ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
   

ಮಹನೀಯರ ಕುರಿತು ಕಪೋಲಕಲ್ಪಿತ ವಿಚಾರ

‘ಗಾಂಧೀಜಿ ಕುರಿತಾದ ಅಪಪ್ರಚಾರಗಳಿಗೆ ಜನ ಮಾರುಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ಸರ್ಕಾರದ ಮೇಲಿರುವುದರಿಂದ, ಗಾಂಧಿ ಕುರಿತಾದ ಕೃತಿ ಸಂಪುಟಗಳನ್ನು ಮರುಮುದ್ರಣ ಮಾಡಬೇಕು’ ಎಂಬ ರಾಜೇಂದ್ರಕುಮಾರ್ ಡಿ. ಮುದ್ನಾಳ್ ಅವರ ಅಭಿಪ್ರಾಯ (ವಾ.ವಾ., ಅ. 1) ಸರಿಯಾಗಿದೆ. ಸಹಿಷ್ಣುತೆ, ಸಹಬಾಳ್ವೆ, ಸಮನ್ವಯದ ಪ್ರತೀಕವಾಗಿದ್ದ ಗಾಂಧಿ ಬಗೆಗೆ,  ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬರು 155ನೇ ಗಾಂಧಿ ಜಯಂತಿ ಆಚರಣೆಯ ದಿನ ತಮ್ಮ ಭಾಷಣದುದ್ದಕ್ಕೂ ಆಡಿದ ಅಸಹನೆಯ ಮಾತುಗಳನ್ನು ಕೇಳಿಸಿಕೊಂಡಾಗ, ಗಾಂಧಿ ಸಾಂಕೇತಿಕವಾಗಿ ಮಾತ್ರ ನಮ್ಮೊಡನೆ ಜೀವಂತವಾಗಿದ್ದಾರೆ ಎಂದೆನಿಸಿತು. ಅಪಮೌಲ್ಯಗಳೇ ಮೌಲ್ಯಗಳಾಗಿ ಪ್ರತಿಷ್ಠಾಪನೆ
ಯಾಗುತ್ತಿರುವ, ಹಿಂಸೆಯ ಸಮರ್ಥನೆಯ ಜೊತೆಗೆ ಸಹಜವಾಗುತ್ತಿರುವ, ಸರಳತೆ ಎಂಬುದು ಸವಕಲು ನಾಣ್ಯವಾಗಿ ಆಡಂಬರವೇ ಪ್ರಚಾರ ಪಡೆಯುತ್ತಿರುವ, ನಮ್ಮ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯವನ್ನು ಕೇಳಿಸಿಕೊಳ್ಳದೆ, ಭಿನ್ನ ದನಿಗಳನ್ನು ಹತ್ತಿಕ್ಕುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಗಾಂಧೀಜಿ ವಿಚಾರಗಳು ಎಲ್ಲರ ಮನೆಮನ ತಲುಪುವ ತುರ್ತು ಖಂಡಿತವಾಗಿಯೂ ಇದೆ.

ಭಿನ್ನ ದನಿಗಳ ಬಗೆಗಿನ ಅಸಹನೆಯನ್ನು ಕ್ರಿಸ್ತಪೂರ್ವದ ಗ್ರೀಕರ ಕಾಲದಲ್ಲಿಯೇ ಕಾಣಬಹುದಾದರೂ, ನಾಗರಿಕತೆ ಬೆಳೆದಂತೆ ಇದು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿರುವುದು ದುರಂತ. ಮಹನೀಯರ ಕುರಿತ ಕಪೋಲಕಲ್ಪಿತ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಲ್ಲದೆ, ಮುಂದಿನ ಪೀಳಿಗೆ ಇದನ್ನೇ ಸತ್ಯವೆಂದು ನಂಬುವ ಸಾಧ್ಯತೆ ಇದೆ. ಹಾಗಾಗಿ, ಮಹನೀಯರ ತತ್ವಾದರ್ಶಗಳನ್ನು ಸಮಚಿತ್ತದಿಂದ ಅರಿಯಬೇಕಾದರೆ ಅವರ ಕುರಿತ ಪುಸ್ತಕಗಳು ಪ್ರಕಟವಾಗುವುದರ ಜೊತೆಗೆ ಶಾಲಾಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಹನೀಯರ ಬಗೆಗಿನ ವಿಚಾರಗೋಷ್ಠಿಗಳು, ಪ್ರಬಂಧ ಸ್ಪರ್ಧೆಗಳು, ಚರ್ಚಾಸ್ಪರ್ಧೆಗಳನ್ನು ಏರ್ಪಡಿಸಬೇಕಾಗಿದೆ. ಜೊತೆಗೆ ವಾರಕ್ಕೊಂದು ದಿನವಾದರೂ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲಾಗಬಹುದು.

ADVERTISEMENT

⇒ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ಹೃದಯ ವೈಶಾಲ್ಯ ಮೆರೆದ ಪ್ರಧಾನಿ

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಾ ಅಸ್ವಸ್ಥರಾದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ತಾವು ಸಾಯುವುದಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿತ್ತು. ಖರ್ಗೆ ಅವರು ಅಸ್ವಸ್ಥರಾದ ವಿಷಯ ಅರಿತ ಪ್ರಧಾನಿ ಮೋದಿ, ಖರ್ಗೆಯವರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸುವ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದಾರೆ. ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ ಎನ್ನುವವರ ಬಗ್ಗೆ ಕೂಡ ಮೋದಿಯವರು ಅಕ್ಕರೆ, ಅಭಿಮಾನ ತೋರಿಸಿರುವುದು ಅವರ ದೊಡ್ಡತನವೇ ಹೌದು.

⇒ಕೆ.ವಿ.ವಾಸು, ಮೈಸೂರು

ಸ್ಥಳೀಯವಾಗೇ ತಯಾರಾಗಲಿ ಕಡ್ಲೆಚಿಕ್ಕಿ

ಶಾಲಾ ಮಕ್ಕಳಿಗೆ ಕೊಡುವ ಕಡ್ಲೆಚಿಕ್ಕಿಯ ಗುಣಮಟ್ಟದ ಬಗೆಗೆ ನಾನು ಎತ್ತಿರುವ ಪ್ರಶ್ನೆಗಳ ಕುರಿತು (ವಾ.ವಾ., ಸೆ. 30) ವಿಜೇಂದ್ರ ಬೂಕನಕೆರೆ ಅವರು ‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’ (ವಾ.ವಾ., ಅ. 2) ಎಂದಿದ್ದಾರೆ. ಬದಲಾಗಿ, ಚಿಕ್ಕಿಯಲ್ಲಿ ಕಲ್ಲು ಸಿಕ್ಕಿದ ಕಾರಣ, ಆ ಕಲ್ಲಿನ ಮೂಲ ಹುಡುಕುವಾಗ ಅದರ ಗುಣಮಟ್ಟದ ಬಗೆಗೆ ಸಂದೇಹ ಪಡುವಂತಾಯಿತು. ಆಕಸ್ಮಿಕವೆಂದರೆ, ನನ್ನ ಬರಹ ಪ್ರಕಟವಾದ ದಿನವೇ ಪತ್ರಿಕೆಯಲ್ಲಿ ಆಹಾರ ಸುರಕ್ಷತೆಯ ಸೂಚ್ಯಂಕದಲ್ಲಿ ಕರ್ನಾಟಕ 17ನೇ ಸ್ಥಾನದಲ್ಲಿ ಇರುವ ಕುರಿತ ಲೇಖನ ಪ್ರಕಟವಾಗಿದೆ. ಅದುವೇ ನನ್ನ ಸಮಸ್ಯೆ. 

ಶಾಲಾ ಮಕ್ಕಳಿಗೆ ಚಿಕ್ಕಿ ಅಥವಾ ಮೊಟ್ಟೆ ಕೊಡುವ ಯೋಜನೆ ಅತಿ ಅವಶ್ಯ. ಹಾಗೆಯೇ ಒಳ್ಳೆಯ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಸಮಗ್ರ ಸುಧಾರಣೆ ತಂದು, ಆ ಮೂಲಕ ಕುಪೋಷಣೆ ಎಂಬ ಮಾರಿಯನ್ನು ಸೋಲಿಸಬೇಕಾಗಿದೆ. ಈ ಚಿಕ್ಕಿಗಳು ಉತ್ತರ ಭಾರತದ ರಾಜ್ಯಗಳಲ್ಲಿ ತಯಾರಾಗುತ್ತವೆ. ಅವುಗಳಿಗೆ ಇಲ್ಲಿಯ ಯಾವುದೋ ಲೇಬಲ್ ಹಾಕಿ ಮಾರಾಟ ಮಾಡುವ ಅಗೋಚರ ಶಕ್ತಿಯಿಂದ ಮುಕ್ತಿ ಪಡೆಯಬೇಕಿದೆ. ಯಾವಾಗ ಸ್ಥಳೀಯವಾಗಿ ತಯಾರಾಗುತ್ತವೋ ಆಗ ನಾವು ಅವುಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಬಹುದು. ಸರ್ಕಾರ ಕೆಎಂಎಫ್‌ನಂತಹ ಸಂಸ್ಥೆಯಿಂದ ಚಿಕ್ಕಿಯನ್ನು (ಈಗಾಗಲೇ ನಂದಿನಿ ಬ್ರ್ಯಾಂಡ್‌ನಡಿ ಸಿಹಿ ತಿಂಡಿ ತಯಾರಿಸಿ ಅನುಭವ ಇರುವುದರಿಂದ) ತಯಾರಿಸಿ ಕೊಡುವ ಯೋಜನೆ ಹಾಕಿಕೊಂಡರೆ ಇನ್ನೂ ಉತ್ತಮ.

⇒ಹರಿಪ್ರಸಾದ ಸಿ., ಸುಳ್ಯ

ಅಕ್ರಮ ಕಟ್ಟಡ ತೆರವು: ನಾಯಕರ ಸಹಕಾರ ಅಗತ್ಯ

ಸಾರ್ವಜನಿಕ ಸುರಕ್ಷತೆಗೆ ಅಡ್ಡಿ ಉಂಟು ಮಾಡುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದು ಸಮಂಜಸವಾಗಿದೆ. ಇದನ್ನು ಎಲ್ಲಾ ಧರ್ಮದ ಜನ ಮತ್ತು ಧಾರ್ಮಿಕ ನಾಯಕರು ಒಪ್ಪಿಕೊಂಡು, ಅನಧಿಕೃತ ಕಟ್ಟಡ ತೆರವುಗೊಳಿಸಲು ಸರ್ಕಾರದ ಜೊತೆ ಸಹಕರಿಸಬೇಕು. ಅಷ್ಟೇ ಅಲ್ಲ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕೆಲವೊಮ್ಮೆ ಅಧಿಕೃತವಾಗಿರುವ ಧಾರ್ಮಿಕ ಕಟ್ಟಡ ತೆರವುಗೊಳಿಸಲು ಅಥವಾ ಸ್ಥಳಾಂತರ ಮಾಡಲು ಜನತೆ ಸಹಕರಿಸಬೇಕು. ಇಸ್ಲಾಂನ ಪವಿತ್ರ ಕ್ಷೇತ್ರಗಳಾದ ಮೆಕ್ಕಾ, ಮದೀನಾದಲ್ಲೇ ಯಾತ್ರಾರ್ಥಿಗಳಿಗೆ ಸೌಲಭ್ಯ ಒದಗಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಮಸೀದಿ, ಸಮಾಧಿಗಳನ್ನು ಅಲ್ಲಿಯ ಸರ್ಕಾರವೇ ತೆರವುಗೊಳಿಸಿದೆ, ಸ್ಥಳಾಂತರ ಮಾಡಿದೆ. ಹಾಗೆಯೇ ಕ್ರೈಸ್ತ ಸಮುದಾಯದವರು ಹೆಚ್ಚಾಗಿರುವ
ರಾಷ್ಟ್ರಗಳಲ್ಲಿ ಕೂಡ ನೂರಾರು ಚರ್ಚ್‌ಗಳನ್ನು ಇದೇ ಕಾರಣಕ್ಕೆ ತೆರವು ಮಾಡಲಾಗಿದೆ. ನಮ್ಮ ದೇಶದಲ್ಲಿ ಸಹ ದೇವಸ್ಥಾನ ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ತೆರವು ಅಥವಾ ಸ್ಥಳಾಂತರ ಮಾಡಲಾಗಿದೆ.

ದೇವರು ಸರ್ವಾಂತರ್ಯಾಮಿ ಮತ್ತು ಸೀಮಾತೀತ. ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳಲ್ಲಿ ಮಾತ್ರ
ನೆಲಸಿರುವುದಿಲ್ಲ. ರಾಜಕಾರಣಿಗಳು ಮತ್ತು ಆಯಾಯ ಧರ್ಮದ ಧಾರ್ಮಿಕ ನಾಯಕರು ದೇಶದ ಅಭಿವೃದ್ಧಿಗಾಗಿ ಅಕ್ರಮ ಕಟ್ಟಡಗಳ ತೆರವಿಗೆ ಸಹಕರಿಸಬೇಕು. ಜನರಿಗೆ ತಿಳಿವಳಿಕೆ ನೀಡಬೇಕು. ಅಭಿವೃದ್ಧಿಗೆ ಆದ್ಯತೆ ನೀಡಿ, ಅನಿವಾರ್ಯ ಪರಿಸ್ಥಿತಿ ಬಂದರೆ ಅಧಿಕೃತ ಧಾರ್ಮಿಕ ಕಟ್ಟಡವನ್ನೂ ತೆರವು ಮಾಡಿ ಸ್ಥಳಾಂತರಕ್ಕೆ ಬೆಂಬಲಿಸುವುದು ಅಗತ್ಯ. ಈ ದಿಸೆಯಲ್ಲಿ ಸುಪ‍್ರೀಂ ಕೋರ್ಟ್‌ ರೂಪಿಸಲಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸುವುದರಿಂದ ದೇಶಕ್ಕೆ ಒಳಿತು.

⇒ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.