ರೈತ ವಿರೋಧಿಯಲ್ಲ, ತರ್ಕಬದ್ಧ ನಡೆ
ಸಾಲ ಮರುಪಾವತಿಸದ ರೈತರಿಗೆ ತಿಳಿವಳಿಕೆ ಪತ್ರ ನೀಡಿ, ಅದಕ್ಕೆ ಅವರು ಸ್ಪಂದಿಸದೇ ಇದ್ದರೆ ಅವರ ವಿರುದ್ಧ ದಾವೆ ದಾಖಲಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನಾನೊಬ್ಬ ರೈತನಾಗಿ ಹೀಗೆ ಹೇಳುವುದು ರೈತ ವಿರೋಧಿಯಾಗಿ ಕಾಣಬಹುದು. ಆದರೆ ಇದು ನಿಜಕ್ಕೂ ತರ್ಕಬದ್ಧವಾದುದು.
ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ, ಇತರ ಸಹಕಾರ ಸಂಸ್ಥೆಗಳಲ್ಲಿ ಶೇಕಡ 3ರ ಬಡ್ಡಿ ದರದಲ್ಲಿ ಸರ್ಕಾರ ಸಾಲ ನೀಡುತ್ತಿದೆ. ಇಷ್ಟು ಕಡಿಮೆ ಬಡ್ಡಿಯಲ್ಲಿ ಬೇರೆ ಎಲ್ಲೂ ರೈತರಿಗೆ ಸಾಲ ಸಿಗುವುದಿಲ್ಲ. ಸರಿಯಾಗಿ ಕಟ್ಟಿದರೆ ಮತ್ತೆ ಸಾಲ ಸಿಗುತ್ತದೆ. ಈ ಸವಲತ್ತನ್ನು ಅವರು ಸರಿಯಾಗಿ ಬಳಸಿಕೊಳ್ಳದೇ ಸುಸ್ತಿಯಾಗಿ ಸಹಕಾರಿ ಸಂಸ್ಥೆಗಳ ಅವನತಿಗೆ ಕಾರಣವಾಗುವುದು ಸರಿಯೇ? ಸಣ್ಣ ಮತ್ತು ಅತಿ ಸಣ್ಣ ರೈತರು ಸರಿಯಾಗಿ ಪಾವತಿ ಮಾಡುತ್ತಿರುತ್ತಾರೆ. ಶ್ರೀಮಂತ ರೈತರೇ ಸಾಲಮನ್ನಾದ ಆಸೆಗೆ ಬಲಿಬಿದ್ದು, ಕಟ್ಟಲು ಶಕ್ತಿ ಇದ್ದರೂ ಹಾಗೇ ಉಳಿಸಿಕೊಂಡಿರುತ್ತಾರೆ. ಇದು ಖಂಡಿತ ಅಕ್ಷಮ್ಯ. ಆದ್ದರಿಂದ ಯಾವುದೇ ಮುಲಾಜಿಲ್ಲದೆ ಸಾಲ ವಸೂಲು ಮಾಡುವ ಸರ್ಕಾರದ ಈ ಕ್ರಮ ಒಳ್ಳೆಯದೇ. ಆದರೆ ಇದು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕಷ್ಟೆ.
⇒ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ
ಚಿತ್ರರಂಗದ ಪ್ರತಿಭಾವಂತರಿಗೆ ಬೇಕು ಅಭಯ
ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್ ಅವರ ಅಕಾಲಿಕ ವಿದಾಯವು ಚಲನಚಿತ್ರ ರಂಗದ ಕಷ್ಟಕಾರ್ಪಣ್ಯಗಳ ಪ್ರತಿಬಿಂಬವಾಗಿದೆ. ಮಚ್ಚು, ಲಾಂಗು, ಅದ್ದೂರಿಯನ್ನೇ ನೆಚ್ಚಿಕೊಳ್ಳುತ್ತಾ ಗ್ಲಾಮರ್ ಛಾಯೆಯೊಳಗೆ ಬದುಕುವ ಅನಿವಾರ್ಯದೊಂದಿಗೆ ಚಿತ್ರರಂಗ ಹೋರಾಡುತ್ತಿದೆ. ಚಿತ್ರ ನಿರ್ಮಾಣಕ್ಕಾಗಿ ಮನೆಮಠ ಕಳೆದುಕೊಂಡವರ ಸಂಖ್ಯೆಯೇನೂ ಕಡಿಮೆಯಿಲ್ಲ. ‘ಅಭಿಮಾನ್’ ಸ್ಟುಡಿಯೊ ನಿರ್ಮಿಸಿದ ಹಾಸ್ಯನಟ ಬಾಲಕೃಷ್ಣ ಅವರು ಸಾಲ ತೀರಿಸಲಾಗದೆ ನೋವಿನಲ್ಲೇ ಅಂತ್ಯವಾದರು. ಸರ್ಕಾರದಿಂದಲೂ ಅವರಿಗೆ ಸಕಾಲಕ್ಕೆ ಸಹಾಯ ದೊರೆಯಲಿಲ್ಲ. ದ್ವಾರಕೀಶ್ ಅವರ ಕತೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕನ್ನಡಕ್ಕೆ ಉತ್ತಮ ಚಿತ್ರಗಳನ್ನು ಕೊಟ್ಟ ದ್ವಾರಕೀಶ್ ಅವರೂ ಸಾಲದ ಕಾರಣದಿಂದ, ಕಷ್ಟಪಟ್ಟು ದುಡಿದ ಆಸ್ತಿಯನ್ನೆಲ್ಲ ಕಳೆದುಕೊಂಡರು. ಇಂತಹ ಉದಾಹರಣೆಗಳ ಸಾಲಿನಲ್ಲಿ ಇನ್ನಷ್ಟು ನಿರ್ಮಾಪಕರು ಇದ್ದಾರೆ. ಸಾಮಾಜಿಕ ಮೌಲ್ಯಗಳನ್ನು ಎತ್ತರಿಸುವ ಉದ್ದೇಶದಿಂದ ಮಾಡಿದ ಚಿತ್ರಗಳು
ನೆಲಕಚ್ಚುತ್ತಿವೆ. ಮೌಢ್ಯ, ದೃಶ್ಯವೈಭವ, ಮಸಾಲೆ ಅಂಶಗಳಿಂದ ಕೂಡಿದ ಕೆಲವು ಚಿತ್ರಗಳು ನಾಲ್ಕು ಕಾಸು ಮಾಡುತ್ತಿವೆ. ಚಿತ್ರನಿರ್ಮಾಪಕರಿಗೆ ಸಾಲ ಕೊಡಲಿಕ್ಕಾಗಿಯೇ ಕೆಲವು ವಲಯಗಳಿವೆ. ಆ ವಲಯದವರು ವಿಪರೀತ ಬಡ್ಡಿ ವಿಧಿಸುತ್ತಾರೆ. ಭಯದ ವಾತಾವರಣ ಸೃಷ್ಟಿಸಿ ವಸೂಲಿ ಮಾಡುತ್ತಾರೆ.
ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರು, ಬದ್ಧತೆಯುಳ್ಳ ನಿರ್ಮಾಪಕರನ್ನು ಆತಂಕದಿಂದ ಪಾರು ಮಾಡುವ ಕ್ರಮಗಳತ್ತ ಸಂಬಂಧಿಸಿದ ಸಂಸ್ಥೆಗಳು, ಸರ್ಕಾರ ಚಿಂತಿಸಬೇಕು. ನಮ್ಮ ಚಿತ್ರರಂಗ ನಮ್ಮ ಆಸ್ತಿ. ಅದರ ಭಾಗವಾಗಿರುವ ನಿರ್ದೇಶಕ, ನಿರ್ಮಾಪಕರನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು.
⇒ತಿರುಪತಿ ನಾಯಕ್, ಕಲಬುರಗಿ
ರಸ್ತೆ ಮಾಡಿಸಿದ ದುಡ್ಡು ಯಾರದ್ದು?
‘ನನ್ನ ಅಪ್ಪ ಮಾಡಿಸಿದ್ದ ಗುಣಮಟ್ಟದ ರಸ್ತೆಯಲ್ಲಿಯೇ ಈಗ ಕಾಂಗ್ರೆಸ್‍ನವರು ಪ್ರಚಾರ ನಡೆಸುತ್ತಿದ್ದಾರೆ’ ಎಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಹೇಳಿರುವುದು (ಪ್ರ.ವಾ., ನ. 4) ಹಾಸ್ಯಾಸ್ಪದ ಹಾಗೂ ಅಪ್ರಬುದ್ಧ ನುಡಿ. ಭರತ್ ಅವರ ತಂದೆ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿದ್ದಾಗ ರಸ್ತೆಗಳನ್ನು ಮಾಡಿಸಿರಬಹುದು. ಆದರೆ ‘ಆ ರಸ್ತೆಯನ್ನು ಮಾಡಿಸಲು ಬಳಸಿರುವ ಹಣ ಯಾರದ್ದು?’ ಎಂದು ಯಾರಾದರೂ ಪ್ರಶ್ನಿಸಿದರೆ ಅದು ಖಂಡಿತ
ಉದ್ಧಟತನವಾಗದು.
ಇದು ಪ್ರಜಾಪ್ರಭುತ್ವ. ಜನಪ್ರತಿನಿಧಿ ತಾನು ಗೆದ್ದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು. ಅದು ಅವರ ಕರ್ತವ್ಯ. ಮಾಡಿರುವ ಕರ್ತವ್ಯವನ್ನು ಹೇಳಿಕೊಳ್ಳಲು ಅಡ್ಡಿಯೇನೂ ಇರದು. ಆದರೆ ಅದನ್ನೀಗ ಕಾಂಗ್ರೆಸ್ಸಿನವರು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಮಾತ್ರ ಆಕ್ಷೇಪಾರ್ಹ. ಹಾಗಾದರೆ ಬಿಜೆಪಿಯವರು ಮಾತ್ರ ಓಡಾಡಲು ರಸ್ತೆಯನ್ನು ಮಾಡಿಸಿದ್ದರೇ ಎಂಬ ಪ್ರಶ್ನೆಯೂ ಏಳುತ್ತದೆ. ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಸ್ವಂತ ಜೇಬಿನಿಂದ ಹಣವನ್ನೇನೂ ಭರಿಸುವುದಿಲ್ಲ. ಇದನ್ನೆಲ್ಲ ಸರ್ಕಾರದ ಅಂದರೆ ಸಾರ್ವಜನಿಕರ ತೆರಿಗೆಯ ಹಣದಿಂದಲೇ ಮಾಡಿರುವುದು. ಬಡ ಬೋರೇಗೌಡನ ಹಣವೂ ಅದರಲ್ಲಿ ಸೇರಿರುತ್ತದೆ. ಇದರ ಅರಿವಿದ್ದರೆ, ಭರತ್ ಬೊಮ್ಮಾಯಿ ಅವರು ಈ ರೀತಿ ಬಾಲಿಶವಾಗಿ ಮಾತನಾಡುತ್ತಿರಲಿಲ್ಲವೇನೊ!
⇒ಆರ್.ಎಸ್.ಅಯ್ಯರ್, ತುಮಕೂರು
ಕಲಿಸಬೇಕಿದೆ ಜೀವನಾವಶ್ಯಕ ವಿದ್ಯೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಮ್ಮತ್ತನಹಳ್ಳಿಯ ಕುಂಟೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವುದು ವರದಿಯಾಗಿದೆ. ಸತ್ತವರಲ್ಲಿ ಇಬ್ಬರು ಯುವಕರು ಮತ್ತು ಒಬ್ಬ ಯುವತಿ ಸೇರಿದ್ದಾರೆ. ಇವರೆಲ್ಲ ವಿದ್ಯಾವಂತರು. ಆದರೆ, ಈಜು ಕಲಿಯುವುದನ್ನು ಮರೆತವರು. ಜೀವನಕ್ಕೆ ಅಗತ್ಯವಾದ ವಿದ್ಯೆಗಳನ್ನು ಕಲಿಯದೇ ಹೋದರೆ ಪ್ರಾಣವನ್ನೇ ಬಲಿಕೊಡಬೇಕಾಗಬಹುದು ಎಂಬುದಕ್ಕೆ ಇದು ನಿದರ್ಶನವಾಗಿದೆ. ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ಮರ ಏರುವುದು, ಸೈಕಲ್ ತುಳಿಯುವುದು, ಈಜು ಹೊಡೆಯುವುದು, ಲಾಗ ಹಾಕುವುದನ್ನೆಲ್ಲ ಕಲಿತಿದ್ದೆವು.
ಭೂಮಿಯ ಮೇಲೆ ನೀರೇ ಹೆಚ್ಚಾಗಿ ಇರುವುದು. ಕಡಲಲ್ಲಿ ಯಾವಾಗ ಬೇಕಾದರೂ ಸುನಾಮಿ ಏಳಬಹುದು, ಆಗಾಗ ಸುರಿಯುವ ಅತಿಯಾದ ಮಳೆಯಿಂದ ನಗರಗಳಲ್ಲೇ ಪ್ರವಾಹದಂತಹ ಸ್ಥಿತಿ ಸೃಷ್ಟಿಯಾಗಬಹುದು. ಆಗೆಲ್ಲ ಪ್ರಯೋಜನಕ್ಕೆ ಬರುವುದು ಈಜಿನಂತಹ ವಿದ್ಯೆಯೇ ವಿನಾ ಪದವಿಗಳಲ್ಲ. ಕೋವಿಡ್‌ನಂತಹ ಸಂದರ್ಭಗಳಲ್ಲಿ ಪೆಟ್ರೋಲ್, ಡೀಸೆಲ್ ಸಿಗದೆ ಇರುವ ಸಾಧ್ಯತೆಯೂ ಸೃಷ್ಟಿಯಾಗಬಹುದು. ಆಗ ನಮ್ಮ ನೆರವಿಗೆ ಬರುವುದು ಸೈಕಲ್. ಹಾಗಾಗಿ, ಇಂದಿನ ಮಕ್ಕಳಿಗೆ ಈಜು, ಸೈಕಲ್ ತುಳಿಯುವಂತಹ ವಿದ್ಯೆಗಳನ್ನು ಕಲಿಸುವುದೂ ಮುಖ್ಯವಾಗುತ್ತದೆ.
⇒ಮಲ್ಲಿಕಾರ್ಜುನ, ಸುರಧೇನುಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.