ಕಾನೂನಿನಡಿ ಎಲ್ಲರೂ ಸಮಾನ...
ಅಧಿಕಾರದಲ್ಲಿ ಇದ್ದಾಗಲೇ ಲೋಕಾಯುಕ್ತ ವಿಚಾರಣೆ ಎದುರಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಿದ್ದಾರೆ. ಅಲ್ಲದೆ, ಸುದೀರ್ಘ ಅವಧಿಯ ತಮ್ಮ ರಾಜಕೀಯ ಬದುಕಿನಲ್ಲಿ ಎದುರಿಸಿದ ಮೊದಲ ವಿಚಾರಣೆಯೂ ಇದಾಗಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡು, ವಿವಿಧ ಸ್ಥಾನಮಾನಗಳನ್ನು ಅನುಭವಿಸಿರುವ ಸಿದ್ದರಾಮಯ್ಯ, ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಲೋಕಾಯುಕ್ತ ಎಸ್.ಪಿ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು ವರದಿಯಾಗಿದೆ (ಪ್ರ.ವಾ., ನ. 7). ರಾಜ್ಯದ ರಾಜಕೀಯದಲ್ಲಿ ಮುಖ್ಯಮಂತ್ರಿಯೊಬ್ಬರು ತನಿಖಾಧಿಕಾರಿ ಎದುರು ಸಾಮಾನ್ಯರಂತೆ ನಡೆದುಕೊಂಡು ಕಾನೂನು ಪ್ರಕ್ರಿಯೆಗೆ ಸಹಕರಿಸಿರುವುದು ಸರಿಯಾದ ನಡೆ.
ರಾಮಕೃಷ್ಣ ಹೆಗಡೆ ಅವರ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದು, ಮುಖ್ಯಮಂತ್ರಿಯನ್ನೂ ಒಳಗೊಂಡು ಚುನಾಯಿತ ಪ್ರತಿನಿಧಿಗಳನ್ನು ಅದರ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ಅಂದು ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದುಕೊಂಡು, ವಿಚಾರಣೆ ಎದುರಿಸಿದ್ದಾರೆ. ಕಾನೂನಿನಡಿ ಎಲ್ಲರೂ ಸಮಾನ ಎಂಬ ಸಂದೇಶ ಮುಖ್ಯಮಂತ್ರಿಯವರ ನಡವಳಿಕೆಯಲ್ಲಿದೆ.
ಡಿ.ಪ್ರಸನ್ನಕುಮಾರ್, ಬೆಂಗಳೂರು
ಜನಪ್ರಿಯ ವಿಜ್ಞಾನ: ಬೇಕು ವ್ಯಾಪಕ ಪ್ರಚಾರ
ಈಗ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಿರುವ ತಂತ್ರಜ್ಞಾನಗಳ ಮೂಲವು ವೈಜ್ಞಾನಿಕ ಸಂಶೋಧನೆಯಾಗಿದೆ. ಎಷ್ಟೋ ವರ್ಷಗಳ ಹಿಂದೆಯೇ, ಮೊಸರು ಮಾಡಲು ಗೊತ್ತಿದ್ದ ಅಜ್ಜಿಯು ಅದರ ಹಿಂದಿನ ವೈಜ್ಞಾನಿಕತೆಯ ಅರಿವಿರದಿದ್ದರೂ ಅಲ್ಲಿ ತನಗೇ ಗೊತ್ತಿಲ್ಲದಂತೆ ತಂತ್ರಜ್ಞಾನವೊಂದನ್ನು ಅಳವಡಿಸಿಕೊಂಡಿದ್ದಳು. ವಿಜ್ಞಾನ ಮತ್ತು ಅದರ ಬಗೆಗಿನ ಅಜ್ಞಾನದ ಕುರಿತು ಗುರುರಾಜ್ ಎಸ್. ದಾವಣಗೆರೆ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ನ. 7) ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಎಲ್ಲೆಡೆ ಎಲ್ಲ ಶಾಸ್ತ್ರಗಳ ಮುಂದೆ ವಿಜ್ಞಾನ ಎಂಬ ಪದವು ಜೋಡಣೆಯಾಗುತ್ತಿರುವುದು ವಿಜ್ಞಾನದ ಜನಪ್ರಿಯತೆಗೆ ನಿದರ್ಶನವಾಗಿದೆ. ಉದಾಹರಣೆಗೆ, ಸಮಾಜವಿಜ್ಞಾನ, ಜ್ಯೋತಿಷವಿಜ್ಞಾನ, ಮನೋವಿಜ್ಞಾನ... ಈಗ ಅವಶ್ಯಕತೆ ಇರುವುದು ಜನಪರ ಜನಪ್ರಿಯ ವಿಜ್ಞಾನದ ಕುರಿತು ಇನ್ನಷ್ಟು ವ್ಯಾಪಕ ಪ್ರಚಾರ, ಪ್ರಸಾರ ಮತ್ತು ಅಳವಡಿಕೆ.
ಅನಿಲಕುಮಾರ ಮುಗಳಿ, ಧಾರವಾಡ
ಬ್ಯಾಂಕ್ ವಿಲೀನ: ಗ್ರಾಹಕರ ಹಿತರಕ್ಷಣೆ ಮುಖ್ಯವಾಗಲಿ
ಕೇಂದ್ರ ಸರ್ಕಾರದ ಆರ್ಥಿಕ ಸೇವೆಗಳ ಇಲಾಖೆ (ಡಿಎಫ್‌ಎಸ್) ಇತ್ತೀಚೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್‌ಆರ್‌ಬಿ) ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಸ್ತಾವವೊಂದನ್ನು ಪ್ರಾಯೋಜಕ ಬ್ಯಾಂಕುಗಳಿಗೆ ಕಳುಹಿಸಿದೆ. ‘ಒಂದು ರಾಜ್ಯ, ಒಂದು ಗ್ರಾಮೀಣ ಬ್ಯಾಂಕ್’ ಎಂಬ ಘೋಷಣೆಯು ಕೇಳಲು ಹಿತವಾಗಿದೆ. ಐದು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಆರ್‌ಆರ್‌ಬಿಗಳಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಎರಡು ಇವೆ. ಒಂದೊಂದು ರಾಜ್ಯವನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್‌ಗಳಿಗೆ ಬದಲಾಗಿ ಒಂದೇ ಪ್ರಾಯೋಜಕ ಬ್ಯಾಂಕ್‌ಗೆ ನೀಡುವ ಯೋಜನೆ ಇದು. ನಾನು ಕೆಲ ಕಾಲ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಅಧಿಕಾರಿ ಆಗಿದ್ದೆ. ಆಗ ಹೊಸ ಶಾಖೆಗಳನ್ನೇನೋ ತೆರೆಯುತ್ತಿದ್ದರು. ಆದರೆ ಅವು ಕನಿಷ್ಠ ಲಾಭ ಗಳಿಸಲು ಹಲವು ವರ್ಷ ಹಿಡಿಯುತ್ತಿತ್ತು. ಜತೆಗೆ ಮುಂದೆ ಸರ್ಕಾರ ಯಾವ ನೀತಿ ತಳೆಯಲಿದೆ ಎಂಬುದು ಸ್ಪಷ್ಟ ಇರಲಿಲ್ಲ. 2004ರಿಂದ ಈಚೆಗೆ ಮೂರು ಬಾರಿ ವಿಲೀನಗೊಳಿಸುವ ಮತ್ತು ಬಲಪಡಿಸುವ ಪ್ರಕ್ರಿಯೆ ನಡೆದು ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 196ರಿಂದ 43ಕ್ಕೆ ಇಳಿದಿದೆ. ಈಗ 28ಕ್ಕೆ ಇಳಿಸುವ ಉದ್ದೇಶವಿದೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಬರೀ ಬ್ಯಾಂಕುಗಳು ಹಾಗೂ ನಬಾರ್ಡ್ ಜೊತೆ ಸಮಾಲೋಚಿಸದೆ, ತಳಮಟ್ಟದಲ್ಲಿ ಗ್ರಾಮೀಣ ಬ್ಯಾಂಕ್ ಶಾಖೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಹಾಗೂ ವಿವಿಧ ಸಾಲ ನೀಡಿಕೆ ಸಂಸ್ಥೆಗಳು ಇರುವಾಗ ಇವುಗಳ ಮುಂದಿನ ಪ್ರಗತಿಗೆ ಅವಕಾಶಗಳೇನಿವೆ ಎಂಬ ಬಗ್ಗೆ ಅಧ್ಯಯನ ಮಾಡಬೇಕು. ಕೆಲವು ರಾಜ್ಯಗಳಲ್ಲಿ ಆಡಳಿತ ಮಂಡಳಿ ಮಟ್ಟದಲ್ಲಿ ಸಂಘರ್ಷ ಇದೆ (ಉದಾಹರಣೆಗೆ, ಉತ್ತರಪ್ರದೇಶ- ಬ್ಯಾಂಕ್ ಆಫ್ ಬರೋಡ). ಸಿಬ್ಬಂದಿ ವರ್ಗಕ್ಕೆ ಕಲ್ಪಿಸುವ ಅನುಕೂಲದಂತೆ ಗ್ರಾಹಕರ ಹಿತರಕ್ಷಣೆಯೂ ಮುಖ್ಯ. ಈಗಿನ ಪ್ರಸ್ತಾವವನ್ನು ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಿತ ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಸಂವಾದ ನಡೆಸುವುದು ಸೂಕ್ತ.
ಎಚ್.ಎಸ್.ಮಂಜುನಾಥ, ಗೌರಿಬಿದನೂರು
ಸಾರಿಗೆ ಇಲಾಖೆಯಲ್ಲಿ ಏಕಿಷ್ಟು ವಿಳಂಬ?
ಸಾರಿಗೆ ಇಲಾಖೆಯ ಬಹುತೇಕ ಎಲ್ಲಾ ಸೇವೆಗಳನ್ನು ಆರ್‌ಟಿಒ ಕಚೇರಿಗೆ ಹೋಗದೆ ನಿಗದಿತ ವೆಬ್‌ಸೈಟ್ ಮೂಲಕವೇ ಪಡೆಯಬಹುದು ಎಂದು ಸರ್ಕಾರ ಹೇಳಿದೆ. ಆದರೆ ಅರ್ಜಿ ವಿಲೇವಾರಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ಮಾತ್ರ ಬದಲಾಗಿಲ್ಲ. ಕಲಿಕಾ ಚಾಲನಾ ಪರವಾನಗಿ (ಎಲ್‌ಎಲ್) ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಬರೀ 30 ನಿಮಿಷದಲ್ಲಿ ಪರೀಕ್ಷೆಯನ್ನು ಪಾಸ್ ಮಾಡಬಹುದು. ಆದರೆ ಎಲ್‌ಎಲ್‌ಗೆ ಸಂಬಂಧಿಸಿದ ಪರವಾನಗಿ ಪ್ರತಿಯ ಅನುಮೋದನೆಗೆ ಅಧಿಕಾರಿಗಳು ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ. ಇಷ್ಟೊಂದು ವಿಳಂಬವಾದರೆ ಆನ್‌ಲೈನ್ ವ್ಯವಸ್ಥೆ ಇದ್ದೂ ಏನು ಪ್ರಯೋಜನ?
→ಶಿವಶಂಕರ ಎಸ್., ಮುತ್ತರಾಯನಹಳ್ಳಿ, ಮಧುಗಿರಿ
ಸಿಹಿ ‘ಉಣಿಸಿದ’ ಕನ್ನಡ ಅಭಿರುಚಿ
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅಣಶಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕನ್ನಡದಲ್ಲೇ ಸಹಿ ಮಾಡಿಸುವ ಅಭಿಯಾನ ಕೈಗೊಂಡು ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರು ಯಶಸ್ವಿಯಾಗಿರುವುದನ್ನು ಓದಿ (ಪ್ರ.ವಾ., ನ. 7) ಸಿಹಿ ಉಂಡಂತಾಯಿತು. ಕನ್ನಡಾಭಿಮಾನ ಮೆರೆಯುವ ಇಂತಹ ಪ್ರಯತ್ನ, ಪ್ರಯೋಗಗಳನ್ನು ಖಾಸಗಿ ಶಾಲೆಗಳೂ ಸೇರಿದಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ಆರಂಭಿಸಿದರೆ, ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಜನ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ, ಕನ್ನಡ ಭಾಷೆಯ ಬಗ್ಗೆ ವಿಶೇಷ ಜಾಗೃತಿ ಮೂಡಿಸಲು ಅಗತ್ಯವಾದ ಕಾಳಜಿ, ಯೋಚನೆ, ಯೋಜನೆ ಅನಿವಾರ್ಯವಾಗಿವೆ.
ಎಲ್ಲಾ ಶಿಕ್ಷಕರು ಈ ದಿಸೆಯಲ್ಲಿ ಮನಸ್ಸು ಮಾಡಿದರೆ ಇಂತಹ ವಿಶೇಷ ಕಾರ್ಯಸಾಧನೆ ಅಸಾಧ್ಯವೇನಲ್ಲ.
ಮಹಾಂತೇಶ್ ಬಿ. ನಿಟ್ಟೂರು, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.