ಪಟಾಕಿ ದುರಂತ: ಉಡಾಫೆ ಧೋರಣೆಯೇ ಕಾರಣ
ದೀಪಾವಳಿಯ ಸಂಭ್ರಮದ ಜೊತೆಗೆ ಪಟಾಕಿಗಳ ಸದ್ದೂ ಬೆರೆತುಹೋಗಿದೆ. ಆದರೆ, ಪಟಾಕಿಗಳಿಂದ ಆಗುತ್ತಿರುವ ಅವಘಡಗಳು ಮನಸ್ಸಿಗೆ ಬೇಸರ ತರಿಸುತ್ತವೆ. ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ಎಷ್ಟೇ ಆದರೂ ಪ್ರತಿವರ್ಷ ಒಂದಲ್ಲ ಒಂದು ಬಗೆಯ ದುರಂತಗಳು ಘಟಿಸುತ್ತಲೇ ಇರುತ್ತವೆ. ಹಬ್ಬದ ಖರೀದಿಯ ಜೊತೆಗೆ ಆಸ್ಪತ್ರೆಯ ಖರ್ಚಿಗಾಗಿ ಹಣ ತೆಗೆದಿರಿಸಬೇಕಾದಂತಹ ಪರಿಸ್ಥಿತಿಗೆ ತಲುಪುತ್ತಿದ್ದೇವೆ. ಕನಿಷ್ಠ ಮಟ್ಟದ ಎಚ್ಚರಿಕೆ ವಹಿಸಿದರೂ ಅವಘಡಗಳನ್ನು ತಪ್ಪಿಸಬಹುದು. ಉಡಾಫೆ ಧೋರಣೆಯೇ ದುರಂತಗಳಿಗೆ ಹೆಚ್ಚಿನ ಮಟ್ಟಿಗೆ ಕಾರಣವಾಗುತ್ತಿದೆ.
ಪಟಾಕಿ ಅವಘಡಗಳಲ್ಲಿ ದೇಹದ ಬಲು ಸೂಕ್ಷ್ಮ ಅಂಗವಾದ ಕಣ್ಣಿಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಅದರಲ್ಲೂ ಮಕ್ಕಳು, ವಯೋವೃದ್ಧರೇ ಅಧಿಕ ಸಂಖ್ಯೆಯಲ್ಲಿ ಗಾಸಿಗೊಳ್ಳುತ್ತಾರೆ. ಈ ಬಾರಿಯ ಹಬ್ಬದ ಮೂರು ದಿನಗಳಲ್ಲಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ನೂರಾರು ಮಂದಿ ದಾಖಲಾಗಿದ್ದಾರೆ. ನೋವು–ನರಳಾಟದ ಜೊತೆಗೆ ಆಸ್ಪತ್ರೆಗಳವರು ಕೇಳಿದಷ್ಟು ಹಣ ಕೊಟ್ಟು ಚಿಕಿತ್ಸೆ ಪಡೆಯುವಂತಹ ಸ್ಥಿತಿ ತಂದುಕೊಳ್ಳಬಾರದು. ಬೆಳಕಿನ ಹಬ್ಬ ನಮ್ಮ ಅಜಾಗರೂಕತೆಯಿಂದ ಬದುಕನ್ನು ಕತ್ತಲಿನೆಡೆಗೆ ದೂಡದಿರಲಿ.
⇒ಮಯೂರ ಹಾಲವರ್ಥಿ, ಕೊಪ್ಪಳ
ನಡೆಜಾಣರಿಲ್ಲ, ನುಡಿಜಾಣರೇ ಎಲ್ಲ
ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತನಕ ಕನ್ನಡಪ್ರೇಮ ಉಕ್ಕಿ ಹರಿಯಿತು. ಆದರೆ ವಾಸ್ತವವಾಗಿ ಕರ್ನಾಟಕದಲ್ಲಿ ಕನ್ನಡ ಹಿಮ್ಮುಖವಾಗಿ ಚಲಿಸುತ್ತಿರುವಂತೆ ಕಾಣುತ್ತದೆ. ಒಕ್ಕೂಟ ಭಾರತದ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಇಂದಿಗೂ ಹಿಂದಿ, ಇಂಗ್ಲಿಷ್ ಭಾಷೆಗಳ ಆಧಿಪತ್ಯವೇ ಮುಂದುವರಿದಿದೆ. ಶಿಕ್ಷಣ ಮಾಧ್ಯಮ ಹಾಗೂ ಆಡಳಿತ ವ್ಯವಹಾರದಲ್ಲೂ ಇದೇ ಸ್ಥಿತಿ ಇದೆ. ನೇಮಕಾತಿ ಪರೀಕ್ಷೆಯನ್ನು ಹಿಂದಿಯಲ್ಲಿ ಬರೆದು ಪಾಸಾಗಿ ದಕ್ಷಿಣ ಭಾರತಕ್ಕೆ, ಮುಖ್ಯವಾಗಿ ಕರ್ನಾಟಕಕ್ಕೆ ಸರ್ಕಾರಿ ನೌಕರಶಾಹಿಯ ವಲಸೆ ಅಸಹಜವಾಗಿ ಹರಿದುಬರುತ್ತಿದೆ. ಅದು ಇಲ್ಲಿನ ಜನಲಕ್ಷಣವನ್ನು ಅಸ್ತವ್ಯಸ್ತಗೊಳಿಸಿದೆ.
ಕರ್ನಾಟಕ ಸರ್ಕಾರವು ಕೆಪಿಎಸ್‌ಸಿ ಮೂಲಕ ಡಿಸೆಂಬರ್‌ನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ನೇಮಕಾತಿ ಪರೀಕ್ಷೆಯನ್ನು ನಡೆಸುತ್ತಿದೆ. ಅದರ ಎರಡನೇ ಪತ್ರಿಕೆಯಲ್ಲಿ ಸಂವಹನಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‌ನಲ್ಲಿ ಪ್ರಶ್ನೆಗಳು ಇರಲಿವೆ. ಈ ಮೊದಲ ನೇಮಕಾತಿಗಳಲ್ಲಿ ಈ ಪತ್ರಿಕೆಯು ಪಂಚಾಯತ್ ರಾಜ್ ವ್ಯವಸ್ಥೆ ಕುರಿತಾಗಿತ್ತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಕ್ಕೆ ಪಂಚಾಯತ್ ರಾಜ್ ಕುರಿತಾದ ಪ್ರಶ್ನೆಪತ್ರಿಕೆ ಅತ್ಯಂತ ವೈಜ್ಞಾನಿಕವಾಗಿತ್ತು ಹಾಗೂ ನ್ಯಾಯಯುತವಾಗಿತ್ತು. ಇದೇ ಬಗೆಯ ಅನ್ಯಾಯ ಅಕ್ಟೋಬರ್‌ನಲ್ಲಿ ನಡೆದ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿಯೂ ನಡೆದಿತ್ತು.
ಹೀಗೆ ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿವೆ. ಎಲ್ಲರೂ ನುಡಿಜಾಣರೇ ಆಗಿದ್ದಾರೆ, ನಡೆಜಾಣರು ಕಾಣುತ್ತಿಲ್ಲ ಎಂಬಂತಾಗಿದೆ.
⇒ಗಿರೀಶ್ ಮತ್ತೇರ, ಹೊದಿಗೆರೆ, ಚನ್ನಗಿರಿ
ನೋಟಿಸ್ ಹಿಂಪಡೆದರಷ್ಟೇ ಸಾಲದು
ರೈತರ ಸ್ವಾಧೀನದಲ್ಲಿರುವ ಜಮೀನಿನ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಕುರಿತು ಕಾನೂನು ಸಚಿವರು, ಕಂದಾಯ ಸಚಿವರು ಮತ್ತಿತರರೊಡನೆ ನಡೆಸಿದ ಸಭೆಯ ನಂತರ, ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ವಾಪಸ್ ಪಡೆದು, ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆಯುವ ಮುನ್ನ ಅವರು ತೆಗೆದುಕೊಂಡ ಕ್ರಮ ಸಕಾಲಿಕ. ಆದರೆ, ಈ ವಿವಾದದ ಕೇಂದ್ರ ಬಿಂದು ಎನ್ನಲಾದ ವಕ್ಫ್ ಸಚಿವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರೆ ಸೂಕ್ತ ಮತ್ತು ಔಚಿತ್ಯಪೂರ್ಣವಾಗುತ್ತಿತ್ತು.
ಇದಿಷ್ಟೇ ಕ್ರಮ ಸಾಲದು. ಸರ್ಕಾರದ ಅಧಿಕೃತ ಆದೇಶ ಅಥವಾ ಯಾರಾದರೂ ‘ಮೇಲಿನವರ’ ಲಿಖಿತ ಅಥವಾ ಮೌಖಿಕ ನಿರ್ದೇಶನವಿಲ್ಲದೆ, ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಪಹಣಿ ತಿದ್ದುಪಡಿ ಮಾಡಿದ್ದರೆ, ಕರ್ತವ್ಯಲೋಪಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲೇಬೇಕು. ಹಾಗಿಲ್ಲದೆ, ಅಧಿಕಾರಿಗಳ ಮೇಲೆ ಆ ‘ಮೇಲಿನವರು’ ಪ್ರತ್ಯಕ್ಷ ಅಥವಾ ಪರೋಕ್ಷ ಒತ್ತಡ ಹೇರಿ ಕೆಲಸ ಮಾಡಿಸಿದ್ದರೆ, ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡಬಹುದಾದ ಇಂತಹ ಸೂಕ್ಷ್ಮ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸದಂತೆ, ಅವರನ್ನು ಮುಖ್ಯಮಂತ್ರಿಯೇ ನಿಯಂತ್ರಣದಲ್ಲಿ ಇಡಬೇಕಾಗುತ್ತದೆ. ಅಷ್ಟೇ ಮುಖ್ಯವಾಗಿ, ಸುಮಾರು 12 ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಿ, ಅತಿಕ್ರಮಣಗೊಂಡಿರುವ ಸಾವಿರಾರು ಎಕರೆ ವಕ್ಫ್ ಆಸ್ತಿಯನ್ನು ವಿಳಂಬವಿಲ್ಲದೆ ಮರಳಿ ಪಡೆಯುವತ್ತ ಅವರು ಗಮನಹರಿಸಬೇಕು.
⇒ತಿಪ್ಪೂರು ಪುಟ್ಟೇಗೌಡ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.