ADVERTISEMENT

ವಾಚಕರ ವಾಣಿ | ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
   

ರಾಜಕೀಯಕ್ಕೆ ಬರಲಿ ಹೊಸತನ

ರಾಜಕೀಯ ಪಕ್ಷಗಳಲ್ಲಿ ವಂಶಾಡಳಿತವು ಪ್ರಜಾತಂತ್ರ ಮೌಲ್ಯಗಳಿಗೆ ವ್ಯತಿರಿಕ್ತವಾದುದು ಎಂದು ಪ್ರತಿಪಾದಿಸಿರುವ ಸಂಪಾದಕೀಯ (ಪ್ರ.ವಾ., ಅ. 3) ರಾಜಕಾರಣಿಗಳ ಕಣ್ತೆರೆಸಬೇಕಿದೆ. ತನ್ನ ನಂತರ ತನ್ನ ಮಕ್ಕಳು, ಮೊಮ್ಮಕ್ಕಳು ಸಹ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಕೆಲವರ ದುರಾಸೆ ಕಂಡು ಜನರಿಗೆ ವಾಕರಿಗೆ ಬರುವಂತಾಗಿದೆ. ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಈ ಸಂಬಂಧದ ಆರೋಪಕ್ಕೆ ಒಳಗಾಗಿದ್ದರು. ಈ ಚಾಳಿಯನ್ನು ಈಗ ಎಲ್ಲೆಡೆಯೂ ಕಾಣಬಹುದು. ಪ್ರಾದೇಶಿಕ ಪಕ್ಷಗಳಲ್ಲಿ ಈ ಪಿಡುಗು ಉಲ್ಬಣಿಸಿದೆ. ಜನರಿಗೆ ಇಷ್ಟವಿಲ್ಲದಿದ್ದರೂ ಇದನ್ನು ಸಹಿಸಿಕೊಳ್ಳುವ ಅನಿವಾರ್ಯ ಬಂದೊದಗಿದೆ. ಹೊಸ ನಾಯಕತ್ವ, ಹೊಸ ಆಲೋಚನೆ, ಹೊಸ ನೀರು ಹೀಗೆ ಹೊಸತನ ತುಂಬಿದ ಸಮಾಜ ಹಾಗೂ ಪಾರದರ್ಶಕ ಮೌಲ್ಯಾಧಾರಿತ ಆಡಳಿತವು ದೇಶದ ಪ್ರಗತಿಗೆ ಅಗತ್ಯ.

⇒ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು

ADVERTISEMENT

ರಾಜ್ಯ ಶಿಕ್ಷಣ ನೀತಿಯಲ್ಲೇ ಐಚ್ಛಿಕ ಕನ್ನಡಕ್ಕೆ ಕುತ್ತು?

ರಾಜ್ಯದ ಪದವಿ ಶಿಕ್ಷಣ ಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‍ಇಪಿ) ಬದಲಾಗಿ ರಾಜ್ಯ ಶಿಕ್ಷಣ ನೀತಿಯನ್ನು (ಎಸ್‍ಇಪಿ) ಪ್ರಸಕ್ತ ವರ್ಷದಿಂದ ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ‘ನಾನ್ ಎನ್‍ಇಪಿ’ ಸೆಮಿಸ್ಟರ್ ಹಾಗೂ ಎನ್‍ಇಪಿ ಸೆಮಿಸ್ಟರ್ ಶಿಕ್ಷಣ ಪದ್ಧತಿಯಲ್ಲಿ ಪ್ರಥಮ ವರ್ಷದ ಐಚ್ಛಿಕ ಕನ್ನಡದ ಆರು ಗಂಟೆಗಳಿದ್ದ ಬೋಧನಾ ಕಾರ್ಯಭಾರ ಅವಧಿಯನ್ನು ಕೆಲವು ವಿಶ್ವವಿದ್ಯಾಲಯಗಳು ಎಸ್‍ಇಪಿ ಸೆಮಿಸ್ಟರ್‌ನಲ್ಲಿ ಐದು ಗಂಟೆಗಳ ಅವಧಿಗೆ ಇಳಿಸುತ್ತಿರುವುದು
ವಿಷಾದನೀಯ. ಬಹುತೇಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಬೇಡಿಕೆಯಂತೆ, ಐಚ್ಛಿಕ ಕನ್ನಡ ವಿಷಯವನ್ನು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ಅನುಕೂಲವಾಗುವ ರೀತಿ, ಹಿಂದೆ ಇದ್ದ ಆರು ಗಂಟೆಗಳ ಬೋಧನಾ ಅವಧಿಯನ್ನು ಮುಂದುವರಿಸುವುದು ಅತ್ಯಗತ್ಯ.

⇒ಸಂಪತ್ ಬೆಟ್ಟಗೆರೆ, ಮೂಡಿಗೆರೆ

ಪ್ರಬುದ್ಧ ಚರ್ಚೆ: ಪಾಶ್ಚಿಮಾತ್ಯರ ಮಾದರಿ

ವಿಭಿನ್ನ ಚಿಂತನೆ, ವಿಭಿನ್ನ ಪಕ್ಷಗಳಿಗೆ ಸೇರಿದವರಾದರೂ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಅವರ ನಡುವಣ ಟೆಲಿವಿಷನ್ ಚರ್ಚೆಯು ಅನುಕರಣೀಯವಾಗಿರುತ್ತದೆ. ಒಬ್ಬರು ಸಂಪೂರ್ಣವಾಗಿ ಮಾತನಾಡಿದ ನಂತರ ಇನ್ನೊಬ್ಬರು ತಮ್ಮ ವಾದ ಮಂಡಿಸುವುದನ್ನು ನೋಡುವುದು ಖುಷಿ ಕೊಡುತ್ತದೆ. ನಮ್ಮಲ್ಲಿ ರಾಜಕೀಯ ಮುಖಂಡರು ಅಥವಾ ಕಾರ್ಯಕರ್ತರು ಟಿ.ವಿ. ಚರ್ಚೆಯಲ್ಲಿ ಕಿರುಚಾಡುವುದೇ ಮಹಾನ್ ಸಾಧನೆ ಎಂಬಂತೆ ನಡೆದುಕೊಳ್ಳುತ್ತಾರೆ. ಸಭ್ಯತೆಯ ಸಂವಾದವನ್ನು ನಮ್ಮ ರಾಜಕಾರಣಿಗಳು ಪಶ್ಚಿಮದಿಂದ ಏಕೆ ಕಲಿಯಬಾರದು?

⇒ಗುರು ಜಗಳೂರು, ಹರಿಹರ

ಮೌಲಿಕವಲ್ಲದ ಸಾಧನೆಗೆ ಪ್ರಶಸ್ತಿ?

ಮಿಥುನ್‌ ಚಕ್ರವರ್ತಿ ಅವರಿಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಂದಿರುವುದರ ಸಂದರ್ಭದಲ್ಲಿ ಪ್ರಕಟವಾದ ‘ಫುಟ್‌ಪಾತ್‌ನಿಂದ ಫಾಲ್ಕೆ ಗರಿಯವರೆಗೆ’ ಲೇಖನ (ಪ್ರ.ವಾ., ಅ. 1) ಓದಿದ ಬಳಿಕ ‘ಆ ಪ್ರಶಸ್ತಿಗೆ ಅವರು ಅರ್ಹರೆ?’ ಎಂಬ ಪ್ರಶ್ನೆ ಮೂಡಿತು. 1969ರಿಂದ 2023ರವರೆಗಿನ ದಾದಾಭಾಯಿ ಫಾಲ್ಕೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಗಮನಿಸಿದ್ದೇನೆ. ಭಾರತೀಯ ಚಿತ್ರರಂಗಕ್ಕೆ ಗಮನಾರ್ಹ ಕೊಡುಗೆ ನೀಡಿರಬೇಕು. ಅದು ಜೀವಮಾನಸಾಧನೆ ಗಾಗಿ ಕೊಡಲ್ಪಡುತ್ತದೆ. ಭಾರತೀಯ ಚಿತ್ರರಂಗದ ಅಭಿವೃದ್ಧಿಗೆ ಆ ವ್ಯಕ್ತಿಯ ಕೊಡುಗೆಯನ್ನು ಆಯ್ಕೆ ಸಮಿತಿಯು ಪರಿಶೀಲಿಸಬೇಕು.

ವಿ.ಶಾಂತಾರಾಂ ನಟರಷ್ಟೇ ಅಲ್ಲದೆ ಚಲನಚಿತ್ರ ನಿರ್ಮಾಣದಲ್ಲಿ ಗಣನೀಯ ಸಾಧನೆ ಮಾಡಿದ್ದವರು.
ಎಲ್.ವಿ.ಪ್ರಸಾದ್, ಡಿ. ರಾಮಾನಾಯ್ಡು ಉಲ್ಲೇಖನೀಯ ಕೆಲಸ ಮಾಡಿದ್ದರು. ಬರೀ ನಟರಾದರೆ ಸಾಲದು- ಪೃಥ್ವಿರಾಜ್‌ ಕಪೂರ್, ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್ ಚಲನಚಿತ್ರೋದ್ಯಮಕ್ಕೆ ಸ್ಥಿರತೆ ತಂದುಕೊಟ್ಟಿವರು.

ಈ ದೃಷ್ಟಿಯಿಂದ ಮಿಥುನ್ ಚಕ್ರವರ್ತಿಯವರ ಸಾಧನೆ ಅಷ್ಟೇನೂ ಮೌಲಿಕ ಅಲ್ಲ. 2021ರಿಂದ ಈಚೆಗೆ ಅವರು ತೆಗೆದುಕೊಂಡ ನಿಲುವುಗಳಿಗಾಗಿ ಪದ್ಮಭೂಷಣದ ನಂತರ ಈ ಪ್ರಶಸ್ತಿಯನ್ನು ನೀಡಲಾಗಿದೆಯೇ? ಮಿಥುನ್ ದಾ ಟಿ.ವಿ. ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನನಗೆ ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ’ ಎಂದಿದ್ದಾರೆ. ಫಾಲ್ಕೆ ಪ್ರಶಸ್ತಿಯನ್ನು ಬಂಗಾಳಿ ನಟಿ ಸುಚಿತ್ರಾ ಸೇನ್ ನಿರಾಕರಿಸಿದ್ದರಂತೆ. ಆದರೆ ಇವರು ಸ್ವೀಕರಿಸಲಿದ್ದಾರೆ.

⇒ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ಸಲ್ಲ

ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಸಾರಿಗೆ ಸಿಬ್ಬಂದಿಯ ಪ್ರಾಣಕ್ಕೆ ಇತ್ತೀಚೆಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ನಿರ್ವಾಹಕರ ಮೇಲೆ ನಡೆದಿರುವ ಹಲ್ಲೆ. ಇದು ಖಂಡನೀಯ. 

‘ಬಾಗಿಲ ಬಳಿ ನಿಲ್ಲಬೇಡಿ, ಒಳಗೆ ಬನ್ನಿ’ ಎಂದು ಹೇಳಿದ್ದಕ್ಕೇ ಜಾರ್ಖಂಡ್ ಮೂಲದ ಯುವಕನೊಬ್ಬ ನಿರ್ವಾಹಕರಿಗೆ ಮೂರು ಬಾರಿ ಚಾಕುವಿನಿಂದ ಇರಿದಿದ್ದಾನೆ. ಬಿಎಂಟಿಸಿ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಇಂತಹ ಸಣ್ಣ ವಿಷಯಗಳಿಗಾಗಿ ದಿನನಿತ್ಯ ಕೆಲವು ಕಿಡಿಗೇಡಿಗಳಿಂದ ಹಲ್ಲೆ, ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ‘ಬೇಗ ಬೇಗ ಹತ್ತಿ ಇಳಿಯಿರಿ’, ‘ಚಿಲ್ಲರೆ ಕೊಟ್ಟು ಚೀಟಿ ಪಡೆಯಿರಿ’, ‘ಹೆಣ್ಣುಮಕ್ಕಳ ಹಾಗೂ ಹಿರಿಯ ನಾಗರಿಕರ ಆಸನಗಳನ್ನು ಬಿಟ್ಟುಕೊಡಿ’, ‘ಗುರುತಿನ ಚೀಟಿ ತೋರಿಸಿ’, ‘ತನಿಖಾ ಸ್ಥಳ ಬರುವ ಮೊದಲೇ ಚೀಟಿ ಪಡೆಯಿರಿ’, ‘ನಿಲ್ದಾಣವಿಲ್ಲದ ಕಡೆಗಳಲ್ಲಿ ನಿಲ್ಲಿಸಲು ಹೇಳಬೇಡಿ’ ಎಂಬಂತಹ ಹೇಳಿಕೆಗಳಿಗೆ ಪ್ರಯಾಣಿಕರು ನಿರ್ವಾಹಕರ ವಿರುದ್ಧ ಜಗಳಕ್ಕೆ ಬೀಳುತ್ತಾರೆ. ಹಲ್ಲೆ ಕೂಡ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಪ್ರಯಾಣಿಕರಿಗೆ ಇರುವ ಕಾನೂನು ಅರಿವಿನ ಕೊರತೆ. ಚಾಲಕರು, ನಿರ್ವಾಹಕರು ತಪ್ಪು ಮಾಡಿದ್ದರೆ ವಾಹನದೊಳಗೆ ನಮೂದಿಸಿರುವ ಮೇಲಧಿಕಾರಿಗಳ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ದೂರು ಕೊಡಬಹುದು. ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳು ಇರುತ್ತಾರೆ. ಅಲ್ಲಿಯೂ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಅದನ್ನು ಬಿಟ್ಟು ಬಡಪಾಯಿ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿ ಅವರ ಕುಟುಂಬಗಳು ತೊಂದರೆಗೆ ಈಡಾಗುವಂತೆ ಮಾಡುವುದು ಯಾವ ನ್ಯಾಯ?

⇒ಗಣಪತಿ ಗೋ. ಚಲವಾದಿ, ದೇವರಗೆಣ್ಣೂರ, ಬಬಲೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.