ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 0:12 IST
Last Updated 12 ನವೆಂಬರ್ 2024, 0:12 IST
   
ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾದ ಪ್ರಚಾರ ವೈಖರಿ

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮತ್ತು ನಮ್ಮ ರಾಜ್ಯದಲ್ಲಿ ನಿಗದಿಯಾಗಿರುವ ಉಪಚುನಾವಣೆಯಲ್ಲಿನ ಪ್ರಚಾರದ ವೈಖರಿಯು ನಮ್ಮ ಪ್ರಜಾಪ್ರಭುತ್ವ ಮತ್ತಷ್ಟು ಅಧೋಗತಿಗೆ ಇಳಿಯುತ್ತಿರುವುದರ ದ್ಯೋತಕದಂತಿದೆ. ಪ್ರಜಾಪ್ರಭುತ್ವದ ಆಶಯಗಳು ಚುನಾವಣೆಯಿಂದ ಚುನಾವಣೆಗೆ ಮಣ್ಣುಗೂಡುತ್ತಿವೆ. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ನೇತಾರರ ಪ್ರಚಾರದ ಪರಿ, ಮತದಾರರಿಗೆ ಪಕ್ಷಗಳು ಘೋಷಿಸುತ್ತಿರುವ ‘ಉಚಿತ’ ಕೊಡುಗೆಗಳು, ಜಾತಿ, ಕೋಮುವಾದದ ವೈಭವೀಕರಣ, ಪಕ್ಷಾತೀತವಾಗಿ ಮುಂದುವರಿಯುತ್ತಿರುವ ಕುಟುಂಬ ರಾಜಕಾರಣ, ಹಣದ ಹರಿವು... ಒಂದೊಂದೂ ಪ್ರಜಾಪ್ರಭುತ್ವವನ್ನು ಒಂದೊಂದು ಹೆಜ್ಜೆ ಹಿಂದಕ್ಕೆ ತಳ್ಳುತ್ತಿವೆ.

ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಎನಿಸಿಕೊಳ್ಳುವವರು ರಾಜಕೀಯ ವಿರೋಧಿಗಳ ಕುರಿತು ಬಳಸುವ ಭಾಷೆ, ಅಧಿಕಾರದಾಹದ ಮಾತುಗಳು ಸಭ್ಯತೆಯ ಗಡಿಯನ್ನು ಮೀರಿವೆ. ಚುನಾವಣಾ ಆಯೋಗ ಇದ್ದೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ತಾವು, ತಮ್ಮವರು ಆರಿಸಿ ಬರದಿದ್ದರೆ ದೇಶ, ರಾಜ್ಯವೇ ಮುಳುಗಿಹೋಗುತ್ತದೆ ಎಂಬಂತೆ ಮತದಾರರ ಮುಂದೆ ನಿಂತು ಅಂಗಲಾಚುವುದನ್ನು ನೋಡಿದರೆ ಕನಿಕರ ಮೂಡುತ್ತದೆ. ಬರಬರುತ್ತಾ ನಮ್ಮ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವವಾಗಿ ಉಳಿಯದೆ ಕೌಟುಂಬಿಕ, ವಂಶಪಾರಂಪರ್ಯ, ಜಾತಿ, ಕೋಮು, ಹಣಬಲ, ತೋಳ್ಬಲದ ಅಧಿಕಾರಕೇಂದ್ರವಾಗಿ ಬದಲಾಗುವ ಎಲ್ಲ ಲಕ್ಷಣಗಳು ತೋರತೊಡಗಿವೆ. ಮತದಾರರು ಮತದಾನ ಮಾಡುವ ಮೊದಲು ಸ್ವಲ್ಪ ಯೋಚಿಸಿ ಮತ ನೀಡಲಿ ಎಂದಷ್ಟೇ ನಾವು ಅಪೇಕ್ಷಿಸಬಹುದು. 

 – ವೆಂಕಟೇಶ ಮಾಚಕನೂರ, ಧಾರವಾಡ

ADVERTISEMENT
ಕೃಪಾಪೋಷಿತ ನೆರವು ಅನಗತ್ಯ

‘ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವತನಕ ಮಾತ್ರ ಮುಸ್ಲಿಮರಿಗೆ ಭವಿಷ್ಯ...’ ಎಂದು ಇಕ್ಬಾಲ್ ಅನ್ಸಾರಿ ಅವರು ಹೇಳಿರುವುದನ್ನು ಓದಿ (ಪ್ರ.ವಾ., ನ. 11) ನಗು ಬಂತು. ಅವರವರ ಭವಿಷ್ಯ ಅವರವರ ಕೈಯಲ್ಲಿ ಇರುತ್ತದೆ. ಯಾವ ಒಬ್ಬ ನಾಯಕ ಅಥವಾ ಸಚಿವ ತಮ್ಮ ಭವಿಷ್ಯ ರೂಪಿಸುತ್ತಾನೆಂದು ಯಾವ ಸಮುದಾಯದ ಜನರೂ ಕಾಯುತ್ತಾ ತಮ್ಮ ಜೀವನ ನಡೆಸುವುದಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಇವರು ಇಡೀ ಒಂದು ಸಮುದಾಯವನ್ನು ತಪ್ಪುದಾರಿಗೆ ಎಳೆಯುವುದು ಎಷ್ಟು ಸರಿ?

ಮುಸ್ಲಿಮರಿಗೆ ಈ ಹಿಂದೆಯೂ ಭವಿಷ್ಯ ಇತ್ತು, ಈಗಲೂ ಇದೆ, ಹಾಗೆಯೇ ಮುಂದೆಯೂ ಇರುತ್ತದೆ. ಅವರ ಅನ್ನವನ್ನು ಅವರೇ ಸಂಪಾದಿಸಿ ಉಣ್ಣುವವರಿಗೆ ಯಾರ ಕೃಪಾಪೋಷಿತ ನೆರವೂ ಬೇಕಾಗದು. ಇಂತಹ ಅಪ್ರಬುದ್ಧ ಹೇಳಿಕೆ ಬಿಟ್ಟು, ಸರ್ವ ಜನಾಂಗಕ್ಕೂ ಒಳಿತು ಬಯಸುವ ಮಾತು, ಕೃತಿಯ ಮೂಲಕ ಅವರು ಮಾದರಿಯಾಗಲಿ.

– ಸಂತೆಬೆನ್ನೂರು ಫೈಜ್ನಟ್ರಾಜ್, ತಳಕು, ಚಳ್ಳಕೆರೆ

ಇದೆಂಥಾ ಪ್ರಸ್ತಾವ? ಇದೆಂಥಾ ಮನೋಭಾವ?

ಮಹಿಳೆಯರ ಕೂದಲನ್ನು ಪುರುಷರು ಕತ್ತರಿಸಬಾರದು ಹಾಗೂ ಮಹಿಳೆಯರ ಬಟ್ಟೆಗಳನ್ನು ಹೊಲಿಯಲು ಪುರುಷರು ಅಳತೆ ತೆಗೆದುಕೊಳ್ಳಬಾರದು ಎಂಬ ಪ್ರಸ್ತಾವವನ್ನು ಉತ್ತರಪ್ರದೇಶದ ಮಹಿಳಾ ಆಯೋಗವು ಅಲ್ಲಿನ ರಾಜ್ಯ ಸರ್ಕಾರದ ಮುಂದಿರಿಸಲು ನಿರ್ಧರಿಸಿರುವುದು ಅತ್ಯಂತ ಸೋಜಿಗದ ಸಂಗತಿಯಾಗಿದೆ. ಇಂತಹ ವೃತ್ತಿಗಳಲ್ಲಿ ಗಂಡಸರು ಕೆಲಸ ಮಾಡುವುದರಿಂದಲೇ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿವೆ ಎಂದು ಆಯೋಗದ ಸಭೆಯಲ್ಲಿ ಸದಸ್ಯೆಯೊಬ್ಬರು ಅಭಿಪ್ರಾಯಪಟ್ಟಿರುವುದು ಹಾಸ್ಯಾಸ್ಪದವಾಗಿದೆ. ಮಹಿಳಾ ಆಯೋಗದ ಸದಸ್ಯರು ಈ ರೀತಿಯೆಲ್ಲ ಯೋಚಿಸುವವರಾದರೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟದ ಗತಿ ಏನಾಗಬಹುದು?

ಮಹಿಳೆಯರ ರಕ್ಷಣೆ ಸಾಧ್ಯವಾಗುವುದು ನಮ್ಮ ಸಾಮಾಜಿಕ ಆಲೋಚನೆಗಳನ್ನು ತಿದ್ದುವುದರಲ್ಲಿ ಹಾಗೂ ಮಹಿಳೆಯನ್ನು ಒಂದು ಭೋಗದ ವಸ್ತುವನ್ನಾಗಿ ವೈಭವೀಕರಿಸುವ ದುರಾಲೋಚನೆಯನ್ನು ತಹಬಂದಿಗೆ ತರುವುದರಲ್ಲಿ. ನಮ್ಮ ಪುರುಷಪ್ರಧಾನ ಮನಃಸ್ಥಿತಿಯಲ್ಲಿ ಹೇಳಿಕೊಳ್ಳುವಂಥ ಸುಧಾರಣೆ ಇನ್ನೂ ಆಗಿಲ್ಲ. ಎಲ್ಲ ನಕಾರಾತ್ಮಕ ಬೆಳವಣಿಗೆಗಳಿಗೆ ಹೆಣ್ಣನ್ನೇ ಕಾರಣಕರ್ತೆ ಎನ್ನುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ, ಕಾಯಿಲೆಯ ಮೂಲಕ್ಕೆ ಮದ್ದು ಕೊಡದೆ ಇನ್ನೆಲ್ಲೋ ಕ್ರಮ ತೆಗೆದುಕೊಳ್ಳುವುದರಿಂದ ಕಾಯಿಲೆ ವಾಸಿ ಆಗುವುದಿಲ್ಲ. ಬದಲಿಗೆ ಇನ್ನಷ್ಟು ಉಲ್ಬಣವಾಗುತ್ತದೆ. ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡದೆ, ಆಕೆಯನ್ನು ಮನುಷ್ಯಳಂತೆ ಗೌರವಪೂರ್ವಕವಾಗಿ ನೋಡುವ ದೃಷ್ಟಿಕೋನ ಬೆಳೆಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವತ್ತ ಯೋಚಿಸಬೇಕಿದೆ.

 – ಎ.ಜೆ.ಜಾವೀದ್, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.