ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 9 ನವೆಂಬರ್ 2024, 0:15 IST
Last Updated 9 ನವೆಂಬರ್ 2024, 0:15 IST
   

ಸೈಬರ್‌ ಅಪರಾಧ: ಬಲಗೊಳ್ಳಲಿ ತಡೆ ವ್ಯವಸ್ಥೆ

ಸೈಬರ್ ಅಪರಾಧಗಳಿಗೆ ಸಂಬಂಧಿಸಿದ, ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಎಂ.ಎ.ಸಲೀಂ ಅವರ ಲೇಖನ (ಪ್ರ.ವಾ., ನ. 8) ಸಕಾಲಿಕವಾಗಿದೆ. ಕಾಕತಾಳೀಯವೆಂಬಂತೆ ಇದೇ ದಿನ ಬೆಳಿಗ್ಗೆ 9.55ಕ್ಕೆ ನನಗೊಂದು ಅಪರಿಚಿತ ಫೋನ್ ಕರೆಯೊಂದು ಬಂದಿತು. ‘ಆರ್‌ಬಿಐನ ಮುಂಬೈ ಕಚೇರಿಯಿಂದ ಫೋನ್ ಮಾಡುತ್ತಿದ್ದೇವೆ. ನಿಮ್ಮ ಬ್ಯಾಂಕ್ ಖಾತೆಗಳನ್ನು ಇನ್ನೆರಡು ಗಂಟೆಗಳಲ್ಲಿ ಬ್ಲಾಕ್ ಮಾಡಲಾಗುತ್ತದೆ. ನೀವು ಮಾಡಿರುವ ವಂಚನೆಯ ಕಾರಣದಿಂದ ಹೀಗೆ ಮಾಡಲಾಗುತ್ತಿದೆ. ವಿವರ ತಿಳಿಯಲು 1ನೇ ನಂಬರಿನ ಸಂಖ್ಯೆಯನ್ನು ಒತ್ತಿ’ ಎಂದು ಕರೆ ಮಾಡಿದ ಹೆಣ್ಣುಧ್ವನಿ ನನ್ನನ್ನು ಬೆದರಿಸಿತು. ಇಂತಹ ವಂಚಕ ಕರೆಗಳು ಬೇರೆ ಬೇರೆ ಮೂಲಗಳಿಂದ ಆಗಾಗ ಬರುತ್ತಿದ್ದ ಕಾರಣ, ನಾನು ಆ ಫೋನ್ ನಂಬರನ್ನು ಗುರುತು ಮಾಡಿಕೊಂಡು ಫೋನ್‌ ಕಾಲ್‌ ಕಟ್‌ ಮಾಡಿದೆ. ನೇರವಾಗಿ ‘ಆರ್‌ಬಿಐ ಕಚೇರಿಯಿಂದ’ ಎಂದು ಹೇಳಿದ್ದರಿಂದ ಆರ್‌ಬಿಐನ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಬೇಕೆಂದು ಆಲೋಚಿಸಿ, ಆರ್‌ಬಿಐನಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ನನ್ನ ಪರಿಚಯದವರೊಬ್ಬ
ರನ್ನು ವಿಚಾರಿಸಿದೆ. ‘ಅಂತಹ ಯಾವುದೇ ವಿಭಾಗ ಆರ್‌ಬಿಐನಲ್ಲಿ ಇಲ್ಲ. ನೀವು ನೇರವಾಗಿ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿ’ ಎಂದು ಹೇಳಿದರು. ಹಾಗಾಗಿ ಮತ್ತು ಸಲೀಂ ಅವರ ಲೇಖನದಲ್ಲಿ ತಿಳಿಸಿರುವುದನ್ನು ಮನಗಂಡು, ಭಾರತೀಯ ಸೈಬರ್‌ ಅಪರಾಧ ದೂರು ಪೋರ್ಟಲ್‌ನಲ್ಲಿ (cybercrime.gov.in) ದೂರು ಸಲ್ಲಿಸಲು ಮುಂದಾದೆ. ನನ್ನ ಎಲ್ಲಾ ಮಾಹಿತಿಗಳನ್ನು ಬರೆದು ದೂರಿನ ವಿವರ ಬರೆಯಬೇಕು ಎನ್ನುವಷ್ಟರಲ್ಲಿ ಆ ಪೋರ್ಟಲ್ ಕಾರ್ಯ ಸ್ಥಗಿತವಾಯಿತು. ನಂತರ ಎರಡು- ಮೂರು ಬಾರಿ ಪ್ರಯತ್ನ ಮಾಡಿದಾಗಲೂ ಅದೇ ಸ್ಥಿತಿ ಕಂಡುಬಂತು.

ಪೊಲೀಸ್ ಇಲಾಖೆಯ ಕಾರ್ಯವೈಖರಿಯೇ ಹೀಗಾದರೆ ಇನ್ನು ದೂರು ಸಲ್ಲಿಸಲು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಸಂಬಂಧಿಸಿದವರು ಇದಕ್ಕೆ ಏನಾದರೂ ಪರಿಹಾರ ಸೂಚಿಸಬಹುದೇ?

ADVERTISEMENT

ಟಿ.ಸುರೇಂದ್ರ ರಾವ್, ಬೆಂಗಳೂರು 

ಅಸ್ಪೃಶ್ಯತೆ ಆಚರಣೆ: ಅರಿವು ಮೂಡುವುದೆಂದು? 

ಅಸ್ಪೃಶ್ಯತೆ ಎಂಬ ಸಾಮಾಜಿಕ ಕಳಂಕದ ಬಗ್ಗೆ ದೀಪಾ ಹಿರೇಗುತ್ತಿ ಅವರು ಬರೆದಿರುವ ಲೇಖನ (ಸಂಗತ, ನ. 8) ಸಮರ್ಪಕವಾಗಿದೆ. ಆಧುನಿಕ ಯುಗ ಎಂದು ನಾವು ಹೇಳಿಕೊಳ್ಳುತ್ತಿರುವ ಈ ಕಾಲದಲ್ಲಿಯೇ ನಮ್ಮ ಸುತ್ತಮುತ್ತ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಆದರೂ ಬಹಳಷ್ಟು ಜನ ಇದಕ್ಕೆ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸದೆ ಮೌನ ವಹಿಸುತ್ತಾರೆ. ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಕಂಡಂತಹ ಸಮ ಸಮಾಜದ ಕನಸು ನೆರವೇರಲು ಇನ್ನೂ ಎಷ್ಟು ಶತಮಾನಗಳು ಬೇಕೋ ಗೊತ್ತಿಲ್ಲ.

ಪರಿಶಿಷ್ಟರನ್ನು ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂಬ ಕಲ್ಪನೆ ಹೇಗೆ ಹುಟ್ಟಿತು? ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ, ಮಂಗಳಗ್ರಹಕ್ಕೂ ಹೋಗಿ ಬಂದಿರುವ ಈ ಕಾಲದಲ್ಲಿ ಹೀನಾತಿಹೀನ ಆಚರಣೆಯಾದ ಜಾತಿ ಪದ್ಧತಿ ರದ್ದಾಗುವುದು ಯಾವಾಗ? ನಾಳೆ ನಮ್ಮ ಮುಂದಿನ ಪೀಳಿಗೆಯು ಜಾತಿ ಹೆಸರಿನಲ್ಲಿ ಹೊಡೆದಾಡಿಕೊಂಡು ನಾಶ ವಾಗಬಹುದಾದ ಸೂಚನೆಗಳು ನಮಗೆ ಏಕೆ ಗೋಚರಿಸುತ್ತಿಲ್ಲ? ಮಗು ವಿಶ್ವ ಮಾನವನಾಗಲಿ ಎಂದು ಬಯಸುವಷ್ಟು ಜ್ಞಾನದ ಅರಿವು ತಂದೆ– ತಾಯಿಗೆ ಇಲ್ಲವಾಯಿತೇ? ಇನ್ನಾದರೂ ಈ ಸಮಾಜ ಎಚ್ಚೆತ್ತುಕೊಳ್ಳಲಿ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತಹವರ ಜ್ಞಾನಸಾಗರದಲ್ಲಿ ಈಜಿದರೆ, ಅವರ ಆಶಯಗಳ ಕಿಂಚಿತ್ ಅರಿವಾದರೂ ನಮ್ಮಲ್ಲಿ ಮೂಡಬಹುದು.

⇒ಪಲ್ಲವಿ ಶಿವಕುಮಾರ್, ಶಿಕಾರಿಪುರ

ನಿರ್ವಾಹಕರಿಗೂ ಬೇಕು ಚಾಲನಾ ತರಬೇತಿ

ನೆಲಮಂಗಲದ ಸಮೀಪ ಚಾಲಕರೊಬ್ಬರು ಬಿಎಂಟಿಸಿ ಬಸ್ಸನ್ನು ಚಾಲನೆ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಸೀಟಿನಿಂದ ಕುಸಿದು ಬಿದ್ದಾಗ (ಪ್ರ.ವಾ., ನ. 7) ನಿರ್ವಾಹಕ ಕೂಡಲೇ ಚಾಲಕರ ಸೀಟಿನತ್ತ ಮುನ್ನುಗ್ಗಿ, ಬ್ರೇಕ್ ಹಾಕಿ ಬಸ್ ನಿಲ್ಲಿಸಿ ಸಂಭಾವ್ಯ ಅಪಘಾತವನ್ನು ತಡೆದಿರುವುದು ಸಮಯಪ್ರಜ್ಞೆಯಿಂದ ಎನ್ನುವುದು ಮೆಚ್ಚುವ ಮಾತು. ಆದರೆ, ನಿರ್ವಾಹಕನಿಗೆ ವಾಹನ ಚಾಲನೆಯಲ್ಲಿ ಕೌಶಲ ಇಲ್ಲದೇ ಇದ್ದಿದ್ದರೆ ಅಪಘಾತವಾಗುವ ಸಂಭವವೇ ಹೆಚ್ಚಾಗಿ ಇರುತ್ತಿತ್ತು ಅಲ್ಲವೇ? ಇಂಥ ಸಂಭಾವ್ಯ ಅಪಘಾತಗಳನ್ನು ತಗ್ಗಿಸಲು ನಿರ್ವಾಹಕರಿಗೂ ಕಡ್ಡಾಯವಾಗಿ ಚಾಲನಾ ತರಬೇತಿ ನೀಡಬೇಕು. ಹಾಗೆಯೇ, ನಿರ್ವಾಹಕರಹಿತ ಬಸ್ ವ್ಯವಸ್ಥೆಯನ್ನು ರದ್ದು ಮಾಡುವುದು ಸೂಕ್ತ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಿರ್ವಾಹಕರು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಇದಕ್ಕೆ ಬದಲಾಗಿ, ಮುಂದಿನ ಸೀಟಿನಲ್ಲಿ ಕುಳಿತು ಕೊಳ್ಳುವುದರಿಂದ ಇಂಥ ಅಪಘಾತಗಳನ್ನು ತಪ್ಪಿಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಸರ್ಕಾರ ಹಾಗೂ ಎಲ್ಲ ಖಾಸಗಿ ವಾಹನಗಳ ಮಾಲೀಕರು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

ಸಾಂಸ್ಕೃತಿಕ ರಂಗ: ಅವಜ್ಞೆ ಸಲ್ಲ

ವಿಜಯನಗರ ಜಿಲ್ಲೆ ರಚನೆಯಾಗಿ ಈ ತಿಂಗಳಿಗೆ ಮೂರು ವರ್ಷ ಆಗುತ್ತದೆ. ವಿಜಯನಗರ ಎಂಬುದು ಹಿಂದೆ ಇದ್ದ ದೊಡ್ಡ ಸಾಮ್ರಾಜ್ಯದ ಹೆಸರು. ಆದರೆ ಈಗಿನ ವಿಜಯನಗರಕ್ಕೆ ಅಗತ್ಯ ಸವಲತ್ತು ಹಾಗೂ ಪ್ರೋತ್ಸಾಹದ ಕೊರತೆ ಇದೆ. ಇತ್ತೀಚೆಗೆ ಪ್ರಕಟಗೊಂಡ ಜಾನಪದ ಪ್ರಶಸ್ತಿಗಳಲ್ಲಿ ಜಿಲ್ಲೆಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಹೊಸಪೇಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಯಾವ ಕಡೆ ನೆಲೆಗೊಂಡಿದೆ ಎಂಬುದು ಅನೇಕ ಕವಿ-ಕಲಾವಿದರಿಗೆ ತಿಳಿದಿಲ್ಲ. ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆಗಳಿಗೆ ಒಬ್ಬರನ್ನೇ ಸಹಾಯಕ ನಿರ್ದೇಶಕರನ್ನಾಗಿ ನೇಮಿಸಲಾಗುತ್ತದೆ ಮತ್ತು ಅವರು ಬಳ್ಳಾರಿಯಲ್ಲಿಯೇ ಉಳಿಯುತ್ತಾರೆ.

ಈ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ ಗಮನ ಸೆಳೆದಾಗ ‘ಅವಿಭಜಿತ ಜಿಲ್ಲೆಗೆ ಪ್ರಾತಿನಿಧ್ಯ ಕೊಟ್ಟಾಗಿದೆಯಲ್ಲ’ ಎಂಬ ಮಾತು ಕೇಳಿಬರುತ್ತದೆ. ಈ ಕಾರಣ ಹೇಳಿ ಬಳ್ಳಾರಿ ಜಿಲ್ಲೆಗಷ್ಟೇ ಪ್ರಾತಿನಿಧ್ಯ ಕೊಟ್ಟರೆ ಸಾಕೇ? ಹೊಸ ಜಿಲ್ಲೆಗೆ ಬೇಡವೇ? ಇಲ್ಲಿ ಆಯ್ಕೆ ಮಾಡುವಂಥ ಕಲಾವಿದರೇ ಇಲ್ಲವೇ? ಹೊಸ ಜಿಲ್ಲೆಗೆ ಪ್ರೋತ್ಸಾಹ ಎಂದರೆ ಎಂಥದ್ದು? ಪ್ರತ್ಯೇಕ ಜಿಲ್ಲೆ ಮಾಡಿದ್ದು ಯಾವ ಕಾರಣಕ್ಕೆ? ಜಿಲ್ಲೆಯಲ್ಲಿ ಸಾಂಸ್ಕೃತಿಕ ರಂಗ ಹೀಗೆ ಬಡವಾಗಲು ಬಿಡಬಾರದು. ಏಕೆಂದರೆ ಸಾಂಸ್ಕೃತಿಕ ಬೆಳವಣಿಗೆಯಿಂದಲೇ ಜನರ ಭಾವಕೋಶ ಹಿಗ್ಗುವುದು. ಇಲ್ಲದಿದ್ದರೆ ಜನರ ಮನಃಸ್ಥಿತಿ ಶುಷ್ಕವಾಗುತ್ತದೆ.

ಮೇಟಿ ಕೊಟ್ರಪ್ಪ, ಬಸರಕೋಡು, ಹಗರಿಬೊಮ್ಮನಹಳ್ಳಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.