ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 1 ಅಕ್ಟೋಬರ್ 2024, 23:30 IST
Last Updated 1 ಅಕ್ಟೋಬರ್ 2024, 23:30 IST
   

ವಿವಾದದಿಂದ ಪಾಠ ಕಲಿಯದ ಕೆಇಎ

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಆಗಿದ್ದ ಅನುವಾದದಲ್ಲಿ ಎಡವಟ್ಟುಗಳಾಗಿ ವಿವಾದ ಸೃಷ್ಟಿಯಾಗಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಚ್ಚೆತ್ತುಕೊಂಡಿಲ್ಲ. ಗ್ರಾಮ ಆಡಳಿತಾಧಿಕಾರಿ ಹಾಗೂ ಜಿಟಿಟಿಸಿಯ ಹುದ್ದೆಗಳಿಗೆ ಭಾನುವಾರ ನಡೆದ ಪರೀಕ್ಷೆಯ ಕಡ್ಡಾಯ ಕನ್ನಡ ಪ್ರಶ್ನೆಪ‍ತ್ರಿಕೆಯಲ್ಲಿ ಕನ್ನಡದ ಅಕ್ಷರಗಳನ್ನು ತಪ್ಪಾಗಿ ಮುದ್ರಿಸುವ ಮೂಲಕ ಪರೀಕ್ಷಾರ್ಥಿಗಳಲ್ಲಿ ಗೊಂದಲ ಮೂಡಿಸಲಾಯಿತು.

ಕೆಪಿಎಸ್‌ಸಿ ಮತ್ತು ಕೆಎಇ ಇಂತಹ ತಪ್ಪುಗಳ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಲೇ ಇವೆ. ಮುಂದಿನ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು.

ADVERTISEMENT

ಸಾಬಣ್ಣ ಎಚ್. ನಂದಿಹಳ್ಳಿ, ಶಹಾಪುರ, ಯಾದಗಿರಿ

ಗಾಂಧಿ ಕೃತಿ ಸಂಪುಟ ಮರುಮುದ್ರಣವಾಗಲಿ 

ಭಾರತ ಸರ್ಕಾರದ ಪ್ರಕಾಶನ ವಿಭಾಗವು ‘ದಿ ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ’ ಎಂಬ ಹೆಸರಿನಡಿ ನೂರು ಸಂಪುಟಗಳನ್ನು ಇಂಗ್ಲಿಷ್, ಹಿಂದಿ, ಗುಜರಾತಿ ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಕಟಿಸಿದೆ. 1956ರಲ್ಲಿ ಆರಂಭಗೊಂಡ ಈ ಯೋಜನೆ ಸತತ ಪರಿಶ್ರಮದಿಂದ 1994ರಲ್ಲಿ 100ನೇ ಸಂಪುಟವನ್ನು ಪ್ರಕಟಿಸಿತು. ಗಾಂಧೀಜಿ ವಿಚಾರಗಳು ಎಲ್ಲರಿಗೂ ಲಭ್ಯವಾದವು. ಈ ದಿಸೆಯಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾಭವನವೂ ಮಹಾತ್ಮ ಗಾಂಧಿ ಕೃತಿ ಸಂಪುಟಗಳನ್ನು ಕನ್ನಡ ಅವತರಣಿಕೆಯಲ್ಲಿ ತರುವ ಉದ್ದೇಶದಿಂದ 1995ರಲ್ಲಿ ಗಾಂಧೀಜಿಯ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತು. ಎಚ್.ಡಿ.ದೇವೇಗೌಡ ಅವರು ಈ ಕೆಲಸಕ್ಕೆ ಸಹಕಾರ ನೀಡಿದ್ದರು. ಆದರೆ ಇಂದು ಅವುಗಳ ಪ್ರಕಟಣೆ ವಿಷಯ ಬಹಳ ಜನರಿಗೆ ತಿಳಿದಿಲ್ಲ. ಪೂರ್ಣ ಪ್ರಮಾಣದ ಪ್ರಕಟಣೆಗಳು ಓದುಗರಿಗೆ ಲಭ್ಯವಾಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಂಪುಟಗಳು ಹಳೆ ಬುಕ್‌ಸ್ಟಾಲ್‌ಗಳಲ್ಲಿ ಮಾತ್ರ ಸಿಗುತ್ತಿವೆ.

ಪ್ರಸ್ತುತ ದಿನಮಾನಗಳಲ್ಲಿ ಗಾಂಧಿ ವಿಚಾರಧಾರೆಗಳು ಜನಸಮುದಾಯವನ್ನು, ಯುವ ಪೀಳಿಗೆಯನ್ನು ಮುಟ್ಟಬೇಕಾಗಿದೆ. ಏಕೆಂದರೆ ಗಾಂಧಿ ಕುರಿತಾದ ಅಪನಂಬಿಕೆಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಈ ಕೊರತೆಯನ್ನು ನೀಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹಾಗಾಗಿ, ಗಾಂಧೀಜಿಯ 155ನೇ ಜನ್ಮದಿನದ ಪ್ರಯುಕ್ತ ಗಾಂಧಿ ಕುರಿತಾದ ಕೃತಿ ಸಂಪುಟಗಳನ್ನು ಮರುಮುದ್ರಣ ಮಾಡಬೇಕಾದ ಅವಶ್ಯಕತೆ ಇದೆ. ಗಾಂಧಿ ತತ್ವದ ಅರಿವನ್ನು ಜನಸಾಮಾನ್ಯರು, ವಿದ್ಯಾರ್ಥಿಗಳು, ರಾಜಕೀಯ ಒಡನಾಡಿಗಳಲ್ಲಿ ಒಡಮೂಡಿಸಬೇಕಿದೆ. ಗಾಂಧಿ ಗುಣವನ್ನು ಸರ್ವರಲ್ಲೂ ಕಾಣುವ ಜಾಯಮಾನ ನಮ್ಮದಾಗಬೇಕಾಗಿದೆ. ಗಾಂಧಿ ಹುಟ್ಟಿದ ದಿನವಾದ ಅಕ್ಟೋಬರ್‌ ಎರಡನ್ನು ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ಅಹಿಂಸಾ ದಿನ’ವನ್ನಾಗಿ ಘೋಷಿಸಿರುವುದು ಗಾಂಧಿತನಕ್ಕಿರುವ ತಾಕತ್ತು ಎಂಬುದನ್ನು ನಾವು ಮರೆಯಬಾರದು. ಹಾಗಾಗಿ, ರಾಜ್ಯ ಸರ್ಕಾರ ಕೂಡಲೇ  ಮನೆಮನೆಗೂ ಗಾಂಧಿ ವಿಚಾರಧಾರೆಗಳನ್ನು ಮುಟ್ಟಿಸುವಂತಹ ಕಾರ್ಯ ಕೈಗೊಳ್ಳುವಂತಾಗಲಿ. ಗಾಂಧೀಜಿಯ ಪುಸ್ತಕಗಳನ್ನು ಮರುಮುದ್ರಣಗೊಳಿಸುವ ಉತ್ಸಾಹ ತೋರಲಿ. ಗಾಂಧಿತನ ನಮ್ಮ-ನಿಮ್ಮೆಲ್ಲರದಾಗಲಿ.

ಕೆ.ರಾಜೇಂದ್ರಕುಮಾರ್ ಡಿ. ಮುದ್ನಾಳ್, ಯಾದಗಿರಿ 

ಮಕ್ಕಳಿಗೆ ಮೊಟ್ಟೆ: ನಕಾರಾತ್ಮಕ ಯೋಚನೆ ಬೇಡ

ಮೊಟ್ಟೆ ಪಡೆಯದ ಸರ್ಕಾರಿ ಶಾಲಾ ಮಕ್ಕಳಿಗೆ ಅದಕ್ಕೆ ಬದಲಾಗಿ ನೀಡುವ ಚಿಕ್ಕಿಯ ಗುಣಮಟ್ಟವನ್ನು ಪರೀಶೀಲನೆಗೆ ಒಳಪಡಿಸಬೇಕು ಎಂದು ಹೇಳುವ ಮೂಲಕ (ವಾ.ವಾ., ಸೆ. 30) ಹರಿಪ್ರಸಾದ್ ಸುಳ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಕಡ್ಲೆಚಿಕ್ಕಿ ತಯಾರಿಕೆಯಲ್ಲಿ ರಾಸಾಯನಿಕ ಬಳಸಬಹುದು, ಶಾಲೆಯ ಕಸದ ತೊಟ್ಟಿಯೆಲ್ಲಾ ಚಿಕ್ಕಿಯ ಪ್ಲಾಸ್ಟಿಕ್ ರ್‍ಯಾಪರ್‌ನಿಂದ ತುಂಬಿ ಹೋಗುತ್ತದೆ ಎಂದು ನಕಾರಾತ್ಮಕವಾಗಿ ಯೋಚಿಸಿದ್ದಾರೆ.

ಮೊಟ್ಟೆಯು ಉತ್ತಮ ಗುಣಮಟ್ಟ ಹೊಂದಿಲ್ಲದೇ ಇರಬಹುದು, ದೊಡ್ಡ ಗಾತ್ರದ ಬಾಳೆಹಣ್ಣು ನೀಡಿ ಎಂದೆಲ್ಲಾ ಹೇಳಲು ಸಾಧ್ಯವೇ? ಈಗ ಮಕ್ಕಳಿಗೆ ಬೇಕಾಗಿರುವುದು ಪ್ರೋಟೀನ್‌ಯುಕ್ತ ಆಹಾರ. ಹೀಗಾಗಿ, ಮೊಟ್ಟೆಯನ್ನು ತಿನ್ನದ ಶಾಲಾ ಮಕ್ಕಳಿಗೆ ಬಾಳೆಹಣ್ಣು ಅಥವಾ ಕಡ್ಲೆಚಿಕ್ಕಿಯನ್ನು ಕೊಡುವುದು ಮಕ್ಕಳಲ್ಲಿ ಪೋಷಕಾಂಶದ ಕೊರತೆಯನ್ನು ನೀಗಿಸಬಹುದು. ಇದು ಒಂದು ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಿಸುವ ಒಂದು ಮಾರ್ಗ ಸಹ.

ಬೂಕನಕೆರೆ ವಿಜೇಂದ್ರ, ಮೈಸೂರು

ಶಿಕ್ಷಕರ ದಿನ: ಆಚರಣೆ ತಡವೇಕೆ?   

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 30ರಂದು
ಹಮ್ಮಿಕೊಳ್ಳಲಾಗಿತ್ತು. ಬೇರೆ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ಸೆಪ್ಟೆಂಬರ್ 5 ಅಥವಾ ಇದೇ ತಿಂಗಳ ಮೊದಲ ವಾರದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗಿದೆ. ಆದರೆ ಸುರಪುರ ತಾಲ್ಲೂಕು ಮಾತ್ರ ಎಲ್ಲದರಲ್ಲೂ ‘ಹಿಂದುಳಿಯಲು’ ಪೈಪೋಟಿ ನಡೆಸುತ್ತಿದೆಯೇನೋ ಎಂಬಂತೆ ಕಾಣಿಸುತ್ತದೆ!

ಸೆ. 25ಕ್ಕೆ ನಿಗದಿಯಾಗಿದ್ದ ಪ್ರೌಢಶಾಲೆಯ ವಿಜ್ಞಾನ ವಿಷಯದ ಪರೀಕ್ಷೆಯನ್ನು ಕಾರಣಾಂತರದಿಂದ ಸೆ. 30ಕ್ಕೆ ಮುಂದೂಡಲಾಗಿತ್ತು. ಅಂದು ಪರೀಕ್ಷೆ ಮುಗಿದ ನಂತರ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಸೂಚಿಸಿದ್ದಾಗಿ ಶಿಕ್ಷಕರೊಬ್ಬರು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದ ಪ್ರಕಾರ, ಅಂದು ಶಿಕ್ಷಕರು ಮುಂಜಾನೆ ಅವಧಿ ಶಾಲೆ ನಡೆಸಿ ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು! ಗಡಿಯಲ್ಲಿರುವ ಶಾಲೆಗಳ ಶಿಕ್ಷಕರು ತಾಲ್ಲೂಕು ಕೇಂದ್ರವನ್ನು ತಲುಪಲು ಸುಮಾರು ಎರಡು ಗಂಟೆಯಾದರೂ ಬೇಕಾಗುತ್ತದೆ. ಇವರಲ್ಲಿ ಎಷ್ಟು ಮಂದಿಗೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಬಹುದು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ಪರೀಕ್ಷಾ ಫಲಿತಾಂಶದಲ್ಲಿ, ಅಭಿವೃದ್ಧಿಯಲ್ಲಿ ಈ ತಾಲ್ಲೂಕು ಹಿಂದುಳಿಯಲು ಕಾರಣಗಳು ಇರಬಹುದು. ಆದರೆ ಶಿಕ್ಷಕರ ದಿನಾಚರಣೆ ಮಾಡುವುದರಲ್ಲಿಯೂ ಹಿಂದುಳಿಯಲು ಏನು ಕಾರಣವೋ ತಿಳಿಯದು. ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಶಿಕ್ಷಕರ ದಿನ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು.

ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.