಡೋಳಿ, ಕಾಂತೇಶ ಹಲಗಿಮನಿ, ಶ್ರೀಧರ ಮಾಳಜಿ, ಹುಣಸಗಿ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.