ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 25 ಜೂನ್ 2024, 19:38 IST
Last Updated 25 ಜೂನ್ 2024, 19:38 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ನಿರುದ್ಯೋಗಿಗಳ ಬಗೆಗೆ ಇರಲಿ ಕಾಳಜಿ

ನಿವೃತ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಯುವ ಸಮೂಹಕ್ಕೆ ಅವಕಾಶ ಕಲ್ಪಿಸಬೇಕೆಂದು ಪ್ರತಿಪಾದಿಸಿರುವ ಸಂಪಾದಕೀಯ (ಪ್ರ.ವಾ., ಜೂನ್‌ 25) ಸರ್ಕಾರದ ಕಣ್ಣು ತೆರೆಸುವಂತಿದೆ. ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತರನ್ನು ಬಿಡುಗಡೆಗೊಳಿಸಬೇಕೆಂದು ಈ ವರ್ಷದ ಜನವರಿಯಲ್ಲಿ ಸರ್ಕಾರ ನೀಡಿದ ಸೂಚನೆಯು ನಿವೃತ್ತರನ್ನು ಬಿಡುಗಡೆಗೊಳಿಸುವುದಕ್ಕೆ ಒತ್ತು ನೀಡುತ್ತದೆಯೇ ವಿನಾ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವುದರ ಕಡೆ ಆಸಕ್ತವಾಗಿಲ್ಲದಿರುವುದು ವಿಷಾದನೀಯ.

ADVERTISEMENT

ಸರ್ಕಾರದ ಅನುದಾನದಿಂದ ನಡೆಯುವ ಒಂದು ಸ್ವಾಯತ್ತ ಸಂಸ್ಥೆಯಲ್ಲಿ ಸರ್ಕಾರದ ಈ ಸೂಚನೆ ಕೈಗೆ ಸಿಕ್ಕಿದ ಕೂಡಲೇ, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ಆರು ಜನ ನಿವೃತ್ತರ ಪೈಕಿ ಇಬ್ಬರಿಗೆ ಮಾತ್ರ ಬಿಡುಗಡೆ ಆದೇಶವನ್ನು ನೀಡಲಾಯಿತು. ಆ ಸಂಸ್ಥೆಯ ಈ ಕ್ರಮವನ್ನು ಶ್ಲಾಘಿಸುತ್ತಲೇ ಉಳಿದ ನಾಲ್ವರು ನಿವೃತ್ತರನ್ನು ಇಲ್ಲಿಯವರೆಗೆ ಸಂಸ್ಥೆಯ ಕರ್ತವ್ಯದಿಂದ ಬಿಡುಗಡೆಗೊಳಿಸದಿರುವುದನ್ನು ಪ್ರಶ್ನಿಸುವುದಕ್ಕೆ ಅವಕಾಶವಿದೆ. ಮುಖ್ಯ ವಿಷಯವೆಂದರೆ, ಒಂದು ಸಂಸ್ಥೆಯ ಮುಖ್ಯಸ್ಥರಿಗೆ, ಸಂಸ್ಥೆಗೆ ಬೇಕಾದ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಅಥವಾ ಬೇಡದ ಸಿಬ್ಬಂದಿಯನ್ನು ತೆಗೆಯುವ ಅಧಿಕಾರವಿದೆ.  ಹೀಗಿರುವಾಗ, ಸಂಸ್ಥೆಯ ಮುಖ್ಯಸ್ಥರು ಹಾಲಿ ಕೆಲಸ ಮಾಡುತ್ತಿರುವ ನಿವೃತ್ತರನ್ನು ಬಿಡುಗಡೆ ಮಾಡಿ, ಆ ಜಾಗವನ್ನು ನಿರುದ್ಯೋಗಿ ಯುವಕ, ಯವತಿಯರಿಂದ ತುಂಬಿದರೆ ಆಗ ಆ ನಿರುದ್ಯೋಗಿಗಳಿಗೂ
ಅನುಕೂಲವಾಗುತ್ತದೆ, ಸರ್ಕಾರದ ಆದೇಶವನ್ನು ಪಾಲನೆ ಮಾಡಿದ ಆತ್ಮತೃಪ್ತಿಯೂ ಆ ಮುಖ್ಯಸ್ಥರಿಗೆ ದೊರೆಯುತ್ತದೆ. ಅನ್ನ ನೀಡಬೇಕಾದುದು ಹಸಿದವರಿಗೇ ವಿನಾ ಉಂಡವರಿಗಲ್ಲ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಡಿಸಿಎಂ ಹುದ್ದೆ: ಯಾಕಿಷ್ಟು ಆಕರ್ಷಣೆ?

ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಬಗೆಗಿನ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿರುವುದು ನಮ್ಮ ರಾಜಕೀಯ ನಾಯಕರ ಮನೋಭಿಲಾಷೆಯನ್ನು ತೋರಿಸುತ್ತದಲ್ಲದೆ ತಮಾಷೆಯಾಗಿಯೂ ಇದೆ. ಉಪಮುಖ್ಯಮಂತ್ರಿ ಎಂಬ ಹುದ್ದೆಯ ಉಲ್ಲೇಖ ಸಂವಿಧಾನದಲ್ಲಿ ಇಲ್ಲ. ಆದ್ದರಿಂದ, ಒಂದರ್ಥದಲ್ಲಿ, ಇದು ಅಸಾಂವಿಧಾನಿಕ ಹುದ್ದೆ! ಈ ಹುದ್ದೆ ಬರೀ ‘ರಾಜಕೀಯ’ ಸೃಷ್ಟಿ. ಇದರ ಉಗಮ 1947ರಲ್ಲಾಯಿತು- ಅಂದು ಕೇಂದ್ರದಲ್ಲಿ ಸರ್ದಾರ್ ಪಟೇಲರನ್ನು ಉಪಪ್ರಧಾನಿ ಎಂದು ಹೆಸರಿಸಿದಾಗ. ಅಂದಿನಿಂದ ರಾಜ್ಯಗಳು ಇದನ್ನು ಅನುಕರಣೆ ಮಾಡುತ್ತಾ ಬಂದಿವೆ. ಉಪಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವ ಈ ಇಬ್ಬರಿಗೂ ಶ್ರೇಣಿ, ಸಂಬಳದಂತಹ ಸೌಲಭ್ಯ ಮತ್ತು ಹಣಕಾಸಿನ ಅಧಿಕಾರದ ವಿಷಯಗಳಲ್ಲಿ ಯಾವ ಅಂತರವೂ ಇಲ್ಲ. ಉಪಮುಖ್ಯಮಂತ್ರಿಗೆ ತನ್ನ ಖಾತೆಗೆ ಸಂಬಂಧಿಸಿದಂತೆ ಬಜೆಟ್ಟಿನಲ್ಲಿ ವಿತರಿಸಿರುವ ಹಣಕ್ಕಿಂತ ಹೆಚ್ಚು ವೆಚ್ಚ ಮಾಡುವ ಅಧಿಕಾರವಿಲ್ಲ. ಇತರ ಮಂತ್ರಿಗಳಂತೆ ಅಂಥ ವೆಚ್ಚಕ್ಕಾಗಿ ಅವರೂ ಮುಖ್ಯಮಂತ್ರಿಯ ಪೂರ್ವಾನು
ಮತಿಗಾಗಿ ಕಾಯಬೇಕು.

ಅಷ್ಟಾದರೂ ಈ ಹುದ್ದೆಯ ಬಗೆಗೆ ಆಕರ್ಷಣೆ ಏಕೆ? ತಾನು ಬರೀ ಮಂತ್ರಿ ಮಾತ್ರನಲ್ಲ, ಮುಖ್ಯಮಂತ್ರಿಗಿಂತ ಒಂದು ಮೆಟ್ಟಿಲು ಕೆಳಗೆ ಇರುವವನು ಎಂದು ಹೇಳಿಕೊಳ್ಳಬಹುದಾದ ಸ್ವಪ್ರತಿಷ್ಠೆಯ ಹಂಬಲವೇ? ತನ್ನ ಸಮುದಾಯಕ್ಕೆ ಇದರಿಂದ ಒಂದು ಪ್ರತಿಷ್ಠೆ ಬಂದೀತು ಎಂಬ ಹಿರಿಯಾಸೆ ಇರಬಹುದೇ? ಒಟ್ಟಿನಲ್ಲಿ, ಬರೀ ಪ್ರತಿಷ್ಠೆಯ ಪ್ರಶ್ನೆಯೇ ವಿನಾ ಬಹುಶಃ ಇನ್ನೇನೂ ಇರಲಾರದೇನೊ ಅಥವಾ ಈ ಎಲ್ಲವೂ ಇರಬಹುದು. ಆಯಾ ಸಮುದಾಯದವರು ಇಂತಹ ಹುದ್ದೆ ಸೃಷ್ಟಿಸಬೇಕೆಂದು ಒತ್ತಾಯ ಮಾಡುತ್ತಿರುವುದಕ್ಕೆ ಈಗ ‘ಮತ್ತೆ ಬಲ’ ಬಂದಿದೆಯಂತೆ. ಅಂದರೆ, ಬರೀ ತಮ್ಮ ಸಮುದಾಯದವರನ್ನು ತೃಪ್ತಿಪಡಿಸುವ ಸಲುವಾಗಿ ಎಲ್ಲ ಸಚಿವರನ್ನೂ ಉಪಮುಖ್ಯಮಂತ್ರಿಗಳು ಎಂದು ಹೆಸರಿಸಿಬಿಟ್ಟರೆ ಆಸೆಗಳು ಹಿಂಗುತ್ತವೆ, ಒಳಗುದಿ ತಣಿಯುತ್ತದೆ!⇒ಸಾಮಗ ದತ್ತಾತ್ರಿ, ಬೆಂಗಳೂರು

ಕನ್ನಡಮ್ಮ ಮರೆತುಹೋದಳೇ? 

18ನೇ ಲೋಕಸಭೆಯ ಸಂಸತ್ ಸದಸ್ಯರಾಗಿ 27 ಮಂದಿ ಕನ್ನಡದಲ್ಲಿ ಮತ್ತು ಉತ್ತರ ಕನ್ನಡ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತ್ರ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರೆಂಬ ಸುದ್ದಿ (ಪ್ರ.ವಾ., ಜೂನ್‌ 25) ಅವರ ಮೂಲ ನಿಷ್ಠೆಯನ್ನು ಸೂಚಿಸುವುದಲ್ಲದೆ, ಕನ್ನಡಿಗರ ಕಿಂಚಿತ್ ಸಂತಸಕ್ಕೂ ಸ್ವಲ್ಪಮಟ್ಟಿಗೆ ಕೊರತೆಯನ್ನು ಉಂಟುಮಾಡಿದೆ. ದೆಹಲಿಯ ಗದ್ದುಗೆಯೇರಲು ವಿಮಾನವೇರಿದ ತಕ್ಷಣ ಕಾಗೇರಿಯವರಿಗೆ ಕನ್ನಡಮ್ಮ ಮರೆತುಹೋದಳೇ? ಅಥವಾ ಅನೇಕರು ಭಾವಿಸಿರುವ ಹಾಗೆ ಇವರಿಗೂ ಎಲ್ಲ ಭಾರತೀಯ ಭಾಷೆಗಳ ಮೂಲ ಸಂಸ್ಕೃತ ಭಾಷೆ ಎಂಬ ಭ್ರಮೆ ಆವರಿಸಿದೆಯೇ? ದಕ್ಷಿಣ ಭಾರತದ ಭಾಷೆಗಳ ಮೂಲ ಸಂಸ್ಕೃತ ಅಲ್ಲ, ಅದು ದ್ರಾವಿಡ ಭಾಷೆ ಮತ್ತು ಬಹುಪಾಲು ಉತ್ತರ ಭಾರತದ ಭಾಷೆಗಳ ಮೂಲ ಸಂಸ್ಕೃತ ಭಾಷೆ ಎಂಬುದನ್ನು ಭಾಷಾಶಾಸ್ತ್ರಜ್ಞರ ಸಂಶೋಧನೆಗಳು ಹೇಳುತ್ತವೆ ಎಂಬ ವಾಸ್ತವಾಂಶವನ್ನು ಇವರಿಗೆ ಯಾರು ತಿಳಿಸಿಕೊಡಬೇಕೊ ಅರ್ಥವಾಗುತ್ತಿಲ್ಲ! ಕಾಗೇರಿ ಅವರಲ್ಲಿ ಸುಪ್ತವಾಗಿರಬಹುದಾದ ಈ ‘ಶ್ರೇಷ್ಠತೆಯ ವ್ಯಸನ’ದ ಕುರುಹನ್ನು ಅರಹುವ ಈ ಕ್ರಿಯೆ ನಿಜವಾದ ಕನ್ನಡಿಗರಿಗಂತೂ ಅಸಮಾಧಾನ ಉಂಟುಮಾಡಿದೆ. →→→ ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಕಾಯುತ್ತಿದ್ದಾರೆ ಪಕೋಡಾಪ್ರಿಯರು! 

ನಮಗ ಮಳಿ ಅಂದ್ರ, ಬಿಸಿ ಬಿಸಿ ಉಳ್ಳಾಗಡ್ಡಿ ಪಕೋಡ ಹೊಟ್ಟಿಗೆ ಸೇರಬೇಕು, ಅಂದ್ರ ಅದು ಮಳಿ. ವರುಣ ದೇವ ಸಿಟ್ಟಿನಿಂದ ಆರ್ಭಟಿಸುತ್ತಾ ಗುಡುಗು, ಸಿಡಿಲಿನ ಹಿಮ್ಮೇಳದೊಂದಿಗೆ ಧೋ ಎಂದು ಸುರಿಯುವ ಸಮಯವೇ ನಮ್ಮ ಈ ‘ಪಕೋಡ’ ಸಮಯ. ಮಳೆನೀರು ಹರಿಯುವುದನ್ನು ನೋಡುತ್ತಾ ಹಬೆಯಾಡುತ್ತಿರುವ ಪಕೋಡ ಹೊಟ್ಟಿಗಿ ಇಳಸ್ತಾ, ಆಮ್ಯಾಲ, ಚಾ ಕುಡಿಯೋ ಸುಖದ‌ ಮುಂದ ಬ್ಯಾರೆ ಏನೂ ಇಲ್ಲ ಬಿಡ್ರಿ. ಮಳಿಗಾಲದ ಮೊದಲ ಮಾಸ ಮುಗೀಲಿಕ್ಕ ಬಂದ್ರೂ ಇನ್ನಾ ಪಕೋಡ ತಿನ್ನಾಕ ಬೇಕಾದ ಮಳಿ ಬಂದಾ ಇಲ್ರಿ. ದಿನಾ ಆಕಾಶ ನೋಡೂದಾ ಆಗೇತಿ. ಆ ಮಳಿರಾಯ ಜೋರಾಗಿ ಹುಯ್ದು, ಪಕೋಡಾಪ್ರಿಯರ ಆಸಿನಾ ಯಾವಾಗ ಪೂರ್ತಿ ಮಾಡ್ಯಾನೋ ಅಂತ ಕಾಯೂದಾ ನಡದದ. ಹೇ ವರುಣ ದೇವಾ, ಕೃಪೆ ಮಾಡು.

ವೆಂಕಟೇಶ್ ಮುದಗಲ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.