ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 0:44 IST
Last Updated 11 ನವೆಂಬರ್ 2024, 0:44 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   
ಬ್ಯಾಂಕ್ ಶುಲ್ಕ ಜನಸ್ನೇಹಿ ಆಗಲಿ

2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ₹ 19,782 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ವರದಿಯಾಗಿದೆ. ಖಾತೆ ನಿರ್ವಹಣೆ, ಚೆಕ್ ಪುಸ್ತಕ ಪಡೆಯಲು, ಎಟಿಎಂ ಕಾರ್ಡಿಗೆ, ಎಟಿಎಂನಿಂದ ನಗದು ಪಡೆಯಲು, ಹೆಚ್ಚಿನ ಪ್ರಮಾಣದ ನಗದು ಜಮಾವಣೆ, ಹೆಚ್ಚುವರಿ ವಹಿವಾಟಿನ ವಿವರಕ್ಕೆ, ಎಸ್‌ಎಂ‌ಎಸ್‌... ಹೀಗೆ ಹಲವಾರು ಸೇವೆಗಳಿಗೆ ಭಾರಿ ಎಂಬಂತಹ ಶುಲ್ಕ ವಿಧಿಸುತ್ತಿದ್ದರೆ ಕೋಟಿಗಟ್ಟಲೆ ಲಾಭ ಬರದೆ ಇನ್ನೇನಾದೀತು? ಕೆಲವು ಶುಲ್ಕಗಳು ತಂತಾನೇ ಖಾತೆಯಿಂದ ಕಡಿತ ಆಗಿರುತ್ತವೆ. ಈ ರೀತಿಯ ಶುಲ್ಕಗಳನ್ನು ದಶಕಗಳ ಹಿಂದೆ ವಿಧಿಸುತ್ತಿರಲಿಲ್ಲ, ಎಲ್ಲವನ್ನೂ ಉಚಿತವಾಗಿ
ನೀಡಲಾಗುತ್ತಿತ್ತು ಎಂಬುದು ಗಮನಾರ್ಹ. ಲಾಭ ಗಳಿಸಬೇಕು ಎಂಬುದು ನಿಜವೇ ಆದರೂ ಅದೇ ಪ್ರಧಾನವಲ್ಲ. ಕಾರಣ, ಬ್ಯಾಂಕ್ ಎಂಬುದು ಸೇವೆಯೇ ವಿನಾ ಉದ್ದಿಮೆ ಅಲ್ಲ. ಶುಲ್ಕ ವಿಧಿಸಬೇಕು ಎಂಬುದು ಒಪ್ಪತಕ್ಕದ್ದಾದರೂ ಅದು ಅತ್ಯಲ್ಪ ಪ್ರಮಾಣದಲ್ಲಿದ್ದು ಗ್ರಾಹಕರಿಗೆ ಹೊರೆ ಆಗದಂತೆ ಇರಬೇಕಾದುದು ಸೂಕ್ತ.

ಬ್ಯಾಂಕಿನಿಂದ ಸಾಲ ಪಡೆದು ಬದುಕನ್ನು ಉತ್ತಮ ಪಡಿಸಿಕೊಂಡು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ, ಸ್ವಂತ ಸೂರು, ಕಾರು, ಉನ್ನತ ಶಿಕ್ಷಣ ಪಡೆದ ಅನೇಕರ ಉದಾಹರಣೆಗಳು ಇವೆ. ಅವರೆಲ್ಲರೂ ಬ್ಯಾಂಕಿಗೆ ಪರೋಕ್ಷವಾಗಿ ಋಣಿಗಳೇ ಹೌದು. ಆದರೆ, ಸೇವೆಗೆ ವಿಧಿಸುವ ಶುಲ್ಕದ ಪ್ರಮಾಣವನ್ನು ಇಳಿಸುವ ಮೂಲಕ ಬ್ಯಾಂಕ್ ಮತ್ತಷ್ಟು ಜನಸ್ನೇಹಿ ಆಗಲಿ.

ADVERTISEMENT

– ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಇನ್ನೆಷ್ಟು ದಿನ ‘ಬಿ’ ಖಾತಾ ಗುಮ್ಮ?

ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಒಂದು ಸ್ವಂತ ಮನೆ ಅಥವಾ ವಾಸಯೋಗ್ಯ ನಿವೇಶನ ಹೊಂದಬೇಕೆಂಬ ಆಸೆ ಆಕಾಂಕ್ಷೆಯಿಂದ ಲಕ್ಷಾಂತರ ಮಂದಿ ತಮ್ಮ ಜೀವಮಾನದ ಸಂಪಾದನೆ, ಉಳಿತಾಯದ ಹಣವನ್ನು ಹೂಡುತ್ತಾರೆ ಅಥವಾ ಬ್ಯಾಂಕ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಕೆಲವು ಬಡಾವಣೆಗಳಲ್ಲಿ ನಿವೇಶನ, ಮನೆಯನ್ನು ಖರೀದಿಸುತ್ತಾರೆ. ನಂತರ ಅದೇ ಸಂತೋಷದಲ್ಲಿ ಖಾತೆ ಪಡೆಯಲು ಪ್ರಯತ್ನಿಸಿದಾಗ, ಆ ಬಡಾವಣೆಯೇ ಅನಧಿಕೃತ ಎಂದು ಹೇಳಿ ಬಿಬಿಎಂಪಿಯು ಖಾತಾ ಪತ್ರ ನೀಡಲು ನಿರಾಕರಿಸುತ್ತದೆ. ‘ಬಿ’ ಖಾತಾ ಪ್ರದೇಶ ಎಂದು ನಮೂದಿಸಿ ತೆರಿಗೆ ವಸೂಲು ಮಾಡುತ್ತದೆ. ಆ ‘ಬಿ’ ಖಾತೆದಾರರು ವೈಯಕ್ತಿಕವಾಗಿ ‘ಎ’ ಖಾತೆ ಪಡೆಯುವುದಕ್ಕಾಗಿ ನಿಗದಿತ ಅಭಿವೃದ್ಧಿ ಶುಲ್ಕ ನೀಡಲು ತಯಾರಿದ್ದರೂ ವೈಯಕ್ತಿಕವಾಗಿ ‘ಎ’ ಖಾತೆ ನೀಡಲು ಸರ್ಕಾರದಿಂದ ಸೂಚನೆ ಇಲ್ಲ ಎನ್ನುತ್ತಾ ಅವರಿಗೆ ‘ಎ’ ಖಾತೆ ನೀಡುವುದಿಲ್ಲ. ಇಂತಹ ತ್ರಿಶಂಕು ಸ್ಥಿತಿಯಲ್ಲೂ ‘ಬಿ’ ಖಾತೆದಾರರಿಗೆ ಮನೆ ಕಟ್ಟಲು ಬ್ಯಾಂಕ್, ಹಣಕಾಸು ಸಂಸ್ಥೆಗಳು ಸಾಲ, ಬೆಸ್ಕಾಂ ವಿದ್ಯುತ್ ಸಂಪರ್ಕ ಹಾಗೂ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸಂಪರ್ಕವನ್ನು ನೀಡುತ್ತವೆ. ಹೀಗಿರುವಾಗ, ಬಿಬಿಎಂಪಿ ಖಾತಾ ನೀತಿ ನಿಯಮ ಹಾಸ್ಯಾಸ್ಪದವಾಗಿ ಕಾಣುತ್ತದೆ.

ಸರ್ಕಾರವೇ ವಾಸಯೋಗ್ಯ ಬಡಾವಣೆಗಳನ್ನು ನಿರ್ಮಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿತ್ತೇ? ಈಗ ಇ-ಖಾತೆಯನ್ನು ಎಲ್ಲಾ ತರಹದ ಆಸ್ತಿಗಳ ಖಾತಾ ಗುಣ ಪರಿಶೀಲಿಸಿ, ‘ಎ’ ಖಾತೆ ಇರುವವಕ್ಕೆ ‘ಎಇ’ ಎಂದೂ ‘ಬಿ’ ಖಾತೆ ಇರುವವಕ್ಕೆ ‘ಬಿಇ’ ಎಂದೂ ನೀಡುತ್ತಾರಂತೆ! ಅಂದರೆ ಅಳಿಯ ಅಲ್ಲ ಮಗಳ ಗಂಡ ಎನ್ನುವಂತಾಯಿತು. ಸರ್ಕಾರ ಮೊದಲಿಗೆ ‘ಬಿ’ ಖಾತೆದಾರರಿಗೆ ಇರುವ ತೊಂದರೆಗಳನ್ನು ನಿವಾರಿಸಿ ನಂತರ ಇ- ಖಾತೆ ವಿಚಾರ ತೆಗೆದುಕೊಳ್ಳಬಹುದಿತ್ತು. ಸರ್ಕಾರವೇ ಅನಧಿಕೃತ ಬಡಾವಣೆಗಳ ಸೃಷ್ಟಿಗೆ ಪ್ರೋತ್ಸಾಹಿಸುತ್ತಿದೆ. ಹೀಗಿರುವಾಗ, ಯಾವುದೋ ನೆಪ ಹೇಳಿ ‘ಬಿ’ ಖಾತೆದಾರರನ್ನು ಇನ್ನೆಷ್ಟು ಕಾಲ ಹಿಂಸಿಸಬೇಕೆಂದಿದೆ? ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲಿಸದೆ ಬಡಾವಣೆ ನಿರ್ಮಿಸಿ, ರಾಜಾರೋಷವಾಗಿ ಓಡಾಡುವವರಿಗೆ ಶಿಕ್ಷೆ ನೀಡುವುದರ ಬದಲು, ಆ ಬಡಾವಣೆಗಳಲ್ಲಿ ನಿವೇಶನ ಅಥವಾ ಮನೆ ಕೊಂಡವರಿಗೆ ಶಿಕ್ಷೆ ನೀಡುವುದು ಎಷ್ಟು ಸರಿ?

– ರಮೇಶ್, ಬೆಂಗಳೂರು

ಮೂರು ಪರೀಕ್ಷೆ: ಬದಲಾಗಲಿ ದಿನಾಂಕ

ಕೆ-ಸೆಟ್, ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆಯುವ ಪರೀಕ್ಷೆ ಮತ್ತು ಯುಪಿಎಸ್‍ಸಿ ಪರೀಕ್ಷೆ ಎಲ್ಲವೂ ಇದೇ 24ರಂದೇ ನಡೆಯಲಿದ್ದು, ಮೂರೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಪರೀಕ್ಷಾರ್ಥಿಗಳಿಗೆ ಒಂದೇ ದಿನ ಈ ಪರೀಕ್ಷೆಗಳನ್ನು ಬರೆಯುವುದು ಕಷ್ಟವಾಗುತ್ತದೆ. ಇವೆಲ್ಲವೂ ಮಹತ್ವದ ಪರೀಕ್ಷೆಗಳೇ ಆಗಿವೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪರೀಕ್ಷೆಗೆ ಕೆಲ ಅಭ್ಯರ್ಥಿಗಳು ನೆಟ್ ಅಥವಾ ಕೆ-ಸೆಟ್ ಅರ್ಹತೆಯ ಆಧಾರದ ಮೇಲೆ, ಇನ್ನು ಕೆಲವರು ನೆಟ್ ಅಥವಾ ಕೆ-ಸೆಟ್ ಅರ್ಹತೆ ಹೊಂದದೆ ಪಿಎಚ್.ಡಿ. ಅರ್ಹತೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆ. ಈಗ ಇವರು ಯಾವುದಾದರೂ ಒಂದು ಪರೀಕ್ಷೆಗೆ ಮಾತ್ರ ಹಾಜರಾಗಬೇಕಾಗುತ್ತದೆ. ಆದ್ದರಿಂದ ಈ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಂದು ನಡೆಸುವ ಮೂಲಕ ಪರೀಕ್ಷಾರ್ಥಿಗಳಿಗೆ ಸರ್ಕಾರ ಅನುಕೂಲ
ಕಲ್ಪಿಸಬೇಕಾಗಿದೆ.

– ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.