ಕೋರ್ಟ್ ತೀರ್ಪು: ದಕ್ಷಿಣದ ರಾಜ್ಯಗಳು ನಿರಾಳ
ಸುಪ್ರೀಂ ಕೋರ್ಟ್ ಕಲಾಪಗಳನ್ನು ಹಿಂದಿ ಭಾಷೆಯಲ್ಲೂ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿರುವುದು ಸರಿಯಾಗಿದೆ. ಸುಪ್ರೀಂ ಕೋರ್ಟ್‌ನ ಕಲಾಪಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಯಬೇಕು ಎನ್ನುವ ಸಂವಿಧಾನದ 348(1)ನೇ ವಿಧಿಯನ್ನು ಪ್ರಶ್ನಿಸಿದ್ದ ಅರ್ಜಿದಾರರಿಗೆ, ಹಿಂದಿ ಭಾಷೆಗೆ ಮಾನ್ಯತೆ ಕೊಟ್ಟರೆ, ಸಂವಿಧಾನದಲ್ಲಿ ಮಾನ್ಯತೆ ಪಡೆದಿರುವ ಎಲ್ಲ ಭಾಷೆಗಳಲ್ಲೂ ಕಲಾಪ ನಡೆಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿರುವುದು ಒಂದು ಶ್ಲಾಘನೀಯ ನಿಲುವಾಗಿದೆ. ಇದರಿಂದ, ಹಿಂದಿಯೇತರ ರಾಜ್ಯಗಳು, ಮುಖ್ಯವಾಗಿ ದಕ್ಷಿಣದ ರಾಜ್ಯಗಳು ನಿಟ್ಟುಸಿರುಬಿಡುವಂತಾಗಿದೆ. ಇನ್ನೊಂದು ಭಾಷಾ ವಿವಾದ ಸೃಷ್ಟಿಯಾಗದಂತೆ ಕೋರ್ಟ್ ಎಚ್ಚರಿಕೆಯ ಮತ್ತು ದೂರದೃಷ್ಟಿಯ ತೀರ್ಪು ನೀಡಿದೆ.
ರಮಾನಂದ ಶರ್ಮಾ, ಬೆಂಗಳೂರು
ಡಿಜಿಟಲ್ ಅರೆಸ್ಟ್: ಜನ ಹೆದರುವುದೇಕೆ?
ಸೈಬರ್ ಅಪರಾಧಕ್ಕೆ ಇತ್ತೀಚೆಗೆ ಸೇರ್ಪಡೆಯಾದ ತಂತ್ರಜ್ಞಾನ ಆಧಾರಿತ ‘ಡಿಜಿಟಲ್ ಅರೆಸ್ಟ್’ನ ವೈಖರಿ (ಆಳ- ಅಗಲ, ನ. 6) ನಿಜಕ್ಕೂ ಆಶ್ಚರ್ಯ ಹುಟ್ಟಿಸುವುದರ ಜೊತೆಗೆ ಹಾಸ್ಯಾಸ್ಪದವೂ ಆಗಿದೆ. ನಮ್ಮ ಕಣ್ಣ ಮುಂದೆ ಕಾಣಿಸುವ ಪೊಲೀಸರು, ಕೋರ್ಟಿಗೆ ಹೆದರದಿರುವ ನಾವು, ಎಲ್ಲೋ ಕಣ್ಣಿಗೆ ಕಾಣದ ವ್ಯಕ್ತಿಯ ಫೋನ್ ಕರೆಗೆ ಹೆದರಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ನಂಬಲು ಕಷ್ಟ
ವಾಗುವಂತಹ ವಿಚಾರ. ಅದರಲ್ಲೂ ವಿದ್ಯಾವಂತ, ಬುದ್ಧಿವಂತ ಜನರೇ ಇವರ ಬಲೆಗೆ ಬೀಳುತ್ತಿರುವುದು ಇನ್ನಷ್ಟು ಸೋಜಿಗ. ಈ ರೀತಿಯ ವಿಡಿಯೊ ಕರೆ ಬಂದಾಗ ಅದನ್ನು ಸ್ಥಗಿತಗೊಳಿಸಿ ಆ ಸಂಖ್ಯೆಯನ್ನು ಬ್ಲಾಕ್ ಮಾಡಬಹುದು ಅಥವಾ ತಮ್ಮದೇ ಫೋನನ್ನು ಸ್ತಬ್ಧಗೊಳಿಸ
ಬಹುದು. ಅದನ್ನು ಬಿಟ್ಟು, ಅವರು ಹೇಳಿದಂತೆ ಕೇಳಿಕೊಂಡು, ತಾಸುಗಟ್ಟಲೆ, ದಿನಗಟ್ಟಲೆ ಹೇಗೆ ಸಮಯ ಕಳೆಯುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ.
ಈ ರೀತಿಯ ಅಪರಾಧ ಎಸಗುವವರು ಅನೈತಿಕವಾಗಿ ಸಂಪತ್ತು ಗಳಿಸಿರುವವರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿರುತ್ತಾರೆ ಎನ್ನಲಾಗುತ್ತದೆ. ಆದರೆ ಇತ್ತೀಚಿನ ಕೆಲವು ಪ್ರಕರಣಗಳನ್ನು ಗಮನಿಸಿದಾಗ, ಹಾಗೇನೂ ಅನಿಸುವುದಿಲ್ಲ. ಚಿತ್ರದುರ್ಗದ ವೈದ್ಯರೊಬ್ಬರು 40 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ತಮ್ಮ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಯನ್ನು ಮಾರಿದ್ದರಿಂದ ಬಂದ ₹ 1 ಕೋಟಿಗೂ ಹೆಚ್ಚು ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದುದನ್ನು ಈ ರೀತಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಎಷ್ಟೇ ಪ್ರಚಾರ ಮಾಡಿ ಜನರಿಗೆ ತಿಳಿವಳಿಕೆ ನೀಡುವ ಜಾಹೀರಾತುಗಳನ್ನು ಕೊಟ್ಟರೂ, ಸರ್ಕಾರಗಳು ಯಾವುದೇ ಕ್ರಮಗಳನ್ನು ತೆಗೆದುಕೊಂಡರೂ ಜನ ಎಲ್ಲಿಯವರೆಗೆ ಸ್ವತಃ ಎಚ್ಚೆತ್ತುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಇಂತಹ ಸಮಸ್ಯೆಗಳಿಗೆ ಪರಿಹಾರವಿಲ್ಲ.
ಟಿ.ವಿ.ಬಿ. ರಾಜನ್, ಬೆಂಗಳೂರು
ಜೀವನ ಪ್ರಮಾಣಪತ್ರ: ಎಲ್ಲರಿಗೂ ಅನ್ವಯಿಸಲಿ
ಪಿಂಚಣಿದಾರರು ತಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕು ಮತ್ತು ಅಂಚೆ ಕಚೇರಿಗೆ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮವಿದೆ. ತಪ್ಪಿದಲ್ಲಿ ಅದು ಸಲ್ಲಿಕೆ ಆಗುವವರೆಗೂ ಪಿಂಚಣಿ ಜಮಾ ಆಗುವುದಿಲ್ಲ. ಪಿಂಚಣಿದಾರ ಜೀವಂತವಿಲ್ಲವೆಂದರೆ ಆತನಿಗೆ ಪಿಂಚಣಿ ಸೌಲಭ್ಯ ನಿಲ್ಲಿಸಬೇಕೆಂಬುದೇ ಈ ಪತ್ರ ಸಲ್ಲಿಕೆಯ ಮೂಲ ಉದ್ದೇಶ. ಈ ಪತ್ರದ ಸುಲಭ ಸಲ್ಲಿಕೆಗಾಗಿ ಕೇಂದ್ರ ಸರ್ಕಾರವು ‘ಜೀವನ್ ಪ್ರಮಾಣ್’ ಎಂಬ ವಿದ್ಯುನ್ಮಾನ ಪೋರ್ಟಲ್ ಕೂಡ ಸಿದ್ಧಪಡಿಸಿ ಜಾಹೀರಾತುಗಳನ್ನು ನೀಡಿ ಪಿಂಚಣಿದಾರರಲ್ಲಿ ಜಾಗೃತಿ ಉಂಟು ಮಾಡುತ್ತಿರುವುದು ಶ್ಲಾಘನೀಯ. ಆದರೆ ಇದೇ ಬಗೆಯ ಜೀವನ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರಗಳು ಬಡವರ ಸೌಕರ್ಯಕ್ಕೆಂದು ಜಾರಿಗೊಳಿಸಿರುವ ವೃದ್ಧಾಪ್ಯ ವೇತನದಂತಹ ಯೋಜನೆಗಳ ಫಲಾನುಭವಿಗಳಿಂದಲೂ ಪಡೆಯಬೇಕಲ್ಲವೇ? ಹಾಗೆ ಮಾಡದೆ, ಫಲಾನುಭವಿಗಳು ಜೀವಂತ ಇಲ್ಲದಿರುವಾಗಲೂ ಅವರ ಬ್ಯಾಂಕ್ ಖಾತೆಗಳಿಗೆ ಮಾಹೆಯಾನ ಪಿಂಚಣಿ ಹಣ ಜಮಾ ಆದರೆ ಅದರಿಂದ ಸರ್ಕಾರಕ್ಕೆ ನಷ್ಟವಾಗುವುದಿಲ್ಲವೇ? ಹಾಗಾಗಿ, ಈ ಪ್ರಮಾಣಪತ್ರ ಸಲ್ಲಿಕೆಯನ್ನು ಇವರಿಗೂ ಕಡ್ಡಾಯಗೊಳಿಸುವುದು ಸೂಕ್ತ.
ರಮೇಶ್, ಬೆಂಗಳೂರು
ಆರೋಗ್ಯ ಕೇಂದ್ರದ ಅವ್ಯವಸ್ಥೆ: ಉತ್ತರ ಸಿಗದ ಪ್ರಶ್ನೆ
ಆರೋಗ್ಯ ಕೇಂದ್ರದಲ್ಲಿ ಮೂಲ ಸೌಕರ್ಯ ಕೊರತೆ, ವೈದ್ಯರ ಅಲಭ್ಯತೆಯಂತಹ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸಿಪಿಎಂ ವತಿಯಿಂದ ಬೆಳಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸುದ್ದಿಯನ್ನು ಓದಿದಾಗ, ಇತ್ತೀಚೆಗಷ್ಟೇ ನನಗಾದ ಒಂದು ಅನುಭವವನ್ನು ಹೇಳಬೇಕೆನಿಸಿತು. ಕಫ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಮ್ಮ ಐದು ತಿಂಗಳ ಮೊಮ್ಮಗುವನ್ನು ನಮ್ಮ ಗ್ರಾಮವಾದ ಚಿನಕುರಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದೆವು. ಅಲ್ಲಿಗೆ ಮಕ್ಕಳ ವೈದ್ಯರು ಬರುವುದಿಲ್ಲವೆಂಬುದು ತಿಳಿದುಬಂತು. ಬಳಿಕ, ತಾಲ್ಲೂಕು ಕೇಂದ್ರವಾದ ಪಾಂಡವಪುರದ ವಿಭಾಗೀಯ ಆಸ್ಪತ್ರೆಯಲ್ಲಿ ತೋರಿಸಲು ಪ್ರಯತ್ನಿಸಿದೆವು. ಅಲ್ಲಿ ಮಕ್ಕಳ ವೈದ್ಯರು ಅದಾಗಲೇ ಆಸ್ಪತ್ರೆಯಿಂದ ಹೊರಟುಹೋಗಿದ್ದುದು ತಿಳಿಯಿತು. ಆಗ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ, ಸಮಸ್ಯೆಯನ್ನು ತಿಳಿಸಿ, ಸರಿಪಡಿಸುವಂತೆ ವಿನಂತಿಸಿದೆ. ಆ ಬಳಿಕ ನನಗೆ ಕರೆ ಮಾಡಿದ ತಾಲ್ಲೂಕು ವೈದ್ಯಾಧಿಕಾರಿ, ಮಕ್ಕಳ ವೈದ್ಯರು ಇಲ್ಲದಿರುವುದರಿಂದ ಇಎನ್‌ಟಿ ವೈದ್ಯರಿಗೆ ಮಗುವನ್ನು ತೋರಿಸುವಂತೆ ಸೂಚಿಸಿದರು. ನಾವು ಅದನ್ನು ಒಪ್ಪದೆ, ಶ್ರೀರಂಗಪಟ್ಟಣದಲ್ಲಿನ ಖಾಸಗಿ ಮಕ್ಕಳ ತಜ್ಞರ ಬಳಿ ತೋರಿಸಿ ಔಷಧೋಪಚಾರ ಪಡೆದೆವು.
ಕಡೆಗೆ ಆಕ್ರೋಶಗೊಂಡ ನಾನು, ಗೂಗಲ್‌ನಲ್ಲಿ ಆರೋಗ್ಯ ಸಚಿವರ ಮೊಬೈಲ್ ನಂಬರ್ ಹುಡುಕಿ ಫೋನಾಯಿಸಿದಾಗ, ಮಹಿಳೆಯೊಬ್ಬರು ‘ರಾಂಗ್ ನಂಬರ್’ ಎಂದು ಹೇಳಿ ಇಟ್ಟರು. ಈ ಅವ್ಯವಸ್ಥೆಯನ್ನು ನೋಡಿ, ಯಾರಿಗೂ ಹೇಳಲಿಕ್ಕಾಗದೆ ನಮ್ಮ ನೋವನ್ನು ನಾವೇ ನುಂಗಿಕೊಳ್ಳಬೇಕಾಯಿತು. ಇದನ್ನೆಲ್ಲ ಯಾರು ಸರಿಪಡಿಸಬೇಕು ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯಿತು.
ಸಿ.ಎಂ.ಕಾಳೇಗೌಡ, ಚಿನಕುರಳಿ, ಪಾಂಡವಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.